ರೈತ ಹೋರಾಟಗಾರ ಕೊಟ್ಟೂರು ಶ್ರೀನಿವಾಸ್ ನಿಧನ

ಹಾಸನ: ರೈತ ಹೋರಾಟಗಾರ, ಕರ್ನಾಟಕ ರಾಜ್ಯ ರೈತ ಸಂಘದ ಹಾಸನ ಜಿಲ್ಲಾ ಅಧ್ಯಕ್ಷರಾದ ಕೊಟ್ಟೂರು ಶ್ರೀನಿವಾಸ್ (60) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ.

ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ಶ್ರೀನಿವಾಸ್ ಉಸಿರಾಟದ ತೊಂದರೆಯಿಂದ ಹಾಸನ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿದ್ದು. ನಂತರ ಕಿಡ್ನಿ  ವೈಫಲ್ಯಕ್ಕೊಳಗಾಗಿದ್ದರು. ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ಕಳೆದ ತಿಂಗಳು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಾರಗಳ ಹಿಂದೆ ತುಸು ಚೇತರಿಸಿಕೊಂಡಿದ್ದ ಅವರು, ಶುಕ್ರವಾರ ಡಯಾಲಿಸಿಸ್ ವೇಳೆ ತೀವ್ರ ಹೃದಯಾಘಾತಕ್ಕೊಳಗಾಗಿದ್ದರು. ಅಂದಿನಿಂದ ಕೃತಕ ಆರೋಗ್ಯ ವ್ಯವಸ್ಥೆಯಲ್ಲಿದ್ದರು. ಬಳಿಕ ಕೋಮಾಕ್ಕೆ ಜಾರಿದ ಅವರು ಮಂಗಳವಾರ ನಿಧನರಾಗಿದ್ದಾರೆ.

ಪತ್ನಿ ಪ್ರಮೀಳಾ, ಮಗಳು ರುಚಿರ ಅವರನ್ನು ಅಗಲಿದ್ದಾರೆ.  ಬುಧವಾರ ಸತ್ಯಮಂಗಲ ಬಡಾವಣೆಯಲ್ಲಿರುವ ಅವರ ನಿವಾಸದ ಬಳಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಬಿಟ್ಟಗೌಡನಹಳ್ಳಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಲವು ದಶಕಗಳಿಂದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದು ರೈತರ ಧ್ವನಿಯಾಗಿದ್ದ ಶ್ರೀನಿವಾಸ್, ಪ್ರಸ್ತುತ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ಹಾಸನ ಜಿಲ್ಲಾಧ್ಯ ಕ್ಷರಾಗಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ಶ್ರೀನಿವಾಸ್ ಆರ್‌ಎಸ್‌ಎಸ್‌ನ ಪೂರ್ಣಾವಧಿ ಕಾರ್ಯಕರ್ತರಾಗಿದ್ದವರು. ಪತ್ನಿ ಪ್ರಮೀಳಾ- ಶ್ರೀನಿವಾಸ್ ಅವರದು ಪ್ರೇಮವಿವಾಹ. ಪ್ರಮೀಳಾ ಅವರನ್ನು ಪ್ರೀತಿಸುತ್ತಿದ್ದ ಶ್ರೀನಿವಾಸ್, ಪ್ರಮೀಳಾ ಪ್ರೌಢಶಾಲಾ ಶಿಕ್ಷಕಿಯಾಗಿದ್ದು,  ಬೇಲೂರಿನ ಅಡಗೂರಿನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಮೀಳಾ ಮತ್ತು ಶ್ರೀನಿವಾಸ್ ಅವರ ವಿವಾಹಕ್ಕೆ ಕುಟುಂಬದವರ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಅಡಗೂರಿಗೆ ಬಂದು ನೆಲೆ ನಿಂತ ಶ್ರೀನಿವಾಸ್ ಅಲ್ಲಿ ಆಯೋಜಿಸಿದ ಅಂಬೇಡ್ಕರ್ ಜಯಂತಿ ಕಾರಣಕ್ಕೆ  ದಲಿತ ಸಂಘರ್ಷ ಸಮಿತಿಯ ಸಂಪರ್ಕಕ್ಕೆ ಬಂದರು.

ಬಳಿಕ ದಲಿತ ಹೋರಾಟಗಾರ ಚಂದ್ರಪ್ರಸಾದ್ ತ್ಯಾಗಿಯವರ ಸಂಪರ್ಕಕ್ಕೆ ಬಂದು ಅವರ ಆಪ್ತರಲ್ಲೊಬ್ಬರಾಗಿದ್ದರು. ಬಳಿಕ ತ್ಯಾಗಿ ಅವರ ಪುತ್ರಿ ಶೋಭಾವರ ಮದುವೆಯ ಜೊತೆಯಲ್ಲಿಯೇ ಸರಳವಾಗಿ ಅಮವಾಸ್ಯೆಯಂದು, ಮಂಗಳವಾರ ಶ್ರೀನಿವಾಸ್ ಮತ್ತು ಪ್ರಮೀಳಾ ಅವರ ವಿವಾಹ ನೆರವೇರಿತ್ತು. ಬಳಿಕ ದಸಂಸ ಜೊತೆಯಲ್ಲಿ ಇದ್ದ ಶ್ರೀನಿವಾಸ್ ‘ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಪರ್ಕಕ್ಕೆ ಬಂದು ಚಿಣ್ಣರ ಮೇಳ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾಗಿ, ಜಿಲ್ಲೆ, ತಾಲೂಕು, ಮಂಡಲ ಪಂಚಾಯ್ತಿ ಮಟ್ಟದಲ್ಲಿ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ನಡೆಸಿ ಯಶಸ್ವಿಗೊಳಿಸಿದರು. ಜಿಲ್ಲೆಯ ಸಾಕ್ಷರತಾ ಆಂದೋಲನದಲ್ಲಿ ಹಾಸನ ತಾಲೂಕಿನ ಸಂಚಾಲಕನಾಗಿ, ರಂಗಸಿರಿ ರಂಗತಂಡದಲ್ಲಿ ಗುರುತಿಸಿಕೊಂಡು ಸೂತ್ರಧಾರ ಎಂಬ ರಂಗತಂಡವನ್ನು ಕಟ್ಟಿ ಮಕ್ಕಳ ನಾಟಕ ಶಿಬಿರ, ಬೇಸಿಗೆ ಶಿಬಿರಗಳನ್ನು ನಡೆಸುತ್ತಾ, ರಂಗನಿರ್ದೇಶಕರಾದ ಮುನಿಚೌಡಪ್ಪ, ಪಿಚ್ಚಳ್ಳಿ ಶ್ರೀನಿವಾಸ ಇವರನ್ನು ಕರೆಸಿ ರಂಗಸೇವೆ ಮಾಡಿದರು.

ಒಂದಿಂಚೂ ಭೂಮಿ ಇಲ್ಲದ ರೈತರಲ್ಲದ ಸಮುದಾಯದಿಂದ ಬಂದಂತಹ ಕೊಟ್ಟೂರು ಶ್ರೀನಿವಾಸ್ ನಂತರ ಪ್ರೊ. ನಂಜುಂಡಸ್ವಾಮಿ ಅವರ ಪ್ರಭಾವಕ್ಕೊಳಗಾಗಿ ರೈತ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಹಾಸನ ಜಿಲ್ಲೆಯಲ್ಲಿ ಗೆಳೆಯರಾದ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಬೆನ್ನೆಲುಬಾಗಿ ನಿಂತು, ನೀರಾ ಚಳವಳಿ, ವಿದ್ಯುತ್ ಮೀಟರ್ ವಾಪಸಾತಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತ್ನಿ ಪ್ರಮಿಳಾ ಅವರಿಗೆ ಶಿವಮೊಗ್ಗಕ್ಕೆ ವರ್ಗಾವಣೆಯಾದಾಗ , ಅವರ ಕಾರ್ಯಕ್ಷೇತ್ರ ಶಿವಮೊಗ್ಗಕ್ಕೆ ಬದಲಾಯಿತು. ಅಲ್ಲಿ ಸಿಐಟಿಯುವಿನಲ್ಲಿ ಸಕ್ರಿಯರಾದ ಶ್ರೀನಿವಾಸ್ ಅಲ್ಲಿಯೇ ಚಳವಳಿಯಲ್ಲಿದ್ದ ಯುವಕನ ಜೊತೆ ಮಗಳ ವಿವಾಹ ಮಾಡಿದರು. ಬಳಿಕ ಹಾಸನಕ್ಕೆ ವಾಪಸಾದ ಶ್ರೀನಿವಾಸ್ ಇಲ್ಲಿ ರೈತಸಂಘದ ಜಿಲ್ಲಾಧ್ಯಕ್ಷರಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದರು.

Donate Janashakthi Media

Leave a Reply

Your email address will not be published. Required fields are marked *