ಕಠ್ಮಂಡು: ಪೇಸ್‌ಮೇಕರ್ ಅಳವಡಿಸಿಕೊಂಡು ಮೌಂಟ್ ಎವರೆಸ್ಟ್ ಅನ್ನು ಏರಿದ ಏಷ್ಯಾದ ಮೊದಲ ಮಹಿಳೆ ಎಂಬ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದ 59 ವರ್ಷದ ಭಾರತೀಯ ಆರೋಹಿಯೊಬ್ಬರು ನೇಪಾಳದ ವಿಶ್ವದ ಅತಿ ಎತ್ತರದ ಶಿಖರದ ಬೇಸ್ ಕ್ಯಾಂಪ್‌ನಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಗುರುವಾರ ನಿಧನ ಹೊಂದಿದ್ದಾರೆ.
59 ವರ್ಷದ ಸುಝೇನ್ ಲಿಯೋಪೋಲ್ಡಿನಾ ಜೀಸಸ್ ಮೃತ ಪರ್ವತಾರೋಹಿ. ‘ಬೇಸ್ ಕ್ಯಾಂಪ್‌ನಲ್ಲಿ ಅಭ್ಯಾಸದ ವೇಳೆ, ಸಾಮಾನ್ಯ ವೇಗವನ್ನು ಕಾಯ್ದುಕೊಳ್ಳಲು ಸುಝೇನ್ ವಿಫಲವಾದರು. ನಂತರ ಪರ್ವತವನ್ನೇರಲು ಕಷ್ಟಪಡತೊಡಗಿದರು. ನಂತರ ಪೇಸ್‌ಮೇಕರ್ ಅಳವಡಿಸಿ, ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಪ್ರಯತ್ನವನ್ನು ಕೈ ಬಿಡುವಂತೆ ಕೇಳಿದೆವು’ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಯುವರಾಜ್ ಖತಿವಾಡ ಹೇಳಿದ್ದಾರೆ. ‘ಇದಕ್ಕೊಪ್ಪದ ಸುಝೇನ್, ಪರ್ವತವನ್ನು ಏರಲು ಈಗಾಗಲೇ ಶುಲ್ಕವನ್ನು ಪಾವತಿಸಿ, ಅನುಮತಿ ಪಡೆದಿದ್ದೇನೆ. 8,848.86 ಮೀಟರ್ ಎತ್ತರದ ಶಿಖರವನ್ನು ಏರಿಯೇ ಸಿದ್ಧ ಎಂದು, ಎಚ್ಚರಿಕೆಗಳ ಹೊರತಾಗಿಯೂ ಪರ್ವಾತಾರೋಹಣವನ್ನು ಮುಂದುವರೆಸಿದ್ದಾರೆ. ಸ್ವಲ್ಪ ಎತ್ತರದವರೆಗೆ ಆರೋಹಣ ಮಾಡುವಾಗ, ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ತುರ್ತು ಪರಿಸ್ಥಿತಿಯನ್ನು ಅರಿತು, ಕೂಡಲೇ ಅವರನ್ನು ಬೇಸ್ ಕ್ಯಾಂಪ್‌ನಿಂದ ಲೂಕ್ಲಾಗೆ ಏರ್‌ಲಿಫ್ಟ್ ಮಾಡಲಾಯಿತು” ಎಂದು ಗ್ಲೇಸಿಯರ್ ಹಿಮಾಲಯನ್ ಟ್ರೆಕ್ ಅಧ್ಯಕ್ಷ ದೆಂಢಿ ಶೆರ್ಪಾ ಹೇಳಿದ್ದಾರೆ.
ಇದನ್ನೂ ಓದಿ : ತನ್ನ ದಾಖಲೆಯನ್ನೇ ಮುರಿದು ಹೊಸ ದಾಖಲೆ ಸೃಷ್ಟಿಸಿದ ಲಕ್ಪಾ ಶೆರ್ಪಾ
ಬೇಸ್ ಕ್ಯಾಂಪ್‌ನಲ್ಲಿ ವ್ಯಾಯಾಮದ ವೇಳೆ, ಸುಝೇನ್ ಪರ್ವತವನ್ನು ಮತ್ತಷ್ಟು ಏರಲು ಅನಾರೋಗ್ಯ ಸಮಸ್ಯೆಯಿಂದ ಅರ್ಹರಿಲ್ಲ ಎಂದು ನಮಗೆ ತಿಳಿದು ಬಂದಿತ್ತು. ಹೀಗಾಗಿ ಆರೋಹಣವನ್ನು ನಿಲ್ಲಿಸುವಂತೆ ಹೇಳಿದ್ದೆವು. ಆದರೆ ಅವರು ಒಪ್ಪದೇ, ಮುಂದುವರೆಸಿದರು’ ಎಂದು ದೆಂಢಿ ಶೆರ್ಪಾ ಹೇಳಿದ್ದಾರೆ. ಆರೋಹಿಗಳು ಸಾಮಾನ್ಯವಾಗಿ 15 ರಿಂದ 20 ನಿಮಿಷಗಳಲ್ಲಿ ದೂರವನ್ನು ದಾಟಬಹುದು. ಆದರೆ ಸುಝೇನ್ ಮೊದಲ ಪ್ರಯತ್ನದಲ್ಲಿ5 ಗಂಟೆಗಳು, ಎರಡನೇ ಪ್ರಯತ್ನದಲ್ಲಿ 6 ಗಂಟೆಗಳು ಮತ್ತು ವ್ಯಾಯಾಮದ ಸಮಯದಲ್ಲಿ ಪಾಯಿಂಟ್ ತಲುಪಲು 12 ಗಂಟೆಗಳ ಕಾಲ ತೆಗೆದುಕೊಂಡರು. ಆದರೆ, ಪೇಸ್‌ಮೇಕರ್ ಮೂಲಕ ಎವರೆಸ್ಟ್ ಶಿಖರವನ್ನು ಏರಿದ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಲು ಅವರು ಬಯಸಿದ್ದರು’ ಎಂದು ಶೆರ್ಪಾ ಹೇಳಿದರು.
ಶೆರ್ಪಾ ಅವರು ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದು, 250 ಮೀಟರ್ ಉದ್ದದ ಬೇಸ್ ಕ್ಯಾಂಪ್‌ನ ಮೇಲಿರುವ ಕ್ರಾಂಪ್ಟನ್ ಪಾಯಿಂಟ್‌ಗೆ ತಲುಪಲು 5 ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಸುಜಾನ್ ಅವರು ಮೌಂಟ್ ಎವರೆಸ್ಟ್ ಏರುವ ಸ್ಥಿತಿಯಲ್ಲಿಲ್ಲ ಎಂದು ಉಲ್ಲೇಖಿಸಿದ್ದಾರೆ. ಸುಝೇನ್ ಅವರ ದೇಹವನ್ನು ಗುರುವಾರ ಮಧ್ಯಾಹ್ನ ಕಠ್ಮಂಡುವಿಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮಹಾರಾಜ್‌ಗಂಜ್ ಪುರಸಭೆಯಲ್ಲಿರುವ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು ಶುಕ್ರವಾರ ಸಂಜೆಯೊಳಗೆ ಕಠ್ಮಂಡುವಿಗೆ ಆಗಮಿಸುವ ನಿರೀಕ್ಷೆಯಿದೆ.