ನವದೆಹಲಿ: ದೇಶದಲ್ಲಿ 9,02,291 ಕೋವಿಡ್ ರೋಗಿಗಳಿಗೆ ಆಕ್ಸಿಜನ್ ನೀಡಲಾಗ್ತಿದೆ, 1,70,841 ಮಂದಿ ವೆಂಟಿಲೇಟರ್ ಸಪೋರ್ಟ್ನಲ್ಲಿದ್ದಾರೆ ಅಂತಾ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಕೋವಿಡ್ ಪರಿಸ್ಥಿತಿಯ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಹರ್ಷವರ್ಧನ್, ಕೊರೊನಾ ಸೋಂಕಿತರ ಪೈಕಿ ಶೇಕಡಾ 1.34ರಷ್ಟು(4,88,861) ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ. 3.70(9,02,291) ಸೋಂಕಿತರು ಆಮ್ಲಜನಕದ ಸಹಾಯದಲ್ಲಿದ್ದಾರೆ ಅಂತಾ ತಿಳಿಸಿದ್ದಾರೆ.
ಇನ್ನು ಇದೇ ವೇಳೆ ಮಹಾರಾಷ್ಟ್ರ ಬಿಟ್ಟರೆ ಅಧಿಕ ಸಕ್ರಿಯ ಪ್ರಕರಣಗಳು ಇರುವ ರಾಜ್ಯ ಕರ್ನಾಟಕ ಅಂತಾನೂ ಸಚಿವರು ಉಲ್ಲೇಖಿಸಿದ್ದಾರೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ದೇಶದ ಕೋವಿಡ್ ಸೋಂಕಿತರ ಆಸ್ಪತ್ರೆ ಸ್ಥಿತಿ-ಗತಿ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಕೋವಿಡ್ ಮೊದಲ ಅಲೆಗೆ ಹೋಲಿಕೆ ಮಾಡಿದರೆ 2ನೇ ಅಲೆ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಆಳುವ ಯೋಗ್ಯತೆ ಇಲ್ಲದಿದ್ದರೆ ಹೊರಟುಬಿಡಿ ಪ್ಲೀಸ್…
ಮೊದಲ ಅಲೆಯ ಅವಧಿಯಲ್ಲಿ 2020ರ ಸೆಪ್ಟೆಂಬರ್‌ನಲ್ಲಿ 23,000 ಜನರು ದೇಶಾದ್ಯಂತ ಐಸಿಯುನಲ್ಲಿದ್ದರು. 4000 ಜನರು ವೆಂಟಿಲೇಟರ್‌ನಲ್ಲಿದ್ದರು. ಸುಮಾರು 40 ಸಾವಿರ ಜನರಿಗೆ ಆಕ್ಸಿಜನ್ ವ್ಯವಸ್ಥೆ ಬೇಕಾಗಿತ್ತು.
ಮೊದಲ ಅಲೆಗೆ ಹೋಲಿಕೆ ಮಾಡಿದರೆ 2ನೇ ಅಲೆಯಲ್ಲಿ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 3.65 ಪಟ್ಟು ಹೆಚ್ಚಾಗಿದೆ. ಐಸಿಯುಗೆ ದಾಖಲಾಗುವ ಸೋಂಕಿತರ ಪ್ರಮಾಣ 2 ಪಟ್ಟು ಹೆಚ್ಚಳವಾಗಿದೆ. ವೆಂಟಿಲೇಟರ್ ಮೇಲಿನ ಅವಲಂಬನೆ 3.68ರಷ್ಟು ಹೆಚ್ಚಳವಾಗಿದೆ.