ಬಿಜೆಪಿ ಮತ್ತು ಚುನಾವಣಾ (ಮೋದಿ) ಬಾಂಡ್‌ ಹಗರಣ : ಭ್ರಷ್ಟಾಚಾರದ ಸಾಂಸ್ಥೀಕರಣ

– ಬಿ. ಶ್ರೀಪಾದ ಭಟ್‌

ಸುಪ್ರೀಂಕೋರ್ಟ್‌ನ ಕ್ರಿಯಾಶೀಲತೆ ಮತ್ತು ನ್ಯಾಯಪ್ರಜ್ಞೆಯಿಂದಾಗಿ ಮುಚ್ಚಿಕೊಂಡಿದ್ದ ಚುನಾವಣಾ (ಮೋದಿ) ಬಾಂಡ್‌ ʼನೆರೆತೂಬುʼ ಸಂಪೂರ್ಣವಾಗಿ ತೆರೆದುಕೊಂಡಿದೆ. ಭ್ರಷ್ಟಾಚಾರದ ಎಲ್ಲಾ ಬಗೆಯ ಕೊಳೆ, ಕಸ ಕೊಚ್ಚಿಕೊಂಡು ಬರುತ್ತಿದೆ. ಇಂದು ದೇಶದಲ್ಲಿ ಬಹು ಚರ್ಚಿತ ʼಚುನಾವಣಾ ಬಾಂಡ್‌ʼನ್ನು ಸುಪ್ರೀಂಕೋರ್ಟ್‌  ಸಂವಿಧಾನ ಪೀಠವು ಅಸಂವಿಧಾನಿಕ ಎಂದು ಕರೆದು ಅದನ್ನು ರದ್ದುಪಡಿಸಿದೆ. ಚುನಾವಣಾ ಬಾಂಡ್‌ ಕುರಿತಂತೆ ೧೧ ಎಪ್ರಿಲ್‌ ೨೦೧೯-೨೦೨೪ರವರೆಗಿನ ಎಲ್ಲಾ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಮತ್ತು ಆಯೋಗವು ಆ ಸಮಗ್ರ ಮಾಹಿತಿಯನ್ನು ೧೫ ಮಾರ್ಚ ೨೦೨೪ರ ಸಂಜೆ ೫ ಗಂಟೆಯ ಒಳಗೆ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕು ಎಂದು ಆದೇಶಿಸಿದೆ. ಆದರೂ ಸಹ ಎಸ್‌ಬಿಐ ಬ್ಯಾಂಕ್‌ ಸಮಗ್ರ ಮಾಹಿತಿಯನ್ನು ಒದಗಿಸಲು ಹಿಂಜರಿಯುತ್ತಿದೆ. ಬಾಂಡ್‌ ಹಗರಣ

ಎಸ್‌ಬಿಐ ಮೊದಲಿಗೆ ೨೦೧೯-೨೦೨೩ರವರೆಗಿನ ಮಾಹಿತಿ ಮಾತ್ರ ಪ್ರಕಟಿಸಿತ್ತು. ಸುಪ್ರೀಂಕೋರ್ಟ್‌ ಮರು ಆದೇಶ ನೀಡಿದ ನಂತರ ೨೦೧೮ರಿಂದ ೨೦೧೯ರವರೆಗಿನ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಆಯೋಗಕ್ಕೆ ಸಲ್ಲಿಸಿದೆ. ೧೮ ಮಾರ್ಚ್‌ ೨೦೨೪ರಂದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ʼನಿಮ್ಮ ಬಳಿ ಇರುವ ಎಲ್ಲಾ ಮಾಹಿತಿಯನ್ನು ಪ್ರಕಟಿಸಿ. ಆರಂಭದಿಂದ ಕೊನೆಯವರೆಗಿನ ಅಕ್ಷರಗಳನ್ನು ಒಳಗೊಂಡ ಆಲ್ಫಾನ್ಯೂಮರಿಕಲ್ ಕ್ರಮಸಂಖ್ಯೆಯ‌ ಕೋಡ್ ವಿವರಗಳನ್ನು ಸಹ ೨೧, ಮಾರ್ಚ್‌ ೨೦೨೪ರ ಒಳಗೆ ಬಹಿರಂಗಗೊಳಿಸಿ‌, ಯಾವುದೆ ಮಾಹಿತಿಯನ್ನು ಹತ್ತಿಕ್ಕುವಂತಿಲ್ಲʼ ಎಂದು ನಿರ್ದೇಶಿಸಿದೆ.  ಈಗ ಎಲ್ಲಾ ಮಾಹಿತಿಗಳು ಚುನಾವಣಾ ಆಯೋಗದ ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದು ಅದರ ವಿವರಗಳು ಬೆಚ್ಚಿ ಬೀಳಿಸುತ್ತದೆ. ಮತ್ತೊಂದು ಕುತೂಹಲ ವಿಚಾರವೆಂದರೆ ಬರಿಗಣ್ಣಿಗೆ ಕಾಣಿಸದ ಅಲ್ಫನ್ಯೂಮರಿಕಲ್‌ ಎನ್ನುವ ಕ್ರಮಸಂಖ್ಯೆ ಪ್ರತಿ ಬಾಂಡ್‌ ಮೇಲೆ ನಮೂದಿತವಾಗಿರುತ್ತದೆ. ಇದು ಯಾವ ಕಂಪನಿ ಯಾವ ಪಕ್ಷಕ್ಕೆ ದೇಣಿಗೆ ಕೊಟ್ಟಿದೆ ಎಂದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಎಸ್‌ಬಿಐ ಬ್ಯಾಂಕ್‌ಗೆ ಮಾತ್ರ ಗೊತ್ತಾಗುತ್ತದೆ. ಉಳಿದ ಪಕ್ಷಗಳಿಗೆ ಗೊತ್ತಾಗುವುದಿಲ್ಲ. ಈ ರಹಸ್ಯವನ್ನು ಪೂನಂ ಅಗರ್‌ವಾಲ್‌ ಎನ್ನುವ ಪತ್ರಕರ್ತರು ೨೦೧೮ರಲ್ಲಿಯೇ ಬಹಿರಂಗಗೊಳಿಸಿದ್ದರು. ಬಾಂಡ್‌ ಹಗರಣ

ಬಾಂಡ್ಕುರಿತಾದ ವಿವರಗಳು

ಮೋದಿ ನೇತೃತ್ವ ಸರ್ಕಾರದ ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಇಲ್ಲಿನ ಅತಿ ಶ್ರೀಮಂತರು, ಶ್ರೀಮಂತರು ತುಂಬಾ ಪ್ರಭಾವಶಾಲಿಗಳಾಗಿ ಬೆಳೆದು ಸರ್ಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ತಲುಪಿದರು. ಪ್ರಭುತ್ವವೂ ಸಹ ತನ್ನ ರಾಜಕೀಯ ಹಿತಾಸಕ್ತಿಗಾಗಿ ಇವರ ಬಂಡವಾಳವನ್ನು ಅನೈತಿಕವಾಗಿ ಬಳಸಿಕೊಂಡಿತು.  ಈ ಅಪವಿತ್ರ ಮೈತ್ರಿಯ ಮುಂದುವರಿದ ಭಾಗವೇ ʼಚುನಾವಣಾ ಬಾಂಡ್‌ʼ ಹಗರಣ ಎನ್ನುವ ಭ್ರಷ್ಟಾಚಾರ. ಈ ಚುನಾವಣಾ ಬಾಂಡ್‌ ಎನ್ನುವ ಹಗರಣ ಪ್ರಜಾಪ್ರಭುತ್ವದ ತಳಹದಿಯನ್ನೆ ಅಲುಗಾಡಿಸುವಷ್ಟು ಅಗಾಧವಾಗಿದೆ ಮತ್ತು ಆಳವಾಗಿದೆ. ಈ ಚುನಾವಣಾ ಬಾಂಡ್‌ ಜಾರಿಗೊಳ್ಳುವ ಮುನ್ನ ಯಾವುದೇ ಕಂಪನಿಗಳು ಪಕ್ಷಗಳಿಗೆ ನೀಡುವ ದೇಣಿಗೆಯ ಮೊತ್ತದಲ್ಲಿ ತಮ್ಮ ಹಿಂದಿನ ಮೂರು ವರ್ಷಗಳ ಒಟ್ಟು ಲಾಭದ ಶೇ.೭.೫ ಪ್ರಮಾಣವನ್ನು ಮೀರುವಂತಿರಲಿಲ್ಲ. ಸರ್ಕಾರ ಮತ್ತು ಬಂಡವಾಳಶಾಹಿಗಳ ನಡುವೆ ʼನೀ ನನಗಿದ್ದರೆ ನಾ ನಿನಗೆʼ (ಕ್ವಿಡ್‌ ಪ್ರೊ ಕೋ) ಎನ್ನುವ ಅನೈತಿಕ ಮೈತ್ರಿಯನ್ನು ನಿಯಂತ್ರಿಸುವುದು ಮತ್ತು ಕಪ್ಪು ಹಣದ ಹರಿವನ್ನು ತಡೆಯುವುದು ಈ ನಿಯಮದ ಉದ್ದೇಶವಾಗಿತ್ತು. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣಾ ಬಾಂಡ್‌ ಪದ್ಧತಿ ಜಾರಿಗೊಳಿಸುವುದರ ಮೂಲಕ ದೇಣಿಗೆ ಮೇಲಿನ ಶೇ.೭.೫ ಗರಿಷ್ಠ ಮಿತಿಯನ್ನು  ತೆಗೆದು ಹಾಕಿತು. ಆ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬಾಗಿಲುಗಳನ್ನು ತೆರೆಯಿತು ಹಾಗೂ ಅದರ ಶೇ.೫೦ರಷ್ಟು ಫಲವನ್ನು ತಾನೇ ಪಡೆದುಕೊಂಡಿತು.

ಇದರ ಹುಟ್ಟೇ ಅನೈತಿಕವಾಗಿದೆ. ೨೦೧೭ರಲ್ಲಿ ಆಗಿನ ಹಣಕಾಸು ಮಂತ್ರಿ ಅರುಣ್‌ ಜೈಟ್ಲಿ ಸಂಸತ್ತಿನ ಪರಿಶೀಲನೆಗೆ ಒಳಪಡುವ ಎಲ್ಲಾ ಮಾರ್ಗಗಳನ್ನು ತಿರಸ್ಕರಿಸಿ ಈ ಅಪಾರದರ್ಶಕ ದೇಣಿಗೆ ಪದ್ಧತಿಯನ್ನು ಏಕಪಕ್ಷೀಯವಾಗಿ ʼಮನಿ ಬಿಲ್‌ʼ ಮೂಲಕ ಅನುಮೋದನೆ ಪಡೆದುಕೊಂಡರು. ಆಗ ಜೈಟ್ಲಿಯವರು ʼತಮ್ಮ ಗುರುತನ್ನು ಗೌಪ್ಯವಾಗಿಟ್ಟರೆ ಸಾಕು, ಈ ಚುನಾವಣಾ ಬಾಂಡ್‌ ಕಪ್ಪು ಹಣದ ದಂಧೆ ಕೊನೆಗೊಳಿಸುತ್ತದೆ ಎಂದು ಬಂಡವಾಳಶಾಹಿಗಳು ಹೇಳುತ್ತಾರೆʼ ಎಂದು ಮಾತನಾಡಿದ್ದರು. ವೈರುಧ್ಯವೆಂದರೆ ಬಾಂಡ್‌ ಖರೀದಿಸಿದ ಬಹುತೇಕ ಅನಾಮಧೇಯ ಕಂಪನಿಗಳು ತಮ್ಮ ಆದಾಯಕ್ಕಿಂತ ನೂರು, ಇನ್ನೂರು ಪಟ್ಟು ಹೆಚ್ಚಿನ ಮೊತ್ತದ ದೇಣಿಗೆ ನೀಡಿದ್ದರು. ಅಂದರೆ ಇವರು ಕ್ರೂನಿ ಬಂಡವಾಳಶಾಹಿಗಳ ಬೇನಾಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೂಲಂಕುಷ ತನಿಖೆ ನಡೆದರೆ ಎಲ್ಲವೂ ಬಹಿರಂಗವಾಗುತ್ತದೆ. ಬಾಂಡ್‌ ಹಗರಣ

ಇದರ ನಿಯಮಗಳ ಪ್ರಕಾರ ರಾಜಕೀಯ ಪಕ್ಷಗಳ ಹೆಸರಿನಲ್ಲಿ ಬಾಂಡ್‌ ಖರೀದಿಸುವ ಉದ್ಯಮಿಗಳು/ವ್ಯಕ್ತಿಗಳ ಮಾಹಿತಿ ಗೌಪ್ಯವಾಗಿರುತ್ತದೆ. ತಮ್ಮ ಹೆಸರಿನಲ್ಲಿರುವ ಈ ನಿರ್ದಿಷ್ಠ ಬಾಂಡ್‌ನ್ನು ನಗದೀಕರಿಸುವ ಪಕ್ಷಗಳ  ಮಾಹಿತಿಯೂ ಸಾರ್ವಜನಿಕವಾಗಿ ಗೌಪ್ಯವಾಗಿರುತ್ತದೆ. ಯಾವ ಪಕ್ಷಕ್ಕೆ ಎಷ್ಟು ಮೊತ್ತದ ರೊಕ್ಕ ಬಂದಿದೆ ಎನ್ನುವುದು ಮಾತ್ರ ಬಹಿರಂಗವಾಗಿರುತ್ತದೆ. ಇದರ ಕರಾಳತೆಯೆಂದರೆ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ತನಗೆ ಸೇರಿದ ಎಲ್ಲಾ ಬಾಂಡ್‌ಗಳ ವಿವರಗಳ ಜೊತೆಗೆ ವಿರೋಧ ಪಕ್ಷಗಳಿಗೆ ಸೇರಿದ ಬಾಂಡ್‌ಗಳ ಎಲ್ಲಾ ಮಾಹಿತಿ ಲಭ್ಯವಿರುತ್ತದೆ. ಆದರೆ ವಿರೋಧ ಪಕ್ಷಗಳಿಗೆ ತಮ್ಮ ಪಕ್ಷಕ್ಕೆ ದೊರಕಿದ ದೇಣಿಗೆ ಕುರಿತು ಮಾತ್ರ ಮಾಹಿತಿ ಇರುತ್ತದೆ.  ಕೇವಲ ತನಗೆ ಮಾತ್ರ ಲಭ್ಯವಿರುವ ಸಮಗ್ರ ಮಾಹಿತಿಯನ್ನು ಬಿಜೆಪಿ ಪಕ್ಷವು  ದುರ್ಬಳಕೆ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಉದಾಹರಣೆಗೆ ಈ ವಿರೋಧ ಪಕ್ಷಗಳಿಗೆ ದೇಣಿಗೆ ಕೊಟ್ಟ ಕಂಪನಿಗಳ ಮೇಲೆ ಇಡಿ/ಐಟಿ ದಾಳಿ ನಡೆಸಬಹುದು ಮತ್ತು ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳಿಗೆ ದೇಣಿಗೆ ದೊರಕದಂತೆ ಬ್ಲಾಕ್‌ಮೇಲ್‌ ಮಾಡಬಹುದು. ಮೋದಿ ಸರ್ಕಾರದ ಸರ್ವಾಧಿಕಾರಿ ಕಾರ್ಯವೈಖರಿ ಕಂಡವರಿಗೆ ಇದು ಸತ್ಯ ಎಂದು ಮನವರಿಕೆಯಾಗುತ್ತದೆ. ಮುಖ್ಯವಾಗಿ ಸಾರ್ವಜನಿಕವಾಗಿ ಯಾವುದೇ ಬಗೆಯ ಪಾರದರ್ಶಕತೆ ಇರುವುದಿಲ್ಲ. ಪ್ರಜೆಗಳಿಗೆ ಇದರ ವಿವರಗಳ ಕುರಿತಂತೆ ಯಾವುದೇ ಮಾಹಿತಿ ಇರುವುದಿಲ್ಲ.  ಇಡೀ ಹಗರಣವನ್ನು ವಿಶ್ಲೇಷಿಸಿದಾಗ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ʼಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿರುವುದುʼ ಸಾಬೀತಾಗುತ್ತದೆ. ಬಾಂಡ್‌ ಹಗರಣ

ಇಲ್ಲಿ ಮತ್ತೊಂದು ದುರಂತವೆಂದರೆ ದೇಶದ ಅತಿ ದೊಡ್ಡ ರಾಷ್ಟ್ರೀಯ ಬ್ಯಾಂಕ್‌ ಎಂದು ಕರೆಯಲ್ಪಡುವ ಎಸ್‌ಬಿಐ ತನ್ನ ಸ್ವಾಯತ್ತತೆಯನ್ನು ಮರೆತು ಸಂಪೂರ್ಣವಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರಂತೆ ವರ್ತಿಸಿರುವುದು, ಸಾರ್ವಜನಿಕವಾಗಿ ಮಾಹಿತಿ ಕೊಡಲು ನಿರಾಕರಿಸುವುದು, ಸುಪ್ರೀಂಕೋರ್ಟ್‌ ಚಾಟಿ ಬೀಸಿದ ನಂತರ ಮಾಹಿತಿ ಕೊಡಲು ತಡವಾಗುತ್ತದೆ ಎಂದು ನೆಪ ಹೇಳುವುದು ಎಲ್ಲವೂ ಬ್ಯಾಂಕಿಂಗ್‌ ವ್ಯವಸ್ಥೆಯೇ ಕುಸಿದು ಹೋಗಿರುವುದಕ್ಕೆ, ವಿಶ್ವಾಸಾರ್ಹತೆ ಕಳೆದುಕೊಂಡಿರುವುದಕ್ಕೆ ಪುರಾವೆ ಎನ್ನಬಹುದು. ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕಾದ ತುರ್ತು ಸಂದರ್ಭದಲ್ಲಿ ಈ ಬಾಂಡ್‌ ಯೋಜನೆಯ ಅಪಾರದರ್ಶಕತೆ ಕುರಿತು ಮೌನವಾಗಿ ಬೆಂಬಲಿಸಿದೆ. ತನ್ನ ಹೊಣೆಗಾರಿಕೆಯನ್ನೆ ಮರೆತು ಅಧಿಕಾರದಲ್ಲಿರುವ ಪಕ್ಷದ ಕೈಗೊಂಬೆಯಂತೆ ವರ್ತಿಸಿದೆ. ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ), ಸಿಬಿಐ ತಮ್ಮ ನೈತಿಕತೆಯನ್ನು ಕಳೆದುಕೊಂಡು ʼಹಫ್ತಾ ವಸೂಲಿ ಯೋಜನೆʼ ನಡೆಸುವ ಮಟ್ಟಕ್ಕೆ ಇಳಿದಿವೆ. ನ್ಯೂಸ್‌ ಲಾಂಡ್ರಿ ಮತ್ತು ನ್ಯೂಸ್‌ ಮಿನಿಟ್‌ ಅಂತರ್ಜಾಲ ತಾಣಗಳ ತನಿಖಾ ವರದಿಯ ಪ್ರಕಾರ ಕೆಲವು ಕಂಪನಿಗಳು ತಮ್ಮ ಮೇಲೆ ಇಡಿ, ಐಟಿ ದಾಳಿಯಾದ ನಂತರ ಇದಕ್ಕೂ ಮುಂಚೆ ಇದ್ದ ಚುನಾವಣಾ ಟ್ರಸ್ಟ್‌ ಮೂಲಕ ೩೦೦ ಕೋಟಿಗೂ ಹೆಚ್ಚಿನ ಮೊತ್ತದ ದೇಣಿಗೆ ನೀಡಿದ್ದಾರೆ. ಒಂದು ಬಗೆಯ ʼಸುಲಿಗೆ ವಂಚನೆʼ ನಡೆಸುತ್ತಿರುವ ಪ್ರಧಾನಿ ಮೋದಿಯವರ ಸರ್ಕಾರ ಸಾರ್ವಜನಿಕ ಸಂಸ್ಥೆಗಳ ಎಲ್ಲಾ ವಿಶ್ವಾಸಾರ್ಹತೆಯನ್ನು ನಾಶ ಮಾಡಿದ್ದಾರೆ. ಈ ಹಿಂದೆ ಮೋದಿಯವರು ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ವಿವಿಧ ಸಂಸ್ಥೆ, ಕಂಪನಿಗಳಿಂದ ೧.೧೨ ಲಕ್ಷ ಕೋಟಿ ಮೊತ್ತವನ್ನು ಜಪ್ತಿ ಮಾಡಿದ್ದೇವೆ ಎಂದು ಕೊಚ್ಚಿಕೊಂಡಿದ್ದರು. ಆದರೆ ಇದೇ ಅವಧಿಯಲ್ಲಿ ಪಿಎಂಎಲ್‌ಎ ಕಾಯ್ದೆಯ ಅಡಿಯಲ್ಲಿನ  ಇಡಿ ದಾಳಿಯ ತನಿಖೆಯಲ್ಲಿ ಶೇ.೦.೫ರಷ್ಟು ಮಾತ್ರ ದೋಷ ನಿರ್ಣಯವಾಗಿದೆ. ಇದು ಏನನ್ನು ಸೂಚಿಸುತ್ತದೆ? ಬಾಂಡ್‌ ಹಗರಣ

ಇದನ್ನು ಓದಿ : ಮಾತನಾಡುವ ಸಂಸ್ಕೃತಿ ನಿಮ್ಮಂದ ಕಲಿಯಬೇಕಿಲ್ಲ – ಶಿವರಾಜ ತಂಗಡಗಿ

ಹಗರಣದ ವಿವರಗಳು

ಲಭ್ಯವಿರುವ ಮಾಹಿತಿಯ ಪ್ರಕಾರ ೨೦೧೭-೧೮ ರಿಂದ  ನವೆಂಬರ್‌ ೨೦೨೩ರವರೆಗಿನ ಆರು ವರ್ಷಗಳ ಅವಧಿಯಲ್ಲಿ ಉದ್ಯಮಿಗಳು / ವ್ಯಕ್ತಿಗಳು ಬಿಜೆಪಿ ಪಕ್ಷಕ್ಕೆ ೬,೯೮೬.೫ ಕೋಟಿ ಮೊತ್ತದ ಬಾಂಡ್‌ ಖರೀದಿಸಿದ್ದಾರೆ. ಮತ್ತೊಂದು ಮಾಹಿತಿಯ ಪ್ರಕಾರ ಬಾಂಡ್‌ ಯೋಜನೆ ಶುರುವಾದ ದಿನದಿಂದ  ಫೆಬ್ರವರಿ ೨೦೨೪ರವರೆಗೆ ಬಿಜೆಪಿಯು ೮,೪೫೧ ಕೋಟಿ ಮೊತ್ತವನ್ನು ಪಡೆದುಕೊಂಡಿದೆ. ಟಿಎಂಸಿ ಪಕ್ಷಕ್ಕೆ ೧೩೯೭ ಕೋಟಿ, ಕಾಂಗ್ರಸ್‌ಗೆ ೧೩೩೪ ಕೋಟಿ, ಬಿಆರ್‌ಎಸ್‌ ಪಕ್ಷಕ್ಕೆ ೧೪೦೮ ಕೋಟಿ, ಬಿಜೆಡಿ ಪಕ್ಷಕ್ಕೆ ೯೪೪.೫ ಕೋಟಿ,  ಡಿಎಂಕೆ  ಪಕ್ಷಕ್ಕೆ ೬೫೬ ಕೋಟಿ, ವೈಎಸ್‌ಆರ್‌ಸಿಪಿ  ಪಕ್ಷಕ್ಕೆ ೪೪೨.೮ ಕೋಟಿ ಮೊತ್ತದ ಬಾಂಡ್‌ ಖರೀದಿಸಿದ್ದಾರೆ. ಬಿಜೆಪಿಗೆ ೨೦೧೮-೧೯ರಲ್ಲಿ ೧೪೫೧ ಕೋಟಿ,  ೨೦೧೯-೨೦ರಲ್ಲಿ ೨೫೫೫ ಕೋಟಿ ಮೊತ್ತದ ಬಾಂಡ್‌ ಖರೀದಿಸಿದ್ದಾರೆ. ಬಾಂಡ್‌ ಹಗರಣ

ಮಾರ್ಚ ೨೦೧೮- ಮೇ ೨೦೧೯ರ ಲೋಕಸಭಾ ಚುನಾವಣೆಗೂ ಮುಂಚೆ ಕಂಪನಿಗಳು ಬಿಜೆಪಿ ಪಕ್ಷಕ್ಕಾಗಿ ೩೯೪೧ ಕೋಟಿ ಮೊತ್ತದ ಬಾಂಡ್‌ ಖರೀದಿಸಿದ್ದಾರೆ. ಇದರ ೩೦೫೦ ಕೋಟಿ (ಶೇ.೭೭.೪) ಮೊತ್ತವು ಮಾರ್ಚ, ಎಪ್ರಿಲ್‌, ಮೇ ೨೦೧೯ರ ತಿಂಗಳಲ್ಲಿ ಸಂದಾಯವಾಗಿದೆ.  ಅದರೆ ಬಿಜೆಪಿ ಪಕ್ಷವು ಆ ಚುನಾವಣೆಯಲ್ಲಿ ೨೭,೦೦೦ ಕೋಟಿ ವೆಚ್ಚ ಮಾಡಿದೆ ಎಂದು ʼಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ʼ ಸಂಸ್ಥೆಯ ದಾಖಲೆಗಳು ತಿಳಿಸುತ್ತದೆ. ಉಳಿದ ೨೩೦೫೯ ಕೋಟಿ ಮೊತ್ತದ ರೊಕ್ಕ ಎಲ್ಲಿಂದ, ಯಾವ ಮೂಲದಿಂದ ಹರಿದು ಬಂದಿದೆ ಎನ್ನುವುದು ಇಂದಿಗೂ ನಿಗೂಢವಾಗಿದೆ. ಲಭ್ಯವಿರುವ ಸಾಂದರ್ಭಿಕ ವ್ಯವಹಾರಗಳು ಮತ್ತು ಪ್ರಭುತ್ವ ಹಾಗೂ ಬಂಡವಾಳಶಾಹಿಗಳ ಅಪವಿತ್ರ ಮೈತ್ರಿಯನ್ನು ಆಧರಿಸಿ ಹೇಳುವುದಾದರೆ ಅದಾನಿ ಮತ್ತು ಅಂಬಾನಿಯಂತಹ ಕ್ರೂನಿ ಬಂಡವಾಳಶಾಹಿಗಳ ದೇಣಿಗೆ ಬಂದಿರುವ ಸಾಧ್ಯತೆಗಳಿವೆ. ೨೦೧೯ರ ಚುನಾವಣೆಯ ಒಟ್ಟು ವೆಚ್ಚ ೬೦೦೦೦ ಕೋಟಿ ಎಂದು ಅಂದಾಜಿಸಲಾಗಿದೆ. ಅಂದರೆ ಒಟ್ಟು ವೆಚ್ಚದ ಶೇ೪೫ರಷ್ಟು ಮೊತ್ತವನ್ನು ಬಿಜೆಪಿ ಖರ್ಚು ಮಾಡಿದೆ.

ನಂತರ ೨೦೧೯-೨೦ರಲ್ಲಿ ಬಿಜೆಪಿ ೨,೫೫೫ ಕೊಟಿ ಮೊತ್ತದ ಬಾಂಡ್‌ ಪಡೆದುಕೊಂಡಿದೆ ೨೦೨೨-೨೩ರಲ್ಲಿ ೧೨೯೪, ೨೦೨೩-೨೪ರಲ್ಲಿ ೧೬೮೬ ಕೋಟಿ ಮೊತ್ತದ ಬಾಂಡ್‌ ಪಡೆದುಕೊಂಡಿದೆ. ಅಂದರೆ ೨೦೨೪ರ ಚುನಾವಣೆಗೂ ಮುಂಚೆ ಕಳೆದ ಎರಡು ವರ್ಷದಿಂದ ೧೯೮೦ ಕೋಟಿ ಮೊತ್ತದ ಬಾಂಡ್‌ ಖರೀಸಿದ್ದಾರೆ. ಬಹುಶಃ ಈ ಬಾರಿ ಬಿಜೆಪಿಯ ಚುನಾವಣಾ ವೆಚ್ಚ ಕಳೆದ ಬಾರಿಗಿಂತ ಹೆಚ್ಚಾಗಲಿದೆ. ಇಡೀ ಚುನಾವಣಾ ಬಾಂಡ್‌ ಎನ್ನುವ ದೇಣಿಗೆ ಹಗರಣದ ಸ್ವರೂಪ ಪಡೆದುಕೊಂಡಿದ್ದು ನಿರೀಕ್ಷಿತ ಸಂಗತಿಯಾಗಿದೆ. ʼನ ಖಾವೂಂಗ, ನ ಖಾನೇದೂಂಗʼ (ನಾನು ತಿನ್ನುವುದಿಲ್ಲ, ತಿನ್ನುವದಕ್ಕೂ ಬಿಡುವುದಿಲ್ಲ) ಎಂದು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಅತಿ ದೊಡ್ಡ ಬ್ರಷ್ಟಾಚಾರ ನಡೆಸಿದ ಸರ್ಕಾರ ಎನ್ನುವುದಕ್ಕೆ ಈ ಚುನಾವಣಾ ಬಾಂಡ್‌ ಹಗರಣವೇ ಸಾಕ್ಷಿ. ಇದರ ಜೊತೆಗೆ  ದೇಶದ, ಸಾರ್ವಜನಿಕ ಉದ್ಯಮಗಳ ಹಿತಾಸಕ್ತಿ ಬಲಿಕೊಟ್ಟು ಅದಾನಿ ಮತ್ತು ಅಂಬಾನಿ ಎನ್ನುವ ಕ್ರೂನಿ ಬಂಡವಾಳಶಾಹಿಗಳಿಗೆ ವ್ಯಾಪಾರದ ಅನುಕೂಲ ಮಾಡಿಕೊಟ್ಟಿರುವುದೂ ಸಹ ಬಿಜೆಪಿ ಸರ್ಕಾರದ ಮತ್ತೊಂದು ಬ್ರಷ್ಟಾಚಾರ.

೧೯, ೨೦ ಮಾರ್ಚ್‌ ʼದ ಹಿಂದೂʼ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ೨೦೧೯ರಲ್ಲಿ ಬಿಜೆಪಿಗೆ ಶೇ.೮೪ರಷ್ಟು, ಕಾಂಗ್ರೆಸ್‌ಗೆ ಶೇ.೮ರಷ್ಟು ಪ್ರಮಾಣದ ಬಾಂಡ್‌ ಖರೀದಿಸಲಾಗಿದೆ. ಹರ್ಯಾಣ, ಮಹಾರಾಷ್ಟ್ರ, ಜಾರ್ಖಂಡ್‌, ಮಹಾರಾಷ್ಟ್ರ ದೆಹಲಿ ವಿಧಾನ ಸಭಾ ಚುನಾವಣೆಯ ಸಂದರ್ಭದ ೨೦೧೯-೨೦ರ ಅವಧಿಯಲ್ಲಿ ಬಿಜೆಪಿಗೆ ಶೇ.೭೦.೫, ಟಿಎಂಸಿಗೆ ಶೇ.೧೩.೩, ಶಿವಸೇನಾಗೆ ಶೇ.೪.೭, ಎನ್‌ಸಿಪಿಗೆ ಶೇ.೩.೨ರಷ್ಟು ಪ್ರಮಾಣದ ಬಾಂಡ್‌ ಖರೀದಿಸಲಾಗಿದೆ. ಅಸ್ಸಾಂ, ಕೇರಳ, ತಮಿಳುನಾಡು, ಪ.ಬಂಗಾಳ ವಿಧಾನಸಭಾ ಚುನಾವಣಾ ಸಂದರ್ಭದ ಜನವರಿ ೨೦೨೧-ಎಪ್ರಿಲ್‌ ೨೦೨೧ರ ಅವಧಿಯಲ್ಲಿ ಬಿಜಪಿಗೆ ಶೇ.೩೯.೭, ಬಿಜೆಡಿಗೆ ಶೇ.೧೫.೭, ಡಿಎಂಕೆಗೆ ಶೇ.೧೪.೪, ಟಿಎಂಸಿಗೆ ಶೇ.೧೧, ವೈಎಸ್‌ಆರ್‌ಸಿಪಿಗೆ ಶೇ.೮.೯, ಕಾಂಗ್ರೆಸ್‌ಗೆ ಶೇ.೮.೯ರಷ್ಟು ಪ್ರಮಾಣದ ಬಾಂಡ್‌ ಖರೀದಿಸಲಾಗಿದೆ

ಜುಲೈ ೨೦೨೧-ಜನವರಿ ೨೦೨೨ರ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ ಶೇ.೩೭.೨, ಟಿಎಂಸಿಗೆ ಶೇ.೨೪, ಡಿಎಂಕೆಗೆ ಶೇ. ೧೦.೧, ಕಾಂಗ್ರೆಸ್‌ಗೆ ಶೇ೯, ಬಿಜೆಡಿಗೆ ಶೇ. ೮.೮, ಬಿಆರ್‌ಎಸ್‌ಗೆ ಶೇ.೭.೭ರಷ್ಟು ಪ್ರಮಾಣದ ಬಾಂಡ್‌ ಖರೀದಿಸಲಾಗಿದೆ. ಎಪ್ರಿಲ್‌ ೨೦೨೨-ಎಪರಿಲ್‌ ೨೦೨೩ರ ಅವಧಿಯಲ್ಲಿ  ಬಿಜೆಪಿಗೆ ಶೇ.೪೩.೨, ಬಿಆರ್‌ಎಸ್‌ಗೆ ಶೇ.೧೬.೫, ಟಿಎಂಸಿಗೆ ೧೩.೬, ಕಾಂಗ್ರೆಸ್‌ಗೆ ಶೇ.೯.೬, ಡಿಎಂಕೆಗೆ ಶೇ.೬ರಷ್ಟು ಪ್ರಮಾಣದ ಬಾಂಡ್‌ ಖರೀದಿಸಲಾಗಿದೆ.  ಜುಲೈ ೨೦೨೩-ನವೆಂಬರ್‌ ೨೦೨೩ರ ಅವಧಿಯಲ್ಲಿ ಬಿಜೆಪಿಗೆ ಶೇ.೩೮.೭, ಕಾಂಗ್ರೆಸ್‌ ಗೆ ಶೇ.೨೦.೩, ಬಿಆರ್‌ಎಸ್‌ಗೆ ಶೇ.೧೩.೬, ಟಿಎಂಸಿಗೆ ೯.೯, ಬಿಜೆಡಿಗೆ ಶೇ.೭.೮ರಷ್ಟು ಪ್ರಮಾಣದ ಬಾಂಡ್‌ ಖರೀದಿಸಲಾಗಿದೆ.  ಜನವರಿ ೨೦೨೪ರಲ್ಲಿ ಬಿಜೆಪಿಗೆ ಶೇ.೩೫.೪, ಟಿಎಂಸಿಗೆ ಶೇ. ೨೨.೯, ಟಿಡಿಪಿಗೆ ಶೇ. ೨೦.೭ರಷ್ಟು ಪ್ರಮಾಣದ ಬಾಂಡ್‌ ಖರೀದಿಸಲಾಗಿದೆ

ಮೇಲಿನ ಮಾಹಿತಿಯನ್ನು ವಿಶ್ಲೇಷಿಸಿದಾಗ ೨೦೧೯-೨೪ರ ಐದು ವರ್ಗಳ ಅವಧಿಯಲ್ಲಿ ಬಾಂಡ್‌ನ್ನು ನಗದೀಕರಿಸಿಕೊಂಡವರ ಪೈಕಿ ಸರಾಸರಿಯಾಗಿ ಬಿಜೆಪಿ ಮೊದಲ ಸ್ಥಾನದಲ್ಲಿ ಮತ್ತು ಟಿಎಂಸಿ ಎರಡನೇ ಸ್ಥಾನದಲ್ಲಿದೆ . ಮತ್ತೊಂದು  ಮುಖ್ಯ  ವಿಚಾರವೆಂದರೆ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ಯಾವ ಯಾವ ಪಕ್ಷಕ್ಕೆ ಯಾರೆಲ್ಲಾ ಕೊಟ್ಟಿದ್ದಾರೆ, ಎಷ್ಷು ಮೊತ್ತದ  ಬಾಂಡ್‌ ಖರೀದಿಸಿದ್ದಾರೆ   ಎನ್ನುವ ಸಮಗ್ರ ಮಾಹಿತಿಯಿರುತ್ತದೆ. ಆದರೆ ವಿರೋಧ ಪಕ್ಷಗಳು ಈ ಕುರಿತು ಯಾವುದೇ ವಿವರಗಳು ಗೊತ್ತಿರುವುದಿಲ್ಲ. ಇದು ಭ್ರಷ್ಟಾಚಾರದ ಗಂಗೋತ್ರಿ ಎಂದು ಕರೆಯಬಹುದು.

ಹಗರಣದ ವಿವಿಧ ಮುಖಗಳು

ಇಡೀ ಚುನಾವಣಾ ಬಾಂಡ್‌ ಹಗರಣಕ್ಕೆ ಮೂರ್ನಾಲ್ಕು ಮುಖಗಳಿವೆ.

ಮೊದಲನೆಯ ಮುಖವೆಂದರೆ ಉದ್ಯಮಿಗಳ ಮೇಲೆ ಇಡಿ/ಐಟಿ ದಾಳಿ ನಡೆಯುತ್ತದೆ, ನಂತರ ಕೆಲವೇ ದಿನಗಳಲ್ಲಿ ಇವರು ಬಿಜೆಪಿ ಹೆಸರಿನಲ್ಲಿ ಚುನಾವಣಾ ಬಾಂಡ್‌ ಖರೀದಿಸುತ್ತಾರೆ. ನಂತರ ಬಿಜೆಪಿ ಪಕ್ಷವು ಅದನ್ನು ನಗದೀಕರಿಸಿಕೊಳ್ಳುತ್ತದೆ

ಉದಾಹರಣೆಗೆ ಫ್ಯೂಚರ್‌ ಗೇಮಿಂಗ್‌ ಹೋಟೆಲ್‌ ಸರ್ವೀಸಸ್‌ ಪ್ರೈ.ಲಿ. ಕಂಪನಿಯ ಮೇಲೆ ಎಪ್ರಿಲ್‌, ಜುಲೈ, ಸೆಪ್ಟೆಂಬರ್‌ ೨೦೨೨, ಅಪರಿಲ್‌ ೨೦೨೩ರಂದು ಇಡಿ ದಾಳಿಯಾಗುತ್ತದೆ. ೭, ಎಪ್ರಿಲ್‌ ೨೦೨೨ರಂದು ೧೦೦ ಕೋಟಿ , ೬ ಜುಲೈ ೭೫ ಕೋಟಿ, ೬ ಅಕ್ಟೋಬರ್‌ ೧೦೫ ಕೋಟಿ, ೫ ಎಪ್ರಿಲ್‌ ೨೦೨೩ ೯೦ ಕೋಟಿ, ೧೧ ಎಪ್ರಿಲ್‌ ೬೦ ಮೊತ್ತದ ಬಾಂಡ್‌ ಖರೀದಿಸುತ್ತಾರೆ

ಮೇಘ ಇಂಜಿನಿಯರಿಂಗ್‌ & ಇನ್ಫ್ರಾಸ್ಟ್ರಕ್ಚರ್‌ ಲಿ. ಕಂಪನಿಯ ಮೇಲೆ ಅಕ್ಟೋಬರ್‌ ೨೦೧೯ರಂದು ಇಡಿ ದಾಳಿಯಾಗುತ್ತದೆ, ೫ ಅಕ್ಟೋಬರ್‌  ೨೦೧೯ರಂದು ೫ ಕೋಟಿ ಮೊತ್ತದ ಬಾಂಡ್‌ ಖರೀದಿಸುತ್ತಾರೆ

ಹೆಟಿರೋ ಫಾರ್ಮಾ ಕಂಪನಿಯ ಮೇಲೆ ಅಕ್ಟೋಬರ್‌ ೨೦೨೧ರಂದು ದಾಳಿಯಾಗುತ್ತದೆ.  ೭ ಎಪ್ರಿಲ್‌ ೨೦೨೨ರಂದು ೪೦ ಕೋಟಿ ಮೊತ್ತದ ಬಾಂಡ್‌ ಖರೀದಿಸುತ್ತಾರೆ.ವೇದಾಂತ ಕಂಪನಿಯ ಮೇಲೆ ಮಾರ್ಚ್‌ ೨೦೨೦ರಂದು ದಾಳಿಯಾಗುತ್ತದೆ, ೮ ಎಪ್ರಿಲ್‌ ೨೦೨೧ರಂದು ೨೫ ಕೋಟಿ ಬಾಂಡ್‌ ಖರೀದಿಸುತ್ತಾರೆ. ೭, ಜುಲೈ ೨೦೨೨ರಂದು ೨೫ ಕೋಟಿ ಮೊತ್ತದ ಬಾಂಡ್‌ ಖರೀದಿಸುತ್ತಾರೆ. ಆದರೂ ಸಹ ಆಗಸ್ಟ್‌ ೨೦೨೨ರಂದು ದಾಳಿಯಾಗುತ್ತದೆ. ಮರಳಿ ೧೪ ನವೆಂಬರ್‌ ೧೧೦ ಕೋಟಿ, ೧೫ ನವೆಂಬರ್‌ ೧.೫ ಕೋಟಿ ಬಾಂಡ್‌ ಖರೀದಿಸುತ್ತಾರೆ. ಹೀಗೆ ಇನ್ನೂ ಸರಿ ಸುಮಾರು ೧೬ಕ್ಕೂ ಮಿಕ್ಕ ಕಂಪನಿಗಳ ಕತೆಯೂ ಇದೇ ರೀತಿಯಿದೆ.

ಎರಡನೆಯ ಮುಖವೆಂದರೆ ಚುನಾವಣಾ ಬಾಂಡ್‌ ಖರೀದಿಸುವ ಭರವಸೆ ಕೊಟ್ಟಿರುತ್ತಾರೆ, ಆದರೆ ಅದನ್ನು ಪಾಲಿಸುವುದಿಲ್ಲ. ಇತಂಹ ಮಾತು ತಪ್ಪಿದ ಉದ್ಯಮಿಗಳಿಗ ಎಚ್ಚರಿಸಲು ಇಡಿ/ಐಟಿ ದಾಳಿ ನಡೆಲಾಗುತ್ತದೆ. ನಂತರ ಬಾಂಡ್‌ ಖರೀದಿಸುತ್ತಾರೆ. ಕೊನೆಗೆ ಎಲ್ಲವೂ ಸುಖಾಂತ್ಯವಾಗುತ್ತದೆ

ಮೂರನೆಯ ಮುಖವೆಂದರೆ ಖಾಸಗಿ ಉದ್ಯಮಿಗಳು ಚುನಾವಣಾ ಬಾಂಡ್‌ ಖರೀದಿಸುತ್ತಾರೆ. ನಂತರ ಈ ಕಾರ್ಪೋರೇಟ್‌ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಹೊರ ಗುತ್ತಿಗೆ ಕೊಡುವುದು. ಇದನ್ನು ʼಕ್ವಿಡ್‌ ಪ್ರೊ ಕೋʼ ಎಂದು ಕರೆಯುತ್ತಾರೆ. ಅಂದರೆ ʼಬಿಜೆಪಿ ಸರ್ಕಾರವು ಬಂಡವಾಳಶಾಹಿಗಳಿಗಾಗಿ, ಅವರು ಬಿಜೆಪಿಗಾಗಿʼ ಎನ್ನುವ ಒಡಂಬಂಡಿಕೆಯಾಗಿರುತ್ತದೆ.

ಉದಾಹರಣೆಗೆ ಮೇಘ ಇಂಜಿನಿಯರಿಂಗ್‌ & ಇನ್ಫ್ರಾಸ್ಟ್ರಕ್ಚರ್‌ ಲಿ. ಕಂಪನಿಯು ೧೧ ಎಪ್ರಿಲ್‌ ೨೦೨೩ರಂದು ೧೦೦ ಕೋಟಿ ಮೊತ್ತದ ಬಾಂಡ್‌ ಖರೀದಿಸುತ್ತದೆ. ಒಂದು ತಿಂಗಳ ಒಳಗೆ ಮಹರಾಷ್ಟ್ರದ ಬಿಜೆಪಿ ಸರ್ಕಾರದಿಂದ ೧೪,೪೦೦ ಕೋಟಿಯ  ಮೂಲಭೂತ ಸೌಕರ್ಯ ಕಲ್ಪಿಸುವ, ಸುರಂಗ ನಿರ್ಮಾಣದ ಕಾಂಟ್ರಾಕ್ಟ್‌ ಸಿಗುತ್ತದೆ. ಮೇಘಾ ಮತ್ತು ಅದರ ಅಧೀನ ಸಂಸ್ಥೆಗಳು ೧,೨೩೨ ಕೋಟಿ  ಮೊತ್ತದ ಬಾಂಡ್‌ ಖರೀದಿಸುತ್ತಾರೆ. ಅವರಿಗೆ ಸೆಪ್ಟೆಂಬರ್‌ ೨೦೨೩ರ ಅಂತ್ಯಕ್ಕೆ ೧.೮೭ ಲಕ್ಷ ಕೋಟಿ ಮೊತ್ತದ ಯೋಜನೆಗಳು ಮಂಜೂರು ಆಗುತ್ತವೆ.

ಸೆರಂ ಇನ್ಸಿಟ್ಯೂಟ್‌ ಆಫ್‌ ಇಂಡಿಯಾ (ಕೊವಕ್ಸಿನ್‌ ಲಸಿಕೆ ತಯಾರಿಸಿದ ಸಂಸ್ಥೆ) ಆಗಸ್ಟ್‌ ೨೦೨೨ರಂದು ಬಾಂಡ್‌ ಖರೀದಿಸುತ್ತಾರೆ. ಅದೇ ತಿಂಗಳು ಅವರಿಗೆ ಸರ್ಕಾರದ ಯೋಜನೆ ಮಂಜೂರಾಗುತ್ತದೆ

ಟರ್ರೆಂಟ್‌ ಪವರ್‌ ಸಂಸ್ಥೆಯು ಜನವರಿ ೨೦೨೪ರಂದು ಬಾಂಡ್‌ ಖರೀದಿಸುತ್ತಾರೆ, ಮಾರ್ಚ್‌ ೨೦೨೪ರಂದು ಸರ್ಕಾರದ ಯೋಜನೆ ಮಂಜೂರಾಗುತ್ತದೆ.

ವಂಡರ್‌ ಸಿಮೆಂಟ್‌ ನವೆಂಬರ್‌ ೨೦೨೩ರಂದು ಬಾಂಡ್‌ ಖರೀದಿಸುತ್ತಾರೆ. ಜನವರಿ ೨೦೨೪ರಂದು ಸರ್ಕಾರದ ಯೋಜ ಎ ಮಂಜೂರಾಗುತ್ತದೆ.

ಇನ್ನೂ ಐವತ್ತಕ್ಕೂ ಅಧಿಕ ಕಂಪನಿಗಳ ಕತೆ ಇದೆ ಆಗಿರುತ್ತದೆ

ಬಿಜೆಪಿ ಮತ್ತು ಚುನಾವಣಾ (ಮೋದಿ) ಬಾಂಡ್‌ ಹಗರಣ : ಭ್ರಷ್ಟಾಚಾರದ ಸಾಂಸ್ಥೀಕರಣ

ನಾಲ್ಕನೆಯ ಮುಖವೆಂದರೆ ಅನೇಕ ಕಂಪನಿಗಳು ತಮ್ಮ ಆದಾಯ ಮತ್ತು ಲಾಭದ ಮೊತ್ತಕ್ಕಿಂತಲೂ ಅಧಿಕ ಮೊತ್ತದ ಚುನಾವಣಾ ಬಾಂಡ್‌ ಖರೀದಿಸಿದ್ದಾರೆ. ಇದು ಕುತೂಹಲಕಾರಿಯಾಗಿದೆ. ಈ ನಡೆಗೆ ಮುಖ್ಯ ಕಾರಣವೆಂದರೆ ಒಂದು ಆ ಕಂಪನಿಗಳು ದಿವಾಳಿಯಾಗಿರುತ್ತವೆ. ಸಾಲ ತೀರಿಸುವ ಸಂಕಷ್ಟದಿಂದ ಹೊರ ಬರಲು ಬಾಂಡ್‌ ಖರೀದಿಸುತ್ತಾರೆ. ಮತ್ತೊಂದು ಕಾರಣವೆಂದರೆ ಬೃಹತ್‌ ಉದ್ಯಮಿಗಳು ತೆರಿಗೆ ತಪ್ಪಿಸಿಕೊಳ್ಳಲು ಬೇನಾಮಿ, ಶೆಲ್‌ ಕಂಪನಿಗಳನ್ನು ಸೃಷ್ಟಿಸಿ ಈ ಡಮ್ಮಿಗಳ ಮೂಲಕ ಬಾಂಡ್‌ ಖರೀದಿಸುತ್ತಾರೆ. ಇದರಿಂದ ಸರ್ಕಾರದ ಕೃಪಕಟಾಕ್ಷವೂ ದೊರಕುತ್ತದೆ, ತರಿಗೆಯನ್ನು ಸಹ ಕಟ್ಟಬೇಕಿಲ್ಲ

ಉದಾಹರಣೆಗೆ ಫ್ಯೂಚರ್‌ ಗೇಮಿಂಗ್‌ ಕಂಪನಿಯ ೨೦೧೯-೨೦ ರಿಂದ ೨೦೨೨-೨೩ರ ಅವಧಿಯ ಒಟ್ಟು ಲಾಭ ೨೧೫ ಕೋಟಿಯಿದ್ದರೆ ಇವರು ೧೩೬೮ ಕೋಟಿ ಮೊತ್ತದ ಬಾಂಡ್‌ ಖರೀದಿಸುತ್ತಾರೆ. ಅಂದರೆ ತಮ್ಮ ಲಾಭದ ಮೊತ್ತದ ಶೇ.೬೩೫ ಪ್ರಮಾಣದಲ್ಲಿ ಬಾಂಡ್‌ ಖರೀದಿಸುತ್ತಾರೆ

ಕ್ವಾಕ್‌ ಸಪ್ಲೈ ಚೈನ್‌ ಎನ್ನುವ ಕಂಪನಿ ರಿಲೆಯನ್ಸ್‌ನ ವಿಳಾಸದಲ್ಲಿ ತನ್ನ ಕಚೇರಿ ತೆರೆದಿದೆ.  ೨೦೧೯-೨೦ ರಿಂದ ೨೦೨೨-೨೩ರ ಅವಧಿಯ ಒಟ್ಟು ಲಾಭ ೧೦೯ ಕೋಟಿಯಿದ್ದರೆ ಇವರು ೪೧೦ ಕೋಟಿ  ಮೊತ್ತದ ಬಾಂಡ್‌ ಖರೀದಿಸುತ್ತಾರೆ. ಅಂದರೆ ತಮ್ಮ ಲಾಭದ ಮೊತ್ತದ ಶೇ.೩೭೭ ಪ್ರಮಾಣದಲ್ಲಿ ಬಾಂಡ್‌ ಖರೀದಿಸುತ್ತಾರೆ

ಎಂ.ಕೆ.ಜೆ. ಎಂಟರ್‌ ಪ್ರೈಸಸ್‌ ಕಂಪನಿಯ ೨೦೧೯-೨೦ ರಿಂದ ೨೦೨೨-೨೩ರ ಅವಧಿಯ ಒಟ್ಟು ಲಾಭ ೫೮ ಕೋಟಿಯಿದ್ದರೆ ಇವರು ೧೯೨ ಕೋಟಿ ಮೊತ್ತದ ಬಾಂಡ್‌ ಖರೀದಿಸುತ್ತಾರೆ. ಅಂದರೆ ತಮ್ಮ ಲಾಭದ ಮೊತ್ತದ ಶೇ.೩೨೯ ಪ್ರಮಾಣದಲ್ಲಿ ಬಾಂಡ್‌ ಖರೀದಿಸುತ್ತಾರೆ

ಮದನ್‌ಲಾಲ್‌ ಲಿ. ಕಂಪನಿಯ ೨೦೧೯-೨೦ ರಿಂದ ೨೦೨೨-೨೩ರ ಅವಧಿಯ ಒಟ್ಟು ಲಾಭ ೧೦ ಕೋಟಿಯಿದ್ದರೆ ಇವರು ೧೮೫ ಕೋಟಿ ಮೊತ್ತದ ಬಾಂಡ್‌ ಖರೀದಿಸುತ್ತಾರೆ. ಅಂದರೆ ತಮ್ಮ ಲಾಭದ ಮೊತ್ತದ ಶೇ.೧೮೭೪ ಪ್ರಮಾಣದಲ್ಲಿ ಬಾಂಡ್‌ ಖರೀದಿಸುತ್ತಾರೆ

ಇನ್ನೂ ಅಸಂಖ್ಯಾತ ಉದಾಹರಣೆಗಳಿವೆ. ಈ ಕಂಪನಿಗಳು ಬಹುತೇಕ ಸಂದರ್ಭದಲ್ಲಿ ಶೆಲ್‌ ಅಥವಾ ಪ್ರಾಕ್ಸಿ ಕಂಪನಿಗಳಾಗಿರುತ್ತವೆ. ದೊಡ್ಡ ಪ್ರಮಾಣದ ಉದ್ಯಮಿಗಳು ಈ ಬೇನಾಮಿಗಳ ಮೂಲಕ ಕಾರ್ಯ ನಿರ್ವಹಿಸುತ್ತಿರುತ್ತಾರೆ.

ಪ್ರಸ್ತುತ ಸಾರ್ವಜನಿಕವಾಗಿ ಮೇಲಿನ ಮಾಹಿತಿಗಳು ಲಭ್ಯವಿದೆ. ಯಾವ ಕಂಪನಿ ಯಾವ ಪಕ್ಷಕ್ಕೆ ಯಾವ ದಿನಾಂಕದಂದು ಎಷ್ಟು ಮೊತ್ತದ ಬಾಂಡ್‌ ಖರೀದಿಸಿದೆ? ಬಾಂಡ್‌ ಪಡೆದುಕೊಂಡ ಪಕ್ಷಗಳು ಎಲ್ಲಾ ಮೊತ್ತವನ್ನು ನಗದೀಕರಿಸಿಕೊಂಡಿದ್ದಾರೆಯೇ? ಎನ್ನುವ ಮುಖ್ಯ ಪ್ರಶ್ನೆಗಳಿಗೆ ಎಸ್‌ಬಿಐ ೨೨೦೦೦ ಬಾಂಡ್‌ಗಳ ಅಲ್ಫಾನೂಮರಿಕಲ್‌ ಕ್ರಮಸಂಖ್ಯೆ ಪ್ರಕಟಿಸಿದಾಗ ಗೊತ್ತಾಗುತ್ತದೆ. ಈ ಕ್ರಮಸಂಖ್ಯೆಗಳನ್ನು ಪಕ್ಷಗಳು ನಗದೀಕರಿಸಿಕೊಂಡ ರಶೀದಿಯೊಂದಿಗೆ ತಾಳೆ ಮಾಡಿದಾಗ ಎಲ್ಲಾ ವಿವರಗಳು ಬಹಿರಂಗಗೊಳ್ಳುತ್ತವೆ. ಚುನಾವಣಾ ಬಾಂಡ್‌ನಂತಹ ಗೌಪ್ಯ ದೇಣಿಗೆಯು  ಸ್ವತಂತ್ರ ಭಾರತದ ಭ್ರಷ್ಟಾಚಾರದ ದೊಡ್ಡ ಹಗರಣವಾಗಿದೆ. ಇದರ ಬೀಜ ಬಿತ್ತಿದ ದಿವಂಗತ ಅರುಣ್‌ ಜೈಟ್ಳಿ ಇದನ್ನು ಮುಂದುವರೆಸಿದ ಮೋದಿ-ಶಾ ಈ ಮೂಲಕ ಭ್ರಷ್ಟಾಚಾರವನ್ನು ʼಸಾಂಸ್ಥೀಕರಣಗೊಳಿಸಿದ್ದಾರೆʼ.

ಚುನಾವಣಾ ಬಾಂಡ್‌ ಹಗರಣದ ಎಲ್ಲಾ ಮಾಹಿತಿಗಳು ಬಹಿರಂಗಗೊಂಡಿದೆ. ಎಸ್‌ಬಿಐ ಕೂಡಲೆ ಬಾಂಡ್‌ಗೆ ಸಂಬಂಧಿಸಿದ ಎಲ್ಲಾ ಕ್ರಮಸಂಖ್ಯೆಗಳನ್ನು ಪ್ರಕಟಿಸಬೇಕು. ಇದು ಯಾವ ಕಾರಣಕ್ಕೂ ತಡವಾಗಬಾರದು

ಕೇಂದ್ರದ ಬಿಜೆಪಿ ಸರ್ಕಾರವು ಈ ಚುನಾವಣಾ ಬಾಂಡ್‌ ಹಗರಣವನ್ನು ʼಕ್ವಿಡ್‌ ಪ್ರೊ ಕೋʼ ಅಂದರೆ ʼನೀನು ನನಗಿದ್ದರೆ, ನಾನಿಗೆʼ ಎನ್ನುವ ಅಪವಿತ್ರ ಮೈತ್ರಿಗಾಗಿ ಬಳಸಿಕೊಂಡಿದೆ. ಒಮ್ಮೆ ಸುಪ್ರೀಂಕೋರ್ಟ್‌ ಈ ಹಗರಣವನ್ನು ಸಂವಿಧಾನ ವಿರೋಧಿ ಎಂದು ಕರೆದು ಇದನ್ನು ರದ್ದುಗೊಳಿಸಬೇಕು ಎಂದು ಆದೇಶಿಸಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಬಿಜೆಪಿ ಪಕ್ಷ ಮತ್ತು ದೇಣಿಗೆ ನೀಡಿದ ಉದ್ಯಮಿಗಳು ಇಬ್ಬರೂ ತಪ್ಪಿತಸ್ಥರಾಗುತ್ತಾರೆ. ಸುಪ್ರೀಕೋರ್ಟ್‌ನ ಕಣ್ಗಾವಲಿನಲ್ಲಿ ಇಡೀ ಹಗರಣದ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆಯಾಗಬೇಕು. ಇದಕ್ಕಾಗಿ ವಿಶೇಷ ತನಿಖಾ ತಂಡ ರಚನೆಯಾಗಬೇಕು.

ಇಡೀ ವ್ಯವಹಾರವೇ ಅನೈತಿಕ ಎನಿಸಿಕೊಳ್ಳುತ್ತದೆ. ಈ ಕಾರಣದಿಂದ ಇಡೀ ಹಗರಣದ ಭ್ರಷ್ಟಾಚಾರ ಸಾಬೀತಾದ ನಂತರ ಇದರ ಫಲಾನುಭವಿಗಳಾದ ಬಿಜೆಪಿ ಪಕ್ಷ ಮತ್ತು ಉದ್ಯಮಿಗಳ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕೆಂದು ಸುಪ್ರೀಂಕೋರ್ಟ್‌ ಆದೇಶಿಸಬೇಕು.

ಈ ಅಕ್ರಮ ಬ್ರಷ್ಟಾಚಾರದ ಹಣವನ್ನು ಚುನಾವಣಾ ವೆಚ್ಚಕ್ಕೆ ಬಳಸಿಕೊಳ್ಳುವುದನ್ನು ಸಧ್ಯದ ಸಂದರ್ಭದಲ್ಲಿ ನಿಷೇಧಿಸಲು ಸಾಧ್ಯವಿಲ್ಲವಾದರೂ ಸಹ ಸಂಬಂದಿಸಿದ ಪಕ್ಷಗಳು ತಾವು ಪಡೆದುಕೊಂಡ ಒಟ್ಟು ಮೊತ್ತವನ್ನು ʼಪ್ರಧಾನಮಂತ್ರಿ ಪರಿಹಾರ ನಿಧಿʼಗೆ ಮರಳಿಸಬೇಕೆಂದು ಸುಪ್ರೀಂಕೋರ್ಟ್‌ ಆದೇಶ ನೀಡಬಹುದಲ್ಲವೇ?

ಕಡೆಯದಾಗಿ ʼಪಿಎಮ್‌ ಕೇರ್ಸ್‌ʼ ಎನ್ನುವ ಟ್ರಸ್ಟ್‌ನ ಎಲ್ಲಾ ಅಪಾರದರ್ಶಕ ವ್ಯವಹಾರವನ್ನು ಬಹಿರಂಗಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಬೇಕು.

ಇದನ್ನು ನೋಡಿ : ಚುನಾವಣಾ (ಮೋದಿ)ಬಾಂಡ್ ಎನ್ನುವ ‘ಹಫ್ತಾ ವಸೂಲಿ’ಯ ಹಿಂದೆ, ಇಂದು, ಮುಂದು… Janashakthi Media

Donate Janashakthi Media

Leave a Reply

Your email address will not be published. Required fields are marked *