ವಸಂತರಾಜ ಎನ್.ಕೆ
ಇತ್ತೀಚೆಗೆ ಜಾಗತಿಕವಾಗಿ ಮೂರನೇ ಮಹಾಯುದ್ಧದ ಆತಂಕ ಮೂಡಿಸಿದ್ದ, ಇರಾನ್ ಮೇಲಿನ ಇಸ್ರೇಲಿ ಹಠಾತ್ ದಾಳಿಯಿಂದ ಆರಂಭವಾದ ಯುದ್ಧ ಅಷ್ಟೇ ಹಠಾತ್ತಾಗಿ ಸದ್ಯಕ್ಕಂತೂ ನಿಂತಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಯುದ್ಧ ಯಾಕೆ ನಡೆಯಿತು ? ಈ ವರೆಗೆ ತೆರೆಯ ಹಿಂದೆ ಮಾತ್ರವಿದ್ದ ಯು ಎಸ್ ಏಕೆ ಇದ್ದಕ್ಕಿದ್ದ ಹಾಗೆ ಭಾಗವಹಿಸಿತು ? ದೀರ್ಘಕಾಲೀನ ಯುದ್ಧದಂತೆ ಕಾಣುತ್ತಿದ್ದರೂ 12 ದಿನಗಳಲ್ಲಿ ಕದನ ವಿರಾಮ ಹೇಗಾಯಿತು? ಈ ಕದನ ವಿರಾಮ ಉಳಿಯಬಹುದೆ? ಈ ಯುದ್ಧದಲ್ಲಿ ಯಾರು ಗೆದ್ದರು ? ಮುಂದೇನಾಗಬಹುದು – ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲು ಪ್ರಯತ್ನಿಸಲಾಗಿದೆ. ಈ ಭಾಗ 1 ರಲ್ಲಿ ಮೊದಲ 3 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.
- ಇಸ್ರೇಲ್ ಇರಾನ್ ಮೇಲೆ ಜೂನ್ 13 ರಿಂದ ನಡೆಸಿದ 12 ದಿನಗಳ ಯುದ್ಧದಲ್ಲಿ ಏನು ನಡೆಯಿತು?
ಕಳೆದ ಸೆಪ್ಟೆಂಬರ್-ಅಕ್ಟೋಬರ್ ಗಳಲ್ಲಿ ಪರಸ್ಪರ ದಾಳಿಗಳ ನಂತರ ಈ ವರ್ಷ ಜೂನ್ 13ರಂದು ಇಸ್ರೇಲ್ ಹಠಾತ್ತಾಗಿ ಇರಾನ್ ನ ಎರಡು (ನಾತಾನ್ಝ್, ಇಸ್ಫಾನ್) ಅಣು ಸ್ಥಾವರಗಳ ಮೇಲೆ ದಾಳಿ ಮಾಡಿತು. ಈ ದಾಳಿ ಪೂರ್ಣವಾಗಿ ಅನಿರೀಕ್ಷಿತವಲ್ಲದಿದ್ದರೂ, ಯು ಎಸ್ ಮತ್ತು ಇರಾನ್ ನಡುವೆ ಅಣ್ವಸ್ತ್ರ ಗಳ ಕುರಿತು ಮಾತುಕತೆ ಇನ್ನೊಂದು ಸುತ್ತಿನ ಮಾತುಕತೆ ಆರಂಭದ ಹಿಂದಿನ ದಿನ ನಡೆದ ದಾಳಿಯ ಸಮಯವಂತೂ ಅನಿರೀಕ್ಷಿತವಾಗಿತ್ತು ಎನ್ನಬಹುದು. ಇರಾನಿನ ಸುಮಾರು 60 ರಾಜಕೀಯ, ಉನ್ನತ ನಾಯಕರ, ಪ್ರಮುಖ ವಿಜ್ಞಾನಿಗಳ (ನಿನ್ನೆ ಅಂದರೆ ಜೂನ್ 29ರಂದು ಭಾರೀ ಮೆರವಣಿಗೆಯ ನಂತರ ಇವರ ಶವಸಂಸ್ಕಾರ ಮಾಡಲಾಯಿತು) ಹತ್ಯೆ ಮಾಡಲಾಯಿತು. ಇರಾನಿನ ಒಳಗೆ ಗುಪ್ತವಾಗಿದ್ದ ಮೊಸಾದ್ (ಇಸ್ರೇಲಿ ಗೂಢಚಾರ ಸಂಸ್ಥೆ) ಗೂಢಚಾರರು, ಅವರ ಏಜೆಂಟರು ಮತ್ತು ಡ್ರೋನ್ ಗಳನ್ನು ಈ ದಾಳಿಗಳಲ್ಲಿ ಬಳಸಿತು. ಈ ಮಾರಕ ದಾಳಿಗಳಲ್ಲಿ ಇಸ್ರೇಲಿನ ನಿಖರ ಬೇಹುಗಾರಿಕೆ ಮತ್ತು ಇರಾನಿನ ಸರಕಾರ, ಸೈನ್ಯಗಳಲ್ಲಿ ಉನ್ನತ ವಲಯಗಳಲ್ಲಿ ಅದರ ನಿಲುಕುವಿಕೆಯ ಪಾತ್ರ ಇರಾನಿ ಸರಕಾರ, ಜನತೆಯನ್ನು ಮಾತ್ರವಲ್ಲ, ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿತು. ಪ್ರತಿ ರಾತ್ರಿಯೆಂಬಂತೆ ವಿಮಾನ, ಕ್ಷಿಪಣಿ, ಡ್ರೋನ್ ಗಳ ಮೂಲಕ ನಿರಂತರ ದಾಳಿ ನಡೆಸಲಾಯಿತು.
ಇರಾನಿನ (ಅಕ್ಟೋಬರ್ 2024ರ ದಾಳಿಯಲ್ಲಿ ಭಾಗಶಃ ನಾಶವಾಗಿದ್ದ) ವಾಯು ರಕ್ಷಣಾ ವ್ಯವಸ್ಥೆ, ಡ್ರೋನ್ ಮತ್ತು ಕ್ಷಿಪಣಿ ತಯಾರಿಕಾ ಘಟಕ ಮತ್ತಿತರ ಹಲವು ರಕ್ಷಣಾ ಸ್ಥಾವರಗಳಿಗೆ ಸಾಕಷ್ಟು ಹಾನಿ ಮಾಡಲಾಯಿತು. ರಾಜಧಾನಿ ಟೆಹರಾನ್ ಮತ್ತು ಇತರ ಹಲವು ನಗರಗಳ ನಾಗರಿಕ ವಾಸಸ್ಥಳಗಳ ಮೇಲೆ ಸಹ ಬರ್ಬರ ದಾಳಿ ನಡೆದು, ನೂರಾರು ನಾಗರಿಕರ, ಸಾವು, ನೋವುಗಳಾದವು. ಒಂದು ಕೋಟಿಗಿಂತಲೂ ಹೆಚ್ಚು ಜನಸಂಖ್ಯೆ ಯ ಟೆಹರಾನ್ ನಗರವನ್ನು “ಖಾಲಿ ಮಾಡಲು’ ಇಸ್ರೇಲ್ ಸಾರ್ವಜನಿಕವಾಗಿ ಆಜ್ಞೆ ಮಾಡಿತು. ಇರಾನಿ ನಾಯಕರ, ವಿಜ್ಞಾನಿಗಳ ಹತ್ಯೆಗೆ ಗುರಿಯಿಟ್ಟಾಗ ಜತೆಗೆ ಅವರ ಕುಟುಂಬ,, ನೆರೆಹೊರೆಯವರ ಸಾಮೂಹಿಕ ಹತ್ಯೆ ನಡೆಸಲು ಇಸ್ರೇಲ್ ಹಿಂದೆ ಮುಂದೆ ನೋಡಲಿಲ್ಲ.

ಜೂನ್ 22ರಂದು ಯು.ಎಸ್ ಯುದ್ಧ ಪ್ರವೇಶಿಸಿ, ತನ್ನ ಬಿ2 ಬಾಂಬರುಗಳನ್ನು ಬಳಸಿ ಇರಾನಿನ ಮೂರೂ (ನಾತಾನ್ಝ್, ಇಸ್ಫಾನ್, ಫೋರ್ಡೊ) ಅಣು ಸ್ಥಾವರಗಳ ಮೇಲೆ ಭಾರೀ ಬಂಕರ್ ಬಸ್ಟರ್ ಬಾಂಬುಗಳನ್ನು ಹಾಕಿತು. ಫೋರ್ಡೊ ದಲ್ಲಿರುವ 80 ಮೀಟರ್ ಆಳದಲ್ಲಿರುವ ಭೂಗತ ಸ್ಥಾವರ ಸೇರಿದಂತೆ ಮೂರು ಅಣು ಸ್ಥಾವರಗಳನ್ನೂ ಪೂರ್ಣವಾಗಿ ನಾಶ ಮಾಡಲಾಗಿದೆ ಎಂದು ಟ್ರಂಪ್ ಕೊಚ್ಚಿಕೊಂಡರು.
ಈ ಯುದ್ಧದಲ್ಲಿ ಇರಾನ್ ನಲ್ಲಿ 600ರಿಂದ 1000 ಕ್ಕೂ ಹೆಚ್ಚು ನಾಗರಿಕರ ಸಾವು ಸಂಭವಿಸಿದೆ. 4500ಕ್ಕಿಂತ ಹೆಚ್ಚು ಜನ ಗಾಯಗೊಂಡಿದ್ದಾರೆ.
ಮೊದಲನೆಯ ದಿನದ ದಾಳಿ, ಹತ್ಯೆಗಳ ಶಾಕ್ ನಿಂದ ಚೇತರಿಸಿಕೊಂಡು, ಎರಡನೇ ದಿನದ ನಂತರ ಇರಾನ್ ನಿಂದ ಪ್ರತಿದಾಳಿ ಆರಂಭವಾಯಿತು. ಹೆಚ್ಚು ಯುದ್ಧ ವಿಮಾನ ಹೊಂದಿರದ ಇರಾನ್ ಮುಖ್ಯವಾಗಿ ಕ್ಷಿಪಣಿ ದಾಳಿ ನಡೆಸಿತು. ಇಸ್ರೇಲಿನ ಪ್ರಸಿದ್ಧ ಮೂರು ಸುತ್ತಿನ ಅಬೇಧ್ಯ ಎನ್ನಲಾದ ವಾಯು ರಕ್ಷಣಾ ವ್ಯವಸ್ಥೆ (ಜತೆಗೆ ಯು.ಎಸ್-ನಾಟೋ ಗಳ ಪ್ರತಿ-ಕ್ಷಿಪಣಿ ವ್ಯವಸ್ಥೆಯ ಬೆಂಬಲ) ಬೇಧಿಸಿ ಇರಾನ್ ಕ್ಷಿಪಣಿ ದಾಳಿ ಪರಿಣಾಮಕಾರಿ ಆಯಿತು. ಕೊನೆಯ ದಿನಗಳಲ್ಲಿ ಸೂಪರ್ ಸಾನಿಕ್ ಕ್ಷಿಪಣಿ ಬಳಕೆಯನ್ನು ಸಹ ಮಾಡಿತು. ಇಸ್ರೇಲಿ ರಾಜಧಾನಿ ಟೆಲ್ ಅವಿವ್, ಹೈಫಾ ನಗರಗಳಲ್ಲಿ, ಪ್ರಮುಖ ಮಿಲಿಟರಿ ನೆಲೆ, ಮೊಸಾದ್ ಮುಖ್ಯ ಕಚೇರಿ, ತೈಲ ಸಂಸ್ಕರಣ ಗಳ ಮೇಲೆ ಇರಾನ್ ತೀವ್ರ ದಾಳಿ ನಡೆಸಿತು. ಹಲವು ನಾಗರಿಕ ವಾಸದ ಪ್ರದೇಶಗಳಿಗೂ ದಾಳಿಯ ಬಿಸಿ ಮುಟ್ಟಿತು.
ಬಹುಶಃ ಮೊದಲ ಬಾರಿಗೆ ಇಸ್ರೇಲಿ ಸರಕಾರ ಮತ್ತು ಜನತೆಗೆ ಮಾರಕ ದಾಳಿಗಳ ರುಚಿ ಸಿಕ್ಕಿತು. ಇಸ್ರೇಲಿ ಮಿಲಿಟರಿ, ಸರಕಾರ ಮತ್ತು ನಾಗರಿಕರು ಇಷ್ಟು ನಾಶ ಎಂದೂ ನೋಡಿರಲಿಲ್ಲ. ಅದರಲ್ಲೂ ಇಸ್ರೇಲಿ ನಾಗರಿಕರಿಗೆ ಬಹುಶಃ ಮೊದಲ ಬಾರಿಗೆ ಯುದ್ಧದ ದೊಡ್ಡ ಪ್ರಮಾಣದ ಅನುಭವ ನೇರವಾಗಿ ಆಯಿತು. ದೂರದಲ್ಲಿದ್ದ ಯುದ್ಧ ಮನೆಬಾಗಿಲಿಗೆ ಬಂತು. ಇಸ್ರೇಲ್ ಹಲವು ಬಾರಿ ಪ್ರತಿ ವರ್ಷವೆಂಬಂತೆ ಹಲವು ಯುದ್ಧಗಳನ್ನು ಹೂಡಿದ್ದರೂ, ನಾಗರಿಕರಿಗೆ ನೇರವಾದ ಯುದ್ಧದ ಅನುಭವವಿರಲಿಲ್ಲ. ಇಸ್ರೇಲಿ ನಾಗರಿಕರು ದಿನಕ್ಕೆ ಹಲವು ಬಾರಿ ಸೈರನ್, ಬಾಂಭ್-ನಿರೋಧಕ ಶೆಲ್ಟರ್ ಓಡೋಡಿ ಸುಸ್ತಾದರು,
ಇಸ್ರೇಲ್ ನಲ್ಲಿ 29 ಸಾವುಗಳಾದವು ಮತ್ತು 2500ಕ್ಕೂ ಹೆಚ್ಚು ಗಾಯಗೊಂಡರು ಎನ್ನಲಾಗಿದೆ. ಸಾವು-ನೋವು ಯುದ್ಧ ತಂದ ನಾಶಗಳ ಮಾಹಿತಿಯನ್ನು ಇಸ್ರೇಲಿ ಸರಕಾರ ನಿಷೇಧಿಸಿದ್ದು, ಸಾವು-ನೋವು ಮತ್ತು ನಾಶದ ವ್ಯಾಪ್ತಿ ಇನ್ನಷ್ಟು ಹೆಚ್ಚು ಇರಬಹುದು.
ಇದನ್ನೂ ಓದಿ : ಇಸ್ರೇಲ್ನ ನರಮೇಧದ ವಿರುದ್ಧ ಗಾಜಾದತ್ತ ಜಾಗತಿಕ ನಡಿಗೆ ಯುದ್ಧ
- ಇಸ್ರೇಲ್ ಯುದ್ಧ ಆರಂಭಿಸಲು ಕೊಟ್ಟ ಕಾರಣಗಳೇನು?
ಇಸ್ರೇಲ್ ಇರಾನಿ ಅಣು ಸ್ಥಾವರಗಳ ಮೇಲೆ ದಾಳಿ ಮೂಲಕ ಆರಂಭಿಸಿದ ಯುದ್ಧಕ್ಕೆ ಕೊಟ್ಟ ಕಾರಣಗಳು ಮೂರು – 1. ಇರಾನ್ ಗುಪ್ತವಾಗಿ IAEA (ಅಂತರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ- ಐಎಇಎ) ಪರೀಕ್ಷಣೆ ತಪ್ಪಿಸಿ NPT (ಅಣ್ವಸ್ತ್ರ ಪ್ರಸರಣ ನಿಷೇಧ- ಎನ್.ಪಿ.ಟಿ ) ಒಪ್ಪಂದ ಮುರಿದು, ಯುರೇನಿಯಂ 90% ಶುದ್ಧೀಕರಣ ಸಾಧಿಸಿದ್ದು ಅಣ್ವಸ್ತ್ರ ತಯಾರಿಕೆ, ಕೆಲವೇ ದಿನಗಳ ದೂರದಲ್ಲಿದೆ. 2. ಇಸ್ರೇಲಿ ಪ್ರಭುತ್ವದ ಅಸ್ತಿತ್ವದ ವಿರುದ್ಧ ಇರಾನ್ ನಿರಂತರ ಬೆದರಿಕೆ ಹಾಕುತ್ತಿದ್ದು ತನ್ನ ‘ಪ್ರಾಕ್ಸಿ ಭಯೋತ್ಪಾದಕ’ ಸಂಘಟನೆಗಳ ಮೂಲಕ ನಿರಂತರ ಬೆದರಿಕೆ ಒಡ್ಡುತ್ತಿದೆ ಮತ್ತು 3. ಅಣ್ವಸ್ತ್ರ ಮತ್ತು ಕ್ಷಿಪಣಿ ಕ್ಷಮತೆಯ ಮೂಲಕ ಇಡೀ ಪಶ್ಚಿಮ ಏಶ್ಯಾ ಪ್ರದೇಶಕ್ಕೆ ಭದ್ರತಾ ಬೆದರಿಕೆ ಒಡ್ಡಿದೆ.
ಈ ಆಪಾದನೆಗಳಲ್ಲಿ ಎಷ್ಟು ಹುರುಳಿದೆ?
ಅಂತರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (IAEA – ಐಎಇಎ) ಮತ್ತು ಯು.ಎಸ್ ನ ರಾಷ್ಟ್ರೀಯ ಗೂಢಚಾರ ಸಂಸ್ಥೆ ಯು.ಎಸ್ ಪಾರ್ಲಿಮೆಂಟಿಗೆ, ಇರಾನ್ ಅಣ್ವಸ್ತ್ರ ತಯಾರಿಕೆಯ ಯೋಜನೆ ಹೊಂದಿಲ್ಲವೆಂದು ವರದಿ ಮಾಡಿವೆ. ಇರಾನ್ ತನ್ನ ಅಣುಶಕ್ತಿ ಯೋಜನೆ ಶಾಂತಿಯುತ ಬಳಕೆಗೆ ಮಾತ್ರ ಸೀಮಿತವಾಗಿದೆ. ಎನ್.ಪಿ.ಟಿ ಒಪ್ಪಂದದ ಪ್ರಕಾರ ನಡೆದುಕೊಳ್ಳಲಾಗಿದೆ. ಐಧು ಭದ್ರತಾ ಸಮಿತಿಯ ಶಾಶ್ವತ ಸದಸ್ಯರು ಮತ್ತು ಜರ್ಮನಿಯ ಜತೆ 2015ರಲ್ಲಿ ಮಾಡಿದ JCPOA ಒಪ್ಪಂದದ ಪ್ರಕಾರ ಇರಾನ್ ನಡೆದುಕೊಂಡಿದೆ. ಈ ಒಪ್ಪಂದದ ಪ್ರಕಾರ ಯು ಎಸ್ ನಡೆದುಕೊಂಡಿಲ್ಲ. ಇರಾನ್ ಮೇಲೆ ಹಾಕಿದ್ದ ದಿಗ್ಬಂಧನವನ್ನು ತೆಗೆದು ಹಾಕಿಲ್ಲ. ಮಾತ್ರವಲ್ಲ, 2018 ರಲ್ಲಿ ಟ್ರಂಪ್ ಮೊದಲ ಅಧ್ಯಕ್ಷಗಿರಿಯ ಅವಧಿಯಲ್ಲಿ ಏಕಪಕ್ಷೀಯವಾಗಿ ಒಪ್ಪಂದದಿಂದ ಹೊರನಡೆದಿದೆ. ಆದರೂ ಇರಾನ್ 2023ರ ವರೆಗೆ ಐಎಇಎ ಪರೀಕ್ಷಣೆ ಮುಂತಾದ ಷರತ್ತುಗಳನ್ನು ಪಾಲಿಸುತ್ತಿದ್ದು, ಆ ನಂತರವೇ ಐಎಇಎ ತನಿಖೆಯನ್ನು ನಿಲ್ಲಿಸಿದೆ. ಬದಲಿಗೆ, ಐಎಇಎ ಪರೀಕ್ಷಕರು ಗೂಢಚಾರರಂತೆ ವರ್ತಿಸಿದ್ದು, ಅವರ ಜತೆ ವ್ಯವಹರಿಸಿದ ಇರಾನಿ ವಿಜ್ಞಾನಿಗಳ ವೈಯಕ್ತಿಕ ವಿವರಗಳನ್ನು ಯು.ಎಸ್ ಮತ್ತು ಇಸ್ರೇಲಿ ಸರಕಾರಗಳಿಗೆ ಕಳಿಸಿವೆ. ಅವರ ಜತೆ ವ್ಯವಹರಿಸಿದ ಮತ್ತು ಇತ್ತೀಚಿನ ಅಣುಶಕ್ತಿ ಒಪ್ಪಂದದ ಮಾತುಕತೆಗಳಲ್ಲಿ ಭಾಗವಹಿಸಿದ ವಿಜ್ಞಾನಿಗಳನ್ನೇ ಹತ್ಯೆ ಮಾಡಲಾಗಿದೆ. ದಾಳಿಯ ೨-೩ ದಿನಗಳ ಮೊದಲಷ್ಟೇ ಇರಾನ್ ಕೆಲವು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಐಎಇಎ ವರದಿ ನೀಡಿದ್ದು ಮತ್ತು ಅಣು ಸ್ಥಾವರಗಳ ಮೇಲೆ ದಾಳಿಯ ಬಗ್ಗೆ ಖಂಡಿಸದೆ ಮೌನವಾಗಿರುವುದು ಅದು ಯು.ಎಸ್-ಇಸ್ರೇಲಿ ಕೂಟದ ಅಂಗದಂತೆ ವರ್ತಿಸಿದೆ ಎಂದು ಇರಾನ್ ಆಪಾದಿಸಿದೆ.

ಚೋದ್ಯದ ವಿಷಯವೆಂದರೆ ಇಸ್ರೇಲ್ ಬಳಿ 10ಕ್ಕೂ ಹೆಚ್ಚು ಅಣ್ವಸ್ತ್ರಗಳಿವೆ ಮತ್ತು ಅದು ಎನ್.ಪಿ.ಟಿ ಗೆ ಸಹಿ ಹಾಕಿಲ್ಲ ಅಥವಾ ತನ್ನ ಅಣು ಸ್ಥಾವರಗಳನ್ನು ಐಎಇಎ ಪರೀಕ್ಷಣೆಗೆ ಒಳಪಡಿಸಿಲ್ಲ, ಯು.ಎಸ್ ನ ತಾಂತ್ರಿಕ ಸಹಾಯದಿಂದಲೇ ಅದು ಅಣು ಸ್ಥಾವರಗಳನ್ನು ಮತ್ತು ಅಣ್ವಸ್ತ್ರಗಳನ್ನು ಹೊಂದಿದೆ. ಇಂತಹ ಇಸ್ರೇಲ್ ಮತ್ತು ಯು.ಎಸ್, ಇರಾನ್ ಎನ್.ಪಿ.ಟಿ ಉಲ್ಲಂಘಿಸಿದೆ ಮತ್ತು ಐಎಇಎ ಜತೆ ಸಹಕರಿಸುತ್ತಿಲ್ಲವೆಂದು ಅಣು ಸ್ಥಾವರಗಳ ಮೇಲೆ ವಿನಾಶಕಾರಿ ದಾಳಿ ಮಾಡಿರುವುದಕ್ಕಿಂತ ಹೆಚ್ಚಿನ ಕ್ರೂರ ವ್ಯಂಗ್ಯ ಇನ್ನೊಂದಿಲ್ಲ.
ಇರಾನ್ ಪ್ಯಾಲೆಸ್ಟೀನ್ ನ ಹಮಾಸ್, ಲೆಬನಾನ್ ನ ಹೆಜಬೊಲ್ಲಾ ಮತ್ತು ಯೆಮೆನ್ ನ ಹೌತಿ ಸಂಘಟನೆಗಳನ್ನು ಬಳಸಿ ಇಸ್ರೇಲ್ ವಿರುದ್ಧ ಸತತವಾಗಿ ಪ್ರಾಕ್ಸಿ ಯುದ್ಧ ನಡೆಸುತ್ತಿದೆ ಎಂಬುದು ಸಹ ನಿಜವಲ್ಲ. ಹಮಾಸ್, ಹೆಜಬೊಲ್ಲಾ ಮತ್ತು ಹೌತಿ – ಇವು ಆಯಾ ದೇಶಗಳಲ್ಲಿ ಜನತೆಯ ಪರವಾಗಿ ಹೋರಾಡುವ ಸಂಘಟನೆಗಳು. ಇವುಗಳಿಗೆ ಇರಾನ್ ಬೆಂಬಲ ಕೊಡುತ್ತಿದೆ ಎನ್ನುವುದು ನಿಜ. ಆದರೆ ಯು.ಎಸ್-ಇಸ್ರೇಲಿ ಕೂಟ ಈ ದೇಶಗಳ ಜನತೆಯ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ದಮನ ಮಾಡುತ್ತಿವೆ ಎನ್ನುವುದು ಅಷ್ಟೇ ನಿಜ. ಅವು ಸಶಸ್ತ್ರ ಗೆರಿಲ್ಲಾ ಹೋರಾಟಕ್ಕಿಳಿಯಲು ಇಸ್ರೇಲಿ ಹಿಂಸಾಚಾರ, ದಮನಗಳೇ ಕಾರಣ.

ಇರಾನ್ ಈ ಪ್ರದೇಶದ ದೇಶಗಳ ಭದ್ರತೆಗೆ ಬೆದರಿಕೆ ಎನ್ನುವ ಆಪಾದನೆ ಸಹ ಅಷ್ಟೇ ಹಾಸ್ಯಾಸ್ಪದ. ಇರಾನ್ ಯಾವುದೇ ದೇಶದ ಮೇಲೆ ಯುದ್ಧ ಹೂಡಿಲ್ಲ. ಅದು ಭಾಗವಹಿಸಿದ ಇತ್ತೀಚಿನ ಯುದ್ಧವೆಂದರೆ 1980-88ರ ಇರಾಕ್-ಇರಾನ್ ಯುದ್ಧ. ಅದೂ ಇರಾಕ್ ಆಕ್ರಮಣದಿಂದ ಆರಂಭವಾಗಿತ್ತು. ಅದಕ್ಕೆ ಯು.ಎಸ್-ಇಸ್ರೇಲಿ ಕೂಟದ ಪ್ರಚೋದನೆ, ಬೆಂಬಲ ಎರಡೂ ಇತ್ತು. ಈ ಎರಡೂ ದೇಶಗಳು ಪರಸ್ಪರ ನಾಶ ಮಾಡಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಗುರಿಯಿತ್ತು. ಇರಾಕ್ ಗೆ ನಾಟೋ ದೇಶಗಳು ನಿಷೇಧಿತ ರಾಸಾಯನಿಕ ಅಸ್ತ್ರಗಳನ್ನು ಕೊಟ್ಟಿದ್ದು. ಕೊನೆಗೆ ಇರಾನ್ ಮೇಲೆ ಅದನ್ನು ಬಳಸಿತು ಎಂದು ಆಪಾದನೆ ಆಡುವ ಡಬ್ಬಲ್-ಕ್ರಾಸ್ ಆಟ ಆವಾಗಲೂ ಆಡಿದ್ದವು.
ನಿಜವಾಗಿಯೂ ಈ ಪ್ರದೇಶದಲ್ಲಿನ ಪ್ರತಿ ದೇಶದ ಮೇಲೆ ಈಜಿಪ್ಟ, ಕೊಲ್ಲಿ ದೇಶಗಳು, ಜೋರ್ಡಾನ್, ಲೆಬನಾನ್, ಸಿರಿಯಾ, ಯೆಮೆನ್, ಇರಾಕ್, ಇರಾನ್ – ಹೀಗೆ ಎಲ್ಲ ದೇಶಗಳ ಮೇಲೆ ಇಸ್ರೇಲ್ ಯುದ್ಧ ಮಾಡಿದೆ. ಅತ್ಯಾಧುನಿಕ ಆಕ್ರಾಮಕ ವೈಮಾನಿಕೆ, ಸೇನಾ ಬಲ ಮತ್ತು ಅಣ್ವಸ್ತ್ರಗಳನ್ನು ಹೊಂದಿದೆ. ಹೆಚ್ಚಿನವನ್ನು ಬಳಸಿದೆ ಕೂಡಾ. ಮೇಲಾಗಿ ಅದಕ್ಕೆ ಯು.ಎಸ್ ಮತ್ತು ನಾಟೋ ಕೂಟದ ಮಿಲಿಟರಿ ನೆಲೆಗಳ, ಯುದ್ಧ ನೌಕೆಗಳ ಬೆಂಬಲವಿದೆ.
ಇರಾನ್ ಸರಕಾರ. ಏಕಪಕ್ಷೀಯ, ಸರ್ವಾಧಿಕಾರಿ ಮತ್ತು ಜನತೆಯ ಅದರಲ್ಲೂ ಮಹಿಳೆಯರ ಹಕ್ಕುಗಳನ್ನು ದಮನಿಸುವ ಸರಕಾರವನ್ನು ಬದಲಿಸಬೇಕು ಎಂಬ ವಾದವನ್ನೂ ಇಸ್ರೇಲ್-ಯು.ಎಸ್ ಮುಂದಿಟ್ಟಿವೆ. ಒಂದು ದೇಶದ ಸರಕಾರದ, ರಾಜಕೀಯ ವ್ಯವಸ್ಥೆಯ ಆಯ್ಕೆ – ಆಯಾ ದೇಶದ ಜನತೆಯ ಸಾರ್ವಭೌಮ ಹಕ್ಕು. ಸರಕಾರ ಅಥವಾ ರಾಜಕೀಯ ವ್ಯವಸ್ಥೆ ಸರಿಯಿಲ್ಲದಿದ್ದರೆ ಆಂತರಿಕ ಪ್ರಕ್ರಿಯೆಗಳ ಮೂಲಕವೇ ಬದಲಾವಣೆ ಬರಬೇಕು. ಅದನ್ನು ಉಲ್ಲಂಘಿಸಿ ಸರಕಾರ ಬದಲಾವಣೆಗೆ ಒತ್ತಾಯಿಸುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ.
- ಇಸ್ರೇಲ್ – ಇರಾನ್ ಯುದ್ಧದಲ್ಲಿ ಯು.ಎಸ್ ಏಕೆ ಪ್ರವೇಶಿಸಿತು?
ಯು.ಎಸ್ ಜೂನ್ 20ರಂದು ಈ ಯುದ್ಧದಲ್ಲಿ ಪ್ರವೇಶಿಸಿತು ಎಂದು ಹೇಳುವುದೇ ತಪ್ಪಾದೀತು. ಇಸ್ರೇಲಿಗೆ ಈ ಯುದ್ಧ ಆರಂಭಿಸಲು ಹಸಿರು ನಿಶಾನೆ ತೋರಿಸುವುದಲ್ಲದೆ ಶಸ್ತ್ರಾಸ್ತ್ರ ಸರಬರಾಜು, ಡ್ರೋನ್ ಕ್ಷಿಪಣಿ ಉಡಾವಣೆ ನಿಯಂತ್ರಣ, ವಾಯು ರಕ್ಷಣಾ ವ್ಯವಸ್ಥೆ ನಿರ್ವಹಣೆ, ಉಪಗ್ರಹ ಚಿತ್ರ ಬಳಸಿ ದಾಳಿಗ ಗುರಿ ಗುರುತಿಸುವಿಕೆ – ಹೀಗೆ ಹಲವು ಆಯಾಮಗಳಲ್ಲಿ ಯು ಎಸ್ ಇಸ್ರೇಲಿ ಯುದ್ಧದಲ್ಲಿ ಭಾಗಿಯಾಗಿದೆ. ಈ ಯುದ್ಧದಲ್ಲಿ ಮಾತ್ರವಲ್ಲ, ಇಸ್ರೇಲಿನ ಎಲ್ಲ ಆಕ್ರಾಮಕ ಕುಕೃತ್ಯಗಳ ಹಿಂದಿರುವ ನಿಜವಾದ ಶಕ್ತಿ ಯು ಎಸ್. ಇಸ್ರೇಲ್ ಯು ಎಸ್ ಯೋಜನೆಯನ್ನು ಜಾರಿ ಮಾಡುತ್ತದೆ ಅಷ್ಟೆ. ಜೂನ್ 20ರಂದು ಯು.ಎಸ್ ತನ್ನ ನೆಲೆಗಳಿಂದ ವಿಮಾನ ಕಳಿಸಿ ನೇರವಾಗಿ ಇರಾನ್ ಅಣು ಸ್ಥಾವರಗಳ ಮೇಲೆ ದಾಳಿ ಮಾಡಿದ್ದು ಅಷ್ಟೇ ವಿಶೇಷ.
ಭೂಗತ ಅಣು ಸ್ಥಾವರ ಗಳ ನಾಶಕ್ಕೆ ಬಂಕರ್ ಬ್ಲಸ್ಟರ್ ಬಾಂಬ್ ಅಗತ್ಯ. ಇದನ್ನು ಒಯ್ಯಲು ಅದರ ಬಳಿ ಮಾತ್ರವಿರುವ ಬಿ2 ಬಾಂಬರ್ ವಿಮಾನಗಳು ಅಗತ್ಯ. ಇವನ್ನು ಯಾರಿಗೂ ಯು.ಎಸ್ ಕೊಡದಿರುವ ಕಾರಣಕ್ಕೆ. ಮಾತ್ರ ಯು ಎಸ್ ನೇರವಾಗಿ ದಾಳಿ ಮಾಡಿದ್ದು. ಅಧ್ಯಕ್ಷ ಟ್ರಂಪ್ ಅವರೇ ಇಸ್ರೇಲಿ ದಾಳಿ ಬಗ್ಗೆ ತಿಳಿದಿತ್ತು, ಖಮೇನಿ ಹತ್ಯೆ ಮಾಡಬಾರದು ಅಂತ ನಿರ್ದೇಶಿಸಿದ್ದೆ (ಅಂದರೆ ಇತರ ಹಿರಿಯ ನಾಯಕರ ಹತ್ಯೆಗೆ ಹಸಿರು ನಿಶಾನೆ ಕೊಟ್ಟಿದ್ದರು ಬೆಂಬಲಿಸಿದ್ದರು ಎಂಬರ್ಥಲ್ಲವೇ) ಎನ್ನುವುದು; ಇರಾನಿ ಸರಕಾರದ ಬದಲಾವಣೆ ಗುರಿಯಲ್ಲ ಅಂಥ ಒಮ್ಮೆ, ಇನ್ನೊಮ್ಮೆ ಅತ್ಯಂತ ಕೆಟ್ಟ ಇರಾನಿ ಸರಕಾರ ಬದಲಾಯಿಸದೆ ವಿಧಿಯಿಲ್ಲ ವೆಂದ ಟ್ರಂಪ್ ನ ಮಾಮೂಲಿ ಗೊಂದಲಮಯ ಹೇಳಿಕೆಗಳೂ – ಹಿರಿಯ ನಾಯಕರ ಹತ್ಯೆ ಸೇರಿದಂತೆ ಈ ಯುದ್ಧದ ಎಲ್ಲದರಲ್ಲೂ ಯು.ಎಸ್ ಭಾಗಿಯಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಇದನ್ನೂ ನೋಡಿ : “ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ”ದ ಹಿನ್ನೆಲೆ ಏನು? Janashakthi Media
