ಇನ್ವೆಸ್ಟ್ ಕರ್ನಾಟಕ 2025| ನೈಜ ಕೈಗಾರಿಕಾ ಬೆಳವಣಿಗೆ ಒತ್ತು ನೀಡದೇ, ಪ್ರಚಾರಗಿಟ್ಟಿಸುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ

ಇತ್ತೀಚಿನ ವರ್ಷಗಳಲ್ಲಿ ದೇಶದ ಬಹುತೇಕ ರಾಜ್ಯಗಳು ದೇಶೀಯ ಮತ್ತು ಪರದೇಶೀಯ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ ʼವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶʼ ಗಳನ್ನು ಆಗಾಗ್ಗೆ ಆಯೋಜಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇನ್ವೆಸ್ಟ್
ಹರ್ಷವರ್ಧನ

ಕರ್ನಾಟಕ ಸರ್ಕಾರವು ಸಹ ಅಂತಹದೊಂದು ಸಮಾವೇಶವನ್ನು 2000ನೇ ಇಸವಿಯಿಂದೀಚೆಗೆ ಆಗಾಗ್ಗೆ ಆಯೋಜಿಸುತ್ತಾ ಬಂದಿದೆ. ಇತ್ತೀಚೆಗೆ ಫೆಬ್ರುವರಿ 11-14, 2025 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ರೂ. 100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು 10.27 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದವಾಗಿದ್ದು, 6 ಲಕ್ಷ ಜನರಿಗೆ ಉದ್ಯೋಗವಕಾಶ ಸಿಗಲಿದೆ. ಅದರಲ್ಲಿ ಶೇ. 75 ರಷ್ಟು ಬೆಂಗಳೂರು ಹೊರತುಪಡಿಸಿ ಮತ್ತು ಶೇ. 45 ರಷ್ಟು ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಕಾರ್ಯಕ್ರಮ ಮತ್ತು ಅಂಕಿಅಂಶಗಳನ್ನು ಮೇಲ್ನೋಟಕ್ಕೆ ನೋಡಿದರೆ, ಇಂತಹ ಕಾರ್ಯಕ್ರಮಗಳು ನಿಜಕ್ಕೂ ಅವಶ್ಯವಿದೆಯೇ? ಅಥವಾ ಸರ್ಕಾರವೊಂದರ ಜನಪ್ರಿಯತೆ ಅಥವಾ ಇಮೇಜ್ ಸೃಷ್ಟಿಸಿಕೊಳ್ಳಲು ಕೈಗೊಳ್ಳುವ ಕಸರತ್ತುಗಳೇ ಎಂಬ ಪ್ರಶ್ನೆ ಯಾರಾಲ್ಲಾದರೂ ಮೂಡದೇ ಇರದು.

ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ದೇಶ ವಿದೇಶಗಳ ಪ್ರಮುಖ ನಗರಗಳಲ್ಲಿ ಹೂಡಿಕೆದಾರರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ʼರೋಡ್ ಶೋʼ ಗಳನ್ನು ಕೈಗೊಳ್ಳಲಾಗಿದೆ. ತದನಂತರದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಹೀಗೆ ಆಹ್ವಾನದ ಮೇರೆಗೆ ಸಮಾವೇಶದಲ್ಲಿ ಭಾಗವಹಿಸುವ ಕಾರ್ಪೋರೇಟ್ ಕಂಪನಿಗಳ ಮುಖ್ಯಸ್ಥರುಗಳು ಸರ್ಕಾರದೊಂದಿಗೆ ಹೂಡಿಕೆ ಮಾಡುವುದಕ್ಕಾಗಿ ಒಡಂಬಡಿಕೆ (ಎಂ.ಒ.ಯು) ಗಳಿಗೆ ಸಹಿ ಮಾಡುತ್ತಾರೆ. ಒಡಂಬಡಿಕೆಗಳಿಗೆ ಸಹಿ ಮಾಡಿದ ಕಂಪನಿಗಳು ಮುಂದಿನ 2-3 ವರ್ಷಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ಕೈಗಾರಿಕೆ ಸ್ಥಾಪನೆ ಮಾಡುತ್ತಾರೆ, ಆಮೂಲಕ ಉದ್ಯೋಗಗಳನ್ನು ಸೃಷ್ಟಿಸುತ್ತಾರೆ ಎಂಬ ಅಂತಿಮ ಉದ್ದೇಶ ಈ ಕಾರ್ಯಕ್ರಮದ್ದು. ಸಮಾವೇಶದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಕುರಿತಾದ ವಲಯಗಳೂ ಮತ್ತು ಉದ್ಯೋಗ ಸೃಜನೆಯ ಅವಕಾಶಗಳ ಬಗ್ಗೆ ಕೆಲವು ಗೋಷ್ಟಿಗಳು ನಡೆದವು. ಇನ್ವೆಸ್ಟ್

ಈಗಾಗಲೇ ಅನುಮೋದನೆಯಾಗಿರುವ ಪ್ರಸ್ತಾವನೆಗಳನ್ನು ಮತ್ತೇ ಘೋಷಿಸಿರುವುದು

ಈ ಸಮಾವೇಶದಲ್ಲಿ ಒಟ್ಟು ರೂ. 10.27 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲು ಒಡಂಬಡಿಕೆ ಮಾಡಿಕೊಂಡಿರುವ ಪ್ರಸ್ತಾವನೆಗಳ ಪೈಕಿ ಅಂದಾಜು 4 ಲಕ್ಷ ಕೋಟಿಗೂ ಹೆಚ್ಚಿನ ಪ್ರಸ್ತಾವನೆಗಳು ಕಳೆದೆರಡು ವರ್ಷಗಳಲ್ಲಿ ಸರ್ಕಾರ ತನ್ನ ವಿವಿಧ ಅನುಮೋದನೆ ಸಮಿತಿಗಳ ಮೂಲಕ ಅನುಮೋದನೆ ನೀಡಿದ್ದು, ಕೇವಲ ಸಂಖ್ಯೆಗಾಗಿ ಅವುಗಳನ್ನು ಸಹ ಈ ಸಮಾವೇಶದಲ್ಲಿ ಸೇರಿಸಿಕೊಂಡಿದೆ! ಈ ಪರಿಪಾಠ ಕಳೆದ ಬಿಜೆಪಿ ಸರ್ಕಾರ ಆರಂಭಿಸಿದ್ದು ಎನ್ನುದನ್ನು ಗಮನಿಸಬೇಕು.

ಈ ಪೈಕಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ವಿವಿಧ ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ರಾಜ್ಯ ಸರ್ಕಾರದ ಕ್ರೆಡಲ್ ಸಂಸ್ಥೆಯು ಸಹಿ ಹಾಕಿದೆ. ಇದರಿಂದ 78,253 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ. ನವೀಕರಿಸಬಹುದಾದ ಇಂಧನಗಳ ಪೈಕಿ ಸೋಲಾರ್ ವಿದ್ಯುಚ್ಛಕ್ತಿ ಯೋಜನೆಗಳಿಗೆ ಪ್ರಮುಖವಾಗಿ ಬಂಡವಾಳ ಹೂಡಿಕೆಯಾಗುತ್ತಿರುವುದು ನಿಜವೇ ಆದರೂ, ಹಲವು ಪ್ರಸ್ತಾವನೆಗಳಿಗೆ ಈಗಾಗಲೇ ಅನುಮೋದನೆಯಾಗಿವೆ ಅಥವಾ ಒಡಂಬಡಿಕೆಯನ್ನು ಈಗಾಗಲೇ ಮಾಡಿಕೊಂಡಿವೆ!

ಇದನ್ನೂ ಓದಿ : ರಾಜ್ಯ ಬಜೆಟ್: ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಬಜೆಟ್

ಹೂಡಿಕೆಯ ಅನುಷ್ಟಾನದ ಕುರಿತು ಲೆಕ್ಕಪರಿಶೋಧನೆಯೇ ಇಲ್ಲ

ಕಳೆದ ಎರಡೂವರೆ ದಶಕಗಳಲ್ಲಿ ಇದುವರೆಗೂ ನಡೆದಿರುವ ಇಂತಹ ಹೂಡಿಕೆದಾರರ ಸಮಾವೇಶಗಳಿಂದ, ಹೂಡಿಕೆದಾರರೊಂದಿಗೆ ಮಾಡಿಕೊಂಡ ಒಡಂಬಡಿಕೆಗಳ ಪೈಕಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ, ಅಂತಹ ಕೈಗಾರಿಕೆಗಳಿಂದ ಎಷ್ಟು ಉದ್ಯೋಗವಕಾಶಗಳು ಸೃಷ್ಟಿಯಾಗಿವೆ? ಎಂಬ ಅಂಶಗಳ ಕುರಿತು ಯಾವ ಸರ್ಕಾರವೂ ಲೆಕ್ಕಪರಿಶೋಧನೆ ಮಾಡುವುದಿಲ್ಲ. ಇದರಿಂದಾಗಿ ಕೇವಲ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಒಡಂಬಡಿಕೆಗಳ ಘೋಷಣೆ ಆಗುತ್ತದೆಯೇ ಹೊರತು ಅದರ ಅನುಷ್ಟಾನದ ಬಗ್ಗೆ, ಒಡಂಬಡಿಕೆಗೂ ಅನುಷ್ಟಾನಕ್ಕೂ ಇರುವ ಅಂತರದ ಬಗ್ಗೆ ಯಾವುದೇ ಪರಾಮರ್ಶೆ ನಡೆಯುವುದಿಲ್ಲ.
ಹಿಂದಿನ ಸಮಾವೇಶಗಳಲ್ಲಿ ಒಡಂಬಡಿಕೆ ಮಾಡಿಕೊಂಡು ಹತ್ತಾರು ಸಾವಿರ ಎಕರೆ ಭೂಮಿ ಹಂಚಿಕೆ ಪಡೆದು ಅನುಷ್ಟಾನವಾಗದೇ ಇರುವ ಹಲವು ಕಂಪನಿಗಳಿವೆ.

ನೈಜ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಜನೆ ಕೃಷಿ ರಂಗವು ಜಿಡಿಪಿ ಗೆ ಕೇವಲ ಶೇ. 20ರಷ್ಟು ಕೊಡುಗೆ ನೀಡುತ್ತಿದ್ದರೂ, ಅದನ್ನು ಅವಲಂಬಿಸಿರುವವರ ಜನ ಸಂಖ್ಯೆ ಶೇ. 60ರಷ್ಟಿದೆ. ಹೀಗಾಗಿ ಆಧುನಿಕ ಕೈಗಾರಿಕಾ ಕ್ರಾಂತಿಯಾಗದೇ, ಉತ್ಪಾದನಾ ವ್ಯವಸ್ಥೆಯನ್ನು ಕ್ರಾಂತಿಕಾರಕವಾಗಿ ಪರಿವರ್ತಿಸದೇ, ದೇಶದ ದೊಡ್ಡ ಸಂಖ್ಯೆಯ ಯುವಜನತೆಗೆ ಉದ್ಯೋಗ ನೀಡುವುದಾಗಲಿ, ಬಡತನ ನಿರ್ಮೂಲನೆ ಮಾಡುವುದಾಗಲಿ ಸಾಧ್ಯವಿಲ್ಲ.

ಕಳೆದ 35 ವರ್ಷಗಳಿಂದ ದೇಶದಲ್ಲಿ ಜಾರಿಗೊಳಿಸುತ್ತಿರುವ ನವ-ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳು ಕೈಗಾರೀಕರಣವನ್ನು ವಿಸ್ತರಿಸುವಲ್ಲಿ, ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ, ಉದ್ಯೋಗವಕಾಶಗಳನ್ನು ಹೆಚ್ಚಿಸುವಲ್ಲಿ ಅದರ ಹಿಂದಿನ ದಶಕಗಳಿಗೆ ಹೋಲಿಸಿದರೆ ಕುಂಠಿತವಾಗಿದೆಯೆಂದು ಅಧ್ಯಯನಗಳು ತೋರಿಸಿಕೊಟ್ಟಿವೆ. ವಾಸ್ತವವಾಗಿ ಉದ್ಯೋಗ-ನಷ್ಟದ ಆರ್ಥಿಕ ಬೆಳವಣಿಗೆಯ ಪಥದಲ್ಲಿ ದೇಶ ಸಾಗುತ್ತಿದೆಯೆಂದು ಹೇಳಲಾಗುತ್ತಿದೆ.

ಇತ್ತೀಚಿನ ದಶಕಗಳಲ್ಲಿ ಕೃತಕ ಬುದ್ದಿಮತ್ತೆ, ತಂತ್ರಜ್ಞಾನ ಬಳಕೆ ಇತ್ಯಾದಿಗಳಿಂದಲೂ ವ್ಯಾಪಕವಾಗಿ ಉದ್ಯೋಗ ನಷ್ಟವಾಗುತ್ತಿದೆ. ಇ-ಕಾಮರ್ಸ್ ವಹಿವಾಟು ನಡೆಸುವ ವೇದಿಕೆಗಳಿಂದಾಗಿ ಲಕ್ಷಾಂತರ ಕಿರಾಣಿ ಅಂಗಡಿಗಳು ಮುಚ್ಚಿಹೋಗಿದ್ದು ಉದ್ಯೋಗ ನಷ್ಟವಾಗಿದೆ.

ಹಳೆಯ ಮೈಸೂರು ರಾಜ್ಯವು ಕೈಗಾರೀಕರಣದಲ್ಲಿ ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿಯೂ ಸಾರ್ವಜನಿಕ ಉದ್ದಿಮೆಗಳ ಬೆಳವಣಿಗೆಗೆ ಒತ್ತು ನೀಡಿದ್ದರಿಂದ ಇಂದಿಗೂ ಕರ್ನಾಟಕ ರಾಜ್ಯವು ಉನ್ನತ ಶಿಕ್ಷಣ, ಇಂಜಿನೀಯರಿಂಗ್ ಕೈಗಾರಿಕೆಗಳು, ಸಂಶೋಧನಾ ಸಂಸ್ಥೆಗಳ ಸ್ಥಾಪನೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಆದರೆ, ಉತ್ಪಾದನಾ ಕೈಗಾರಿಕೆಗಳ ನೆಲೆ ಮತ್ತು ವ್ಯಾಪ್ತಿ ಮಾತ್ರ ವಿಸ್ತರಣೆಯಾಗಿಲ್ಲ, ಪ್ರಾದೇಶಿಕ ಅಸಮತೋಲನ ನಿವಾರಣೆಯಲ್ಲಿ ಪ್ರಗತಿಯಾಗಿಲ್ಲ.

ಕೈಗಾರಿಕೆಗಳ ಬೆಳವಣಿಗೆಯಲ್ಲಿ ಈಗಲೂ ಹಿಂದೆ!

ರಾಜ್ಯವು ರೂಪಿಸಿರುವ ಕಳೆದ 30 ವರ್ಷಗಳ ಕೈಗಾರಿಕಾ ನೀತಿಗಳು, ರಾಜ್ಯದ ದೇಶೀಯ ಆಂತರಿಕ ಉತ್ಫನ್ನದಲ್ಲಿ(ಜಿಡಿಪಿ) ಕೈಗಾರಿಕೆಗಳ ಕೊಡುಗೆಯನ್ನು ಶೇ. 20ಕ್ಕಿಂತ ಹೆಚ್ಚಿಸಲು ಗುರಿ ಹಾಕಿಕೊಂಡಿವೆ. ಆದರೂ ಅದು ಶೇ. 25ರ ಆಸುಪಾಸಿನಲ್ಲಿಯೇ ಇದೆ! ದೇಶ ಮಟ್ಟದಲ್ಲಿಯೂ ಇದೇ ಪರಿಸ್ಥಿತಿ ಇದೆ. ನಮ್ಮ ದೇಶ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಭಾರತವು ಹೊಂದಿದ್ದ ಪ್ರಮಾಣದಲ್ಲಿಯೇ ದೇಶೀಯ ಆಂತರಿಕ ಉತ್ಫನ್ನದಲ್ಲಿ(ಜಿಡಿಪಿ) ಕೈಗಾರಿಕೆಗಳ ಕೊಡುಗೆಯ ಪ್ರಮಾಣವನ್ನು ಹೊಂದಿದ್ದ ದೇಶಗಳು ಇಂದು ನಮಗಿಂತ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಕೈಗಾರಿಕೆಗಳ ಬಲವನ್ನು ಹೆಚ್ಚಿಸಿಕೊಂಡಿವೆ: ಭಾರತ (ಶೇ. 27), ಚೀನಾ (ಶೇ. 47), ಇಂಡೋನೇಷ್ಯಾ (ಶೇ. 47), ದಕ್ಷಿಣ ಕೊರಿಯಾ (ಶೇ. 39), ಮಲೇಷ್ಯಾ (ಶೇ. 44), ಥೈಲ್ಯಾಂಡ್ (ಶೇ. 45). ಈ ಸಮಾವೇಶದಲ್ಲಿ, ಇಂತಹ ನೈಜ ಪ್ರಶ್ನೆಗಳ ಕುರಿತು ಚರ್ಚೆಯಾಗಲೀ, ಅವಲೋಕನವಾಗಲೀ ಊಹಿಸುವುದು ಅಸಾಧ್ಯ.

ಇದನ್ನೂ ಓದಿ : “ದ್ವೇಷಕಾರಲು ‘ಪಾಕಿಸ್ತಾನ’ ಎಂಬ ಪದವನ್ನು ಚತುರತೆಯಿಂದ ಹೆಣೆದಿದ್ದಾರೆ”

ವ್ಯಾಪಾರ ಸುಗಮಗೊಳಿಸಲು ಸುಧಾರಣೆಗಳು (Ease of Doing Business) ಮತ್ತು ಕಾರ್ಮಿಕ ಕಾನೂನಿನ ಸಡಿಲತೆಗಳು

ವ್ಯಾಪಾರ ಪ್ರಕ್ರಿಯೆ ಅಥವಾ ಕೈಗಾರಿಕೆ ಸ್ಥಾಪಿಸುವಲ್ಲಿ ಇರುವ ಅನಗತ್ಯ ಕಾನೂನಿನ ಅಡೆತಡೆಗಳನ್ನು ನಿವಾರಣೆ ಮಾಡುವುದು ಆಮೂಲಕ ಕೈಗಾರಿಕೆಗಳನ್ನು ಸ್ಥಾಪಿಸುವುದು ಅತ್ಯವಶ್ಯ. ಆದರೆ, ವ್ಯಾಪಾರ ಸುಗಮಗೊಳಿಸಲು ಕೈಗೊಳ್ಳಲಾಗುತ್ತಿರುವ ಸುಧಾರಣೆಗಳು ವಿಶ್ವಬ್ಯಾಂಕ್ ಪ್ರೇರೇಪಿತ ಸುಧಾರಣೆಗಳಾಗಿದ್ದು, ಕಾರ್ಮಿಕ ಕಾನೂನನ್ನು ವ್ಯಾಪಕವಾಗಿ ಸಡಿಲಗೊಳಿಸುತ್ತಿವೆ. ಹಲವು ಕಾನೂನುಗಳಲ್ಲಿ ಇರುವ ಕೆಲವು ಅಂಶಗಳನ್ನು ಉಲ್ಲಂಘನೆ ಮಾಡಿದಲ್ಲಿ ಅಪರಾಧವೆಂದು ಪರಿಗಣಿಸಿ ಶಿಕ್ಷಿಸುವ ಅಂಶಗಳಿವೆ. ಇದನ್ನು Decriminalize (ಅಪರಾಧೀಯ ಅಲ್ಲವೆಂದು ಪರಿಗಣಿಸುವುದು) ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರವು ಸಮಾವೇಶದಲ್ಲಿ ಘೋಷಿಸಿದ್ದಕ್ಕೆ ಬಂಡವಾಳಗಾರರು ಜೈಕಾರ ಹಾಕಿದ್ದಾರೆ. ಈ ಕುರಿತು ಸಾರ್ವಜನಿಕ ಚರ್ಚೆಯಿಲ್ಲದೇ ಮಾಡುತ್ತಿರುವುದು ಶೋಚನೀಯ.

ಸಾರ್ವಜನಿಕ ಉದ್ದಿಮೆಗಳು ಯಾವುದೇ ದೇಶದ ಬೆಳವಣಿಗೆಯ ಇಂಜೀನ್ ಆದಾಗ ಮಾತ್ರ ಸಮಾಜದ ಎಲ್ಲ ವರ್ಗದವರಿಗೂ ಕೈಗಾರಿಕಾ ಬೆಳವಣಿಗೆಯ ಪ್ರಯೋಜನಗಳು ಲಭಿಸುತ್ತವೆ. ಆದರೆ, ಸಾರ್ವಜನಿಕ ಉದ್ದಿಮೆಗಳ ಬೆಳವಣಿಗೆ ಕುರಿತು ಚರ್ಚೆಯೇ ಆಗುತ್ತಿಲ್ಲ.

ಜಾಗತಿಕ ಹಣಕಾಸು ಬಂಡವಾಳದ ತಾಳಕ್ಕೆ ತಕ್ಕಂತೆ ಕುಣಿಯುವ ಆರ್ಥಿಕ ನೀತಿಗಳಿಗೆ ಅಂಟಿಕೊಂಡಿರುವ ಭಾರತದಂತಹ ದೇಶಗಳಲ್ಲಿ ವ್ಯಾಪಾರ ಸುಗಮಗೊಳಿಸುವ ಸುಧಾರಣೆಗಳ ಹೆಸರಿನಲ್ಲಿ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವುದು, ಉದ್ಯೋಗ ಸೃಜಿಸುವ ನೆಪದಲ್ಲಿ ಅದಕ್ಕೆ ಯಾವುದೇ ಷರತ್ತುಗಳನ್ನು ವಿಧಿಸದೇ ರಾಜ್ಯದ ಸಂಪನ್ಮೂಲಗಳಾದ ಕೈಗಾರಿಕಾ ಭೂಮಿ, ವಿದ್ಯುತ್, ನೀರು, ಇತ್ಯಾದಿಯ ಜೊತೆಗೆ ಹೆಚ್ಚೆಚ್ಚು ತೆರಿಗೆ ವಿನಾಯಿತಿ, ಸಬ್ಸಿಡಿ ಪ್ರೋತ್ಸಾಹನೆಗಳನ್ನು ನೀಡಲು ವಿವಿಧ ರಾಜ್ಯಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಗೃಹ ಮಂತ್ರಿಯವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಇನ್ನಿತರ 3-4 ಕೇಂದ್ರ ಮಂತ್ರಿಗಳಿಗೆ ತಮಗಿಂತ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆಯೆಂದು ಮುನಿಸಿಕೊಂಡು ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಉದ್ಘಾಟನೆ ಕಾರ್ಯಕ್ರಮಕ್ಕೆ ಬರಲಿಲ್ಲವೆಂದು ಸುದ್ದಿಯಾಗಿತ್ತು.

ನೈಜ ಜನಪರ ಮಾದರಿಯ ಕೈಗಾರಿಕಾಭಿವೃದ್ಧಿ ನೀತಿಗಳ ಬಗ್ಗೆ ಆಲೋಚಿಸದೇ ನವ ಉದಾರವಾದಿ ನೀತಿಗಳಿಗೇ ಅಂಟಿಕೊಂಡಲ್ಲಿ ಕೇವಲ ಹುಸಿ ಕೈಗಾರಿಕಾ ಬೆಳವಣಿಗೆಯ ಕಾರ್ಯಕ್ರಮಗಳನ್ನು ಪ್ರಚಾರಗಿಟ್ಟಿಸಲು ಹೇಗೆ ಮಾಡಬಹುದೆಂಬುದಕ್ಕೆ ಇಂತಹ ಸಮಾವೇಶಗಳು ಸಾಕ್ಷಿಯಷ್ಟೇ.

 

Donate Janashakthi Media

Leave a Reply

Your email address will not be published. Required fields are marked *