ತಿರುವನಂತಪುರ : ಹೆಣ್ಣು-ಗಂಡು ಪರಸ್ಪರ ಮಾತನಾಡಿದರೆ, ಜೊತೆಯಾಗಿ ಕುಳಿತರೆ, ಬಸ್ನಲ್ಲಿ ಜೊತೆಯಾಗಿದ್ದರೆ ಕೆಣಕಿ ಕೆಣಕಿ ಜಗಳ ಮಾಡಿ, ದರ್ಪದಿಂದ ವಿಚಾರಣೆ ಮಾಡಿ ನೈತಿಕ ಪೊಲೀಸ್ಗಿರಿ ತೋರಿರುವ ಘಟನೆಗಳು ಸಾಕಷ್ಟು ನಡೆದಿವೆ. ಕೇರಳ ವಿದ್ಯಾರ್ಥಿಗಳು ನೈತಿಕ ಪೊಲೀಸ್‌ಗಿರಿಗೆ ಮತ್ತು ಸಂಪ್ರದಾಯವಾದಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ.
ಹೌದು, ಕಾಲೇಜ್ ಆಫ್ ಇಂಜಿನಿಯರಿಂಗ್ ತಿರುವನಂತಪುರದ (ಸಿಇಟಿ) ವಿದ್ಯಾರ್ಥಿಗಳು ನೈತಿಕ ಪೋಲೀಸ್‌ಗಿರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳು ಪರಸ್ಪರರ ಮಡಿಲಲ್ಲಿ ಕುಳಿತು ಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.
ಸಿಇಟಿಯ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನ ಹೊರಗಿನ ಬಸ್ ವೇಟಿಂಗ್ ಶೆಡ್‌ನಲ್ಲಿ ಕಾಲೇಜು ಮುಗಿದ ತಕ್ಷಣ ಒಟ್ಟಾಗಿ ಕುಳಿತು ಹರಟೆ ಹೊಡೆಯುತ್ತಿದ್ದರು. ಆದರೆ ಇದು ಅಲ್ಲಿನ ಸ್ಥಳೀಯ ಸಂಪ್ರದಾಯವಾದಿಗಳಿಗೆ ಸಹಿಸಿಕೊಳ್ಳಲು ಅಸಾಧ್ಯವಾಗಿತ್ತು. ಅವರ ಪ್ರಕಾರ ಹುಡುಗ ಹುಡುಗಿಯರು ಮಾತನಾಡಬಾರದು, ಸ್ನೇಹ ಪ್ರೀತಿ ಮಾಡಬಾರದು. ಅದಕ್ಕಾಗಿ ಸ್ಥಳೀಯರು ಕಳೆದ ಜುಲೈ 19ರ ಮಂಗಳವಾರ ರಾತ್ರೋರಾತ್ರಿ ಬಸ್ ಸ್ಟ್ಯಾಂಡಿನಲ್ಲಿ ಕುಳಿತುಕೊಳ್ಳುವ ಕುರ್ಚಿಗಳನನ್ನು ತೆಗೆದು ಕೇವಲ ಒಬ್ಬೊಬ್ಬರು ಮಾತ್ರ ಕುಳಿತುಕೊಳ್ಳುವಂತೆ ಮೂರು ಕುರ್ಚಿಗಳನ್ನು ಹಾಕಲಾಗಿತ್ತು. ಎರಡು ಕುರ್ಚಿ ಜೊತೆಗಿದ್ದರೆ ಹುಡುಗ-ಹುಡುಗಿ ಕುಳಿತು ಮಾತನಾಡುತ್ತಾರೆ ಎಂಬುದು ಅವರ ಈ ಕೃತ್ಯಕ್ಕೆ ಕಾರಣವಾಗಿತ್ತು.
ಇದನ್ನು ಖಂಡಿಸಿ ಪ್ರತಿಭಟಿಸಲು ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಧರಿಸಿದರು. ಒಂದೇ ಸೀಟಿನಲ್ಲಿ ಹುಡುಗ ಹುಡುಗಿಯರು ತೊಡೆಮೇಲೆ ಕುಳಿತು ಫೋಟೊ ತೆಗೆದು ತಮ್ಮ ಸ್ನೇಹಿತರ ಗುಂಪುಗಳಲ್ಲಿ ಹಂಚಿಕೊಂಡರು. ಅವರ ಈ ದಿಟ್ಟ ಮತ್ತು ವಿನೂತನ ಪ್ರತಿಭಟನೆಯ ಈ ಚಿತ್ರಗಳು ನಂತರ ಎಲ್ಲೆಂದರಲ್ಲಿ ವೈರಲ್ ಆದವು. ಉಳಿದ ವಿದ್ಯಾರ್ಥಿಗಳು ಈ ಫೋಟೊ ತೆಗೆಸಿಕೊಳ್ಳುವ ಪ್ರತಿಭಟನೆಗೆ ಕೈಜೋಡಿಸಿ ತಾವು ಜೊತೆಗೆ ಕುಳಿತು ಪೋಟೊ ತೆಗೆಸಿಕೊಂಡರು. ಸ್ನೇಹಿತರ ಗುಂಪಿನ ಸುಂದರ ಸ್ನ್ಯಾಪ್‌ಗಳು ಶೀಘ್ರದಲ್ಲೇ ವಾಟ್ಸಾಪ್ ಸ್ಟೇಟಸ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳಾಗಿ ವೈರಲ್ ಆದವು.
ಇದು ವೈರಲ್ ಆಗುತ್ತದೆ ಎಂದು ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಆರ್ಯ ಹೇಳಿದರು. ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಂಡಿರುವುದು ನಮ್ಮ ಸರಳ ಪ್ರತಿಭಟನೆಗೆ ಸ್ವೀಕಾರವನ್ನು ತೋರಿಸುತ್ತದೆ. ಜನಸಾಮಾನ್ಯರು ನಮ್ಮ ನಿಲುವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನೂ ಇದು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಇಲ್ಲಿಯವರೆಗೆ ನಾವು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಮಾತ್ರ ಸ್ವೀಕರಿಸಿದ್ದೇವೆ ಎಂದು ಆರ್ಯ ಹೇಳಿದರು.
ಈ ಮೊದಲು ಸಹ ಸಿಇಟಿ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ ಸಮಯದ ಕುರಿತು ಪ್ರತಿಭಟನೆ ನಡೆಸಿದ್ದರು. ಸಂಜೆ 6.30ರ ಒಳಗೆ ವಿದ್ಯಾರ್ಥಿನಿಯರು ಹಾಸ್ಟೆಲ್ ಒಳಗೆ ಬರಬೇಕು ಎಂಬ ನಿಯಮ ತಂದಾಗ ದೊಡ್ಡ ಪ್ರತಿಭಟನೆ ನಡೆಸಿ ಅದನ್ನು 9.30ರ ಒಳಗೆ ಬರಬೇಕು ಎಂದು ತಿದ್ದುಪಡಿ ತರಲು ಕಾರಣರಾಗಿದ್ದರು. ಈಗ ಮತ್ತೊಮ್ಮೆ ಮತೀಯ ಗೂಂಡಾಗಿರಿ ವಿರುದ್ಧ ಸ್ಪಷ್ಟ ಸಂದೇಶ ನೀಡಿದ್ದಾರೆ.