ಐಪಿಸಿ, ಸಿಆರ್‍ಪಿಸಿ ಮತ್ತು ಐಎ ಬದಲಾಯಿಸುವ ಮಸೂದೆಗಳನ್ನು ಜಂಟಿ ಆಯ್ಕೆ ಸಮಿತಿಗೆ ಕಳಿಸಬೇಕು-ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ

ಐಪಿಸಿ, ಸಿಆರ್‍ಪಿಸಿ ಮತ್ತು ಐಎ ಬದಲಾಯಿಸುವ ಮಸೂದೆಗಳನ್ನು ಜಂಟಿ ಆಯ್ಕೆ ಸಮಿತಿಗೆ ಕಳಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಅಸ್ತಿತ್ವದಲ್ಲಿರುವ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳನ್ನು ಬದಲಿಸಲು ಮೋದಿ ಸರ್ಕಾರವು ಮೂರು ಮಸೂದೆಗಳನ್ನು ತಂದಿದೆ ಮತ್ತು ಅವುಗಳನ್ನು ಸಂಸತ್ತಿನಲ್ಲಿ ತಳ್ಳಿ ಅನಗತ್ಯ ತರಾತುರಿಯಲ್ಲಿ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಈ ಕರಡು ಮಸೂದೆಗಳಲ್ಲಿ ಗಂಭೀರ ದೋಷಗಳಿವೆ, ಇದು ಪ್ರಜಾಪ್ರಭುತ್ವ ಹಕ್ಕುಗಳು, ನಾಗರಿಕ ಸ್ವಾತಂತ್ರ್ಯಗಳು ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ.ಆದ್ದರಿಂದ ಈ ಮಸೂದೆಗಳನ್ನು ಸಂಪೂರ್ಣ ಪರಿಶೀಲನೆಗಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಆಯ್ಕೆ ಸಮಿತಿಗೆ ಕಳಿಸಬೇಕು ಎಂದು ಪೊಲಿಟ್‍ಬ್ಯುರೊ ಆಗ್ರಹಿಸಿದೆ.  ಅವುಗಳನ್ನು ತರುವಾಯ ಮಾತ್ರ ಜಾರಿಗೊಳಿಸಬಹುದು ಎಂದು ಹೇಳಿದೆ.

ಜಮ್ಮು -ಕಾಶ್ಮೀರ ಚುನಾವಣೆಗಳನ್ನು ಕ್ಷಣವೇ ನಡೆಸಲು ಒತ್ತಾಯ

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡಿದೆ, ಅಂತಿಮ ಮತದಾರರ ಪಟ್ಟಿಗಳ ಪ್ರಕಟಣೆ ನಡೆದಿದೆ ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ 2018 ರಿಂದ ನಡೆಯಬೇಕಾಗಿದ್ದ ಜಮ್ಮು ಮತ್ತು ಕಾಶ್ಮೀರ  ವಿಧಾನಸಭೆ ಚುನಾವಣೆಗಳನ್ನು ತಕ್ಷಣವೇ ನಡೆಸಬೇಕೆಂದು ಪೊಲಿಟ್ ಬ್ಯೂರೋ ಒತ್ತಾಯಿಸಿದೆ.

ಚುನಾವಣೆಗಳನ್ನು ನಡೆಸುವ ಬದಲಾಗಿ, ಲೋಕಸಭೆಯು ಇತ್ತೀಚೆಗೆ ಕಾಶ್ಮೀರ ಮರುಸಂಘಟನೆ ಕಾಯ್ದೆಗೆ ತಿದ್ದುಪಡಿ ಮಾಡುವ ಎರಡು ಮಸೂದೆಗಳನ್ನು ಅಂಗೀಕರಿಸಿತು, ೀ ಕಾಯ್ದೆಯನ್ನು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಡಿಸೆಂಬರ್ 11 ರಂದು ನೀಡಲು ಕಾಯ್ದಿರಿಸಿದೆ. ಅದರ ತೀರ್ಪಿಗಾಗಿ ಕಾಯುವ ಬದಲು, ಅತ್ಯಂತ ತರಾತುರಿಯಲ್ಲಿ, ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ಆಚರಣೆಗಳೆರಡನ್ನೂ ಉಲ್ಲಂಘಿಸುತ್ತದೆ. ಇದಲ್ಲದೆ, ಈ ತಿದ್ದುಪಡಿಗಳು ಉಪರಾಜ್ಯಪಾಲರ ಮೂಲಕ ಮೂಲಕ ಚುನಾಯಿತ ವಿಧಾನಸಭೆಗೆ ನಾಮನಿರ್ದೇಶನಗಳಿಗೆ ಅವಕಾಶ ಒದಗಿಸುತ್ತವೆ. ಇದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅಂತಹ ಯಾವುದೇ ನಾಮನಿರ್ದೇಶನಗಳನ್ನು ಚುನಾಯಿತ ಶಾಸಕಾಂಗ ಮಾಡಬೇಕೇ ಹೊರತು ಕೇಂದ್ರ ಸರ್ಕಾರದ ಚುನಾಯಿತವಲ್ಲದ ಪ್ರತಿನಿಧಿ ಅಲ್ಲ ೆಂದು ಸಿಪಿಐ(ಎಂ( ಹೇಳಿದೆ.

ಸಿಪಿಐ(ಎಂ)  ಪೊಲಿಟ್ ಬ್ಯೂರೋ ಡಿಸೆಂಬರ್ 9, 2023 ರಂದು ನವದೆಹಲಿಯಲ್ಲಿ ಸಭೆ ಸೇರಿತು. ಸಭೆಯ ನಂತರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಈ ಎರಡು ವಿಷಯಗಳಲ್ಲದೆ, ಇತ್ತಿಚಿನ ವಿಧಾನಸಭಾ ಚುನಾವಣೆಯ ಫಲಿತಾಂಶಗಳು, ಪ್ಯಾಲೆಸ್ನೀನಿನಲ್ಲ ನರಮೇಧ ಮುಂತಾದ ಇತರ ವಿಷಯಗಳನ್ನು ಚರ್ಚಿಸಿತು. ಹೇಳಿಕೆಯಲ್ಲಿನ ಇತರ ಕೆಲವು ಅಂಶಗಳು ಹೀಗಿವೆ:

ಇತ್ತೀಚಿನ ವಿಧಾನಸಭೆ ಚುನಾವಣೆಗಳು

ಮೂರು ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಸ್ಪಷ್ಟ ಜಯ ದಾಖಲಿಸಿದೆ.

ಕಾಂಗ್ರೆಸ್ ಪಕ್ಷವು 2018 ರ ತನ್ನ ಮತ ಪಾಲನ್ನು ಹೆಚ್ಚು ಕಡಿಮೆ ಉಳಿಸಿಕೊಳ್ಳಂಡಿದೆಯಾದರೂ, ಅದು ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ತನ್ನ ಸರ್ಕಾರಗಳನ್ನು ಕಳೆದುಕೊಂಡಿದೆ. ಮೂರೂ ರಾಜ್ಯಗಳಲ್ಲಿ ಬಿಜೆಪಿ ತನ್ನ ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ.

ಎಲ್ಲಾ ಮೂರು ರಾಜ್ಯಗಳಲ್ಲಿ ಮೂಲ ಹಿಂದುತ್ವ ಮತಗಳ ಕ್ರೋಢೀಕರಣವಾಗಿದೆ. ಮಾಧ್ಯಮಗಳ ದೊಡ್ಡ ವಿಭಾಗಗಳ ಮೇಲೆ ಬಿಜೆಪಿಯ ಹಿಡಿತ, ಭಾರೀ ಹಣಬಲ ಮತ್ತು ಜಾತಿ ವಿಭಜನೆಯ ಸಿನಿಕ ಬಳಕೆ ಅದರ ಯಶಸ್ಸಿಗೆ ಕಾರಣವಾಯಿತು.

ತೆಲಂಗಾಣದಲ್ಲಿ ಎರಡು ಅವಧಿಯ ಟಿಆರ್‌ಎಸ್/ಬಿಆರ್‌ಎಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ ಪಕ್ಷ ನಿರ್ಣಾಯಕ ಗೆಲುವು ಸಾಧಿಸಿದೆ. ಆದರೆ ಬಿಜೆಪಿ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ.

ಈ ಫಲಿತಾಂಶಗಳು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳು ಜನರ ಜೀವನೋಪಾಯ, ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳು ಮತ್ತು ಭಾರತೀಯ ಗಣತಂತ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪದ ರಕ್ಷಣೆಯಲ್ಲಿ ತಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸುವ ಅಗತ್ಯವನ್ನು ಸ್ಪಷ್ಟವಾಗಿ ಒತ್ತಿಹೇಳುತ್ತವೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಮೈಚಾವುಂಗ್ ಚಂಡಮಾರುತ

ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮೈಚಾವುಂಗ್ ಚಂಡಮಾರುತದಿಂದ ಉಂಟಾಗಿರುವ ವ್ಯಾಪಕ ಹಾನಿಯ ಬಗ್ಗೆ ಪೊಲಿಟ್ ಬ್ಯೂರೋ ತೀವ್ರ ಕಳವಳ ವ್ಯಕ್ತಪಡಿಸಿದೆ. ತಮಿಳುನಾಡಿನಲ್ಲಿ 24 ಮಂದಿ ಹಾಗೂ ಆಂಧ್ರಪ್ರದೇಶದಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಾಶವಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಾಶವಾಗಿದೆ. ಜಲಾವೃತ ಪ್ರದೇಶಗಳಲ್ಲಿ ನೀರು ನಿಲ್ಲುವುದು ಅಪಾಯವನ್ನುಂಟುಮಾಡುತ್ತಲೇ ಇದೆ.

ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ಇದುವರೆಗೆ ಸಾಕಷ್ಟು ಮಧ್ಯಂತರ ಹಣವನ್ನು ನೀಡಿಲ್ಲ. ಪುನರ್ವಸತಿ ಮತ್ತು ತಾಂತ್ರಿಕ ಬೆಂಬಲಕ್ಕಾಗಿ ಕೇಂದ್ರವು ಉದಾರವಾಗಿ ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಪ್ಯಾಲೆಸ್ಟೀನಿಯನ್ನರ ನರಮೇಧ

ಗಾಜಾದಲ್ಲಿ ಮತ್ತು ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ಟೀನಿಯನ್ನರ ವಿರುದ್ಧ ಇಸ್ರೇಲಿ ನರಮೇಧದ ದಾಳಿಗಳು ಇಲ್ಲಿಯವರೆಗೆ 17,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಬಲಿ ತೆಗೆದುಕೊಂಡಿವೆ, ಅವರಲ್ಲಿ 70% ದಷ್ಟು ಮಹಿಳೆಯರು ಮತ್ತು ಮಕ್ಕಳು. ಇಸ್ರೇಲ್‌ನಿಂದ ಪ್ಯಾಲೆಸ್ಟೀನಿಯನ್ನರ ಇಂತಹ ಜನಾಂಗೀಯ ನಿರ್ಮೂಲನೆಯನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಮತ್ತು ತಕ್ಷಣದ ಕದನ ವಿರಾಮಕ್ಕೆ ಒತ್ತಾಯಿಸಲು ಜಾಗತಿಕವಾಗಿ ವ್ಯಾಪಕವಾದ ಕೂಗು ಎದ್ದಿದೆ..

ತಕ್ಷಣ ಕದನ ವಿರಾಮ ಮತ್ತು ಎಲ್ಲಾ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಕರೆ ನೀಡುವ ಸರ್ವಾನುಮತದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ಅಡ್ಡಿಪಡಿಸಿದ ಡಿಸೆಂಬರ್ 8 ರ ಅಮೆರಿಕನ್‍ ವೀಟೋವನ್ನು ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ.

ಮೋದಿ ಸರ್ಕಾರ ತಕ್ಷಣವೇ ಕದನ ವಿರಾಮ ಘೋಷಣೆಗೆ ಒತ್ತಾಯಿಸಬೇಕು ಎಂದು ಪೊಲಿಟ್ ಬ್ಯೂರೋ ಬಲವಾಗಿ ಪುನರುಚ್ಚರಿಸಿದೆ.

ಕೇಂದ್ರ ಸಮಿತಿ ಸಭೆ

ಸಿಪಿಐ(ಎಂ) ಕೇಂದ್ರ ಸಮಿತಿಯ ಮುಂದಿನ ಸಭೆಯನ್ನು ಜನವರಿ 28-30, 2024 ರಂದು ತಿರುವನಂತಪುರದಲ್ಲಿ ಕರೆಯಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *