ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2024; ಚಿತ್ರಗಳ ವಿಮರ್ಶೆ

ಡಾ ಮೀನಾಕ್ಷಿ ಬಾಳಿ, ಕಲಬುರಗಿ

“ಬೆಂಗಳೂರಿನಲ್ಲಿ ಜಗತ್ತು” ಇದು ಈ ಸಲದ 15ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಥೀಮ್ (ಪರಿಕಲ್ಪನೆ) ಆಗಿತ್ತು. ಫೆಬ್ರವರಿ 29 ರಿಂದ ಮಾರ್ಚ 7 ರವರೆಗೆ ನಡೆದ ಈ ಉತ್ಸವದಲ್ಲಿ 221 ಚಿತ್ರಗಳು ಪ್ರದರ್ಶನಗೊಂಡವು. ಚಿತ್ರಪ್ರೇಮಿಗಳಿಗೆ ಇಂದು ನಿಜವಾಗಿಯೂ ದೊಡ್ಡ ಹಬ್ಬವೆ ಸರಿ. ಕಳೆದ ಬಾರಿಗಿಂತ ಈ ಸಲ ತುಂಬಾ ಮೌಲಿಕ ಮತ್ತು ಅರ್ಥಪೂರ್ಣ ಚಿತ್ರಗಳು ಆಯ್ಕೆಯಾಗಿದ್ದವು. ಆಯ್ಕೆ ಸಮಿತಿಯ ಪರಿಶ್ರಮ ಮತ್ತು ಬದ್ಧತೆ ಎದ್ದು ಕಾಣಿಸಿತು. ಚಲನಚಿತ್ರೋತ್ಸವ

ಜಗತ್ತಿನ ಎಲ್ಲ ಮೂಲೆಗಳಿಂದ ಅಪರೂಪದ ಚಿತ್ರಗಳು ಸೇರಿಕೊಂಡಿದ್ದವು. ಕನ್ನಡದ ಕಲಾತ್ಮಕ ಚಿತ್ರಗಳಲ್ಲೆ ಹಳೆಯ ಕ್ಲಾಸಿಕ್ ಚಿತ್ರಗಳು, ಜನಪ್ರಿಯ ಚಿತ್ರಗಳೂ ಪ್ರದರ್ಶನಗೊಂಡು ಕನ್ನಡ ಪ್ರೇಮಿಗಳ ಹಸಿವನ್ನು ತಣಿಸುವಂತಿದ್ದವು. ಭಾರತವೇ ಒಂದು ಜಗತ್ತು ಎಂಬಂತಿರುವುದರಿಂದ ಇಲ್ಲಿನ ವೈವಿಧ್ಯಮಯ ಭಾಷೆಗಳ ಚಿತ್ರಗಳು ಸೇರಿಕೊಳ್ಳುವ ಮೂಲಕ ಬಹುತ್ವ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿತ್ತು. ಸ್ವಿರ‍್ಲೆಂಡ್, ಜರ್ಮನ್, ಫ್ರಾನ್ಸ್, ಇಟಲಿ, ಹಂಗೇರಿಯಾ, ಇಂಡೋನೇಷಿಯಾ, ಜಪಾನ್, ಜೋರ್ಹ್ಡಾನ್, ಉಜ್ಬೆಕಿಸ್ತಾನ್, ಇರಾನ್, ಪರ್ಶಿಯಾ, ಯಮನ್, ನೇಪಾಳ, ಸಿಂಗಪೂರ್ ಥೈವಾನ್, ಮಂಡೇರಿಯನ್, ಜಾರ್ಜಿಯಾ, ಸ್ಪೇನ್, ಪೂರ್ತುಗಾಲ್, ರೊಮಾನಿಯಾ, ಚಿಲಿ, ಪೋಲೆಂಡ್, ಉಕ್ರೇನ್, ರಷ್ಯಾ, ಟರ್ಕಿ, ಚೈನಾ, ಮಾಕ್ಸಿಕೊ, ಬೆಲ್ಜಿಯಂ, ಸೆನೆಗಲ್, ಬಲ್ಗೇರಿಯಾ, ಜೆಕೋಸ್ಲೋವಾಕಿಯಾ, ಮಂಗೋಲಿಯಾ, ಸ್ಪೇನ್, ಆಸ್ಟ್ರೆಲಿಯಾ, ಇಸ್ರೇಲ್, ಮೊರೆಕೊ, ಸೈಪ್ರಸ್, ಸ್ವೀಡನ್, ಫಿನ್ಲೆಂಡ್, ಟ್ಯುನೇಷಿಯಾ, ಅಮೇರಿಕಾ, ಸೂಡಾನ್, ಮ್ಯಾಕ್ಸಿಕೋ, ವಿಯೆಟ್ನಾಂ, ಕಾಂಗೊ, ಶ್ರೀಲಂಕಾ, ಕೋರಿಯನ್, ಅಲ್ಜೇರಿಯಾ, ಲಿಥ್ಯುವೆನಿಯಾ, ನೆದರಲ್ಯಾಂಡ್, ಕೆನಡಾ, ಬ್ರೆಜಿಲ್, ಅಜೈಂಟಿನಾ, ಬ್ರಾಜಿಲ್, ಕಜುಕಿಸ್ತಾನ್, ಭೂತಾನ್, ಯುಕೆ,(ಇಂಗ್ಲೆಂಡ್), ಪ್ಯಾಲೆಸ್ಟೈನ್, ಪೋಲೆಂಡ್, ಮ್ಯಾಕ್ಸಿಕೊ, ನೇಪಾಳ ಮುಂತಾಗಿ 60 ಕ್ಕೂ ಹೆಚ್ಚು ದೇಶಗಳ ಸಿನೇಮಾಗಳು ನೋಡಲು ಲಭಿಸಿದ್ದು ಸುಯೋಗವೇ ಸರಿ. ಇನ್ನು ಭಾರತೀಯ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲೆಯಾಳಿ, ಹಿಂದಿ, ಉರ್ದು, ಬೆಂಗಾಲಿ, ಮರಾಠಿ ಮುಂತಾದ ಅಧಿಕೃತ ಭಾಷಾ ಚಿತ್ರಗಳಲ್ಲದೆ, ಉಪಭಾಷೆಗಳಾದ, ಬೊಡೋ, ತುಳು, ಅರೆಭಾಷಿ, ಸಂತಾಲಿ, ಥಂಗಕೋಲ್, ಕಶ್ಮೀರಿ, ಬುಂದೇಲಿ, ಗಢವಾಲಿ, ಗೋರಮಾಟಿ, ಥೈಪಾಕಿ, ಮರಕೋಡಿ, ಸಂತಾಲಿ, ಗಾಲೋ, ಕೊಡವ, ಜೈನ್‌ಂಥಿಯಾ, ಮಣಿಪುರಿ, ಆಸ್ಸಾಮಿ ಇತ್ಯಾದಿ ಚಿತ್ರಗಳು ನೋಡಲು ಅವಕಾಶವಿತ್ತು. ಚಲನಚಿತ್ರೋತ್ಸವ

ಇಷ್ಟೆಲ್ಲಾ ಚಿತ್ರಗಳನ್ನು ಒಬ್ಬ ವ್ಯಕ್ತಿಗೆ ನೋಡಲು ಸಾಧ್ಯವಾಗದಿದ್ದರೂ ಚಿತ್ರ ರಸಿಕರು ತಮಗೆ ಬೇಕಾದ ಚಿತ್ರಗಳನ್ನು ಆರಿಸಿಕೊಂಡು ನೋಡಿದ್ದು ಸಂತೃಪ್ತ ಭಾವ ಮೂಡಿಸಿತ್ತು. ನೋಡಿದ ಸಿನೆಮಾಗಳ ಪೈಕಿ ಕೆಲವೊಂದು ಚಿತ್ರಗಳಂತೂ ಕಾಡದೆ ಇರವು. ಚಲನಚಿತ್ರೋತ್ಸವ

ಅದರಲ್ಲಿ ಸ್ಪೇನ್ ದೇಶದ ‘ದ ರೈ ಹಾರ್ನ್’ ಎಂಬ ಚಿತ್ರವಂತೂ ತನ್ನ ಹೃದಯಸ್ಪರ್ಶಿ ಸನ್ನಿವೇಶಗಳಿಂದಾಗಿ ಸದಾಕಾಲ ನೆನಪಿನಲ್ಲಿ ಉಳಿದು ಬಿಡುತ್ತದೆ. ಜೈಓನಿ ಕಂಬೋರ್ಡಾ ಎಂಬ ನಿರ್ದೇಶಕಿ ಮಹಿಳಾ ಪ್ರಧಾನ ವಸ್ತುವೊಂದನ್ನು ಆರಿಸಿಕೊಂಡು ಮನೋಜ್ಞವಾಗಿ ಚಿತ್ರಿಕರಿಸಿದ್ದಾರೆ. ಗಲೇಷಿಯನ್, ಪೋರ್ತುಗೀಸ್, ಸ್ಪಾನಿಸ್ ಮೂರು ಭಾಷೆಗಳಲ್ಲಿ ತೆರೆಕಂಡ ಚಿತ್ರದ ಅವಧಿ 105 ನಿಮಿಷ. 1971 ನೇ ಸಾಲಿನ ಆಸುಪಾಸಿನಲ್ಲಿ ಸ್ಪೇನ್ ನ ಫ್ರಾಂಕೊಯಿಸ್ಟ್ ನ ಹಳ್ಳಿಗಾಡಿನಲ್ಲಿ ಮಾರಿಯಾ ಎಂಬ ಬಡ ಮಹಿಳೆ ಸೂಲಗಿತ್ತಿಯಾಗಿ ಒಂಟಿ ಜೀವನ ನಡೆಸುತ್ತಿರುತ್ತಾಳೆ. ಹೆರಿಗೆ ಮಾಡಿಸುವಲ್ಲಿ ಸುತ್ತ ಫಾಸಲೆಯಲ್ಲಿ ಹೆಸರು ಮಾಡಿದ ಈಕೆ ಎಲ್ಲರೊಂದಿಗೂ ಸೌಹಾರ್ದಯುತವಾಗಿಯೇ ಕಾಲ ಕಳೆಯುತ್ತಿರುತ್ತಾಳೆ. ಅಷ್ಟರಲ್ಲಿ ಅದೇ ಊರಿನ ಮಧ್ಯಮ ವರ್ಗದ ಕುಟುಂಬದ ಪುಟ್ಟ ಹುಡುಗಿಯೊಬ್ಬಳು ಅಂದರೆ ಹೈಸ್ಕೂಲ ಮಟ್ಟದಲ್ಲಿದ್ದಿರಬಹುದಾದ ಮಗು ಅವಳು. ತನ್ನ ಓರಿಗೆಯ ಹುಡುಗನೊಂದಿಗೆ ಸಲುಗೆ ಬೆಳೆದು ದೈಹಿಕ ಸುಖಕ್ಕೂ ಒಡ್ಡಿಕೊಳ್ಳುತ್ತಾಳೆ. ಎಷ್ಟೇ ಇದ್ದರೂ ಅದು ಅಪಾರ ಕುತೂಹಲ ತುಂಬಿಕೊಂಡಿರುವ ಜಾರುವ ವಯಸ್ಸಾದ್ದರಿಂದ ಶರೀರ ವಾಂಛೆ ಮಗುವನ್ನು ತುಂಬಾ ದೂರ ಎಳೆದುಕೊಂಡು ಹೋಗುತ್ತದೆ. ಅನುಭವಿಸಿದ ಸುಖವನ್ನು ಮೆಲಕು ಹಾಕುವಷ್ಟರಲ್ಲಿ ಗರ್ಭ ಕಟ್ಟಿಕೊಳ್ಳುತ್ತದೆ. ಕಕ್ಕಾಬಿಕ್ಕಿಯಾದ ಹುಡುಗಿ ಗರ್ಭವಿಳಿಸಿಕೊಳ್ಳಲು ಮಾರಿಯಾ ಬಳಿ ಬರುತ್ತಾಳೆ. ಮಾರಿಯಾ ತಾನು ಇಂಥ ಕೆಲಸ ಮಾಡಲಾರೆ ಎಂದು ಖಡಾಖಂಡಿತವಾಗಿ ನಿರಾಕರಿಸಿದರೂ ಹುಡುಗಿ ಒಂದೆ ಸಮನೇ ಅಂಗಲಾಚುತ್ತಾಳೆ. ತನ್ನನ್ನು ಈ ಅವಘಡದಿಂದ ಪಾರು ಮಾಡಬೇಕೆಂದು ದಯನೀಯವಾಗಿ ಕೇಳಿಕೊಂಡಾಗ ಮಾರಿಯಾಗೆ ಗರ್ಭವಿಳಿಸಲು ಒಪ್ಪಿಕೊಳ್ಳುವುದು ಅನಿವಾರ್ಯವಾಗುತ್ತದೆ. ಚಲನಚಿತ್ರೋತ್ಸವ

ಇದನ್ನು ಓದಿ : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ:ಇಬ್ಬರನ್ನು ವಶಕ್ಕೆ ಪಡೆದ ಎನ್‌ಐಯ

ಮರುದಿನ ಸ್ಕೂಲ್ ಹೊತ್ತಿಗೆ ಕಳ್ಳ ಮಾರ್ಗವಾಗಿ ಬಂದ ಹುಡುಗಿಗೆ ಮಾರಿಯಾ ಯಾವುದೋ ಗಿಡವೊಂದರ ಬೀಜ ಕುಟ್ಟಿ ಪುಡಿ ಮಾಡಿ ಕುಡಿಸಿ ಗರ್ಭಪಾತ ಮಾಡಿಸಲು ಅಣಿಯಾಗುತ್ತಾಳೆ. ಗಿಡಮೂಲಿಕೆ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಪುಟ್ಟ ಪೋರಿ ಮಾರಣಾಂತಿಕ ನೋವು ಅನುಭವಿಸಿ ಒದ್ದಾಡುತ್ತಲೆ ರಕ್ತಸ್ರಾವವಾಗುತ್ತದೆ. ಅಂತೂ ಅರಿಭಯಂಕರ ನೋವು ಅನುಭವಿಸುತ್ತಲೆ ಹುಡುಗಿ ಮನೆಗೆ ಮರಳುತ್ತಾಳೆ. ಆದರೆ ಕೆಲವೇ ಗಂಟೆಗಳಲ್ಲಿ ಹುಡುಗಿ ಮರಣಿಸುತ್ತಾಳೆ. ಮಾರಿಯಾಳ ಗೆಳತಿ ಓಡುತ್ತ ಬಂದು ಸಂಭವಿಸಿದ ದುರಂತವನ್ನು ಅರುಹಿ ಹುಡುಗಿ ಸತ್ತದ್ದು ಗರ್ಭಪಾತದಿಂದಾಗಿ ಮತ್ತು ಅದನ್ನು ಮಾಡಿಸಿದವಳು ನೀನೆ ಎಂಬ ವದಂತಿ ಹಬ್ಬಿದೆ. ಅಧಿಕಾರಿಗಳು ನಿನ್ನನ್ನು ಅಟ್ಟಿಸಿಕೊಂಡು ಬರುವ ಮುಂಚೆಯೇ ಇಲ್ಲಿಂದ ಹೊರಡು ಎಂದು ಹೇಳುತ್ತಾಳೆ. ಗಾಬರಿಯಾದ ಮಾರಿಯಾ ಇದ್ದುಬದ್ದ ಹಣ ಹೊಂಚಿಕೊಂಡು ರಾತ್ರೋರಾತ್ರಿ ರಾಷ್ಟ್ರವನ್ನೆ ತೊರೆದು ಪೋರ್ತುಗಲ್‌ನತ್ತ ಹೊರಡುತ್ತಾಳೆ. ಏನೆಲ್ಲಾ ತಾಪತ್ರಯ ಅನುಭವಿಸಿ ಕದ್ದು ಮುಚ್ಚಿ ಅಪಾಯಕಾರಿ ಜನರ ಮಧ್ಯೆ ಸಿಲುಕಿ ಕೊನೆಗೆ ವೇಶ್ಯೆಯಾಗಿ ಕೆಲಸ ಮಾಡುತ್ತಿದ್ದ ಬಡ ಕಪ್ಪುಮಹಿಳೆಯ ಬಳಿ ಬರುತ್ತಾಳೆ. ತಾನು ಎಲ್ಲಿಗೆ ಹೋಗಬೇಕು ಎಂಬುದರ ನಿಶ್ಚಿತ ಗುರಿಯೆ ಇರದ ಮಾರಿಯಾಳಿಗೆ ಆ ಕಪ್ಪು ಮಹಿಳೆ ಆಶ್ರಯ ನೀಡಿ ತಾನು ದಂಧೆ ಮಾಡಲು ಹೋದಾಗ ತನ್ನ ಮಗುವನ್ನು ನೋಡಿಕೊಂಡಿರು ಎಂದು ಹೇಳುತ್ತಾಳೆ.
ಈ ನಡುವೆ ತನ್ನೂರಿನಲ್ಲಿಯೇ ಪಾರ್ಟಿಯೊಂದರಲ್ಲಿ ಯುವಕನೊಬ್ಬನ ಕರೆಗೆ ಸ್ಪಂದಿಸಿ ಅವನೊಂದಿಗೆ ಶರೀರ ಸುಖ ಅನುಭವಿಸಿದ್ದರ ಪ್ರತಿಫಲವೆಂದರೆ ಬಸುರಿಯಾಗುತ್ತಾಳೆ. ತಾನೇ ದಿಕ್ಕಿಲ್ಲದ ದೆಸೆಯಲ್ಲಿ ತನಗೊಂದು ಮಗುವು. ಈ ಅಂಶವೇ ಅವಳನ್ನು ಅಪಾರ ಸಂಕಟಕ್ಕೆ ದೂಡಿದರೂ ಗರ್ಭವಿಳಿಸಿಕೊಳ್ಳುವ ಧಾವಂತ ಕಾಣಿಸಿಕೊಂಡರೂ ಹಾಗೇ ಮಾಡುವುದಿಲ್ಲ. ಪ್ರಕೃತಿದತ್ತವಾದ ತಾಯ್ತನ ಅವಳನ್ನು ಕಟ್ಟಿ ಹಾಕುತ್ತದೆ. ತುಟಿ ಕಚ್ಚಿ ಹೆರಿಗೆ ಬೇನೆ ಅನುಭವಿಸುತ್ತಲೆ ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿನ ಮುಖದೊಂದಿಗೆ ಅವ್ಯಕ್ತ ಧೃತಿಯೊಂದು ಕಾಣಿಸಿಕೊಂಡು ಹೇಗಾದರೂ ಬದುಕಬಲ್ಲೆ ಎಂಬ ಛಲ ತಾನೇ ತಾನಾಗಿ ನಿಲ್ಲುತ್ತದೆ. ಚಲನಚಿತ್ರೋತ್ಸವ

ಕಥಾವಸ್ತು ಇಷ್ಟೇಯಾದರೂ ಅದನ್ನು ದಿಗ್ದರ್ಶಿಸಿದ ರೀತಿ ಮಾತ್ರ ತುಂಬಾ ಗಂಭೀರವಾಗಿದೆ. ಚಿತ್ರ ಶುರುವಾಗುವುದೇ ಹೆಂಗಸೊಬ್ಬಳು ಮೂರನೇ ಹೆರಿಗೆ ನೋವು ಅನುಭವಿಸುವ ದೃಶ್ಯದಿಂದ. ಹೆರಿಗೆಯ ಮಾರಣಾಂತಿಕ ನೋವು ಅನ್ನು ಅದೆಷ್ಟು ಪರಿಣಾಮಕಾರಿ ಚಿತ್ರಿಸಲಾಗಿದೆ ಎಂದರೆ ಅದನ್ನು ನೋಡಿದ ಮನಸ್ಸುಗಳಿಗೆ ಹೆಣ್ತನದ ಸಂಕಟಗಳು ಸಾಕ್ಷಾತ್ಕಾರವಾಗದೆ ಇರವು. ಪ್ರಕೃತಿಯು ಹೆಣ್ಣೆಂಬ ಜೀವಕ್ಕೆ ನೋಡಿದ ಬಸಿರು, ಹೆರಿಗೆ, ಬಾಣಂತಿತನವೆಂಬ ಅವಸ್ಥೆಗಳು ಅದೆಷ್ಟು ಸಂಕೀರ್ಣ ಮತ್ತು ಅವಳ ಜೀವಕ್ಕೆ ಕುತ್ತು ಎಂಬುದನ್ನು ನಿರ್ದೇಶಕಿ ಮನೋಜ್ಞವಾಗಿ ನಾಟಿಸುವ ಪ್ರಯತ್ನ ಮಾಡಿದ್ದಾರೆ. ಮುದ್ದುಬಸವ ಎಂಬ ಕವಿಯೊಬ್ಬ ತಾಯಿಯನ್ನು ಕುರಿತು ಬರೆದ ಪದವೊಂದರ “ ಬಾಣಂತಿ ನಿನ್ನ ಜನ್ಮ ರಕ್ತ ನದಿಯು ಆಯಿತಮ್ಮ/ ನಾನು ಹುಟ್ಟುವಾಗ ನಿನ್ನ ಕಷ್ಟ ಎಷ್ಟು ತಾಯಮ್ಮ/ ಮತ್ತೆ ಹುಟ್ಟಿ ಬಂದೆಯಮ್ಮ// ಎಂಬ ಸಾಲುಗಳು ನೆನಪಿಗೆ ಬಂದವು. ಚಲನಚಿತ್ರೋತ್ಸವ

ಈ ನಡುವೆ ಕಪ್ಪು ವೇಶ್ಯೆ ಬಡತನ ಕಾರಣವಾಗಿ ತನ್ನ ಮೈ ಮಾರಿಕೊಳ್ಳುವ ಸನ್ನಿವೇಶವಂತೂ ತೀರ ಸಂಕಟಮಯ ಎನಿಸುತ್ತದೆ. ಹೊಟ್ಟೆಪಾಡಿಗಾಗಿ ಹಸುಳೆಯನ್ನು ಬಿಟ್ಟು ದಂಧೆಗೆ ಹೋಗುತ್ತಾಳೆ. ವಿಟ ಪುರುಷ ಅವಳ ಮೊಲೆಯನ್ನು ನಿರುಕಿಸುತ್ತಾನೆ. ಹಸಿ ಬಾಣಂತಿ ಹಾಲು ಸುರಿಯುತ್ತಿವೆ. ಅದನ್ನು ನೋಡಿ ಮೊಲೆಯಲ್ಲಿ ಹಾಲಿದೆಯಲ್ಲವೆ ಎನ್ನುತ್ತಾಳೆ. ಅವಳು ದಯನೀಯವಾಗಿ ನೋಡುತ್ತಾಳೆ. ಒಸರಿದ ಹಾಲು ಒರೆಸಿಕೊಳ್ಳುವಷ್ಟರಲ್ಲಿ ಆತ ನಾನು ಹಾಲನ್ನು ಕುಡಿಯಲೆ? ಕೇಳುತ್ತಾಳೆ. ಥಟ್ಟನೆ ತಿರುಗಿ ಅಸಹಾಯಕವಾಗಿ ಆತನನ್ನು ನಿರುಕಿಸುವಾಗಲೇ ಆತ ಇನ್ನೊಂದು ದೊಡ್ಡ ನೋಟು ನೀಡಿ ಅವಳತ್ತ ಸರಿದು ಮೊಲೆಗೆ ಬಾಯಿ ಹಾಕುತ್ತಾನೆ. ಮರ್ಮಾಘಾತಕ್ಕೆ ಒಳಗಾದ ಅವಳು ಶೂನ್ಯದಲ್ಲಿ ದೃಷ್ಟಿ ನೆಡುತ್ತಲೆ ಇದ್ದಾಳೆ. ಕಣ್ಣೀರು ಸುರಿಯುತ್ತಲೆ ಇವೆ. ಚಲನಚಿತ್ರೋತ್ಸವ

ಚಿತ್ರದುದ್ದಕ್ಕೂ ಮೂರು ಹೆರಿಗೆ ನೋವುಗಳು. ಒಂದು ಪ್ರಾರಂಭದಲ್ಲಿ ಹೆಂಗಸೊಬ್ಬಳ ಮೂರನೆ ಹೆರಿಗೆಯ ನೋವು. ಇನ್ನೊಂದು ಚಿತ್ರದ ಮಧ್ಯದಲ್ಲಿ ಪುಟ್ಟ ಹುಡುಗಿಯ ಗರ್ಭಪಾತದ ಅರಿಭಯಂಕರ ನೋವು. ಮೂರನೆಯದು ಸೂಲಗಿತ್ತಿಯು ಬೇಡವೆಂದರೂ ಬೇಕಾದ ಕೊನೆಯಲ್ಲಿ ಕಾಣಿಸಿಕೊಳ್ಳುವ ಅನಾಮಿಕ ಗರ್ಭದ ನೋವು. ದೇಶ ಯಾವುದೇ ಇರಬಹುದು ಸ್ತ್ರೀಯರ ಬದುಕಿನ ಸಂಕಟಗಳಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಸಂಭೋಗ ಎನ್ನುವುದು ಗಂಡು ಹೆಣ್ಣಿಬ್ಬರಿಗೂ ಅಪೇಕ್ಷಣಿಯವೇ. ಆದರೆ ಅದು ಗಂಡಸಿಗೆ ಯಾವತ್ತೂ ಮಧುರಾನುಭವವಾಗಿಯೇ ಉಳಿಯುವುದಾದರೂ ಸ್ತ್ರೀಯರಿಗೆ ಹಾಗಲ್ಲ. ಅದು ಎಂತಿದ್ದರೂ ಯಾತನಾಮಯವೇ. ಸಮಾಜ ನಿರ್ಬಂಧಿತ ಚೌಕಟ್ಟಿನಲ್ಲಿ ಬಸುರಿಯಾದರೆ ಹೆರಿಗೆ ಯಾತನಾಮಯವಾದರೂ ಸಹ್ಯ. ಇದರಾಚೆ ಬಸುರಿಯಾದರೆ ಅವಳಿಗೆ ಅದು ಅಸಹ್ಯ ಅಷ್ಟೇ ಅಲ್ಲ ಭಯಂಕರ ತಾಪ. ಪ್ರತಿ ಹೆರಿಗೆಯಲ್ಲಿಯೂ ಮಹಿಳೆಯರು ಸಾವಿನ ಮನೆ ತಟ್ಟಿ ಬರುತ್ತಾರೆ. ಶರೀರ ಸುಖ ಪಡೆಯುವ ಪುರುಷನೇನೋ ಅದನ್ನು ಭೋಗಿಸಿ ಕೈ ತೊಳೆದುಕೊಂಡು ಎದ್ದು ಬಿಡುತ್ತಾನೆ. ಆದರೆ ಸ್ತ್ರೀ ಅದಕ್ಕೆ ಬೆಲೆ ತೆರಲೇಬೇಕು. ಆದ್ದರಿಂದಲೇ ಅಕ್ಕಮಹಾದೇವಿ ಒಂದೆಡೆ “ಸಾಸಿವೆ ಕಾಳಿನಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ” ಎಂದಿದ್ದಾಳೆ. ಚಲನಚಿತ್ರೋತ್ಸವ

ಒಟ್ಟಾರೆ ಚಿತ್ರ ಸ್ತ್ರೀವಾದಿ ಚಿಂತನೆಯನ್ನು ದೃಶ್ಯವಾಗಿಸಿ ಮನೋಜ್ಞವಾಗಿ ತಲುಪಿಸುತ್ತದೆ. ಮಾರಿಯಾಳಾಗಿ ನಟಿಸಿದ ಜೆನೆಟ್ ನೋವಾಸ್ ಪಾತ್ರವೇ ತಾನಾಗಿ ಬಿಟ್ಟರೆ ಹುಡುಗಿಯ ಪಾತ್ರಧಾರಿಯಂತೂ ವಯಸ್ಸಿಗೆ ಮೀರಿ ನಟಿಸಿದ್ದಾಳೆ. ಕಪ್ಪು ಮಹಿಳೆಯ ಪಾತ್ರದಲ್ಲಿ ಮಾತಿಲ್ಲದೆ ಕಣ್ಣುಗಳಿಂದಲೆ ಎಲ್ಲವನ್ನು ದಾಟಿಸುವ ಪರಿ ಬೆರಗು ಮೂಡಿಸುತ್ತದೆ. ಈಗಾಗಲೇ ಇದು ಸ್ಯಾನ್ ಸೆಬಾಸ್ಟಿಯನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಜೆನೆಟ್ ನೋವಾಸ್ ಅತ್ಯುತ್ತಮ ನಟಿಯಾಗಿ ಗೋಯಾ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಬುಷೆನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಕ್ಯಾಮಿಲೋ ಸನ್‌ಬ್ರಿಯಾರ ಮಂದ ಸಂಗೀತ ಅಲ್ಲಿನ ನೋವನ್ನು ತಣ್ಣನೆ ನಾಟಿಸುವಲ್ಲಿ ಯಶಸ್ವಿಯಾಗಿದೆ. ನಿರ್ದೇಶಕಿ ಜೈಓನಿ ಕಂಬೋರ್ಡಾ ಸ್ತ್ರೀವಾದಿ ಕಣ್ಣೋಟಕ್ಕೊಂದು ಉತ್ತಮ ಪ್ರಯೋಗ ನೀಡಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಇದನ್ನು ನೋಡಿ : ‌ವರ್ತಮಾನದ ಬಗ್ಗೆ ಬರೆಯಲು ಧೈರ್ಯ ಬೇಕು- ಎ.ನಾರಾಯಣ – ಚಿಂತಕರು Janashakthi Media

Donate Janashakthi Media

Leave a Reply

Your email address will not be published. Required fields are marked *