ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಗೆ ಕಾರಣವಾಗಿರುವ ಕೊವಿಡ್ 19 ರೂಪಾಂತರಿ ವೈರಾಣು B.1.617 ಮಾದರಿ ಆರೋಗ್ಯ ಕ್ಷೇತ್ರದ ಮೇಲೆ ಊಹೆಗೂ ನಿಲುಕದ ಮಟ್ಟಿಗೆ ಹೊಡೆತ ನೀಡಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ಭಾರತದ ಪ್ರಸ್ತುತ ಸ್ಥಿತಿಗತಿಯ ಕುರಿತು ಹಲವು ತಜ್ಞರು ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಭಾರತದ ರೂಪಾಂತರಿ ಕೊರೊನಾ ವೈರಾಣುವನ್ನು ಚಿಂತೆಗೀಡುಮಾಡುವ ತಳಿ ಎಂದು ಕರೆಯುವ ಮೂಲಕ ಇದರ ಗಂಭೀರತೆ ಎಷ್ಟಿದೆ ಎನ್ನುವುದನ್ನು ಸಾರಿದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸೌಮ್ಯಾ ಸ್ವಾಮಿನಾಥನ್ ಸಹ ದೇಶ ಎದುರಿಸುತ್ತಿರುವ ಸನ್ನಿವೇಶದ ಬಗ್ಗೆ ಮಾತನಾಡಿದ್ದು, ಭಾರತೀಯರು ಕೇವಲ ಕೊರೊನಾದಿಂದಷ್ಟೇ ಸಾಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!
ಭಾರತದಲ್ಲಿ ಕಂಡುಬರುತ್ತಿರುವ ಪ್ರಕರಣಗಳ ಪ್ರಮಾಣ ಆಘಾತಕಾರಿಯಾಗಿದೆ. ವಿಶ್ವದ ಇತರ ದೇಶಗಳೂ ಇದೇ ತೆರನಾದ ಆತಂಕಕಾರಿ ಬೆಳವಣಿಗೆಗೆ ಸಾಕ್ಷಿಯಾಗುತ್ತಿವೆ. ಇನ್ನೊಂದು ಸಂಗತಿ ಎಂದರೆ ಇದರಲ್ಲಿ ಬೆಳಕಿಗೆ ಬಾರದ ಪ್ರಕರಣಗಳೂ ಹಲವು ಇರಬಹುದು. ಹೀಗೆ ದಾಖಲೆಗೆ ಸಿಗದ ಪ್ರಕರಣಗಳನ್ನು ಪತ್ತೆ ಹಚ್ಚಲು ಯಾವುದಾದರೂ ನಿರ್ದಿಷ್ಟ ಕ್ರಮ ಕೈಗೊಳ್ಳಲು ಯೋಜನೆಯನ್ನು ರೂಪಿಸುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದ್ದಾರೆ.
ಬಹುಮುಖ್ಯವಾಗಿ ಭಾರತದಲ್ಲಿ ಸಾಯುತ್ತಿರುವವರೆಲ್ಲರೂ ಕೊರೊನಾದಿಂದಲೇ ಮೃತಪಡುತ್ತಿದ್ದಾರೆ ಎಂದು ಹೇಳಲಾಗದು. ಹಲವರಿಗೆ ಸೂಕ್ತ ಸಮಯಕ್ಕೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಸಿಗದ ಕಾರಣ ಸಾವು ಸಂಭವಿಸುತ್ತಿದೆ. ಈ ಕಾರಣ ಹಾಗೂ ಕೊವಿಡ್ ಎರಡೂ ಸೇರಿದಾಗ ಸಹಜವಾಗಿಯೇ ಮರಣ ಪ್ರಮಾಣ ಹೆಚ್ಚುತ್ತದೆ. ಸದ್ಯ ಕೊರೊನಾವನ್ನು ಮಣಿಸಬೇಕೆಂದರೆ ಸೋಂಕು ಹಬ್ಬುವಿಕೆಯನ್ನು ತಡೆಗಟ್ಟಬೇಕು. ಇದೀಗ ಕೊರೊನಾ ಲಸಿಕೆಯ ಬಗ್ಗೆ ಭರವಸೆ ಮೂಡಿದೆ. ಹೀಗಾಗಿ ಪೇಟೆಂಟ್ ಅಥವಾ ಲಾಭದ ಬಗ್ಗೆ ಯೋಚನೆ ಮಾಡದೇ ವಿಶ್ವದೆಲ್ಲೆಡೆ ಕೊರೊನಾ ಲಸಿಕೆ ಸಿಗುವಂತೆ ಮಾಡುವತ್ತ ಹೆಜ್ಜೆ ಹಾಕಬೇಕು. ವಿಶ್ವ ಆರೋಗ್ಯ ಸಂಸ್ಥೆಯೂ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲಿದೆ ಎಂದಿದ್ದಾರೆ.
ಜತೆಗೆ, ಲಸಿಕೆ ತೆಗೆದುಕೊಂಡ ಮಾತ್ರಕ್ಕೆ ಕೊರೊನಾದಿಂದ ಬರುವುದಿಲ್ಲ ಎಂಬ ಹುಂಬತನ ಬೇಡ ಎಂಬ ಎಚ್ಚರಿಕೆ ನೀಡಿರುವ ಅವರು, ಲಸಿಕೆ ನಮ್ಮನ್ನು ರಕ್ಷಿಸುವುದಕ್ಕೆ ಪ್ರಯತ್ನಿಸುತ್ತದೆ. ಅದಕ್ಕೆ ಪೂರಕವಾಗಿ ನಾವು ಸಹ ನಮ್ಮ ಎಚ್ಚರಿಕೆಯಲ್ಲಿ ಇರಬೇಕು ಎಂದು ತಿಳಿಸಿದ್ದಾರೆ. ಈಗಿನ ಅಧ್ಯಯನದ ಪ್ರಕಾರ ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವುದು ಸಾಬೀತಾಗಿದೆ. ದಯವಿಟ್ಟು ಅರ್ಹರೆಲ್ಲರೂ ಆದಷ್ಟು ಬೇಗ ಹೋಗಿ ಲಸಿಕೆ ಪಡೆಯಿರಿ ಎಂದಿದ್ದಾರೆ.