ಅಹ್ಮದಾಬಾದ್: 95ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗೆ ಪ್ರವೇಶ ಪಡೆದಿರುವ ಭಾರತದಿಂದ ಗುಜರಾತಿ ಸಿನಿಮಾ ʼಛೆಲ್ಲೋ ಶೋʼದಲ್ಲಿ ಬಾಲನಟನಾಗಿ ನಟಿಸಿರುವ ರಾಹುಲ್ ಕೋಲಿ ಕ್ಯಾನ್ಸರ್ ಕಾಯಿಲೆಯಿಂದ ನಿಧನರಾಗಿದ್ದಾರೆ. ಈ ಕುರಿತು ಗುಜರಾತ್ ಮಾಧ್ಯಮಗಳು ವರದಿ ಮಾಡಿದ್ದು, ಉದಯೋನ್ಮುಖ ಬಾಲನಟನ ಸಾವಿಗೆ ಗುಜರಾತ್ ಸಿನಿರಂಗ ಕಂಬನಿ ಮಿಡಿದಿದೆ.
ವರದಿ ಪ್ರಕಾರ ಮೊದಲಿಗೆ ರಾಹುಲ್ ಕೋಲಿ(15) ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಉಲ್ಬಣಗೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕುರಿತು ರಾಹುಲ್ ತಂದೆ ಮಾತಾನಾಡಿ, ಅಕ್ಟೋಬರ್ 2ರಂದು ರಾಹುಲ್ ತಿಂಡಿ ತಿಂದ ಮೇಲೆ, ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿತು. ಮೂರು ಬಾರಿ ರಕ್ತದ ವಾಂತಿ ಮಾಡಿದನು. ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತ ನಮ್ಮನ್ನು ಅಗಲಿದ್ದಾನೆ. ನಮ್ಮ ಕುಟುಂಬಕ್ಕೆ ಚಿಂತೆ ಈಡಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅಂತೆಯೇ ರಾಹುಲ್ ನಟಿಸಿರುವ ʼಛೆಲ್ಲೋ ಶೋʼ ಅಕ್ಟೋಬರ್ 14 ರಂದು ಬಿಡುಗಡೆಯಾಗಲಿದೆ. ಅದನ್ನು ನಾವೆಲ್ಲಾ ಒಟ್ಟಾಗಿ ನೋಡಿದ ಬಳಿಕ, ಆತನ ಅಂತಿಮ ಕ್ರಿಯಾವಿಧಾನವನ್ನು ಮಾಡುತ್ತೇವೆಂದು ರಾಹುಲ್ ತಂದೆ ಹೇಳಿದ್ದಾರೆ.
ಮಗನ ಚಿಕಿತ್ಸೆಗಾಗಿ ಆಟೋ ಮಾರಾಟ
ಮಗನ ಚಿಕಿತ್ಸೆಗಾಗಿ ಹಣಕಾಸಿನ ತೊಂದರೆ ಎದುರಾಯಿತು. ಹಣಕ್ಕಾಗಿ ಸಾಕಷ್ಟು ಪರದಾಡಿದೆ. ಎಷ್ಟೇ ಪ್ರಯತ್ನ ಮಾಡಿದರೂ ಚಿಕಿತ್ಸೆಗೆ ಬೇಕಾದಷ್ಟು ಹಣ ಸಿಗಲಿಲ್ಲ. ಹೀಗಾಗಿ ನನ್ನ ಆಟೋವನ್ನು ಮಾರಬೇಕಾಯಿತು. ಆದರೆ ಈ ವಿಚಾರ ಚಿತ್ರ ತಂಡದವರಿಗೆ ಗೊತ್ತಾಗಿ ಆಟೋವನ್ನು ಹಿಂದಕ್ಕೆ ಪಡೆದು ನನಗೆ ನೀಡಿದ್ದಾರೆ ಎಂದು ರಾಹುಲ್ ತಂದೆ ಎಂದು ನೋವು ತೋಡಿಕೊಂಡರು.
ಇದೇ ವೇಳೆ ತಮ್ಮ ಪುತ್ರ ಮಾತುಗಳನ್ನು ನೆನಪಿಸಿಕೊಂಡ ಅವರು, ‘ಸಿನಿಮಾ ಬಿಡುಗಡೆ ಆದ ಮೇಲೆ ನಮ್ಮ ಜೀವನದ ಬದಲಾಗುತ್ತದೆ ಎಂದು ರಾಹುಲ್ ಹೇಳುತ್ತಿದ್ದ. ಆದರೆ ಅದಕ್ಕೂ ಮುನ್ನ ಆತ ನಮ್ಮನ್ನು ಬಿಟ್ಟು ಹೋಗಿದ್ದಾನೆʼ ಎಂದರು.
ಛೆಲ್ಲೋ ಶೋ ಚಿತ್ರದ ನಿರ್ದೇಶಕ ಪಾನ್ ನಳಿನ್ ಅವರು ಮಾತಾನಾಡಿ, ನಾವು ರಾಹುಲ್ ಕುಟುಂಬದ ಜೊತೆ ವಾರಗಟ್ಟಲೇ ಇದ್ದೆವು. ಆದರೆ ಅವನನ್ನು ನಾವು ಉಳಿಸಿಕೊಳ್ಳಲಾಗಲಿಲ್ಲ ಎಂದು ಭಾವುಕರಾದರು.
ಛೆಲ್ಲೋ ಶೋ ಸಿನಿಮಾ
ಪ್ಯಾನ್ ನಳಿನ್ ನಿರ್ದೇಶನ ಮಾಡಿರುವ ಛೆಲ್ಲೋ ಶೋ ಎಂದರೆ ಕೊನೆಯ ಸಿನಿಮಾ ಪ್ರದರ್ಶನ ಎಂದರ್ಥ. ನಿರ್ದೇಶಕರ ಬಾಲ್ಯದ ಅನುಭವಗಳನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಸಿನಿಮಾದಲ್ಲಿ ರಾಹುಲ್ ಕೋಲಿ, ಮನು ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ನಾಯಕನ ಆತ್ಮೀಯ ಗೆಳೆಯ ಪಾತ್ರ ಮಾಡಿದ್ದಾನೆ. ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿರುವ 9ರ ಪ್ರಾಯದ ಬಾಲಕನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಈಗಾಗಲೇ ಅನೇಕ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ.
ಈ ಸಿನಿಮಾವನ್ನು ಲಾಕ್‌ಡೌನ್ ಗೂ ಮೊದಲೇ ಚಿತ್ರೀಕರಣ ಮಾಡಲಾಗಿದೆ. ಹಳ್ಳಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಸ್ಥಳೀಯ ಬಾಲಕರೇ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಸದ್ಯ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದ ಸಿನಿಮಾ ತಂಡಕ್ಕೆ ರಾಹುಲ್ ಹಠಾತ್ ನಿಧನ ತೀವ್ರ ದುಃಖ ತಂದಿದೆ.