- ಮೇಯರ್ ಪಟ್ಟ ಉಳಿಸಿಕೊಳ್ಳಬೇಕಾದರೆ ಟಿಆರ್‌ಎಸ್‌ಗೆ ಎಐಎಂಐಎಂ ಅಥವಾ ಬಿಜೆಪಿ ಜೊತೆ ಮೈತ್ರಿ ಅನಿವಾರ್ಯ
ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಅದ್ಬುತ ಪ್ರದರ್ಶನದ ಬಳಿಕ ಮೈತ್ರಿಯ ಅನಿವಾರ್ಯತೆ ಸೃಷ್ಟಿಯಾಗಿದೆ. ಟಿಆರ್‌ಎಸ್ ಈ ಚುನಾವಣೆಯಲ್ಲಿ 44 ಸ್ಥಾನಗಳನ್ನ ಕಳೆದುಕೊಂಡಿದ್ದು, ಅಷ್ಟೇ ಹೆಚ್ಚುವರಿ ಸ್ಥಾನ ದಕ್ಕಿಸಿಕೊಂಡಿರುವ ಬಿಜೆಪಿ ಈ ಹಿಂದಿನ ಲೆಕ್ಕಾಚಾರಗಳನ್ನ ತಲೆಕೆಳಗು ಮಾಡಿದೆ. ಬಹುಮತ ಸಿಗದ ಕಾರಣ ಆಡಳಿತಾರೂಢ ಟಿಆರ್‌ಎಸ್ ಪಕ್ಷ ಮೇಯರ್ ಪಟ್ಟ ಉಳಿಸಿಕೊಳ್ಳಬೇಕಾದರೆ ಎಐಎಂಐಎಂ ಅಥವಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಿದೆ.
150 ಸದಸ್ಯ ಬಲದ ಹೈದರಾಬಾದ್ ಪಾಲಿಕೆಯಲ್ಲಿ ಕಾರ್ಪೊರೇಟರ್ ಅಲ್ಲದೆ ಮತದಾನ ಮಾಡುವ ಹಕ್ಕಿರುವ ಶಾಸಕರು, ಸಂಸದರು ಸೇರಿ ಒಟ್ಟು 202 ಚುನಾಯಿತ ಸದಸ್ಯರಿದ್ದಾರೆ. ಯಾವುದೇ ಪಕ್ಷದ ಅಭ್ಯರ್ಥಿ ಮೇಯರ್ ಪಟ್ಟಕ್ಕೇರಲು ಇಲ್ಲಿ 102 ಮತಗಳ ಅಗತ್ಯವಿದೆ. ಟಿಆರ್‌ಎಸ್ ಕೇವಲ 55 ಸ್ಥಾನ ಗೆದ್ದಿದ್ದು, 38 ಶಾಸಕರು, ಸಂಸದರ ಬಲ ಸೇರಿ 93 ಆಗುತ್ತದೆ. ಟಿಆರ್‌ಎಸ್‌ಗೆ ಇನ್ನೂ 9 ಮತಗಳ ಕೊರತೆ ಉಂಟಾಗುತ್ತದೆ. ಹೀಗಾಗಿ, ಮೈತ್ರಿ ಅನಿವಾರ್ಯವಾಗಿದೆ.
ಚುನಾವಣಾಪೂರ್ವದಲ್ಲಿ ಟಿಆರ್‌ಎಸ್ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಿದಾಗ, ಅಸಾದುದ್ದೀನ್ ಆ ನಿರ್ಧಾರವನ್ನ ಸ್ವಾಗತಿಸಿದ್ದರು. ಈ ನಿರ್ಧಾರದಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಇತ್ತ, ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೂ ಎಐಎಂಐಎಂ ನಮ್ಮ ಉತ್ತಮ ಮಿತ್ರನಾಗಿರುತ್ತದೆ ಎಂದು ಟಿಆರ್‌ಎಸ್ ಚುನಾವಣಾ ಉಸ್ತುವಾರಿ ಆಗಿದ್ದ ಕೆ.ಟಿ.ರಾಮರಾವ್ ಹೇಳಿಕೆ ನೀಡಿದ್ದರು.
ಈಗ ಬದಲಾದ ಪರಿಸ್ಥಿತಿಯಲ್ಲಿ ಮೈತ್ರಿ ಅನಿವಾರ್ಯವಾಗಿದ್ದು, ಎರಡೂ ಪಕ್ಷಗಳ ನಡುವೆ ಮೈತ್ರಿಯ ಮಾತುಕತೆ ಮತ್ತೆ ಶುರುವಾಗುವ ಸಾಧ್ಯತೆ ಇದೆ. ಎಐಎಂಐಎಂ 44 ಸ್ಥಾನ ಗೆದ್ದಿದ್ದು, ಟಿಆರ್‌ಎಸ್‌ಗೆ ಬೆಂಬಲ ನೀಡಿದರೆ ಕೆಸಿಆರ್ ಹಾದಿ ಸುಗಮವಾಗಲಿದೆ. ಆದರೆ, ಈ ಬಗ್ಗೆ ಇನ್ನೂ ಟಿಆರ್‌ಎಸ್ ಮತ್ತು ಎಐಎಂಐಎಂ ಪಕ್ಷಗಳು ಗುಟ್ಟು ಬಿಟ್ಟುಕೊಟ್ಟಿಲ್ಲ.
ಇತ್ತ, ಭಾರತೀಯ ಜನತಾ ಪಾರ್ಟಿ 48 ಸ್ಥಾನ ಗೆದ್ದು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರೆ ಕಾಂಗ್ರೆಸ್ ಪಕ್ಷವು ಈ ಬಾರಿಯೂ ಕಳಪೆ ಪ್ರದರ್ಶನ ನೀಡಿದ್ದು, ಕೇವಲ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಚುನಾವಣೆ ಸೋಲಿನ ಬಳಿಕ ತೆಲಂಗಾಣ ಪಿಸಿಸಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಅಧ್ಯಕ್ಷರನ್ನ ಆಯ್ಕೆ ಮಾಡುವಂತೆ ಎಐಸಿಸಿಗೆ ಮನವಿ ಮಾಡಿದ್ದಾರೆ.