ಶಾಲಾ ಶಿಕ್ಷಣದಲ್ಲಿ ತ್ರಿಭಾಷ ಬದಲು ಬಹುಭಾಷಾ ಸೂತ್ರ ಜಾರಿ: ಪಾಫ್ರೆ ಅಭಿಪ್ರಾಯ

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳ ತಾಯ್ನುಡಿ ಅಥವಾ ದೇಶೀಯ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದರಿಂದ ಮಕ್ಕಳ ಭಾಷಾ ಕಲಿಕೆಗೆ ಮಾತ್ರವಲ್ಲದೆ ಸೃಜನಶೀಲ ಕಲಿಕೆಗೂ ಕೂಡ ದೊಡ್ಡ ಹಿನ್ನೆಡೆಯಾಗಿದೆಯೆಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ( ಪಾಫ್ರೆ ) ಅಭಿಪ್ರಾಯಪಡುತ್ತದೆ ಎಂದು ನಿರಂಜನಾರಾಧ್ಯ .ವಿ.ಪಿ ಹೇಳಿದ್ದಾರೆ. ಶಾಲಾ

ಮಕ್ಕಳ ಭಾಷಾ ಬೆಳವಣಿಗೆ ಮತ್ತು ಗುಣಾತ್ಮಕ ಕಲಿಕೆಗೆ ಒತ್ತು ನೀಡುವ ಹಾಗು ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ರಾಜ್ಯಗಳಿಗೆ ಒಪ್ಪಿಗೆಯಾಗುವ ಒಂದು ಸಮಗ್ರ ಬಹು ಭಾಷಾ ನೀತಿಯನ್ನು ರೂಪಿಸಿ ಜಾರಿಗೊಳಿಸುವ ಬದಲು, ಒಂದು ಭಾಷೆಯ ಹೇರಿಕೆಗೆ ಅನುವುಮಾಡುವ ತ್ರಿಭಾಷಾ ಸೂತ್ರವನ್ನು ಮುಂದು ಮಾಡಿಕೊಂಡು ರಾಜಕಾರಣ ಮಾಡುತ್ತಿರುವ ಕೇಂದ್ರದ ಕ್ರಮವನ್ನು ಪಾಫ್ರೆ ಬಲವಾಗಿ ಖಂಡಿಸುತ್ತದೆ. ಶಾಲಾ

ದಕ್ಷಿಣದ ರಾಜ್ಯಗಳು ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳದಿರುವುದಕ್ಕೆ ಬಲವಾದ ಕಾರಣಗಳಿವೆ. ತ್ರಿಭಾಷಾ ನೀತಿಯೂ ಹೊಸದೇನಲ್ಲ. ಅದು ದೀರ್ಘಕಾಲದಿಂದ ಜಾರಿಯಲ್ಲಿರುವ ರಾಜ್ಯಗಳಲ್ಲಿಯೂ ಸಹ ಹತ್ತು – ಹಲವು ಸಮಸ್ಯೆಗಳಿವೆ . ಉತ್ತರದ ಹಿಂದಿ ವಲಯದಲ್ಲಿ, ಸಂವಿಧಾನದ ಎಂಟನೇ ಷೆಡ್ಯೂಲ್‌ ನಲ್ಲಿರುವ ಯಾವುದಾದರೊಂದು ದಕ್ಷಿಣ ರಾಜ್ಯದ ಆಧುನಿಕ ಸಮಕಾಲೀನ ಭಾಷೆಯನ್ನು ಮಕ್ಕಳಿಗೆ ಪರಿಚಯಿಸಿದ ಉದಾಹರಣೆಗಳೂ ಬಹಳ ವಿರಳ. ಶಾಲಾ

ಇದನ್ನೂ ಓದಿ: ಹಸಿರು ಉಸಿರಿನ ನಡುವೆ ಅಕ್ಷರ ಬಿತ್ತಿದ ʼ ನಿರಂಜನ ʼ

ದಕ್ಷಿಣದ ಭಾಷೆಗಳನಲ್ಲದಿದ್ದರೂ, ಉತ್ತರ ಭಾರತದ ಭಾಷೆಗಳೇ ಆದ ಕಾಶ್ಮೀರಿ, ಪಂಜಾಬಿ ಅಥವಾ ಈಶಾನ್ಯ ಭಾರತದ ಅಸ್ಸಾಮಿ, ಬಂಗಾಳಿ ,ಒರಿಯಾ ಇತ್ಯಾದಿ ಭಾಷೆಗಳನ್ನು ಕನಿಷ್ಠ ಮೂರನೇ ಭಾಷೆಯನ್ನಾಗಿ ಅಳವಡಿಸಿಕೊಂಡ ಸರ್ಕಾರಿ ಅಥವಾ ಖಾಸಗಿ ಶಾಲೆಗಳ ಉದಾಹರಣೆಗಳೂ ಸಹ ಬಹಳ ವಿರಳ. ಹೀಗಿರುವಾಗ, ತ್ರಿಭಾಷಾ ಸೂತ್ರದ ಇಂದಿನ ವಾಸ್ತವಿಕ ಅಗತ್ಯವನ್ನು ಮರುಪರಿಶೀಲಿಸಬೇಕಿದೆ. ತಮಿಳುನಾಡಿನಲ್ಲಿ ಹಲವು ದಶಕಗಳಿಂದ ದ್ವಿಭಾಷಾ ನೀತಿ ಜಾರಿಯಲ್ಲಿದೆ ಅಲ್ಲಿನ ಕಲಿಕಾ ವ್ಯವಸ್ಥೆ ಉತ್ತಮವಾಗಿಯೇ ಇದೆ ಎಂದರು. ಶಾಲಾ

ಸ್ವಾತಂತ್ರ್ಯೋತ್ತರ ನಂತರ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಭಾಷಾ ಕಲಿಕೆ ಮತ್ತು ಭಾಷಾ ಮಾಧ್ಯಮ ಒಂದು ವಿವಾದಾತ್ಮಕ ವಿಷಯವಾಗಿ ಉಳಿದಿದೆ. ಇದು ಬಗೆಹರಿಯದಿರಲು ಮುಖ್ಯ ಕಾರಣವೆಂದರೆ, ಸಮಸ್ಯೆಯನ್ನು ಗ್ರಹಿಸುವಲ್ಲಿ ನಾವು ಸೋತಿರುವುದು. ಭಾಷೆಯನ್ನು ಕೇವಲ ಕಲಿಕಾ ಮಾಧ್ಯಮವಾಗಿ ಗ್ರಹಿಸಲು ಬಡಿದಾಡುತ್ತಿದ್ದೇವೆಯೇ ಹೊರತು , ಬಾಲ್ಯದಲ್ಲಿ ಮಗು ತಾನು ಯೋಚಿಸುವ, ಮಾತನಾಡುವ ಮತ್ತು ಅಭಿವ್ಯಕ್ತಪಡಿಸುವ ಒಂದು ಸಾಧನವನ್ನಾಗಿಯಲ್ಲ. ಶಾಲಾ

ಮಕ್ಕಳು ತಮ್ಮ ಸುತ್ತಲಿನ ಜಗತ್ತನ್ನು ಅನ್ವೇಷಿಸಲು ಮತ್ತು ಸಮುದಾಯದೊಂದಿಗೆ ಬೆರೆಯಲು ತಮ್ಮ ಭಾಷೆಯನ್ನು ಬಳಸುತ್ತಾರೆ ಎಂಬ ಮೂಲಭೂತ ಕಲ್ಪನೆಯನ್ನು ಒಳಮಾಡಿಕೊಳ್ಳಲು ನಮ್ಮ ಶಿಕ್ಷಣ ನೀತಿಗಳು ಸೋತಿವೆ ಎಂಬುದು ಸಾಬೀತಾಗಿದೆ . ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಈ ವಿಷಯವನ್ನು ಮನದಟ್ಟು ಮಾಡಿಕೊಟ್ಟ ನಂತರವೂ ಗೊಂದಲ ಮುಂದುವರೆದಿರುವುದಕ್ಕೆ ಪಾಫ್ರೆ ವಿಷಾದಿಸುತ್ತದೆ. ಶಾಲಾ

ತಪ್ಪು ಗ್ರಹಿಕೆ ಮತ್ತು ತಪ್ಪು ನಿರ್ದೇಶಿತ ತ್ರಿಭಾಷಾ ನೀತಿಯು ದಕ್ಷಿಣದ ಪ್ರತಿಯೊಬ್ಬ ವ್ಯಕ್ತಿಯೂ ಹಿಂದಿ ಕಲಿಯಲು ಒಪ್ಪುತ್ತಾನೆ ಎಂದು ತಪ್ಪಾಗಿ ಭಾವಿಸಿತು.ಅದರಿಂದ , ಅವರಿಗೆ ಯಾವ ಪ್ರಯೋಜನ ಇರಬಹುದೆಂಬ ಕನಿಷ್ಠ ಚಿಂತನೆಯೂ ನಡೆಯಲಿಲ್ಲ . ತ್ರಿಭಾಷಾ ಸೂತ್ರ ಈಶಾನ್ಯ ಭಾರತವನ್ನು ಪರಿಗಣಿಸಲೇ ಇಲ್ಲ. ದಕ್ಷಿಣ ಭಾರತದಲ್ಲಿ ಹಿಂದಿ ಶಿಕ್ಷಕರಿರುವಂತೆ ,ಉತ್ತರ ಭಾರತದ ಶಾಲೆಗಳಲ್ಲಿ ದಕ್ಷಿಣ ಭಾರತದ ಭಾಷೆಗಳ ಯಾವುದೇ ಶಿಕ್ಷಕರು ಇಲ್ಲದಿರುವುದು ತ್ರಿಭಾಷಾ ಸೂತ್ರದ ದಯನೀಯ ಸೋಲಿಗೆ ಕೈಗನ್ನಡಿ. ಶಾಲಾ

ಜೊತೆಗೆ , ಕೇವಲ ಅಂಕಗಳಿಕೆಗಾಗಿ ಸಂಸ್ಕೃತವನ್ನು ಮೂರನೆಯ ಭಾಷೆಯೆನ್ನುವುದು ತ್ರಿಭಾಷಾ ಸೂತ್ರವನ್ನು ಅಣಕಿಸುತ್ತದೆ. ದಕ್ಷಿಣ ಭಾರತದ ಜನರು ತಮ್ಮ ರಾಜ್ಯ/ಪ್ರಾದೇಶಿಕ ಭಾಷೆಯ ಜೊತೆಗೆ ಇಂಗ್ಲಿಷ್ ಮತ್ತು ಹಿಂದಿಯನ್ನು ಕಲಿಯಲು ಆದ್ಯತೆ ನೀಡಿದರು. ಆದರೆ, ಉತ್ತರ ಭಾರತ ತ್ರಿಭಾಷಾ ನೀತಿಗೆ ತದ್ವಿರುದ್ಧವಾಗಿ ನಡೆಯಿತು. ಈ ಬೆಳವಣಿಗೆಯ ಪರಿಣಾಮ ಏನಾಯಿತೆಂದರೆ, ಇಂಗ್ಲಿಷ್ ಅಮಲು ಮತ್ತಷ್ಟು ತೀವ್ರಗೊಂಡು, ಬಹುತೇಕ ಎಲ್ಲಾ ರಾಜ್ಯಗಳು ಯಾವುದೇ ನುರಿತ ಶಿಕ್ಷಕರು ಅಥವಾ ಸಾಮಗ್ರಿಗಳಿಲ್ಲದೆ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಮುಂದಾದವು. ಕರ್ನಾಟಕ ಇದಕ್ಕೆ ಹೊರತಲ್ಲ . ಇದರಿಂದ ಮಕ್ಕಳ ಶಿಕ್ಷಣದ ಒಟ್ಟು ಗುಣಮಟ್ಟ ಗಣನೀಯವಾಗಿ ಕುಸಿಯಿತಲ್ಲದೆ, ಭಾಷಾ ಕಲಿಕೆ ಅರೆಬರೆಯಾಗಿದೆ . ಶಾಲಾ

ವಾಸ್ತವಿಕವಾಗಿ ನೋಡುವುದಾದರೆ, ನಮ್ಮ ಶಿಕ್ಷಣ ವ್ಯವಸ್ಥೆ ಭಾರತದ ಬಹುಭಾಷಾ ನೀತಿಯಲ್ಲಿ ನೆಲೆಗೊಳ್ಳಬೇಕು. ತರಗತಿ ಕೋಣೆಗಳಲ್ಲಿನ ಭಾಷಾ ವೈವಿಧ್ಯತೆಯನ್ನು ಗುರುತಿಸಿ ಅದಕ್ಕೆ ಪೂರಕವಾದ ಭಾಷಾ ಸೂತ್ರವನ್ನು ಕಂಡುಕೊಳ್ಳಬೇಕು. ಈ ದಿಕ್ಕಿನಲ್ಲಿ ಕಲಿಕೆಯನ್ನು ಪುನರ್‌ ವ್ಯಾಖ್ಯಾನಿಸಬೇಕು. ಶಾಲಾ

ಜಗತ್ತಿನ ಸುತ್ತ ಒಮ್ಮೆ ಎಚ್ಚರಿಕೆಯಿಂದ ನೋಡಿದಾಗ ಬಹುಭಾಷಾ ಕಲಿಕಾ ಸೂತ್ರದ ಮೂಲಕ ಬಹುತ್ವ ಮತ್ತು ಬಹುಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಲವು ಉದಾಹರಣೆಗಳು ನಮಗೆ ಕಾಣುತ್ತವೆ. ಈಗಲಾದರು, ತ್ರಿಭಾಷಾ ಸೂತ್ರದ ರಾಜಕೀಯವನ್ನು ಪಕ್ಕಕ್ಕಿಟ್ಟು , ಮಕ್ಕಳ ಕಲಿಕೆ ಮತ್ತು ಸೃಜನಾತ್ಮಕತೆಗೆ ಒತ್ತು ನೀಡುವ ಒಂದು ಸಮಗ್ರ ಹೊಸ ಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವ ತುರ್ತು ಅಗತ್ಯವಿದೆ.

ಈ ವಿಷಯ ಕೇಂದ್ರ ಶಿಕ್ಷಣ ಸಲಹಾ ಮಂಡಳಿಯಲ್ಲಿ (CABE) ವಿಸ್ತ್ರುತವಾಗಿ ಚರ್ಚೆಯಾಗಬೇಕಿದೆ. ಇಲ್ಲವಾದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯ ಹಾಗು ಭಾಷಾ ಕಲಿಕೆ ಪಕ್ಷರಾಜಕಾರಣದ ಸ್ವಾರ್ಥದಲ್ಲಿ ಸೊರಗುವ ಸಾಧ್ಯತೆ ದಟ್ಟವಾಗಿದೆ ಎಂದು ಪಾಫ್ರೆ ಅಭಿಪ್ರಾಯಪಡುತ್ತದೆ.

ಇದನ್ನೂ ನೋಡಿ: ತ್ರಿಭಾಷ ಸೂತ್ರ ಮತ್ತು ಕಲಿಕಾ ಮಾಧ್ಯಮ – ನಿರಂಜನಾರಾಧ್ಯ.ವಿ.ಪಿJanashakthi Media

Donate Janashakthi Media

Leave a Reply

Your email address will not be published. Required fields are marked *