ಕೊಯಮತ್ತೂರು: ರೈಲ್ವೇ ಇತಿಹಾಸದಲ್ಲಿ, ಅದರಲ್ಲೂ ದೇಶದ ಸ್ವಾತಂತ್ರ್ಯ ನಂತರ ಇದುವರೆಗೂ ಸರಕಾರಿ ಒಡೆತನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕರ ರೈಲು ಸಂಚಾರದಲ್ಲಿ ಖಾಸಗೀಕರಣದ ಪ್ರಕ್ರಿಯೆಗಳು ಆರಂಭಗೊಂಡಿದೆ. ಇದರೊಂದಿಗೆ, ಖಾಸಗಿ ರೈಲು ನೆನ್ನೆ(ಜೂನ್ 14) ಸಂಜೆ ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸಲು ಆರಂಭವಾಗಿದೆ.
‘ಸೌಥ್ ಸ್ಟಾರ್ ರೈಲ್’ ಖಾಸಗಿ ಕಂಪನಿಯಿಂದ ನಿರ್ವಹಿಸಲ್ಪಡುವ ‘ಭಾರತ್ ಗೌರವ್’ ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ ಮಾಡಿದೆ. ರೈಲು ಸೇವೆ ತಮಿಳುನಾಡಿನ ಕೊಯಮತ್ತೂರು ಉತ್ತರ ರೈಲು ನಿಲ್ದಾಣದಿಂದ ಶಿರಡಿ ನಡುವೆ ಸಂಚರಿಸುತ್ತದೆ. ಶಿರಡಿಗೆ ತಲುಪುವ ಮೊದಲು, ರೈಲು ತಿರುಪುರ್, ಈರೋಡ್, ಸೇಲಂ ಜೋಲಾರ್‌ಪೇಟ್, ಬೆಂಗಳೂರು ಯಲಹಂಕ, ಧರ್ಮಾವರ, ಮಂತ್ರಾಲಯ ರಸ್ತೆ (ನಿಲುಗಡೆ), ಮತ್ತು ವಾಡಿಯಲ್ಲಿ ನಿಲ್ಲುತ್ತದೆ.
ಖಾಸಗಿ ರೈಲಿ ಟಿಕೆಟ್ ದರಗಳು ಭಾರತೀಯ ರೈಲ್ವೇಗಳು ವಿಧಿಸುವ ದರಗಳಷ್ಟೇ ನಿಯಮಿತ ದರ ಹೊಂದಿರುತ್ತವೆ. ಅದರೊಂದಿಗೆ, ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ವಿಐಪಿ ದರ್ಶನವನ್ನು ಒದಗಿಸುತ್ತದೆ. ಈ ರೈಲನ್ನು ಕಂಪನಿಯು ಶಿರಡಿ ಸೇವಾ ಪೂರೈಕೆದಾರರಿಗೆ ಎರಡು ವರ್ಷದ ಅವಧಿಗೆ ಪ್ರಯಾಣಕ್ಕಾಗಿ ನೀಡಿದೆ ಎನ್ನಲಾಗಿದೆ.
Promoting India's rich cultural heritage!
Southern Railway becomes the first zone to get its first Registered service provider under the ‘Bharat Gaurav’ Scheme & commence operations of the maiden service from Coimbatore North to Sainagar Shirdi, today. pic.twitter.com/7cPSj9iP8i
— Ministry of Railways (@RailMinIndia) June 14, 2022
ಉತ್ತರ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ, ಕಂಪನಿಯು ಪ್ರಯಾಣದ ಉತ್ತೇಜನಕ್ಕೆಂದೆ ಕೊಯಿಮತ್ತೂರು, ಈರೋಡ್ ಮತ್ತು ಮೆಟ್ಟುಪಾಲ್ಯಯಂ ಸೇರಿದಂತೆ ವಿವಿಧ ಶಿರಡಿ ಸಾಯಿಬಾಬಾ ಟ್ರಸ್ಟ್ ಗಳಿಗಾಗಿ ಒಟ್ಟು 250 ಟಿಕೇಟ್ ಗಳನ್ನು ಉಚಿತವಾಗಿ ಕಾಯ್ದರಿಸಿದೆ. ಇದರಿಂದ ಭಕ್ತರು, ಟ್ರಸ್ಟ್ ಮುಖ್ಯಸ್ತರು ಉಚಿತವಾಗಿ ಶಿರಡಿ ಶ್ರೀ ಸಾಯಿಬಾಬಾ ದರ್ಶನ ಪಡೆಯಬಹುದಾಗಿದೆ.
ರೈಲು ಶಿರಡಿ ತಲುಪುತ್ತಿದ್ದಂತೆ ದೇವಸ್ಥಾನ ಪ್ರವೇಶಿಸಿ, ದರ್ಶನ ಪ್ರಸಾದ ಪಡೆದು ಬರುವವರೆಗೂ ಪ್ರಯಾಣಿಕರಿಗಾಗಿ ನಿಲ್ದಾಣದಲ್ಲಿ ಐದು ಗಂಟೆಗೂ ಹೆಚ್ಚು ಕಾಲ ಕಾಯಲಿದೆ. ತಿಂಗಳಿಗೆ ಮೂರು ಬಾರಿ ಅಂತೆ ಒಟ್ಟು ಎರಡು ವರ್ಷದವರಿಗೆ ಕಂಪನಿ ಸೇವಾ ಪೂರೈಕೆದಾರರಿಗೆ ಪ್ರಯಾಣಕ್ಕೆಂದು ನೀಡಿದೆ ಎಂದು ಅವರು ಹೇಳಿದ್ದಾರೆ.
ಖಾಸಗೀಕರಣಕ್ಕೆ ರೈಲ್ವೆ ನೌಕರರ ವಿರೋಧ
ದಕ್ಷಿಣ ರೈಲ್ವೇ ಮಜ್ದೂರ್ ಯೂನಿಯನ್‌ಗೆ ಸೇರಿದ ರೈಲ್ವೇ ನೌಕರರ ಗುಂಪು ಖಾಸಗಿ ರೈಲುಸೇವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಖಾಸಗಿ ರೈಲು ಸೇವೆ ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯೋಜನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.