ಮುಂಬೈ: ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ತನ್ನ ಮೂರನೇ ಸಭೆಯನ್ನು ಇಲ್ಲಿ ಶುಕ್ರವಾರ ನಡೆಸಿದ್ದು, 13 ಸದಸ್ಯರಿರುವ ಜಂಟಿ ಸಮನ್ವಯ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಸಭೆಯು 2024ರ ಸೆಪ್ಟೆಂಬರ್‌ನಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವ ನಿರ್ಣಯವನ್ನು ಅಂಗೀಕರಿಸಿದ್ದು, ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆ ವ್ಯವಸ್ಥೆಯನ್ನು ತಕ್ಷಣವೇ ಮತ್ತು ಕೊಡು-ಕೊಳ್ಳುವಿಕೆಯ ಸಹಕಾರ ಮನೋಭಾವದಿಂದ ತೆಗೆದುಕೊಳ್ಳಲಾಗುವುದು ಎಂದು ತೀರ್ಮಾನಿಸಲಾಗಿದೆ. ಆದರೆ, ಒಕ್ಕೂಟದ ರಾಷ್ಟ್ರೀಯ ಸಂಚಾಲಕ ಯಾರು ಎಂಬುವುದು ಇನ್ನೂ ನಿರ್ಧರಿಸಿಲ್ಲ.
“ನಾವು, ಇಂಡಿಯಾ ಪಕ್ಷಗಳು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಟ್ಟಿಗೆ ಸ್ಪರ್ಧಿಸಲು ಈ ಮೂಲಕ ಸಂಕಲ್ಪ ಮಾಡಿದ್ದೇವೆ. ವಿವಿಧ ರಾಜ್ಯಗಳಲ್ಲಿ ಸೀಟು ಹಂಚಿಕೆಗಳನ್ನು ತಕ್ಷಣವೇ ಪ್ರಾರಂಭಿಸಲಾಗುವುದು ಮತ್ತು ಕೊಡು-ಕೊಳ್ಳುವಿಕೆಯ ಸಹಕಾರದ ಮನೋಭಾವದಲ್ಲಿ ಶೀಘ್ರವಾಗಿ ಅದನ್ನು ನಿರ್ಧರಿಸಲಾಗುವುದು” ಎಂದು ನಿರ್ಣಯವು ಹೇಳಿದೆ.
ಸಾರ್ವಜನಿಕ ಕಾಳಜಿ ಮತ್ತು ಪ್ರಾಮುಖ್ಯತೆಯ ಆಧಾರದ ಮೇಲೆ ಇಂಡಿಯಾ ಒಕ್ಕೂಟದ ಪಕ್ಷಗಳು ದೇಶದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ರ‍್ಯಾಲಿಗಳನ್ನು ಆದಷ್ಟು ಬೇಗ ಆಯೋಜಿಸಲಿವೆ ಎಂದು ನಿರ್ಣಯ ಹೇಳಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬುರ್ಖಾ ಧರಿಸಿ ಮಹಿಳಾ ವಾಶ್‌ರೂಮ್‌ನಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಈ ವ್ಯಕ್ತಿ ಮುಸ್ಲಿಂ ಅಲ್ಲ
“ನಾವು ಇಂಡಿಯಾ ಪಕ್ಷಗಳು, ವಿವಿಧ ಭಾಷೆಗಳಲ್ಲಿ ‘ಭಾರತ ಒಗ್ಗೂಡುತ್ತದೆ, ಭಾರತ ಗೆಲ್ಲುತ್ತದೆ’ ಎಂಬ ಥೀಮ್‌ನೊಂದಿಗೆ ನಮ್ಮ ಸಂಬಂಧಿತ ಸಂವಹನ, ಮಾಧ್ಯಮ ಕಾರ್ಯತಂತ್ರಗಳು ಹಾಗೂ ಪ್ರಚಾರಗಳನ್ನು ಸಂಘಟಿಸಲು ಈ ಮೂಲಕ ಸಂಕಲ್ಪ ಮಾಡುತ್ತೇವೆ” ಎಂದು ನಿರ್ಣಯವು ಹೇಳಿದೆ.
ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ಎನ್‌ಸಿಪಿಯ ಶರದ್ ಪವಾರ್, ಆರ್‌ಜೆಡಿಯ ತೇಜಸ್ವಿ ಯಾದವ್, ಜೆಐಎಂಎಸ್ ಹೇಮಂತ್ ಸೊರೆನ್, ಡಿಎಂಕೆಯ ಎಂ.ಕೆ. ಸ್ಟಾಲಿನ್, ತೃಣಮೂಲ ಕಾಂಗ್ರೆಸ್‌ನ ಅಭಿಷೇಕ್ ಬ್ಯಾನರ್ಜಿ, ಎಎಪಿಯ ರಾಘವ್ ಚಡ್ಡಾ, ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್, ಜನತಾದಳ ಯುನೈಟೆಡ್‌ನ ಲಲ್ಲನ್ ಸಿಂಗ್, ಸಿಪಿಐಯ ಡಿ. ರಾಜಾ, ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತು ಶಿವಸೇನೆ(ಯುಬಿಟಿ) ಸಂಜಯ್ ರಾವತ್ ಸೇರಿ 13 ಸದಸ್ಯರ ಜಂಟಿ ಸಮನ್ವಯ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜಂಟಿ ಸಮನ್ವಯ ಸಮಿತಿಗೆ 2024 ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ಸಮಸ್ಯೆ, ಸಾಮಾನ್ಯ ಕಾರ್ಯಕ್ರಮದ ಕರಡು, ಜಂಟಿ ಪ್ರಚಾರ, ರಾಷ್ಟ್ರೀಯ, ಪ್ರಾದೇಶಿಕ ಅಥವಾ ರಾಜ್ಯ ಮಟ್ಟದಲ್ಲಿ ವಿವಿಧ ಪಕ್ಷಗಳೊಂದಿಗೆ ಸಂಪರ್ಕ ಸಾಧಿಸುವುದು ಸೇರಿದಂತೆ ನಿರ್ಣಾಯಕ ಕಾರ್ಯಸೂಚಿಯನ್ನು ಸಹ ವಹಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆಂದು ವರದಿಯಾಗಿದೆ.
ಇಂಡಿಯಾ ಒಕ್ಕೂಟದ ಸಮಾನ ಮನಸ್ಕ ಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ 2024ರ ನಿರ್ಣಾಯಕ ಲೋಕಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಗೆಲ್ಲುವುದನ್ನು ತಡೆಯಲು ಒಗ್ಗೂಡಿವೆ. ಜಂಟಿ ವಿರೋಧ ಪಕ್ಷದ ಮೊದಲ ಸಭೆ ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಎರಡನೇ ಸಭೆ ಜುಲೈ 17-18 ರಂದು ಬೆಂಗಳೂರಿನಲ್ಲಿ ನಡೆಯಿತು.