ಚಾಮರಾಜನಗರ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ 6 ಲಕ್ಷ ರೂ. ದಂಡ ವಿಧಿಸಿ ಗ್ರಾಮದಿಂದ ಬಹಿಷ್ಕಾರ ಹಾಕಿರುವ ಘಟನೆ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.
ದಂಪತಿ 5 ವರ್ಷಗಳ ಹಿಂದಯೇ ಮದುವೆಯಾಗಿದ್ದಾರೆ. ಆದರೆ ಇವರದು ಅಂತರ್ಜಾತಿ ವಿವಾಹ ಎಂದು ತಿಳಿದ ನಂತರ ಗ್ರಾಮಸ್ಥರು ಶಿಕ್ಷೆ ವಿಧಿಸಿದ್ದಾರೆ. ಕುಣಗಳ್ಳಿ ಗ್ರಾಮದ ಉಪ್ಪಾರ ಶೆಟ್ಟಿ ಸಮುದಾಯಕ್ಕೆ ಸೇರಿದ ಗೋವಿಂದಾರಾಜು ಎಂಬುವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಶ್ವೇತಾ ಅವರು ಪರಸ್ಪರ ಪ್ರೀತಿಸಿ ಐದು ವರ್ಷದ ಹಿಂದೆ ಮದುವೆ ಆಗಿದ್ದರು.
ಘಟನೆಯ ಹಿನ್ನೆಲೆ : 2018 ರಲ್ಲಿ ಮಳವಳ್ಳಿಯ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಮದುವೆ ನೋಂದಣಿ ಮಾಡಿಕೊಂಡು ಕುಣಗಹಳ್ಳಿಗೆ ಹೋದ ದಂಪತಿಯನ್ನು ಉಪ್ಪಾರ ಜಾತಿಯ ಹಿರಿಯರು ಪಂಚಾಯತಿ ಸೇರಿಸಿ, ದಲಿತ ಹುಡುಗಿಯನ್ನು ಮದುವೆಯಾದ ಗೋವಿಂದರಾಜನಿಗೆ ಒಂದೂಕಾಲು ಲಕ್ಷ ರೂಪಾಯಿ ದಂಡ ಹಾಕಿ, ತಲೆ ಬೋಳಿಸಿ ಊರಿಗೆ ಬಾರದಂತೆ ತಾಕೀತು ಮಾಡುತ್ತಾರೆ. ಇದಕ್ಕೆ ಹೆದರಿದ ಗೋವಿಂದರಾಜು ಮತ್ತು ಶ್ವೇತಾ ಊರಿಗೆ ಹೋಗದೆ ಶ್ವೇತಾಳ ತವರು ಮನೆಯಲ್ಲೇ ಉಳಿದು ಇಬ್ಬರು ಸಂಸಾರ ಸಾಗಿಸುತ್ತಾರೆ.
ಇತ್ತೀಚಿಗೆ ಗೋವಿಂದರಾಜು ಅಮ್ಮನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ನೋಡಲು ಗೋವಿಂದರಾಜು ಮತ್ತು ಶ್ವೇತಾ ಕುಣಗಹಳ್ಳಿಗೆ ಹೋಗಿದ್ದಾರೆ. ಇವರನ್ನು ನೋಡಿದ ಊರಿನ ಉಪ್ಪಾರ ಜಾತಿಯ ಪ್ರಮುಖರ ಕಣ್ಣು ಮತ್ತೆ ಕೆಂಪಾಗಿವೆ. ಇವರನ್ನು ನೋಡಿದ್ದೇ ತಡ ಗೋವಿಂದರಾಜು ತಂದೆಯನ್ನು ಮತ್ತೆ ಪಂಚಾಯತಿಗೆ ಕರೆಸಿ, “ನಿನ್ನ ಮಗ ಮತ್ತೆ ಆ ಹುಡುಗಿಯನ್ನು”, ನಮ್ಮ ಊರಿಗೆ ಕರೆ ತಂದಿದ್ದಾನೆ. ನಮ್ಮ ಜಾತಿ ಕೆಡಿಸಿದ್ದಾನೆ.. ಈಗ ಅದು ಸರಿ ಹೋಗಬೇಕು ಎಂದರೆ ಮೂರು ಲಕ್ಷ ರೂಪಾಯಿ ದಂಡ ಕೊಡಬೇಕು ಮತ್ತು ಕುಲ ಮಾಡಿಸಿಕೊಳ್ಳಬೇಕು. ತಪ್ಪಿದರೆ ದಂಡ ಆರು ಲಕ್ಷ ಕೊಡಬೇಕಾಗುತ್ತದೆ ಮತ್ತು ಊರಿನಿಂದ ಬಹಿಷ್ಕಾರ ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ದಂಡ ಪಾವತಿಸಲು ವಿಳಂಬ ಆಗಿದ್ದಕ್ಕೆ ಆರು ಲಕ್ಷ ಕೊಡಬೇಕು ಎಂದು ತೀರ್ಮಾನಿಸಿ ಊರಿನಿಂದ ಸಾಮಾಜಿಕ ಬಹಿಷ್ಕಾರ ಹಾಕಿ ಇಡೀ ಊರಿನಲ್ಲಿ ಡಂಗುರ ಹೊಡೆಸಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣವೇ ದಲಿತ ಹಕ್ಕುಗಳ ಸಮಿತಿ ಆ ಗ್ರಾಮಕ್ಕೆ ಭೇಟಿ ನೀಡಿ, ಆ ಇಬ್ಬರು ದಂಪತಿಗಳಿಗೆ ಧೈರ್ಯ ತುಂಬುತ್ತಾರೆ. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ, ದಲಿತ ಹಕ್ಕುಗಳ ಸಮಿತಿಯ ಆರ್. ಕೃಷ್ಣ, ಪ್ರಸಾದ್ ಇತರರು ಚಾಮರಾಜನಗರ ಎಸ್.ಪಿ. ಮತ್ತು ಕೊಳ್ಳೇಗಾಲ ಡಿವೈಎಸ್ಪಿ ಯವರಿಗೆ ಮಾತನಾಡಿ, ಈ ದಂಪತಿಯನ್ನು ಅವಮಾನಿಸಿದ, ನಿಂದಿಸಿದ ಹಾಗೂ ದಂಡ ವಿಧಿಸಿದ ಹಿರಿಯರ ಮೇಲೆ ಪ್ರಕರಣವನ್ನು ದಾಖಲು ಮಾಡಿಸಿದ್ದಾರೆ. ಎಫ್ಐಆರ್ ದಾಖಲಾದ ತಕ್ಷಣವೇ ಖುದ್ದು ಡಿವೈಎಸ್ಪಿ ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್ ಕೃಷ್ಣೇಗೌಡ ಪ್ರತಿಕ್ರಿಯಿಸಿದ್ದು, ತನ್ನ ಕ್ಷೇತ್ರದಲ್ಲೇ ಇದು ನಡೆದಿದ್ದರೂ ಶಾಸಕ ಎನ್ ಮಹೇಶ್ ಏನೂ ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ. ದಲಿತರ ಹೆಸರಲ್ಲಿ ಶಾಸಕನಾಗಿ ದಲಿತರಿಗೆ ಟೋಪಿ ಹಾಕಿದ್ದಾರೆ. ಮೋದಿಯನ್ನು ಹೊಗಳಿಕೊಂಡು ಭಾಷಣ ಹೊಡೆಯುತ್ತಾ ಚುನಾವಣಾ ತಯಾರಿಯಲ್ಲಿದ್ದಾರೆ. ಈ ಬಾರಿ ಈ ಕ್ಷೇತ್ರದ ದಲಿತರು ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.