ಅಭಿವೃದ್ಧಿಶೀಲ ದೇಶಗಳ ಖನಿಜ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸುವ ಕುಟಿಲ ತಂತ್ರಗಳು ಸಾಮ್ರಾಜ್ಯಶಾಹಿಯ ಇತಿಹಾಸದಲ್ಲಿ ಅತ್ಯಂತ ಕ್ರೂರ ಘಟನೆಗಳಿಗೆ ಕಾರಣವಾಗಿವೆ. ಇದನ್ನು ʼಸಂಪನ್ಮೂಲ ಶಾಪʼ ಎಂದು ತಪ್ಪಾಗಿ ವರ್ಣಿಸಲಾಗುತ್ತದೆ. ಏಕೆಂದರೆ, ಅದು ಜನತೆಯ ಗಮನವನ್ನು ಈ ವಿದ್ಯಮಾನದ ಸಾಮಾಜಿಕ ಸ್ವರೂಪದಿಂದ ಬೇರೆಡೆಗೆ ತಿರುಗಿಸುತ್ತದೆ. ಈ ವಿದ್ಯಮಾನಕ್ಕೆ ನಮ್ಮ ನೆರೆಯ ದೇಶವಾದ ಮ್ಯಾನ್ಮಾರ್ ಒಂದು ಸ್ಪಷ್ಟ ಉದಾಹರಣೆ. ಇಪ್ಪತ್ತನೇ ಶತಮಾನದ ಅಂತ್ಯದಲ್ಲಿ ನವ–ಉದಾರವಾದಿ ನೀತಿಗಳನ್ನು ಅಳವಡಿಸಿಕೊಂಡದ್ದರಿಂದಾಗಿ ಅನೇಕ ದೇಶಗಳಲ್ಲಿ ಖನಿಜ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಮತ್ತೊಮ್ಮೆ ಬಹುರಾಷ್ಟ್ರೀಯ ಕಾರ್ಪೊರೇಟ್ಗಳಿಗೆ ವಹಿಸಿಕೊಡಲಾಗುತ್ತಿದೆ. ಇದರಿಂದಾಗಿ ಇದು ವರ್ಗ ಸಂಘರ್ಷದ ಒಂದು ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಖನಿಜ
ಪ್ರೊ. ಪ್ರಭಾತ್ ಪಟ್ನಾಯಕ್
ಅನು : ಕೆ.ಎಂ.ನಾಗರಾಜ್
ಬಂಡವಾಳಶಾಹಿ ವ್ಯವಸ್ಥೆಯು ಜಾಗತಿಕವಾಗಿ ವ್ಯಾಪಿಸಿರುವ ಸನ್ನಿವೇಶದಲ್ಲಿ, ‘ಜಾಗತಿಕ’ ದಕ್ಷಿಣದ (ಅಭಿವೃದ್ಧಿಶೀಲ ದೇಶಗಳ ಪ್ರದೇಶ) ಒಂದು ದೇಶವೊ ಅಥವಾ ಒಂದು ಪ್ರದೇಶವೂ ಕೂಡ ಖನಿಜ ಸಂಪದ್ಭರಿತವಾಗಿದ್ದರೆ, ಅದೇ ಅಲ್ಲಿನ ಜನರಿಗೆ ಕಷ್ಟ ಕೋಟಲೆಗಳ ಮೂಲವೂ ಆಗಬಹುದು. ವಿಪರ್ಯಾಸವೆಂದರೆ, ಬಂಡವಾಳಶಾಹಿಯ ತವರುಮನೆಯಾದ ‘ಜಾಗತಿಕ ಉತ್ತರ’ವು (ಅಭಿವೃದ್ಧಿ ಹೊಂದಿದ ದೇಶಗಳ ಪ್ರದೇಶ) ಚಾರಿತ್ರಿಕವಾಗಿ ಖನಿಜ ಸಂಪನ್ಮೂಲಗಳ ಕೊರತೆಯಿರುವ ಪ್ರದೇಶವಾಗಿದೆ. ಈ ಮಾತು ಕೈಗಾರಿಕಾ ಬಂಡವಾಳಶಾಹಿಯ ಪ್ರವರ್ತಕ ದೇಶವಾದ ಬ್ರಿಟನ್ನ ವಿಷಯದಲ್ಲಿ ಎಷ್ಟು ಸತ್ಯವೋ, ‘ಜಾಗತಿಕ ಉತ್ತರ’ದ ಏಕೈಕ ಏಷ್ಯನ್ ಸದಸ್ಯ ದೇಶವಾದ ಜಪಾನ್ನ ವಿಷಯದಲ್ಲೂ ಅಷ್ಟೇ ಸತ್ಯ. ಈ ಸಂದರ್ಭದಲ್ಲಿ ಒಂದು ವಾಸ್ತವ ಸಂಗತಿಯನ್ನು ಹೇಳುವುದಾದರೆ, ಅಗತ್ಯ ಮೂಲ ಸರಕುಗಳ ಹುಡುಕಾಟ, ಅದರಲ್ಲೂ ವಿಶೇಷವಾಗಿ ‘ಜಾಗತಿಕ ಉತ್ತರ’ದ “ಸಮೃದ್ಧಿ”ಯನ್ನು ಮುಂದುವರೆಸಿಕೊಂಡು ಹೋಗಲು ಬೇಕಾಗುವ ಅತ್ಯಗತ್ಯ ಖನಿಜಗಳ ಹುಡುಕಾಟವೇ ಸಾಮ್ರಾಜ್ಯಶಾಹಿಗೆ ಒಂದು ಪ್ರಬಲ ಪ್ರೇರಕ ಶಕ್ತಿ.
ವಾಣಿಜ್ಯ ಬಳಕೆಯ ಯಾವುದೇ ಒಂದು ನಿರ್ದಿಷ್ಟ ಖನಿಜವು ‘ಜಾಗತಿಕ ದಕ್ಷಿಣ’ದ ದೇಶವೊಂದರಲ್ಲಿ ಸಿಗುತ್ತದೆ ಎಂಬುದು ಕಂಡುಬಂದರೆ, ಆ ಖನಿಜ ಸಂಪತ್ತನ್ನು ಹೊರತೆಗೆಯಲು ‘ಜಾಗತಿಕ ಉತ್ತರ’ದ ಬಹುರಾಷ್ಟ್ರೀಯ ಕಂಪನಿಗಳು ಆ ದೇಶದಲ್ಲಿ ಹಠಾತ್ತಾಗಿ ಪ್ರತ್ಯಕ್ಷವಾಗುತ್ತವೆ. ಖನಿಜ ಸಂಪತ್ತನ್ನು ಹೊರತೆಗೆದ ಕಾರಣದಿಂದ ಆ ದೇಶದ ಜಿಡಿಪಿ ಏರಿಕೆಯಾಗುತ್ತದೆ. ಒಂದಿಷ್ಟು ವರ್ಷಗಳ ಕಾಲ ಉನ್ನತ ಮಟ್ಟದ ಜಿಡಿಪಿ ಬೆಳವಣಿಗೆ ಕಂಡುಬರುತ್ತದೆ. ಆಗ ಆ ದೇಶವನ್ನು ರಫ್ತು-ಪ್ರಧಾನ ಅಭಿವೃದ್ಧಿಯ ಒಂದು ಅತ್ಯುತ್ತಮ ಉದಾಹರಣೆ ಎಂಬುದಾಗಿ ಜಗತ್ತಿನ ಮುಂದೆ ಸಾಮ್ರಾಜ್ಯಶಾಹಿ ಸಂಸ್ಥೆಗಳು ಬಿಂಬಿಸುತ್ತವೆ. ಆದರೆ, ಆ ದೇಶದಲ್ಲಿ, ಮತ್ತು ಖನಿಜ ವಲಯದಲ್ಲೂ ಕೂಡ ಹೆಚ್ಚೇನೂ ಉದ್ಯೋಗಾವಕಾಶಗಳು ಸೃಷ್ಟಿಯಾಗಿರುವುದಿಲ್ಲ. ಮತ್ತು, ಸೃಷ್ಟಿಯಾದ ಒಂದು ಸಣ್ಣ ಸಂಖ್ಯೆಯ ಉದ್ಯೋಗಗಳು, ಆ ದೇಶದಲ್ಲಿ ಸಂಭವಿಸಿದ ಅಪ-ಕೈಗಾರಿಕೀಕರಣದಿಂದಾಗಿ (deindustrialization) ನಿರುದ್ಯೋಗಿಗಳಾದವರ ಸಂಖ್ಯೆಗೆ ಹೋಲಿಸಿದರೆ ಅತ್ಯಲ್ಪವಾಗಿರುತ್ತವೆ. ಅದಕ್ಕಿಂತಲೂ ಮಿಗಿಲಾಗಿ, ಈ ಖನಿಜ ಅಭಿವೃದ್ಧಿ ಕಾರ್ಯಗಳು ಜನನಿಬಿಡ ವಸತಿ ಪ್ರದೇಶಗಳಲ್ಲಿ, ವಿಶೇಷವಾಗಿ ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶಗಳಲ್ಲಿ ನಡೆಯುತ್ತವೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಸ್ಥಳಾಂತರಗೊಳ್ಳಬೇಕಾಗುತ್ತದೆ. ಖನಿಜ ಸಂಪನ್ಮೂಲದಿಂದ ಸೃಷ್ಟಿಯಾದ ಆದಾಯದ ಒಂದು ಬಹು ದೊಡ್ಡ ಪಾಲು ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತದೆ ಮತ್ತು ಅದನ್ನು ಅವು ತಮ್ಮ ದೇಶಕ್ಕೆ ಸಾಗಿಸುತ್ತವೆ. ಆದ್ದರಿಂದ, ಈ ಖನಿಜ ಹೊರತೆಗೆದ ಪರಿಣಾಮವಾಗಿ ಜನತೆಗೆ ಒದಗುವ ಪ್ರಯೋಜನಗಳು ಸೀಮಿತವಾಗಿರುತ್ತವೆ. ಖನಿಜ ಸಂಪನ್ಮೂಲಗಳನ್ನು ಹೊರ ದೇಶಗಳಿಗೆ ಸಾಗಿಸಲು ಅಗತ್ಯವಿರುವ ಮೂಲಸೌಕರ್ಯ ನಿರ್ಮಾಣವನ್ನು ಹೊರತುಪಡಿಸಿದರೆ, ಅರ್ಥವ್ಯವಸ್ಥೆಯ ಇತರ ವಲಯಗಳ ಅಭಿವೃದ್ಧಿಯ ವಿಷಯದ ಮಟ್ಟಿಗೆ ಹೇಳುವುದಾದರೆ, ಈ ಖನಿಜ ಸಂಪತ್ತನ್ನು ಹೊರತೆಗೆದ ಪರಿಣಾಮವಾಗಿ ದೇಶದ ಜನ ಸಾಮಾನ್ಯರಿಗೆ ದೊರಕುವ ಪ್ರಯೋಜನ ಅತ್ಯಲ್ಪವೇ. ಖನಿಜ
“ಸಂಪನ್ಮೂಲ ಶಾಪ” ಅಲ್ಲ – ಜನರ ಲೂಟಿ
ಆನಂತರ ಮುಂದೊಂದು ದಿನ ಈ ಖನಿಜ ಸಂಪನ್ಮೂಲಗಳು ಬರಿದಾಗುತ್ತವೆ. ಅಬ್ಬರದ ಪ್ರಚಾರ ಪಡೆದ “ಅಭಿವೃದ್ಧಿ” ಕೊನೆಗೊಳ್ಳುತ್ತದೆ. ಆಗ ಆ ದೇಶವು ಕೇವಲ ಮೊದಲಿದ್ದ ಸ್ಥಿತಿಗೆ ಮರಳುತ್ತದೆ ಎಂಬುದು ಮಾತ್ರವಲ್ಲ, ಆ ಮಧ್ಯಂತರದ ಅವಧಿಯಲ್ಲಿ ಅದು ತನ್ನ ಖನಿಜ ಸಂಪತ್ತನ್ನು ಕಳೆದುಕೊಂಡಿರುತ್ತದೆ. ಖನಿಜ ಸಂಪತ್ತನ್ನು ಹೊರ ದೇಶಗಳಿಗೆ ರಫ್ತು ಮಾಡುವುದಕ್ಕಾಗಿ ನಿರ್ಮಿಸಿದ ಮೂಲಸೌಕರ್ಯಗಳ ನಿರ್ವಹಣೆಯೂ ಕಷ್ಟಕರವಾಗುವುದರಿಂದ ಅವೂ ಸಹ ಶಿಥಿಲಗೊಳ್ಳುತ್ತವೆ. ಬರಿದಾಗುವ ಮುನ್ನ ಹೊರ ತೆಗೆದ ಖನಿಜ ಸಂಪತ್ತಿನಿಂದ ದೇಶದ ಜನರಿಗೆ ಯಾವುದೇ ಪ್ರಯೋಜನವಾಗಿರುವುದಿಲ್ಲ. ಬದಲಿಗೆ, ಇದ್ದದ್ದನ್ನೂ ಇಲಿ ಕಚ್ಚಿಕೊಂಡು ಹೋಯಿತು ಎನ್ನುವ ರೀತಿಯಲ್ಲಿ ಇದ್ದ ಬದ್ದ ಖನಿಜ ಸಂಪತ್ತನ್ನು ಕಳೆದುಕೊಳ್ಳುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇಲ್ಲಿ ಜನರ ಲೂಟಿಯೇ ಆಗಿರುತ್ತದೆ.
ಖನಿಜ ಸಂಪನ್ಮೂಲದಿಂದ ಸೃಷ್ಟಿಯಾದ ಆದಾಯದ ಒಂದು ಬಹು ದೊಡ್ಡ ಪಾಲು ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತದೆ ಮತ್ತು ಅದನ್ನು ಅವು ತಮ್ಮ ದೇಶಕ್ಕೆ ಸಾಗಿಸುತ್ತವೆ. ಆದ್ದರಿಂದ, ಈ ಖನಿಜ ಹೊರತೆಗೆದ ಪರಿಣಾಮವಾಗಿ ಜನತೆಗೆ ಒದಗುವ ಪ್ರಯೋಜನಗಳು ಸೀಮಿತವಾಗಿರುತ್ತವೆ.ಮುಂದೊಂದು ದಿನ ಈ ಖನಿಜ ಸಂಪನ್ಮೂಲಗಳು ಬರಿದಾಗುತ್ತವೆ. ಅಬ್ಬರದ ಪ್ರಚಾರ ಪಡೆದ “ಅಭಿವೃದ್ಧಿ” ಕೊನೆಗೊಳ್ಳುತ್ತದೆ. ಆಗ ಆ ದೇಶವು ಕೇವಲ ಮೊದಲಿದ್ದ ಸ್ಥಿತಿಗೆ ಮರಳುತ್ತದೆ ಎಂಬುದು ಮಾತ್ರವಲ್ಲ, ಆ ಮಧ್ಯಂತರದ ಅವಧಿಯಲ್ಲಿ ಅದು ತನ್ನ ಖನಿಜ ಸಂಪತ್ತನ್ನು ಕಳೆದುಕೊಂಡಿರುತ್ತದೆ.ಸಂಕ್ಷಿಪ್ತವಾಗಿ ಹೇಳುವುದಾದರೆ, ಇಲ್ಲಿ ಜನರ ಲೂಟಿಯೇ ಆಗಿರುತ್ತದೆ.
ಇದನ್ನೂ ಓದಿ : ಎನ್ಡಿಎ ಮಿತ್ರಪಕ್ಷಗಳಿಗೂ ತಟ್ಟಿದ ಎಸ್ಐಆರ್ ವಿರೋಧಿ ಹೋರಾಟದ ಕಾವು!
ಈ ವಿದ್ಯಮಾನವನ್ನು ಕೆಲವರು “ಸಂಪನ್ಮೂಲ ಶಾಪ” ಎಂದು ಕರೆಯುತ್ತಾರೆ. ಆದರೆ ಹೀಗೆಂದು ಅದನ್ನು ಗುರುತಿಸುವುದು ತಪ್ಪಾಗಿದೆ, ಏಕೆಂದರೆ, ಅದು ಜನತೆಯ ಗಮನವನ್ನು ಈ ವಿದ್ಯಮಾನದ ಸಾಮಾಜಿಕ ಸ್ವರೂಪದಿಂದ ಬೇರೆಡೆಗೆ ತಿರುಗಿಸುತ್ತದೆ. ಈ ವಿದ್ಯಮಾನಕ್ಕೆ ಒಂದು ಉದಾಹರಣೆಯನ್ನು ಹುಡುಕಲು ನಾವು ಬಹಳ ದೂರ ಹೋಗಬೇಕಿಲ್ಲ. ನಮ್ಮ ನೆರೆಯ ದೇಶವಾದ ಬರ್ಮಾ (ಅಥವಾ ಮ್ಯಾನ್ಮಾರ್) ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಅದು ಅಮೂಲ್ಯ ಲೋಹಗಳಿಂದ ಸಮೃದ್ಧವಾಗಿತ್ತು ಮಾತ್ರವಲ್ಲದೆ, ಅಪಾರ ತೈಲ ಸಂಪತ್ತನ್ನೂ ಹೊಂದಿತ್ತು. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಿಂದಲೇ ಬರ್ಮಾದಿಂದ ತೈಲದ ರಫ್ತು ಆರಂಭಗೊಂಡಿತು. ಬ್ರಿಟಿಷ್ ಒಡೆತನದ ‘ಬರ್ಮಾ ಆಯಿಲ್ ಕಂಪನಿ’ ಮತ್ತು ಅಮೆರಿಕ ಒಡೆತನದ ‘ಸ್ಟ್ಯಾಂಡರ್ಡ್ ಆಯಿಲ್ ಕಂಪನಿ’ಗಳು ತೈಲವನ್ನು ಎಷ್ಟು ತೀವ್ರವಾಗಿ ಹೊರತೆಗೆದವು ಎಂದರೆ, 1948ರಲ್ಲಿ ಬರ್ಮಾ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ಅದರ ತೈಲ ಸಂಪತ್ತು ಬಹುತೇಕ ಬರಿದಾಗಿತ್ತು. ಇತ್ತೀಚೆಗೆ ಪತ್ತೆಯಾದ ಅನಿಲವನ್ನು ಬರ್ಮಾ ಈಗ ರಫ್ತು ಮಾಡುತ್ತಿದೆಯಾದರೂ, ತನ್ನ ಇಂಧನ ತೈಲ ಅಗತ್ಯಗಳ ಶೇ. 90ಕ್ಕೂ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಹಾಗಾಗಿ ಬರ್ಮಾ ಜಾಗತಿಕ ತೈಲ ಬೆಲೆ ಏರಿಕೆಯಿಂದ ತೀವ್ರವಾಗಿ ತೊಂದರೆಗೊಳಗಾಗುವ ಸ್ಥಿತಿಯಲ್ಲಿದೆ ಮತ್ತು ವಿಶ್ವಸಂಸ್ಥೆಯ ವರ್ಗೀಕರಣದ ಪ್ರಕಾರ “ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ” ಪಟ್ಟಿಯಲ್ಲಿ ಬರ್ಮಾ ಸೇರಿದೆ.
ಜಾಗತಿಕ ದಕ್ಷಿಣದ ದೇಶಗಳಲ್ಲಿ ಕಂಡುಬರುವ ಖನಿಜ ಸಂಪತ್ತಿನ ಭರಾಟೆಯು ಒಂದು ಅಲ್ಪಕಾಲಿಕ ಸ್ವರೂಪದ್ದಾದ ಕಾರಣದಿಂದಾಗಿ, ಖನಿಜ ಹೊರತೆಗೆಯಲು ಬಹುರಾಷ್ಟ್ರೀಯ ಕಂಪನಿಗಳು ಮಾಡುವ ಹೂಡಿಕೆಯನ್ನು ಖ್ಯಾತ ಅರ್ಥಶಾಸ್ತ್ರಜ್ಞೆ ಜೋನ್ ರಾಬಿನ್ಸನ್ ಅವರು ‘ನೇರ ವಿದೇಶಿ ಹೂಡಿಕೆಯ ಅತ್ಯಂತ ಕೆಟ್ಟ ರೂಪ’ ಎಂದು ಕರೆಯುತ್ತಾರೆ: ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡಿದಾಗ ಕನಿಷ್ಠಪಕ್ಷ ಆ ದೇಶದಲ್ಲಿ ಕೆಲವಾದರೂ ಆಸ್ತಿಗಳನ್ನು ಅವು ಸೃಷ್ಟಿಸುತ್ತವೆ; ಆದರೆ ಖನಿಜ ಹೊರತೆಗೆಯುವಲ್ಲಿ ಹೂಡಿಕೆ ಮಾಡಿದಾಗ, ಯಾವುದೇ ಶಾಶ್ವತ ಆಸ್ತಿಯನ್ನೂ ನಿರ್ಮಿಸದೇ ದೇಶದ ನವೀಕರಿಸಲಾಗದ ಸಂಪನ್ಮೂಲಗಳನ್ನು ಮಾತ್ರವೇ ಕೊಂಡೊಯ್ಯುತ್ತವೆ ಮತ್ತು ಅಂತಿಮವಾಗಿ ಆ ದೇಶವನ್ನು ಇನ್ನಷ್ಟು ಬಡತನಕ್ಕೆ ತಳ್ಳುತ್ತವೆ.
ರಾಷ್ಟ್ರೀಕರಣ ಮತ್ತು ಸಾಮ್ರಾಜ್ಯಶಾಹಿ ಹಸ್ತಕ್ಷೇಪ
ಜಾಗತಿಕ ದಕ್ಷಿಣದ ಅನೇಕ ದೇಶಗಳಲ್ಲಿ ವಸಾಹತುಶಾಹಿ ರಾಜಕೀಯವಾಗಿ ಅಂತ್ಯಗೊಂಡ ನಂತರ ಖನಿಜ ಸಂಪನ್ಮೂಲಗಳನ್ನು ರಾಷ್ಟ್ರೀಕರಣಗೊಳಿಸಿದ್ದರೆ ಮತ್ತು ಖನಿಜ ಹೊರತೆಗೆಯುವ ಉದ್ದೇಶಕ್ಕಾಗಿ ಸಾರ್ವಜನಿಕ ವಲಯದ ಕಂಪನಿಗಳನ್ನು ಸ್ಥಾಪಿಸಿದ್ದರೆ, ಅದೇನೂ ಆಶ್ಚರ್ಯ ಪಡಬೇಕಾದ ಸಂಗತಿಯಲ್ಲ. ಬಹುರಾಷ್ಟ್ರೀಯ ಕಂಪನಿಗಳಿಂದ ದೇಶದ ಸರ್ಕಾರದ ಬೊಕ್ಕಸಕ್ಕೆ ಬರುವ ಖನಿಜ ಆದಾಯದ ಪಾಲನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ, ಅವುಗಳಿಗೆ ಸಾರ್ವಜನಿಕ ವಲಯದಿಂದ ಎದುರಾಗಬಹುದಾದ ಪೈಪೋಟಿಯ ಬೆದರಿಕೆಯನ್ನು ಆಗಾಗ ಬಳಸಿಕೊಳ್ಳಲಾಗುತ್ತಿತ್ತು. ಈಕ್ವೆಡಾರ್ನಲ್ಲಿ ಎಡಪಂಥೀಯ ನಾಯಕ ರಾಫೆಲ್ ಕೊರಿಯಾ ಅಧ್ಯಕ್ಷರಾಗಿ ಆಯ್ಕೆಯಾದಾಗ, ಅವರು ಖನಿಜ ಸಂಪನ್ಮೂಲಗಳಿಂದ ಬರುವ ಆದಾಯದಲ್ಲಿ, ಅದರಲ್ಲೂ ವಿಶೇಷವಾಗಿ ತೈಲ ವಲಯದಲ್ಲಿ ಸರ್ಕಾರದ ಪಾಲನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಂಡರು.
ಆದರೆ, ಖನಿಜ ಸಂಪನ್ಮೂಲಗಳನ್ನು ರಾಷ್ಟ್ರೀಕರಣಗೊಳಿಸುವ ದೇಶವು ಒಂದು ಅಪಾಯವನ್ನು ಎದುರಿಸಬೇಕಾಗುತ್ತದೆ. ಅಂದರೆ, ಅಂತಹ ದೇಶದ “ರಾಷ್ಟ್ರವಾದಿ” ಆಳ್ವಿಕೆಯನ್ನು ಉರುಳಿಸಲು ಬಹುರಾಷ್ಟ್ರೀಯ ಕಂಪನಿಗಳು ಸಂಚು ರೂಪಿಸುತ್ತವೆ. ಇಂಥಹ ದಂಗೆಯ ಪ್ರಯತ್ನಗಳು ವಿಫಲವಾದ ಸಂದರ್ಭಗಳಲ್ಲಿ, ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಸಾಮ್ರಾಜ್ಯಶಾಹಿ ಶಕ್ತಿಗಳು ನೇರವಾಗಿ ಸಶಸ್ತ್ರ-ಹಸ್ತಕ್ಷೇಪ ಮಾಡುತ್ತವೆ.
ಇಂದಿನ ದಿನಗಳಲ್ಲಿ ಅಂತಹ ನೇರ ಸಶಸ್ತ್ರ ಹಸ್ತಕ್ಷೇಪದ ಗುರಿಯಾಗಿರುವ ಅತ್ಯುತ್ತಮ ಉದಾಹರಣೆಯೆಂದರೆ ಇರಾನ್. ಆಳ್ವಿಕೆ ಬದಲಾವಣೆಯನ್ನು ತರುವ ಸ್ಪಷ್ಟ ಉದ್ದೇಶದಿಂದ ಅಮೆರಿಕ ಮತ್ತು ಇಸ್ರೇಲ್ ಆ ದೇಶದ ಮೇಲೆ ದಾಳಿ ನಡೆಸಿದವು. ಆಧುನಿಕ ಕಾಲಮಾನದಲ್ಲಿ ಅಭೂತಪೂರ್ವವೆನಿಸುವಂತಹ ಕ್ರೌರ್ಯವನ್ನು ಪ್ರದರ್ಶಿಸಿ ಇರಾನ್ನ ಇಡೀ ನಾಯಕತ್ವವನ್ನೇ ಹತ್ಯೆ ಮಾಡಲಾಯಿತು. ಆಳ್ವಿಕೆ ಬದಲಾವಣೆಯ ಹೆಸರಿನ ಈ ದಾಳಿಯು ಅನೇಕ ಉದ್ದೇಶಗಳಿಂದ ಕೂಡಿದ್ದರೂ, ಅಮೆರಿಕದ ಕಂಪನಿಗಳಿಗಾಗಿ ಇರಾನ್ನ ತೈಲ ಸಂಪನ್ಮೂಲವನ್ನು ವಶಪಡಿಸಿಕೊಳ್ಳುವ ಆರ್ಥಿಕ ಉದ್ದೇಶವನ್ನು ಡೊನಾಲ್ಡ್ ಟ್ರಂಪ್ ಎಂದೂ ಸಾರ್ವಜನಿಕರಿಂದ ಮುಚ್ಚಿಡಲಿಲ್ಲ. 1951ರಲ್ಲಿ ಮೊಹಮ್ಮದ್ ಮೊಸಾದೆಗ್ ಪ್ರಧಾನ ಮಂತ್ರಿಯಾಗಿದ್ದಾಗ ಇರಾನ್ ತನ್ನ ತೈಲ ಸಂಪನ್ಮೂಲವನ್ನು ರಾಷ್ಟ್ರೀಕರಣಗೊಳಿಸಿದ್ದಕ್ಕಾಗಿ 1953ರಲ್ಲಿ ಬ್ರಿಟಿಷ್ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಗಳು ನಡೆಸಿದ ದಂಗೆಯಲ್ಲಿ ಮೊಸಾದೆಗ್ ರನ್ನು ಅಧಿಕಾರದಿಂದ ಕಿತ್ತು ಹಾಕಲಾಯಿತು. ಆದರೂ, ಪ್ರಸ್ತುತ ಇಸ್ಲಾಮಿಕ್ ಆಳ್ವಿಕೆ ಅಡಿಯಲ್ಲೂ, ತೈಲ ಸಂಪನ್ಮೂಲವು ಸಾರ್ವಜನಿಕ ವಲಯದಲ್ಲೇ ಉಳಿದುಕೊಂಡಿದೆ. ಇರಾನ್ನ ತೈಲ ಸಂಪನ್ಮೂಲವು ಸಾರ್ವಜನಿಕ ವಲಯದಲ್ಲೇ ಉಳಿದುಕೊಂಡಿರುವ ಪ್ರಮುಖ ಕಾರಣಗಳಲ್ಲಿ, ಖನಿಜಗಳ ಮೇಲಿನ ಸಾಮೂಹಿಕ ಒಡೆತನವು ಇಸ್ಲಾಮಿಕ್ ಕಾನೂನುಗಳಿಗೆ ಅನುಗುಣವಾಗಿದೆ, ಖಾಸಗಿ ಒಡೆತನವಲ್ಲ ಎಂಬ ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞರ ಅಭಿಪ್ರಾಯವೂ ಒಂದು. ಖನಿಜ
ಖನಿಜ ಸಂಪನ್ಮೂಲಗಳನ್ನು ರಾಷ್ಟ್ರೀಕರಣಗೊಳಿಸುವ ದೇಶವು ಒಂದು ಅಪಾಯವನ್ನು ಎದುರಿಸಬೇಕಾಗುತ್ತದೆ. ಅಂದರೆ, ಅಂತಹ ದೇಶದ “ರಾಷ್ಟ್ರವಾದಿ” ಆಳ್ವಿಕೆಯನ್ನು ಉರುಳಿಸಲು ಬಹುರಾಷ್ಟ್ರೀಯ ಕಂಪನಿಗಳು ಸಂಚು ರೂಪಿಸುತ್ತವೆ. ಇಂಥಹ ದಂಗೆಯ ಪ್ರಯತ್ನಗಳು ವಿಫಲವಾದ ಸಂದರ್ಭಗಳಲ್ಲಿ, ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಸಾಮ್ರಾಜ್ಯಶಾಹಿ ಶಕ್ತಿಗಳು ನೇರವಾಗಿ ಸಶಸ್ತ್ರ-ಹಸ್ತಕ್ಷೇಪ ಮಾಡುತ್ತವೆ. ಇಂದಿನ ದಿನಗಳಲ್ಲಿ ಅಂತಹ ನೇರ ಸಶಸ್ತ್ರ ಹಸ್ತಕ್ಷೇಪದ ಗುರಿಯಾಗಿರುವ ಅತ್ಯುತ್ತಮ ಉದಾಹರಣೆಯೆಂದರೆ ಇರಾನ್.
ಜಾಗತಿಕ ದಕ್ಷಿಣದ ಖನಿಜ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸುವ ಕುಟಿಲ ತಂತ್ರಗಳು ಸಾಮ್ರಾಜ್ಯಶಾಹಿಯ ಇತಿಹಾಸದಲ್ಲಿ ಅತ್ಯಂತ ಕ್ರೂರ ಘಟನೆಗಳಿಗೆ ಕಾರಣವಾಗಿವೆ. ವಸಾಹತುಶಾಹಿ ಕಾಲದಲ್ಲಿ ‘ಬೆಲ್ಜಿಯನ್ ಕಾಂಗೋ’ ಎಂದು ಕರೆಯಲ್ಪಡುತ್ತಿದ್ದ ಪ್ರದೇಶಕ್ಕೆ ಸಂಬಂಧಿಸಿದ ಘಟನೆಯು ಇಂತಹ ಕುಖ್ಯಾತ ಘಟನೆಗಳಲ್ಲಿ ಒಂದು. ಜನಪ್ರಿಯ ನಾಯಕ ಪ್ಯಾಟ್ರಿಸ್ ಲುಮುಂಬಾ ಅವರ ನೇತೃತ್ವದಲ್ಲಿ ಕಾಂಗೋ ಸ್ವಾತಂತ್ರ್ಯವನ್ನು ಪಡೆದುಕೊಂಡಾಗ, ಆ ಸ್ವತಂತ್ರ ದೇಶವು ನೈಸರ್ಗಿಕ ಸಂಪನ್ಮೂಲಗಳ ನಿಯಂತ್ರಣವನ್ನು ಸಾಮ್ರಾಜ್ಯಶಾಹಿಯ ಹಿಡಿತದಿಂದ ತನ್ನ ವಶಕ್ಕೆ ತೆಗೆದುಕೊಳ್ಳಬಹುದು ಎಂಬ ಭಯ ಸಾಮ್ರಾಜ್ಯಶಾಹಿ ವಲಯಗಳಲ್ಲಿ ಉಂಟಾಯಿತು. ಸ್ವಾತಂತ್ರ್ಯದ ನಂತರ ಸಾಮ್ರಾಜ್ಯಶಾಹಿ ಶಕ್ತಿಗಳ ಕುಮ್ಮಕ್ಕಿನಿಂದ ಆ ದೇಶದಲ್ಲಿ ನಡೆದ ಬೆಳವಣಿಗೆಗಳೆಂದರೆ, ಖನಿಜ ಸಂಪದ್ಭರಿತ ಕಟಂಗಾ ಪ್ರಾಂತ್ಯವು ದೇಶದಿಂದ ಪ್ರತ್ಯೇಕಗೊಳ್ಳುವ ಘೋಷಣೆ ಮತ್ತು ಪ್ಯಾಟ್ರಿಸ್ ಲುಮುಂಬಾ ಅವರ ಹತ್ಯೆ.
ಇಪ್ಪತ್ತನೇ ಶತಮಾನದ ಅಂತ್ಯದಲ್ಲಿ ಇಡೀ ಜಗತ್ತು ನವ-ಉದಾರವಾದಿ ನೀತಿಗಳನ್ನು ಅಳವಡಿಸಿಕೊಂಡ ವಿದ್ಯಮಾನವು, ಜಾಗತಿಕ ದಕ್ಷಿಣದಲ್ಲಿ ರಾಜಕೀಯ ಸ್ವಾತಂತ್ರ್ಯದ ಮೂಲಕ ಸಂಭವಿಸಿದ ಆರ್ಥಿಕವಾಗಿ ವಸಾಹತುಶಾಹಿಯನ್ನು ಕೊನೆಗೊಳಿಸುವ ಪ್ರಕ್ರಿಯೆಯ ವಿರುದ್ಧವೇ ನಡೆಸಿದ ಒಂದು ರೀತಿಯ ಪ್ರತಿ-ಕ್ರಾಂತಿಯಂತಿದೆ. ಅನೇಕ ದೇಶಗಳಲ್ಲಿ ಮತ್ತು ಪ್ರದೇಶಗಳಲ್ಲಿ, ಖನಿಜ ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಮತ್ತೊಮ್ಮೆ ಬಹುರಾಷ್ಟ್ರೀಯ ಕಾರ್ಪೊರೇಟ್ಗಳಿಗೆ ವಹಿಸಿಕೊಡಲಾಯಿತು. ಉದಾಹರಣೆಗೆ, ಭಾರತದ ಖನಿಜ ಸಂಪನ್ಮೂಲಗಳ ಮೇಲಿನ ಸಂಪೂರ್ಣ ನಿಯಂತ್ರಣ ಪ್ರಭುತ್ವದ ಕೈಯಲ್ಲಿರುತ್ತದೆ ಎಂಬ ಭರವಸೆಯನ್ನು ವಸಾಹತುಶಾಹಿ-ವಿರೋಧಿ ಹೋರಾಟದ ಸಂದರ್ಭದಲ್ಲಿ ನೀಡಲಾಗಿತ್ತು ಮತ್ತು ಸ್ವಾತಂತ್ರ್ಯದ ನಂತರ ಅದು ರಾಷ್ಟ್ರದ ನೀತಿಯೂ ಆಗಿತ್ತು. ಆದರೆ, ಆ ನೀತಿಯನ್ನು 1993ರಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ದೇಶೀಯ ಕಾರ್ಪೊರೇಟ್ ಬಂಡವಾಳಕ್ಕೆ ಈ ವಲಯದಲ್ಲಿ ಕಾರ್ಯಾಚರಣೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ಮೂಲಕ ಕೈಬಿಡಲಾಯಿತು. ಈ ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಹೊಂದಿದ್ದ ಅಲ್ಪ ಸ್ವಲ್ಪ ನಿಯಂತ್ರಣವನ್ನೂ (ಉದಾಹರಣೆಗೆ, ವಿದೇಶಿ ಬಂಡವಾಳ ಹೂಡಿಕೆಯ ಮೇಲೆ ಇದ್ದ ಶೇ. 50ರ ಮಿತಿ) 2006ರಲ್ಲಿ ಕೈಬಿಡುವ ಮೂಲಕ ಸಂಪೂರ್ಣ ವಿದೇಶಿ ಒಡೆತನದ ಕಂಪನಿಗಳ ಕಾರ್ಯಾಚರಣೆಗೆ ಅವಕಾಶವನ್ನು ಕಲ್ಪಿಸಿಕೊಡಲಾಯಿತು.
ʼಅಭಿವೃದ್ಧಿʼಯ ಹೆಸರಲ್ಲಿ ʼಆದಿಮʼ ಲೂಟಿ
ಈ ಎಲ್ಲ ಕ್ರಮಗಳನ್ನು ಅನುಸರಿಸಿದುದರಿಂದ ಆಗಿದ್ದೇನೆಂದರೆ, ದೇಶೀಯ ಕಾರ್ಪೊರೇಟ್ಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಅಪರಿಮಿತ ಗಣಿಗಾರಿಕೆ ನಡೆಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಬುಡಕಟ್ಟು ಜನಾಂಗದವರನ್ನು ಅವರ ಪರಂಪರಾಗತ ನೆಲೆಗಳಿಂದ ಹೊರದಬ್ಬುವ ನಿರ್ದಯ ಮತ್ತು ಕೊಳ್ಳೆ ಹೊಡೆಯುವ ಕ್ರಮಗಳನ್ನು ಕೈಗೊಳ್ಳಲಾಯಿತು. ಇಂತಹ ಎಲ್ಲ ಪ್ರಕರಣಗಳಲ್ಲಿಯೂ, ‘ಅಭಿವೃದ್ಧಿ’ಯ ಹೆಸರಿನಲ್ಲಿ ಮಾಡಿದ ಸಾಧನೆಗಳು ಸ್ಥಳೀಯ ಜನರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿವೆ. ಹಾಗೆ ನೋಡಿದರೆ ಈ ಎಲ್ಲ ಪ್ರಕರಣಗಳಲ್ಲಿ ನಡೆಯುತ್ತಿರುವುದು, ಬಂಡವಾಳದ ‘ಆದಿಮ ಸಂಗ್ರಹಣೆ’ಯ (primitive accumulation) ಪ್ರಕ್ರಿಯೆಯೇ.
ಬುಡಕಟ್ಟು ಜನಾಂಗದವರನ್ನು ಹೊರ ದಬ್ಬುವ ಮತ್ತು ಅವರ ಬಳಿ ಇದ್ದ ಚೂರು ಪಾರು ಆಸ್ತಿ-ಪಾಸಿಗಳನ್ನು ಕಿತ್ತುಕೊಳ್ಳುವ ಗಣಿಗಾರಿಕಾ ಕಂಪನಿಗಳ ವಿರುದ್ಧ ಸಿಡಿದೇಳುತ್ತಿರುವ ಜನಪರ ಚಳುವಳಿಗಳು, ವರ್ಗ ಸಂಘರ್ಷದ ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಸದಾ ದೊಡ್ಡ ಬಂಡವಾಳಗಾರರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವ ಬಿಜೆಪಿಯು ಕೇಂದ್ರದಲ್ಲಿ ಹಾಗೂ ಖನಿಜ ಸಂಪತ್ತು ಸಮೃದ್ಧವಾಗಿರುವ ಒಡಿಶಾ ರಾಜ್ಯದಲ್ಲೂ ಆಡಳಿತ ನಡೆಸುತ್ತಿದೆ. ಅದರ ನೇತೃತ್ವದ ಕೇಂದ್ರ ಸರ್ಕಾರವು ಇತ್ತೀಚೆಗೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳು ಗಣಿಗಾರಿಕೆ ನಡೆಸುವ ಕಂಪನಿಗಳ ಮೇಲೆ ತೆರಿಗೆ ವಿಧಿಸುವ ರಾಜ್ಯ ಸರ್ಕಾರದ ಅಧಿಕಾರವನ್ನು ಮಿತಿಗೊಳಿಸುತ್ತವೆ ಮತ್ತು ಗಣಿಗಾರಿಕೆಯಿಂದ ಬರುವ ಆದಾಯವನ್ನು ಕೇಂದ್ರೀಕರಣಗೊಳಿಸುತ್ತವೆ ಎಂಬುದಷ್ಟೇ ಅಲ್ಲ, ಈ ಆದಾಯದ ಹೆಚ್ಚಿನ ಭಾಗವನ್ನು ಖಾಸಗಿ ವಲಯವು ಸ್ವಾಧೀನಪಡಿಸಿಕೊಳ್ಳುವುದಕ್ಕೂ ದಾರಿ ಮಾಡಿಕೊಟ್ಟಿವೆ. ಬುಡಕಟ್ಟು ಜನಾಂಗದವರನ್ನು ಹೊರ ದಬ್ಬುವ ಮತ್ತು ಅವರ ಬಳಿ ಇದ್ದ ಚೂರು ಪಾರು ಆಸ್ತಿ-ಪಾಸಿಗಳನ್ನು ಕಿತ್ತುಕೊಳ್ಳುವ ಗಣಿಗಾರಿಕಾ ಕಂಪನಿಗಳ ವಿರುದ್ಧ ಸಿಡಿದೇಳುತ್ತಿರುವ ಜನಪರ ಚಳುವಳಿಗಳು, ವರ್ಗ ಸಂಘರ್ಷದ ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.
ನವ-ಉದಾರವಾದವು ಮುಂದಿನ ದಾರಿ ಕಾಣದ ಒಂದು ಹಂತವನ್ನು ತಲುಪಿರುವಾಗ ಮತ್ತು ನವ-ಉದಾರವಾದೀ ನೀತಿಗಳಿಗೆ ಜನಬೆಂಬಲ ಪಡೆಯಲು ಬಳಸಲಾದ ನವ-ಉದಾರವಾದಿ ‘ಸಮೃದ್ಧಿ’ಯ ಭರವಸೆಯು ಕೇವಲ ಒಂದು ಮರೀಚಿಕೆ ಎಂದು ಸಾಬೀತಾಗುತ್ತಿರುವಾಗ, ಬಂಡವಾಳದ ಆದಿಮ ಸಂಗ್ರಹಣೆಯ ಪ್ರಕ್ರಿಯೆಯು ಇನ್ನೂ ಹೆಚ್ಚು ಕೆಟ್ಟ ಸ್ವರೂಪಗಳನ್ನು ಪಡೆಯಲಿದೆ. ವೆನೆಜುವೆಲಾ ಮತ್ತು ಇರಾನ್ನಲ್ಲಿ ಹರಿಯ ಬಿಟ್ಟ ನೇರ ಆಕ್ರಮಣದಿಂದ ಹಿಡಿದು, ಜಾಗತೀಕರಣಗೊಂಡ ಬಂಡವಾಳದ ಹಿತಾಸಕ್ತಿಗಳಿಗಾಗಿ ಮತ್ತು ಬಂಡವಾಳದ ಆದಿಮ ಸಂಗ್ರಹಣೆಯ ಕಾರ್ಯಾಚರಣೆಗಾಗಿ ಇನ್ನೂ ಹೆಚ್ಚು ನಿರ್ದಯವಾಗಿ ತೊಡಗುವ ನವ-ಫ್ಯಾಸಿಸ್ಟ್ ಆಡಳಿತಗಳಿಗೆ ಬೆಂಬಲ ನೀಡುವವರೆಗೆ, ಸಾಮ್ರಾಜ್ಯಶಾಹಿಯು ಜನರೊಂದಿಗೆ ಒಂದು ನೇರವಾದ ಸಂಘರ್ಷಕ್ಕೆ ಇಳಿಯಲಿದೆ. ತನ್ನ ಅಸ್ತಿತ್ವದ ಅಂತಿಮ ಹಂತವನ್ನು ಪ್ರವೇಶಿಸುತ್ತಿರುವ ಬಂಡವಾಳಶಾಹಿಯು ಇನ್ನೂ ಹೆಚ್ಚು ದುಷ್ಟತನದಿಂದ ವರ್ತಿಸಲಿದೆ. ಈ ವಾಸ್ತವಾಂಶವನ್ನು ಜನರ ಪ್ರತಿರೋಧವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಇದನ್ನೂ ನೋಡಿ : SIR ಅಕ್ರಮ: ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಹೆಗಲು ಮುಟ್ಕೊಳೋದ್ಯಾಕೆ? Janashakthi Media
