ದ್ವೇಷ ಕಾರುವ ಚರ್ಚೆ ನಡೆಸುವ 14 ಆಂಕರ್‌ಗಳನ್ನು ಬಹಿಷ್ಕರಿಸಿದ ‘ಇಂಡಿಯಾ’ ಒಕ್ಕೂಟ

ನವದೆಹಲಿ: ವಿಪಕ್ಷಗಳ ಒಕ್ಕೂಟ ಇಂಡಿಯಾ ತನ್ನ ಮೊದಲ ಸಮನ್ವಯ ಸಮಿತಿ ಸಭೆ ಬುಧವಾರ ನಡೆಸಿತ್ತು. ಇದಾಗಿ ಒಂದು ದಿನದಲ್ಲಿ ಒಕ್ಕೂಟದ ಉಪ ಸಮಿತಿಯಾದ ಮಾಧ್ಯಮ ಸಮಿತಿಯು ದೇಶದ ಕೆಲವು ಪ್ರಚೋದನಕಾರಿ ಕಾರ್ಯಕ್ರಮ ನಡೆಸುವ ನ್ಯೂಸ್‌ ಆಂಕರ್‌ಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಒಟ್ಟು 14 ಪರ್ತಕರ್ತರ ಪಟ್ಟಿಯನ್ನು ಸಮಿತಿಯು ಗುರುವಾರ ಬಿಡುಗಡೆ ಮಾಡಿದ್ದು, ಅವರ ಕಾರ್ಯಕ್ರಮಗಳಿಗೆ ತಮ್ಮ ಪ್ರತಿನಿಧಿಯನ್ನು ಕಳುಹಿಸುವುದಿಲ್ಲ ಎಂದು ಹೇಳಿದೆ. ಬಹಿಷ್ಕಾರ

ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, “ನಾವು ಭಾರವಾದ ಹೃದಯದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಈ ಯಾವುದೇ ಆಂಕರ್‌ಗಳನ್ನು ನಾವು ವಿರೋಧಿಸುವುದಿಲ್ಲ. ಈ ಯಾವುದೇ ನಿರೂಪಕರನ್ನು ನಾವು ದ್ವೇಷಿಸುವುದಿಲ್ಲ. ಆದರೆ, ನಾವು ನಮ್ಮ ದೇಶವನ್ನು ಹೆಚ್ಚು ಪ್ರೀತಿಸುತ್ತೇವೆ. ನಾವು ನಮ್ಮ ಭಾರತವನ್ನು ಪ್ರೀತಿಸುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊನೆಗೂ ಸಂಸತ್ತಿನ ವಿಶೇಷ ಅಧಿವೇಶನದ ಅಜೆಂಡಾ ಬಹಿರಂಗಪಡಿಸಿದ ಸರ್ಕಾರ; ಏನೇನಿದೆ ಇಲ್ಲಿದೆ ಮಾಹಿತಿ

ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ವಿಷಯ ಪ್ರಕಟಿಸಿದ್ದಾರೆ. “ಇಂಡಿಯಾ ಒಕ್ಕೂಟದ ಪಕ್ಷಗಳು ಯಾವ ಆಂಕರ್‌ಗಳ ಕಾರ್ಯಕ್ರಮಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಬಾರದು ಎಂದು ನಿರೂಪಕರ ಹೆಸರುಗಳನ್ನು ನಿರ್ಧರಿಸಲು ಒಕ್ಕೂಟದ ಸಮನ್ವಯ ಸಮಿತಿಯು ಮಾಧ್ಯಮದ ಉಪ ಸಮಿತಿಗೆ ಅಧಿಕಾರ ನೀಡಿದೆ” ಎಂದು ಅವರು ಹೇಳಿದ್ದಾರೆ.

ಎಎಪಿ ನಾಯಕ ರಾಘವ್ ಚಡ್ಡಾ ಬುಧವಾರ, “ನಮ್ಮ ಒಕ್ಕೂಟದ ಪಕ್ಷಗಳ ನಾಯಕರು ಯಾವ ಯಾವ ಟಿವಿ ನಿರೂಪಕರ ಕಾರ್ಯಕ್ರಮಗಳಿಗೆ ಭಾಗವಹಿಸಬಾರದು ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲು ನಾವು ನಮ್ಮ ಮಾಧ್ಯಮ ಸಮಿತಿಗೆ ಅಧಿಕಾರ ನೀಡಿದ್ದೇವೆ. ಕೆಲವು ನಿರೂಪಕರು ಪ್ರಚೋದನಕಾರಿ ಚರ್ಚೆಗಳನ್ನು ನಡೆಸುತ್ತಾರೆ. ನಾವು ಅವರ ಪಟ್ಟಿಯನ್ನು ತಯಾರಿಸುತ್ತೇವೆ. ಇಂಡಿಯಾ ಒಕ್ಕೂಟದ ಪಕ್ಷಗಳು ಅವರ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸುತ್ತಾರೆ” ಎಂದು ಹೇಳಿದ್ದರು.

ಸಮನ್ವಯ ಸಮಿತಿಯ ಮೊದಲ ಸಭೆ ನವದೆಹಲಿಯ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ನಡೆಯಿತು.

ಅಮನ್ ಚೋಪ್ರ, ಪ್ರಾಚಿ ಪರಾಶರ್, ರುಬಿಕಾ ಲಿಕಾಯತ್, ಚಿತ್ರಾ ತ್ರಿಪಾಠಿ, ಸುಧೀರ್ ಚೌದರಿ, ಅಮಿಶ್ ದೇವಗನ್, ಅರ್ನಬ್ ಗೋಸ್ವಾಮಿ, ನವಿಕಾ ಕುಮಾರ್, ಆನಂದ್ ನರಸಿಂಹನ್, ಗೌರವ್ ಸಾವಂತ್, ಅದಿತಿ ತ್ಯಾಗಿ, ಸುಶಾಂತ್ ಸಿನ್ಹಾ, ಅಶೋಕ್ ಶ್ರೀವಾತ್ಸವ್ ಮತ್ತು ಶಿವ ಅರೋರ್ ಅವರು ಈ ಪಟ್ಟಿಯಲ್ಲಿ ಇದ್ದಾರೆ.

ವಿಡಿಯೊ ನೋಡಿ: ನಾವು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಎದೆ ತಟ್ಟಿಕೊಳ್ಳಬಹುದೆ? ಡಾ. ರಹಮತ್ ತರೀಕೆರೆ ವಿಶ್ಲೇಷಣೆಯಲ್ಲಿ

 

Donate Janashakthi Media

Leave a Reply

Your email address will not be published. Required fields are marked *