“ಬಾಗೇಪಲ್ಲಿ” ಹೆಸರೇ ಚೆನ್ನಾಗಿತ್ತು – ಭಾಗ್ಯನಗರ ಬೇಡವಾಗಿತ್ತು

ಬಾಗೇಪಲ್ಲಿ ಬಾಗೆ ಎಂದರೆ ಕನ್ನಡ ಅರ್ಥ ಒಂದು ಬಗೆಯ ಮರ (ಬಾಗೆಮರ) – ನದಿ ತೀರದ ಜಮೀನು- ಫಲವತ್ತಾದ ಭೂ ಪ್ರದೇಶ. ಅಂದರೆ ನದಿಯ ಮುಖಜಭೂಮಿ ಎಂದರ್ಥ. ತೆಲುಗಿನಲ್ಲಿ “ಪಲ್ಲಿ” ಎಂದರೆ ಸಹಜವಾಗಿ ಕನ್ನಡದಲ್ಲಿ “ಹಳ್ಳಿ” ಎಂದರ್ಥ.

-ಎನ್. ಚಿನ್ನಸ್ವಾಮಿ ಸೋಸಲೆ

ಇನ್ನು ಮುಂದೆ ಈ ಐತಿಹಾಸಿಕ ನೆಲದ ಮಣ್ಣಿನ ಸೊಗಡಿನ ಊರು ತನ್ನ ಹೆಸರು “ಭಾಗ್ಯನಗರ ” ಎಂದು ಬದಲಾಯಿಸಿಕೊಂಡಿದೆ.

ಆದರೆ, ದಕ್ಷಿಣದ ದ್ರಾವಿಡತನದ ಪದಗಳನ್ನು ತೆಗೆದು ನಾವು ಸೇರಿಸಲು ಮುಂದಾಗಿರುವ ಪದಗಳು ಸಂಸ್ಕೃತದ್ದು. ಇದೇ ದುರಂತ. ಇದನ್ನು ಕಿಂಚಿತ್ತು ವಿರೋಧ ಮಾಡದಿರುವುದೇ ನಮ್ಮ ದುರಂತ. ಇದೇ ಜಿಲ್ಲೆಯಲ್ಲಿ ಈ ಹಿಂದೆಯೇ “ಬಾಪನಪಲ್ಲಿ” ಎಂಬ ಊರನ್ನು ಮೈಸೂರು ಒಡೆಯರ ಕಾಲದ ದಿವಾನರೊಬ್ಬರು ತಿರುಪತಿಗೆ ಹೋಗಿ ಬರುವ ದಾರಿಯಲ್ಲಿ ಈ ಬಾಪನಪಲ್ಲಿ ಸಿಗುತ್ತಿದ್ದ ಕಾರಣಕ್ಕಾಗಿ, ಈ ಹೆಸರು ಸರಿಬರದ ಕಾರಣಕ್ಕಾಗಿ ತಿರುಪತಿ ತಿಮ್ಮಪ್ಪನ ಇನ್ನೊಂದು ಹೆಸರಾದ ಶ್ರೀನಿವಾಸನ ಹೆಸರಿನಲ್ಲಿ ” ಶ್ರೀನಿವಾಸಪುರ” ಎಂದು ನಾಮಕರಣ ಮಾಡಿದರು. ದೇವರ ಹೆಸರನ್ನು ಆ ಪ್ರದೇಶಕ್ಕೆ ಇಟ್ಟ ಕಾರಣದಿಂದಾಗಿ ಅದನ್ನು ಯಾರೂ ವಿರೋಧ ಮಾಡಲೇ ಇಲ್ಲ. ತಲೆ ಬಗ್ಗಿಸಿ- ದೇಹ ಬಗ್ಗಿಸಿ ಭಕ್ತಿಯಿಂದ ಒಪ್ಪಿಕೊಂಡರು. ಬಾಗೇಪಲ್ಲಿ

ಶ್ರೀನಿವಾಸಪುರ ಎಂಬ ಹೆಸರಿನ ಬದಲಾವಣೆಗೆ ತಿರುಪತಿ ತಿಮ್ಮಪ್ಪನ ಕೃಪಾಕಟಾಕ್ಷವಿದ್ದರೆ – ಬಾಗೆಪಲ್ಲಿ ಹೆಸರಿನ ಬದಲಾವಣೆಗೆ ಸಂಸ್ಕೃತಿಕರಣದ ಕೃಪಾಕಟಾಕ್ಷವಿದೆ. ಇವೆರಡಕ್ಕೂ ವೈದಿಕಣದ ಸಾಂಸ್ಕೃತಿಕ ಐಡೆಂಟಿಟಿ ಇದೆ. ಬಾಗೇಪಲ್ಲಿ

“ಭಾಗ್ಯ” ಎಂಬುವುದು ಸಹ ಸಂಸ್ಕೃತ ಪದ. ” ನಗರ ” ಎಂಬುವುದು ಸಂಸ್ಕೃತ ಪದ. ಇವೇನ್ ‘ ಕನ್ನಡ ‘ ಪದವೂ ಅಲ್ಲ ಅಥವಾ ‘ದ್ರಾವಿಡ’ ಪದವೊ ಅಲ್ಲ. “ಬಾಗೆ” ಎಂಬುದು ಕನ್ನಡ ಪದ -“ಪಲ್ಲಿ ” ಎಂಬುವುದು ತೆಲುಗು ಪದ. ಅಂದರೆ ಇವೆರಡೂ ನಮ್ಮ ದಕ್ಷಿಣ ಭಾರತದವರು ಮಾತನಾಡುವ ಭಾಷೆಗಳ ಸುತ್ತ ಪದಗಳನ್ನು ಬೆಸೆದುಕೊಂಡಿರುವ ದ್ರಾವಿಡ ಪದಗಳು .

ಇದನ್ನೂ ಓದಿ: ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಿ: ಕರವೇ ಆಗ್ರಹ

ಸಂಸ್ಕೃತದ ನಗರಕ್ಕಿಂತ – ತೆಲುಗಿನ ‘ಪಲ್ಲಿ’ ಎಂಬ ಹೆಸರೇ ಐತಿಹಾಸಿಕತೆಯ ಹಿನ್ನೆಲೆಯಿಂದ ಮಹತ್ವದಾಗಿತ್ತು. ಈ ಭಾಗದಲ್ಲಿ ” ಪಲ್ಲಿ ” ಹೆಸರಿನಲ್ಲಿ ಅಂತ್ಯವಾಗುವ ನೂರಾರು ಗ್ರಾಮಗಳು ಇವೆ. ಏಕೆಂದರೆ, ಈ ಭಾಗವನ್ನು ಆಳ್ವಿಕೆ ಮಾಡಿದ ಶಾತವಾಹನ, ಗಂಗ, ಚೋಳ ಇನ್ನೂ ಅನೇಕ ಸಾಮ್ರಾಟರು ಹಾಗೂ ಪಾಳ್ಳೇಗಾರರು ಸಹಜವಾಗಿಯೇ ಕನ್ನಡ ತೆಲುಗು ಮಾತನಾಡುವ ದ್ವಿ- ಭಾಷಿಕರಾಗಿದ್ದರು. ಈ ಹಿನ್ನೆಲೆಯಿಂದ ” ಪಲ್ಲಿ ” ಎಂಬ ಹೆಸರಿನಿಂದಲೇ ಅನೇಕ ಶಾಸನ – ಹಸ್ತ ಪ್ರತಿಗಳನ್ನು ಬರೆಸಿ ಇದೇ ಹೆಸರಿನಿಂದ ಈ ಭಾಗದ ದ್ರಾವಿಡತನದ ಚರಿತ್ರೆಯನ್ನು ಶ್ರೀಮಂತ ಗೊಳಿಸಿದ್ದಾರೆ. ಕನ್ನಡ ತೆಲುಗು ಮಿಸ್ರಿತ ಭಾಷೆ ಪ್ರಬಲವಾಗಿ ಬೇರೂರಿರುವ ಈ ಪ್ರದೇಶಕ್ಕೆ ಸಂಸ್ಕೃತ ಭಾಷೆ ಪ್ರವೇಶ ಹಾಗೂ ಪ್ರವೇಶ ಮಾಡಿ ಬದುಕುವುದು ಕಷ್ಟವೇ ಆಗಿತ್ತು. ಬಾಗೇಪಲ್ಲಿ

ವಿಶೇಷವೆಂದರೆ… ಕೊಳ್ಳೇಗಾಲ -ಟಿ. ನರಸೀಪುರ – ಯಳಂದೂರು ಚಾಮರಾಜನಗರ , ನರಸೀಪುರ ತಾಲೂಕಿನ ನಮ್ಮ ಊರು ಸೋಸಲೆ ಕಡೆ ಸಂಸ್ಕೃತಪದ “ಶಾಲೆ”(school) ಅನ್ನುವುದಕ್ಕೆ “ಪಳ್ಳಿ” ಎಂದು ಕರೆಯುತ್ತಾರೆ. ಶಾಲೆಗೆ ಅಪ್ಪಟ ಕನ್ನಡ ಅಥವಾ ದ್ರಾವಿಡದ ಹೆಸರು “ಪಳ್ಳಿ”. ಇದು ದ್ರಾವಿಡತನದ ಭಾಷೆ. ತಮಿಳು- ಮಲಯಾಳಂ ಭಾಷೆಗಳಲ್ಲಿ ಹಾಗೂ ಅದರ ನೆರೆಯ ಪ್ರದೇಶವಾದ ಕನ್ನಡ ನಾಡಿನ ದಕ್ಷಿಣ ಭಾಗದ ಗ್ರಾಮಗಳಲ್ಲಿ ಜನರು ಎಂದಿಗೂ ಶಾಲೆಗೆ “ಪಳ್ಳಿ ” ಎಂದೆ ಕರೆಯುವುದು ಉಂಟು . (ಇವರು ಸ್ಕೂಲ್ ಅಥವಾ ಶಾಲೆ ಎಂದು ಕರೆಯುವುದಿಲ್ಲ). ಬಾಗೇಪಲ್ಲಿ

ಇಂತಹ ವಿಷಯದಲ್ಲಿ ತೆಲುಗು – ತಮಿಳು – ಕನ್ನಡ – ಮಲಯಾಳಿ ಭಾಷೆಗಳಿಗೆ ದ್ರಾವಿಡ ಸೊಗಡಿನ ಪದಗಳೊಂದಿಗೆ ಕರುಳು-ಬಳ್ಳಿ ಬೆಸೆಯುವ ಅವಿನಾಭಾವ ಸಂಬಂಧ ಇದೆ.
ಆದರೆ , ನಗರ ಎಂದರೆ ” ಅಗ್ರಹಾರ “. ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ನಾವು ಅಗ್ರಸ್ಥಾನದಲ್ಲಿ ಇದ್ದೇವೆ ಎಂದು ತಮಗೆ ತಾವೇ ಸ್ವ-ಘೋಷಿಸಿಕೊಂಡವರು ವಾಸಿಸುವ ಸ್ಥಳವೇ ಅಗ್ರಹಾರ- ಪುರ ಅಥವಾ ನಗರ. ಈ ಪದ ನಮ್ಮೊಂದಿಗೆ ಅವಿನಾಭಾವ ಸಂಬಂಧವನ್ನು ಶತಶತಮಾನಗಳಿಂದಲೂ ನಮ್ಮೊಂದಿಗೆ ಅವಿನಾಭಾವ ಭಾತೃತ್ವದ ಸಂಬಂಧವನ್ನು ಬೆಸೆಯುವುದೇ ಇಲ್ಲ. ಬಾಗೇಪಲ್ಲಿ

ರಾಮಾಯಣ- ಮಹಾಭಾರತ ಇತ್ಯಾದಿ ಪ್ರಾಚೀನ ಮಹಾ ಕಾವ್ಯಗಳಲ್ಲಿ ದಾಖಲಾಗುವ ಪುರ, ಪುರದ ವಾಸಿಗಳೆಂದರೆ ಬ್ರಾಹ್ಮಣರು. ಅವರು ವಾಸಮಾಡುವ ನೆಲೆ – ನೆಲೆಸಿರುವ ಸ್ಥಳ ಎಂದರ್ಥ. ಇವುಗಳನ್ನು ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ನಗರ – ಪುರ – ಅಗ್ರಹಾರ ಎಂದು ಕರೆಯುತ್ತಾರೆ. ಹೀಗೆ ಕರೆಸಿಕೊಳ್ಳುವುದು ಹಾಗೂ ಕರೆದುಕೊಳ್ಳುವುದು ಅವರ ಧಾರ್ಮಿಕ ಹಾಗೂ ಸಾಮಾಜಿಕ ಐಡೆಂಟಿಟಿಗೆ ಹಿನ್ನೆಲೆಯಿಂದ ಅವರಿಗೆ ಹೆಮ್ಮೆ. ಬಾಗೇಪಲ್ಲಿ

ಪಲ್ಲಿ- ಹಳ್ಳಿ – ಕೇರಿ – ದೊಡ್ಡಿ ಎಂದರೆ ಶ್ರಮದ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಹಂಬಲಿಸುವ ಜನ ವಾಸಿಸುವ ಸ್ಥಳ. ಈ ಸ್ಥಳಗಳ ಸ್ಥಳನಾಮವು ಇಲ್ಲಿನ ಮಹಾ ಸಾಧಕರ ಹೆಸರಿನೊಂದಿಗೆ ತುಳುಕು ಹಾಕೊಂಡಿರುತ್ತವೆ. ಈ ಹೆಸರುಗಳು ಇಂದಿನ ಸಂದರ್ಭದಲ್ಲಿ ಹೊಂದಿಕೊಳ್ಳದ ಕಾರಣಕ್ಕಾಗಿ ಸ್ಥಳನಾಮಗಳಿಗೆ ಮರುನಾಮಕರಣದ ಕೆಲಸವನ್ನು ಇಂದು ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ಕೆ.ಎಮ್. ದೊಡ್ಡಿ ( ಕಾಳ ಮುದ್ದೇನ ದೊಡ್ಡಿ ) ಗೆ ಮಾದಪ್ಪನ ಕಾವ್ಯದಿಂದ ಮುದಲ್ಗೊಂಡು ಟಿಪ್ಪು ಸುಲ್ತಾನ್ ಅವರ ಸೈನ್ಯದ ಚರಿತ್ರಿಯವರೆಗೂ ಮಹತ್ವದ ಸ್ಥಾನವಿದೆ. ಕಾಳಮುದ್ದಯ್ಯ ಒಬ್ಬ ಶೂದ್ರ ಸಮುದಾಯಕ್ಕೆ ಸೇರಿದ ಕಾರಣಕ್ಕಾಗಿ, ಹಾಗೂ ಹೆಸರು ಇಂದಿನ ಪರಿಸ್ಥಿತಿಗೆ ಚಂದಾಗಿ ಕಾಣುತ್ತಿಲ್ಲ ಎನ್ನುವ ಕಾರಣಕ್ಕಾಗಿ ಅದನ್ನು ಈಗ ಆ ಕ್ಷೇತ್ರದ ಎಂ ಎಲ್ ಎ – ಮಂತ್ರಿಗಳು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರು ಆಗಿದ್ದ ಈ ಭಾಗದ ಪ್ರಭಾವಿ ರಾಜಕಾರಣಿ ಜಿ ಮಾದೇಗೌಡ ಅವರು “ಭಾರತಿ ನಗರ ” ಎಂದು ನಾಮಕರಣ ಮಾಡಿದರು.

ಇವೆಲ್ಲವೂ ದ್ರಾವಿಡ ಭಾಷೆಯ ಹಾಗೂ ದ್ರಾವಿಡತನವನ್ನು ಎತ್ತಿ ಹಿಡಿದ ವ್ಯಕ್ತಿಗಳ ಹೆಸರುಗಳು. ಅಂದರೆ ಇವರೆಲ್ಲರೂ ಕೇರಿಯ ವಾಸಿಗಳು. ಊರಿನ ಅಥವಾ ನಗರದ ವಾಸಿಗಳಲ್ಲ. ಕೇರಿಯ ವಾಸಿಗಳು ಎಂದರೆ “ಕುಲ ಕಸುಬಿನಾದಾರದ ಜನ ವಾಸಿಸುವ ಪ್ರದೇಶ “. ಇವರು ವಾಸಿಸುವ ಕೇರಿಯನ್ನು ಊರು ಎಂದು ಕರೆಯುವುದಿಲ್ಲ. ಅಗ್ರಹಾರದವರ ಆಜ್ಞೆಯಂತೆ ಈ ಸ್ಥಳಗಳನ್ನು ಊರು ಎಂದು ಕರಿಯಲೊಬಾರದು. ಸಾಮಾಜಿಕ ಹಾಗೂ ಧಾರ್ಮಿಕ ಹಿನ್ನೆಲೆಯಿಂದ ಸಾಂಸ್ಕೃತಿಕವಾಗಿ ಇದು ಬಹು ಅಪರಾಧ.

“ಊರು – ಹೊಲಗೇರಿ ಒಂದು ಮಾಡಕಾಗುತ್ತಾ” ಎಂಬ ಬಹು ಪ್ರಾಚೀನ ಗಾದೆ ಮಾತೆ ಇದಕ್ಕೆ ಸಾಕ್ಷಿ . ಹಾಗೆಯೇ ಕುಂಬಾರ – ಗಾಣಿಗ – ಬೆಸ್ತ – ಅಕ್ಕಸಾಲಿಗ – ಇತ್ಯಾದಿ ಇತ್ಯಾದಿ ಜನಾಂಗದವರು ವಾಸಿಸುವ ಕೇರಿಗಳ ಮೇಲೂ ಇಂತದ್ದೇ ಊರಿನಿಂದ ಕೇರಿಯನ್ನು ಪ್ರತ್ಯೇಕವಾಗಿಡುವ ಮಾದರಿಯ ಗಾದೆಗಳು ಇಂದಿಗೂ ಜನರ ಬಾಯಿಯಲ್ಲಿ ಇವೆ.

ಆರಂಭದಲ್ಲಿ ಕನ್ನಡದ ಮೇಲೆ ” ಸಂಸ್ಕೃತ ” ಕುದುರೆ ಸವಾರಿಯನ್ನು( ಅಶ್ವಮೇಧ ಯಾಗ ) ಮಾಡಿ ಕನ್ನಡ ತನದ ಮೇಲೆ ಆಕ್ರಮಣ ಮಾಡಿದಂತೆ , ಇಂದು – ಇಂಗ್ಲೀಷ್ ಪ್ರಬಲವಾದ ಕುದುರೆ ಸವಾರಿಯನ್ನು 100 ಎಚ್ ಪಿ (ಹಾರ್ಸ್ ಪವರ್) ಮಾದರಿಯಲ್ಲಿ ಮಾಡುತ್ತಿದೆ. ಈ ಅಶ್ವವನ್ನು ಕಟ್ಟಾಕಿ ಇವರ ವಿರುದ್ಧ ಯುದ್ಧಕ್ಕೆ ನಿಂತ ಕನ್ನಡಿಗರು ಕೆಲವೇ ಕೆಲವರು ಮಾತ್ರ. ಆದರೆ ಜಯಗಳಿಸಲು ಸಾಧ್ಯವೇ ಆಗಲಿಲ್ಲ.

ಶತಶತಮಾನಗಳಿಂದ ಸಂಸ್ಕೃತ ಹಾಗೂ ಇನ್ನೂರೈವತ್ತು -ಮುನ್ನೂರು ವರ್ಷಗಳಿಂದ ಇಂಗ್ಲಿಷ್ ನಿರಂತರ ದಾಳಿಗೆ ತುತ್ತಾದ ಕನ್ನಡ , ವಿಧಿ ಇಲ್ಲದೆ ಆ ಭಾಷೆಗಳನ್ನು ತನ್ನ ಒಡಲೊಳಗೆ ಸೇರಿಸಿಕೊಂಡಿತು. ಸೇರಿಕೊಂಡ ಈ ಭಾಷೆಗಳೇ ಮೂಲ ಕನ್ನಡ ಭಾಷೆಯಾನ್ನೆ ನಾವೇ ಸೃಷ್ಟಿ ಮಾಡಿದ್ದು , ಇದಕ್ಕೆ ನಾವೇ ಅಪ್ಪ-ಅಮ್ಮ ಎಂದು ಹೇಳಿಕೊಂಡು ತಮ್ಮ ಧಾರ್ಮಿಕ ಹಿನ್ನೆಲೆಯ ದುರಂಕಾರವನ್ನು ಪ್ರದರ್ಶಿಸುತ್ತಿವೆ.

ಈ ಎರಡು ಭಾಷೆಗಳ ಅಂಕೆ-ಸಂಖ್ಯೆ ಇಲ್ಲದ ಕುದುರೆ ಸವಾರಿಯನ್ನು ಕಟ್ಟಿ ಹಾಕದೆ ಕನ್ನಡ ತನ್ನೊಳಗೆ ಸೇರಿಸಿಕೊಳ್ಳುವ ಉದಾರ ಮನೋಭಾವವನ್ನು ತೋರಿಸಿದ ಕಾರಣಕ್ಕಾಗಿ ಈಗ ” ಕನ್ನಡದ ತಾಯಿ- ತಂದೆ ” ನಾವೇ ಎಂದು ಹೇಳಿಕೊಳ್ಳುವ ಮಟ್ಟಕ್ಕೆ ಆ ಭಾಷೆಯ ಧಾರ್ಮಿಕ ಅಂದ ಅಭಿಮಾನಿಗಳು ಬಂದು ನಿಂತಿದ್ದಾರೆ ಇದು ನಮ್ಮ ನಡುವಿನ ಬಹುದೊಡ್ಡ ಸಾಂಸ್ಕೃತಿಕ ದುರಂತವೇ ಸರಿ. ಜನರ ನಡುವೆ ಶತಶತಮಾನಗಳ ಹಿಂದೆಯೇ ಮರಣ ಹೊಂದಿರುವ ಭಾಷೆಯನ್ನು ದೇವರು ಹಾಗೂ ಧರ್ಮದ ಹಿನ್ನೆಲೆಯಿಂದ ಅದನ್ನು ಮತ್ತೆ ಜೀವಂತವಾಗಿಡಲು ಮುಂದಾಗುತ್ತಿರುವುದರ ಹುನ್ನಾರವೇ ಇದು.

ಬಾಗೇಪಲ್ಲಿ

ಇದನ್ನೂ ಓದಿ : ಎಸ್‌ ಎಲ್‌ ಭೈರಪ್ಪನವರದ್ದು ಅಬೌದ್ಧಿಕ ಮಾತು: ಡಾ ಎನ್. ಚಿನ್ನಸ್ವಾಮಿ ಸೋಸಲೆ

10ನೇ ಶತಮಾನದಲ್ಲಿ ಸಂಸ್ಕೃತ ಕನ್ನಡ ಭಾಷೆ ಹಾಗೂ ಕನ್ನಡಿಗರ ಮೇಲೆ ಧಾರ್ಮಿಕ ಹಿನ್ನೆಲೆಯಿಂದಲೇ ನುಸುಳಿದ ಕಾರಣಕ್ಕಾಗಿ ಅದು ಕನ್ನಡ ನೆಲದಲ್ಲಿ ಒಂದಷ್ಟು ನೆಲೆ ಕಂಡಿತು. 12ನೇ ಶತಮಾನದ ಕನ್ನಡದ ನೆಲದಲ್ಲಿ ಉದಯಿಸಿದ ವಚನ ಚಳುವಳಿ ಹಾಗೂ ಕನ್ನಡತನದ ವಚನಕಾರರು ಸಂಸ್ಕೃತವನ್ನು ಸಂಪೂರ್ಣವಾಗಿ ನಿರಾಕರಿಸಿದರು.
ತದನಂತರ ಸಂಸ್ಕೃತ ಭಾಷೆಯು ಧರ್ಮ ಹಾಗೂ ಧರ್ಮ ನಿಯಂತ್ರಿತ ರಾಜಪ್ರಭುತ್ವದವರ ಪ್ರೋತ್ಸಾಹದಿಂದಾಗಿ ಕನ್ನಡ ಭಾಷೆಯೋಳಗೆ ಹೆಚ್ಚಿನ ಪ್ರಮಾಣದಲ್ಲಿ ನುಸುಳಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು. ಇಂತಹ ಅಸ್ತಿತ್ವದ ಉಳಿವು ಮೇಲ್ಸ್ತರದ ದೇವರ ಆಶ್ರಿತ ಮಕ್ಕಳು ಹಾಗೂ ಅಕ್ಷರವನ್ನು ಬರೆಯುವ – ಓದುವ ಜನರಲ್ಲಿ ಮಾತ್ರ ಕಂಡುಬಂದಿತೆ ಹೊರತು – ಕನ್ನಡ ಕನ್ನಡಿಗರ ಆಡುಭಾಷೆ ಹಾಗೂ ಅವರು ಪಾರಂಪರಿಕವಾಗಿ ತಮ್ಮ ಬದುಕಿನ ರೀತಿ ನೀತಿಗಳನ್ನು ಕಟ್ಟಿಕೊಂಡು ಬಂದ ಜಾನಪದದಲ್ಲಿ ಸ್ವಲ್ಪವೂ ನುಸುಳಲೇ ಇಲ್ಲ. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಜನರಾಡುವ ಕನ್ನಡ ಭಾಷೆಯಲ್ಲಿ ಇದು ಇಂದಿಗೂ ಸಹ ಸತ್ಯವಾಗಿದೆ. ಬಾಗೇಪಲ್ಲಿ

ಇಂತಹ ಧಾರ್ಮಿಕ ಹಿನ್ನೆಲೆಯ ದೇವಾಲಯಗಳು ನಿರ್ಮಾಣಗೊಂಡು – ದೇವಾಲಯದ ಸುತ್ತ – ಮುತ್ತುಲಿನ ಹಿನ್ನೆಲೆಯಿಂದಲೇ ಹಾಗೂ ಬ್ರಾಹ್ಮಣ್ಯದಿಂದಾಗಿ ಸಂಸ್ಕೃತ ಮಿಶ್ರಿತ ಸ್ಥಳನಾಮಗಳು ಹಾಗೂ ವ್ಯಕ್ತಿನಾಮಗಳು ಹೆಚ್ಚು ಕಂಡು ಬಂದವು. ಇಂತಹ ಸ್ಥಳನಾಮ ಹಾಗೂ ವ್ಯಕ್ತಿನಾಮಗಳು ಪುರಾಣದ ಹಿನ್ನೆಲೆಯಿಂದ ವೈಭವಿ ಕರೆಸಿಕೊಂಡ ಹಿನ್ನೆಲೆಯಿಂದ ದೇವರ ಸ್ಥಾನವನ್ನು ಪಡೆದು ಸುಳ್ಳೇ ಸತ್ಯವಾಗಿ ಕಂಗೊಳಿಸಿತು . ಭಾರತ ಪುರಾಣ ಚರಿತ್ರೆಯನ್ನೇ ಸತ್ಯ ಚರಿತ್ರೆ ಎಂದು ಹೇಳಲು ಮುಂದಾದ ಕಾರಣಕ್ಕಾಗಿಯೇ ಪ್ರಪಂಚದ ಮಟ್ಟಿಗೆ ಭಾರತದ ವಾಸ್ತವ ಹಿನ್ನೆಲೆಯ ಐತಿಹಾಸಿಕ ಚರಿತ್ರೆ ಸೊರಗಿತು.

ಒಂದು ನೂರು ವರ್ಷಗಳಿಂದೀಚೆಗೆ ಬೆಂಗಳೂರು ನಗರ ಹಾಗೂ ಇನ್ನಿತರೆ ನಗರಗಳ ಎಷ್ಟೋ ಪ್ರದೇಶಗಳಲ್ಲಿ ಇಂದು ಕನ್ನಡ ಸಂಪೂರ್ಣವಾಗಿ ಮಾಯಗೊಂಡು, ಕನ್ನಡದ ಹೆಸರುಗಳೇ ಇಂಗ್ಲೀಷ್ ತರ್ಜುಮೆಗೊಂಡು ಇಂಗ್ಲಿಷ್ ಪದಗಳಾಗಿ ಅನಾವರಣಗೊಂಡಿವೆ. ಈ ಕುರಿತೆ ಪ್ರತ್ಯೇಕವಾಗಿ ಬರೆಯಬಹುದು. ಇದಕ್ಕೆ ದಾಖಲೆ ಅಥವಾ ಆಕರಗಳ ಉದಾಹರಣೆ ನಿಮ್ಮ ಕಣ್ಮುಂದೆ ಇವೆ. ಈ ಪ್ರಕ್ರಿಯೆ ಗ್ರಾಮೀಣ ಪ್ರದೇಶಗಳಿಗೂ ದಾಳಿ ಮಾಡುವ ಕಾಲ ದೂರವಿಲ್ಲ.

ಈ ಹಿನ್ನೆಲೆಯಿಂದ ಎಷ್ಟೋ ಬಾರಿ ನಾವು- ನಮ್ಮಿಂದ – ನಮಗಾಗಿಯೇ ಕನ್ನಡಕ್ಕೆ ದ್ರೋಹ ಮಾಡುತ್ತಿದ್ದೇವೆ. ಹೀಗೆ ಮಾಡುತ್ತಾ ಹೋದರೆ ಮುಂದಿನ ದಿನಗಳು ಕನ್ನಡ – ಕನ್ನಡಿಗ – ಕರ್ನಾಟಕಕ್ಕೆ ಬಹು ಕಠಿಣದ ದಿನಗಳೂ ಬರಬಹುದು. ಎರಡುವರೆ ಸಾವಿರ ವರ್ಷಗಳಿಂದ ಕನ್ನಡದ ಮೇಲೆ ಅನ್ಯ ಭಾಷೆಗಳ ದಾಳಿ ಆಗುತ್ತಿದ್ದರೂ ಸಹ ಅದು ಇಂದಿಗೂ ಉಳಿದಿದೆ, ನಾಳೆಗೂ ಉಳಿಯುತ್ತದೆ ಎಂಬ ವಿತಂಡವಾದ ಬೇಡ. ಇಂದು ಎಷ್ಟೋ ಪ್ರಮುಖ ಸ್ಥಳಗಳಲ್ಲಿ ಕನ್ನಡವನ್ನು ಮಾತನಾಡುವವನು ಅಸ್ಪೃಶ್ಯನಿಗಿಂತಲೂ ಕೀಳಾಗಿದ್ದಾನೆ. ಕನ್ನಡ ಮಾಧ್ಯಮದಲ್ಲಿ ಓದಿದ್ದಾನೆ ಅಥವಾ ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಿದ್ದಾನೆ ಎನ್ನುವುದೇ ಮಾನಸಿಕ ಹಿನ್ನೆಲೆಯ ಅಸ್ಪೃಶ್ಯತೆಯ ವಾಸಿಯಾಗದ ಸೊಂಕಾಗಿ ಕಾಣಿಸುತ್ತಿದೆ. ಇದು ಹೀಗೆ ಮುಂದುವರೆದರೆ ನಮ್ಮ ಮಾತೃಭಾಷೆ ತೊಂದರೆಗೆ ಸಿಲುಕಬಹುದು ಎಂಬ ಆತಂಕವೂ ಕಾಡುತ್ತಿದೆ.

ಆದರೆ ಕೋಲಾರ ಜಿಲ್ಲೆಯ ಅಥವಾ ಬಾಗೇಪಲ್ಲಿ ಪ್ರದೇಶದ ಜನ ಯಾಕೋ ಇದರ ಕುರಿತು ಪ್ರತಿಭಟನಾತ್ಮಕವಾಗಿ ಮಾತನಾಡುತ್ತಿಲ್ಲ. ಬಹುಷ್ಯ”ಈ ಭಾಗದ ಬಹುಜನರ ಮಾತೃಭಾಷೆ ಹೆಚ್ಚಿನ ಪ್ರಮಾಣದಲ್ಲಿ ತೆಲುಗು. ಆದಕಾರಣ – ಕರ್ನಾಟಕ ಸರ್ಕಾರ ಪ್ರೀತಿಯಿಂದ ಕನ್ನಡದ ಹೆಸರನ್ನು ನಾಮಕರಣ ಮಾಡಿದೆ ” ಎಂದು ತಮಗೆ ತಾವೇ ಅರ್ಥೈಸಿಕೊಂಡು ಇದೇ ನಮ್ಮ ಕನ್ನಡದ ಮೇಲಿನ ಪ್ರೀತಿ ಎಂದು ಸುಮ್ಮನಿರಬೇಕು. ಅಥವಾ ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದುಡಿಯುವ ಜನರೇ ಇರುವ ಕಾರಣ ಅಂಥವರಿಗೆ ಇದರ ಅವಶ್ಯಕತೆಯೂ ಇಲ್ಲದಿರಬಹುದು.

ಏನೇ ಹೆಸರು ಬದಲಾವಣೆ ಆದರೂ ಸಹ – ಜನರ ಮನೆ ಹಾಗೂ ಮನಗಳಲ್ಲಿ ಮಾತ್ರ ಶಾಶ್ವತವಾಗಿ ನೆಲೆ ನಿಲ್ಲುವುದು ಮಾತ್ರ ಬಾಗೇಪಲ್ಲಿ ಎಂಬ ಹೆಸರೇ. ಬಾಗೇಪಲ್ಲಿ ಎಂಬ ಹೆಸರಿಗೆ ನನ್ನ ಬೆಂಬಲ.

ಇದನ್ನೂ ನೋಡಿ: LIVE | ನಾಡ ಉಳಿಸಿ ಸಮಾವೇಶ | ಬಲವಂತದ ಭೂ ಸ್ವಾಧೀನದ ವಿರುದ್ಧ ಅನ್ನದಾತರ ಧರಣಿ

Donate Janashakthi Media

Leave a Reply

Your email address will not be published. Required fields are marked *