ಗಾಯ ಕಥಾ ಸರಣಿ| ಸಂಚಿಕೆ – 11 | ಗಾಯಗೊಂಡ ಹೃದಯಕ್ಕೆ ಬಲ ತುಂಬಿದ ರಾಜಣ್ಣ

(ಇಲ್ಲಿಯವರೆಗೆ…… ಧಣಿ ಹಾಗೂ ಇತರರ ಮೇಲೆ ದೂರು ನೀಡುವಂತೆ ಡಿಸಿ ಸಾಹೇಬರು ಸಾಕಷ್ಟು ಒತ್ತಾಯಿಸಿದರು. ದೂರು ನೀಡಡೆ ಮಾನವೀಯತೆಯ ಮೂಲಕ ಧಣಿ ಹಾಗೂ ಇತರರಿಗೆ ಗಾಯಗೊಂಡವರು ಪಾಠ ಕಲಿಸಿದರು. ಕೊನೆಗೆ ಡಿಸಿ, ಧಣಿಗೆ ಬುದ್ದಿವಾದ ಹೇಳಿ, ನೋವುಂಡವರ ಹಿಂದಿರುವ ಪ್ರೀತಿಯ ಬುತ್ತಿಯನ್ನು ಬಿಚ್ಚಿ ತೋರಿಸಿದ್ದ, ಹೊರಡುವಾಗ ಧಣಿಯ ಕೈಗೊಂದು ಪತ್ರವನ್ನು ಇಟ್ಟು ಬಿರಬಿರನೆ ಹೊರಟು ಹೋದರು…. ಮುಂದೆ ಓದಿ….  )

ಡಿಸಿ ಸಾಹೇಬರು ಕೈ ಗಿಟ್ಟ ಪತ್ರವನ್ನು ಓದಿದ ಧಣಿ, ತಲೆಯ ಮೇಲೆ ಕೈಹೊತ್ತು ಕುಳಿತ. ದಳಪತಿ, ಗೌಡ, ಶಾನುಭೋಗ ಯಾಕ್ರಿ ಧಣಿ? ಏನಾಯ್ತು? ಎಂದು ಸಮಾಧಾನ ಪಡಿಸಿದರು.

ಮೂರು ತಿಂಗಳು ನನ್ನ ಕೆಲಸದಿಂದ ತಗ್ದಾರೋ ದಳಪತಿ ಎಂದ ಧಣಿ. ಹೌದಾ! ಎಂದು ಮೂರು ಜನ ಸ್ವಲ್ಪ ಹೊತ್ತು ಧಣಿಗೆ ಸಮಾಧಾನ ಮಾಡಿದರು.

ಯೇ!!! ಹೋಗ್ಲಿ ಬಿಡ್ರಿ… ಧಣಿ, ಊರಾಗ ದರ್ಬಾರ್ ಮಾಡ್ಕೊಂಡು ಇದ್ರಾತು ಬಿಡ್ರ… ಎಂದ ಗೌಡ.

ಹಂಗಲ್ಲೋ!!! ಗೌಡಪ್ಪ, ನನಗ ನೌಕ್ರಿ ಐತಿ ಅಂತನಾ… ಹೆಣ್ಣು ಕೊಟ್ಟಾರ. ನೌಕ್ರಿ ಐತಿ ಅಂತನಾ… ನಮ್ಮ ಬೀಗರು, ಬಿಜ್ಜರು ಗೌರವ ಕೊಟ್ಟಾರ. ಅವರ ಮುಂದ ನಾ ಹೆಂಗ ತಲೆ ಎತ್ತಕೊಂಡು ತಿರ್ಗಾಡ್ಲೋ? ಧಣಿ ಅನ್ನೋದು ನಮ್ಮೂರಾಗಾಟ ನಡಿಯೋದು ಗೌಡಪ್ಪ. ಆ ಮಲ್ಯಾ, ದೇವ್ಯಾ, ರಾಜಣ್ಣ, ಈ ಡಿಸಿ ಸಾಹೇಬ ಎಂಥಾ ಶಿಕ್ಷೆ ಕೊಟ್ರೋ… ನನಗ… ಎಂದು ಧಣಿ ಪೇಚಾಡತೊಡಗಿದ. ಗಾಯ

ಧಣಿ ಆದಿದ್ದು ಆತು, ಜೈಲಿಗೆ ಹೋಗೊದು ತಪ್ಪಿತ್ತಲ್ಲ ಅದಕ್ಕ ಸಮಧಾನ ಪಟ್ಕೋರಿ… ಎಂದ ಶಾನುಭೋಗ.

ಧಣಿ ಇಷ್ಟಕ್ಕ ಆಟ ಮುಗಿದಿಲ್ರಿ. ನಾವು ಇನ್ನೂ ಸೋತಿಲ್ರೀ… ಧಣಿ, ನಿಜವಾದ ಆಟ ಊರಿಗೆ ಹೋದ ಮ್ಯಾಲೆ ಶುರು ಮಾಡೋಣ್ರಿ….. ಎಂದು ದಳಪತಿ ಧಣಿಯ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿದ.

ಇದನ್ನೂ ಓದಿ: ಗಾಯ ಕಥಾ ಸರಣಿ – ಸಂಚಿಕೆ 09 | ಶಿಕ್ಷೆ ಕೊಡೋಕೆ ನೀವು ಯಾರು? ಡಿಸಿ ಸಾಹೇಬನ ಪ್ರಶ್ನೆಗೆ ಧಣಿ ತಬ್ಬಿಬ್ಬು!

ನಡೀರಪ್ಪಾ, ಮೂರು ದಿನ ಆತ ನಿದ್ದಿ, ಜಳಕ ಇಲ್ದ… ಶಾನುಭೋಗ್ರ ನೀವು ಲಗು ಊರಿಗೆ ಹೋಗಿ ತಳ್ವಾರ ನಾಗ್ಯಾಗ ಡಂಗೂರ ಬಾರ್ಸಿ… ಊರ ಮಂದಿನ ಹನಮ್ಮಪ್ಪನ ಗುಡಿ ಕಡೆ ಬರಾಕ ಹೇಳಬೇಕು ನೋಡ್ರಿ…. ಎಂದ ದಳಪತಿ. ಶಾನುಭೋಗ ತಲೆ ಅಲ್ಲಾಡಿಸಿ, ಎಂ.ಎ.ಟಿ ಗಾಡಿ ಸ್ಟಾರ್ಟ್ ಮಾಡಿ ಊರಕಡೆ ಹೊರಟ.

ಗೌಡಪ್ಪ, ಆ ಮಲ್ಯಾ, ದೇವ್ಯಾ ಎಲ್ಲದಾರೋ, ಇಲ್ಲೆ ಎಲ್ಲಾದರೂ ಕಾಣಕತ್ತಾರೇನೋ ನೋಡ್ರಿ ಎಂದ ಧಣಿ.

ಅವರು ಆಗ್ಲೆ ಊರಿಗೆ ನಡ್ಕೋಂತಾ ಹೊಂಟ್ರು… ಅಂತ ಕಾಣತ್ರಿ ಧಣಿ ಎಂದ ಗೌಡ.

ನಡೀರಿ ಧಣಿ ಊರಿಗೆ ಹೋಗಿ ನಾ ಹೇಳಿದಂತೆ ಏನಾದ್ರೂ ತೆಲಿ ಓಡ್ಸೋಣ, ನಮ್ಮ ಅಸಲಿ ಆಟ ಚಾಲು ಮಾಡೋಣ ಎಂದು ಧಣಿಯ ಕೈ ಹಿಡಿದು ಎಬ್ಬಿಸಿದ ದಳಪತಿ. ಮೂವರು ಧಣಿಯ ಪಟಪಟಿಯಲ್ಲಿ ಊರತ್ತ ಹೆಜ್ಜೆ ಹಾಕಿದರು.

ಇತ್ತ… ಠಾಣೆಯ ಎದುರಿಗಿದ್ದ ಚಹಾದಂಗಡಿಯಲ್ಲಿ ಮಲ್ಯಾ, ದೇವ್ಯಾ, ಕೆಂಚ, ಬಸ್ಯಾ, ಭರ್ಮವ್ವ, ದೇವವ್ವ ನಾಷ್ಟಾ ಮಾಡುತ್ತ ಕುಳಿತಿದ್ದರು, ಅಲ್ಲಿಗೆ ಪತ್ರಕರ್ತ ರಾಜಣ್ಣ ಬಂದ, ರಾಜಣ್ಣನಿಗೆ ಎಲ್ಲರೂ… ನಮಸ್ಕಾರ್ರೀ… ಎಂದು ಕೈ ಮುಗಿದರು.

ಕುಂದರ್ರಿ… ಕುಂದರ್ರಿ… ನಾಷ್ಟಾ ಮಾಡ್ರಿ, ಡಿಸಿ ಸಾಹೇಬ್ರು ಸಿಕ್ಕಿದ್ರು ಎಲ್ಲಾ ಹೇಳಿದ್ರು ಎಂದ ರಾಜಣ್ಣ, ನಾಲ್ಕು ಜನ ಹೌದು ಎಂದು ತಲೆ ಅಲ್ಲಾಡಿಸಿದರು. ನೀವು ಹೆದರ್ಬಾರ್ದಿತ್ತು, ದೂರು ಕೊಡಬೇಕಿತ್ತು. ಏನು ಅಕ್ಕಿರ್ಲಿಲ್ಲ, ಎಲ್ಲಾ ನಾ ನೋಡ್ಕೋತ್ತಿದ್ದೆ ಎಂದ ರಾಜಣ್ಣ.

ನೀವು ನಮ್ಮ ಜೊತೆ ಸಾಯೋವರೆಗೂ ನಿಲ್ತೀರಿ ಅಂತ ಗೊತ್ತೈತ್ರಿ… ರಾಜಣ್ಣಾರ… ಆದ್ರೆ ಊರಾಗ ಅವರನ್ನ ಎದುರ ಹಾಕ್ಕೋಂಡು ಬದುಕೋ ಶಕ್ತಿ ನಮಗಿಲ್ರೀ… ಹಂಗಾಗಿ ರಾಜೀ ಆದ್ವಿರೀ… ಎಂದ ಮಲ್ಯಾ. ಗಾಯ

ದೀರ್ಘ ಉಸಿರು ಬಿಟ್ಟ ರಾಜಣ್ಣ, ಇರ್ಲಿ ಬಿಡ್ರಿ. ಮುಂದೇನು ಮಾಡೋದು? ಅಂತ ನಿರ್ಧಾರ ಮಾಡಿದಿರಿ?

ಏನ್ ಮಾಡೋದು? ಅಂತ ನಮಗಿನ್ನು ತಿಳ್ದಿಲ್ರೀ. ಆದ್ರ… ಡಿಸಿ ಸಾಹೇಬರ ಮುಂದ… ನಾವು ಇನ್ನು ಮುಂದೆ ಧಣ್ಯಾರ ಹೊಲ್ದಾಗ  ಕೆಲಸ ಮಾಡಂಗಿಲ್ಲ ಅಂತ ಹೇಳಿವ್ರೀ. ಬ್ಯಾರೆರ ಹೊಲ್ದಾಗ ಏನಾದರೂ ಕೂಲಿ ಕೆಲಸ ಮಾಡ್ಕೊಂಡು ಜೀವನ ಸಾಗಸ್ತೀವ್ರಿ… ರಾಜಣ್ಣ ಎಂದ ದೇವ್ಯಾ.

ಸ್ವಲ್ಪ ಹೊತ್ತು ಎಲ್ಲರೂ ಹಾಗೇ ಸುಮ್ಮನೆ ಕುಳಿತರು, ಕೆಂಚ, ಬಸ್ಯಾ ಕುಳಿತಿದ್ದ ಜಾಗಕ್ಕೆ ಬಂದ ರಾಜಣ್ಣ,

ಪಾಪ ಬಾಳ ನೋವು ಉಂಡಿರಿ, ಧೈರ್ಯ ತಗೋರಿ, ನೀವು ಅಪ್ಪ, ಅವ್ವನ ಜೊತಿ ಹೊಕ್ಕಿರೇನು? ಎಂದು ಕೇಳಿದ ರಾಜಣ್ಣ

ಗೊತ್ತಿಲ್ರಿ… ಊರಿಗೆ ಹೋದ್ರ ನಮ್ಮನ್ನ ಕಳ್ರು ಅಂತಾರಿ,ಮ… ಊರಿಗೆ ಹೊಗದಿದ್ರ ಹೆದರಿ ಊರ ಬಿಟ್ರು ಅಂತಾರ್ರಿ… ಏನ್ ಮಾಡಬೇಕು? ಅನ್ನೋದ ತಿಳಿವಲ್ದರಿ ಎಂದ ಕೆಂಚ.

ಇಬ್ಬರ ಹೆಗಲ ಮೇಲೆ ಕೈ ಹಾಕಿ, ನೀವಿನ್ನು ಬದುಕಿ ಬಾಳಬೇಕಾದವ್ರು. ನಿಮ್ಮೂರ ಧಣಿ, ದಳಪತಿ ವಿಷಜಂತುಗಳು ಇದ್ದಂಗ, ನಾವು ಬಲಾಢ್ಯರಾಗೋವರೆಗೂ ಅವುಗಳಿಂದ ದೂರ ಇರೋದು ಒಳ್ಳೇದು ಎಂದ ರಾಜಣ್ಣ. ಹಂಗಾದ್ರ… ನಾವು ಈಗ ಏನ್ ಮಾಡಬೇಕು ಅಂತಿರಿ? ಎಂದ ಬಸ್ಯಾ…

ನೀವಿಬ್ರು ತಳಸಮುದಾಯಕ್ಕೆ ಸೇರಿದವ್ರು, ನಿಮ್ಮ ಸಮುದಾಯಕ್ಕೆ ನಾ ಜಾಗೃತಿ ಮೂಡಿಸ್ತೀನಿ. ಒಬ್ಬರಲ್ದ ಒಬ್ಬರು ಸಿಕ್ಕೆ ಸಿಗ್ತಾನ. ಆದ ಅನ್ಯಾಯಕ್ಕೆ ಆಗ ನ್ಯಾಯ ಕೇಳೋ ಸಮಯ ಬರ್ತೈತಿ ಎಂದ ರಾಜಣ್ಣ.

ಇದು ಸಾಧ್ಯ ಅಂತಿರೀ? ರಾಜಣ್ಣ. ಧಣಿ ಮತ್ತು ದಳಪತಿ ವಿಷಜಂತು ಅಂತ ನೀವೇ ಹೇಳ್ತೀರಿ. ಹಂಗಿದ್ದಾಗ, ಆ ವಿಷಜಂತು ಜೊತೆ ಆಟ ಆಡೋ ಧೈರ್ಯ ನಮಗಂತೂ ಇಲ್ರೀ ಎಂದ ಮಲ್ಯಾ ಆತಂಕದಿಂದ.

ನೀವು ನಾ ಹೇಳಿದಂಗ ಕೇಳ್ರೀ… ಇನ್ನ ಹತ್ತು ವರ್ಷಕ್ಕ ಜನರಲ್ಲಿ ಹೆಂಗ ಜಾಗೃತಿ ಮೂಡಿಸ್ತೀನಿ ಅಂತ ನೋಡ್ತಿರ್ರಿ… ಎಂದ ರಾಜಣ್ಣ.

ರಾಜಣ್ಣ ಹೇಳಿದ್ದು ಬಿಡಂಗಿಲ್ಲ. ಅವ್ರು ಹೇಳಿದಂಗ ನಾವು ಕೇಳೋಣ. ನಾಲ್ಕು ಮಂದಿಗೆ ಒಳ್ಳೆದಾಗ್ಲಿ ಅಂತನ ಜೀವನ ಮಾಡ್ತಿರೋರು ಅವ್ರು.  ನಾವು ಹೆದ್ರದ ಬ್ಯಾಡ ಎಂದು ದೇವವ್ವ ಮತ್ತು ಭರ್ಮವ್ವ , ಮಲ್ಯಾ ಮತ್ತು ದೇವ್ಯಾನಿಗೆ ಧೈರ್ಯ ನೀಡಿದರು. ಗಾಯ

ಇದನ್ನೂ ಓದಿ: ಗಾಯ ಕಥಾ ಸರಣಿ | ಸಂಚಿಕೆ 10 – ಕ್ರೌರ್ಯ ಮೆರೆದ ಧಣಿಗೆ ಮಾನವೀಯತೆಯ ಪಾಠ

ನಿಮ್ಮ ಮನಿ ಹೆಣ್ಮಕ್ಕಳಿಗೆ ಇರೋ ಧೈರ್ಯ ನಿಮಗಿಲ್ಲ ನೋಡ್ರಿ… ಎಂದ ರಾಜಣ್ಣ. ಅಯ್ಯಪ್ಪ… ಏಳು ಸ್ಪೆಷಲ್ ಕೇಟಿ ಕೊಡು ಎಂದು ಟೀ ಆರ್ಡರ್ ಮಾಡಿದ ರಾಜಣ್ಣ.

ಸ್ವಲ್ಪ ಹೊತ್ತು ಕಳೆದ ನಂತರ, ಬಿಸಿ ಬಿಸಿ ಕೇಟಿ ಕುಡಿಯುತ್ತಾ, ನೀವು ನಾಲ್ಕು ಮಂದಿ ಊರಕಡೆ ಹೊಂಡ್ರಿ, ರಾಜಣ್ಣನ ಮಾತು ಪೂರ್ಣಗೊಂಡಿರಲಿಲ್ಲ… ಮತ್ತ ನಾವ್ರೀ… ಎಂದರು… ಕೆಂಚ ಮತ್ತು ಬಸ್ಯಾ.

ಹುಂ…ಹುಂ… ಎಂದು ಮುಗಳ್ನಕ್ಕ ರಾಜಣ್ಣ. ಕೆಂಚಪ್ಪ ಮತ್ತು ಬಸ್ಸಪ್ಪನಾ ಬೆಂಗಳೂರಾಗ ನಂಗ ಗೊತ್ತಿರೋರ್ದು ಒಂದು ಹೋಟೆಲ್ ಐತಿ ನಿಮ್ಮನ್ನ ಅಲ್ಲಿಗೆ ಕಳಿಸ್ತೀನಿ ಎಂದ ರಾಜಣ್ಣ. ನಾವು ಹೊಲೇರ ಅದಿವಲ್ರಿ… ಹೊಟಲ್ನಾಗ ಅವರು ನಮ್ಮನ್ನ ಕೆಲಸಕ್ಕ ಇಟ್ಕೊಂತಾರೇನ್ರಿ? ಎಂದ ಕೆಂಚ.

ಯೇ!!! ಆ ಹೋಟಲ್ ಮನುಷ್ಯ ಹಂಗಿಲ್ರೋ , ಚಲೋ ಮನುಷ್ಯ ಅದಾನ, ಜಾತಿಗೀತಿ ನಡ್ಸಲ್ಲ, ಮನುಷ್ಯರಿಗೆ ಬೆಲಿ ಕೊಡ್ತಾನ… ಎಂದ ರಾಜಣ್ಣ.

ನಾವು ಹೊಕ್ಕೀವ್ರಿ… ಎರಡು ದಿನ ಆತ್ರಿ‌…. ಇಲ್ಲೆ ಇದ್ದು.  ಸಂಜಿ ಆಗಾದ್ರಾಗ ಊರು ಸೇರ್ಕೊಬೇಕು. ಮಳಿಗಾಳಿ ಬೇರೆ… ಕತ್ಲಾಗಾದ್ರಾಗ ಊರ ಮುಟ್ಟತೀವ್ರಿ… ಎಂದು ಮಲ್ಯಾ, ದೇವ್ಯಾ ಹೇಳಿದರು. ನಾಲ್ಕು ಜನರು ಕೆಂಚ, ಬಸ್ಯಾನನ್ನ ಪರಸ್ಪರ ಬಿಗಿದಪ್ಪಿ ಕಣ್ಣೀರು ಹಾಕಿದ್ರು. ರಾಜಣ್ಣರ ಮನಿಗೆ ಪತ್ರ ಹಾಕ್ರಿ, ಅವರ ನಮಗ ಸುದ್ದಿ ಮುಟ್ಟಿಸ್ತಾರ ಎಂದು ಹೇಳಿ ನಾಲ್ಕು ಜನ ಬಿರಬಿರನೆ ಹೊರಟರು.

ಬಸ್ಸಪ್ಪ, ಕೆಂಚಪ್ಪ ತೊಗೋರಿ ಈ ಸಾವಿರ ರೂಪಾಯಿ ಇಟ್ಕೋರಿ, ಈ ಚೀಟ್ಯಾಗ ಅಡ್ರಸ್ ಐತಿ. ನಾ ಹೇಳಿ ಕಳ್ಸೀನಿ ಅಂದ್ರ ಸಾಕು, ಅವರು ನಿಮಗ ಕೆಲ್ಸ ಕೊಡ್ತಾರ. ಒಂದಿಷ್ಟು ದಿನ ಬಿಟ್ಟು ನಾ ಹೇಳಿದಾಗ ಊರಿಗೆ ಹೋಗಿರಂತ… ಎಂದ ರಾಜಣ್ಣ.

ಊರ ಮಂದಿ ನಮ್ಮನ್ನ  ಕಳ್ರು ಅಂದ್ರು, ಆದ್ರ… ನೀವು ನಮಗ ಬದುಕಿನ ದಾರಿ ತೋರ್ಸಿದ್ರಿ. ರಾಜಣ್ಣರ ನಿಮ್ಮ ಋಣ ಹೆಂಗ ತೀರ್ಸಬೇಕು ಅನ್ನೋದು ಗೊತ್ತಾಗವಲ್ದರೀ…  ನಮಗ ಎಂದು ಕೆಂಚ ಮತ್ತು ಬಸ್ಯಾ ಕೈ ಮುಗಿಯುತ್ತಾ ಕಣ್ಣೀರು ಹಾಕಿದ್ರು. ಗಾಯ

ಇಂಥಾ…. ದೊಡ್ಡ ದೊಡ್ಡ ಮಾತ ಬ್ಯಾಡ, ನಿಮ್ಮ ಸಮುದಾಯನ ಜಾಗೃತಿ ಮೂಡ್ಸಾಕ ನಂಗ ಕೈ ಜೋಡಸ್ರಿ ಸಾಕು. ಸುದ್ದಿ ಬಾಳ ಅದಾವ, ನಂಗ ವ್ಯಾಳೆ ಆತು, ಪತ್ರ ಬರೀರಿ. ಹಾಂ!!! ರಾತ್ರಿ 8 ರ ಬಸ್ಸಿಗೆ ಹೊಂಡ್ರಿ, ನಾನು ಟಿಕೆಟ್ ರೊಕ್ಕ ಕೊಟ್ಟಿರ್ತೀನಿ, ಕಂಡಕ್ಟರ್ ಹತ್ರ ಟಿಕೆಟ್ ಇಸ್ಕೋರಿ… ಎಂದು ಹೇಳಿ ರಾಜಣ್ಣ ಹೊರಟು ಹೋದ.

ಕೆಂಚ ಮತ್ತು ಬಸ್ಯಾ ಪರಸ್ಪರ ಬಿಗಿದಪ್ಪಿಕೊಂಡರು. ಪರಸ್ಪರ ಒಬ್ಬರಿಗೊಬ್ಬರು ಕಣ್ಣೀರು ಒರಸಿದರು. ನಮಗಾದ ಗಾಯಕ್ಕೆ ಮದ್ದು ಹುಡ್ಕೋಣ, ರಾಜಣ್ಣ ಕೊಟ್ಟ ಬಲದಿಂದ ನ್ಯಾಯ ಕೇಳೋ ಧೈರ್ಯ ಬೆಳ್ಸಿ ಕೊಳ್ಳೋಣ… ಎಂದು ದೃಢ ನಿರ್ಧಾರ ಮಾಡಿ ಬೆಂಗಳೂರಿನತ್ತ ಹೆಜ್ಜೆ ಹಾಕಿದರು.

 

(ಮುಂದುವರಿಯುವುದು……..‌‌)

ಈ ವಿಡಿಯೋ ನೋಡಿ : ಬಿಗ್‌ ಡಿಬೇಟ್‌ : ಐದು ರಾಜ್ಯಗಳ ಚುನಾವಣಾ ಫಲಿತಾಂಶ 2023| Assembly Election Results 2023

 

 

Donate Janashakthi Media

Leave a Reply

Your email address will not be published. Required fields are marked *