ಪಠ್ಯ ಪರಿಷ್ಕರಣೆ ರಾಜಕೀಯ ಹುನ್ನಾರ: ಎಸ್ಎಫ್ಐ ಅಖಿಲ ಭಾರತ ಅಧ್ಯಕ್ಷ ವಿ.ಪಿ. ಸಾನು ಆರೋಪ
ಗಂಗಾವತಿ: ಅಕ್ಷರದ ಮೂಲಕ ಮತಾಂಧತೆಯ ವಿಷಬೀಜ ಬಿತ್ತಲು ಶಾಲಾ ಪಠ್ಯದ ಪರಿಷ್ಕರಣೆ ಹೆಸರಿನಲ್ಲಿ ಈ ದೇಶದ ಸ್ವಾತಂತ್ರ್ಯ ಹೋರಾಟಗಾರ ದೇಶಪ್ರೇಮಿ ಭಗತ್ ಸಿಂಗ್, ಮಹಾತ್ಮಾ ಗಾಂಧೀಜಿ, ಅಂಬೇಡ್ಕರ್ ಮತ್ತು ದಾರ್ಶನಿಕರಾದ ಕನಕದಾಸರು, ಬಸವಣ್ಣ, ಪೆರಿಯಾರ್, ನಾರಾಯಣಗುರು, ಸಾವಿತ್ರಿ ಬಾಪುಲೆ, ಮುಂತಾದವರ ಪಠ್ಯಗಳನ್ನು ತೆಗೆದು ಹಾಕಿ ಕೋಮುವಾದಿ, ಜಾತಿವಾದಿಗಳ ಪಠ್ಯ ಸೇರ್ಪಡೆ ಮಾಡಿ ವಿವಾದ ಸೃಷ್ಟಿಸಲಾಗುತ್ತಿದೆ. ಇದು ರಾಜಕೀಯ ಹುನ್ನಾರ ಎಂದು ಎಸ್ಎಫ್ಐ ಅಖಿಲ ಭಾರತ ಅಧ್ಯಕ್ಷ ವಿ.ಪಿ. ಸಾನು ಆರೋಪಿಸಿದ್ದಾರೆ.
ಆರ್ ರಾಮಕೃಷ್ಣ ಹಾಗೂ ನಿರಂಜನಾರಾಧ್ಯ ವಿ.ಪಿ. ಅವರು ಬರೆದ ‘ಪಠ್ಯ ಮರು ಪರಿಷ್ಕರಣೆ ಹಿನ್ನೆಲೆ – ಮುನ್ನಲೆ’ ಎಂಬ ಪುಸ್ತಕವನ್ನು ಗಂಗಾವತಿ ನಗರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಸಂಘಟನೆಯ ರಾಜ್ಯ ಮಟ್ಟದ ಅದ್ಯಯನ ಶಿಬಿರದಲ್ಲಿ ಇಂದು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಾಲೆಗಳು ಪ್ರಾರಂಭವಾಗಿ 2 ತಿಂಗಳು ಕಳೆದರೂ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ಸಿಕ್ಕಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿಯಿಂದ ನಾಲ್ಕು ವರ್ಷಗಳ ಪದವಿ ಶಿಕ್ಷಣ, ಪದವಿಗೆ ಸಿಇಟಿ ಅರ್ಹತಾ ಪರೀಕ್ಷೆ ಬರೆಯಬೇಕೆಂಬ ಅವೈಜ್ಞಾನಿಕ ನೀತಿಗಳಿಂದ ತಳ ಸಮುದಾಯಗಳ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸುವ ಮನುವಾದಿ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಈ ಎಲ್ಲಾ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಎಸ್ಎಫ್ಐ ದೇಶಾದ್ಯಂತ ಶಿಕ್ಷಣ, ಸಂವಿಧಾನ, ದೇಶದ ಉಳಿವಿಗಾಗಿ ಸಂಘರ್ಷಾತ್ಮಕ ಹೋರಾಟಗಳನ್ನು ನಡೆಸುತ್ತಿದೆ ಎಂದರು.
ಹೊಸ ಶಿಕ್ಷಣ ನೀತಿ ಕಾರ್ಪೊರೇಟ್ ಜಗತ್ತಿಗೆ ಬೇಕಾದ ದುಡಿಯುವ ವರ್ಗದ ಜನರನ್ನು ಕಡಿಮೆ ಕೂಲಿಯಲ್ಲಿ ಉತ್ಪಾದಿಸುವ ಕೂಲಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಜೊತೆಗೆ ದೇಶವನ್ನು ಹಿಂದುತ್ವದ ಆಧಾರದಲ್ಲಿ ಬ್ರಾಹ್ಮಣ್ಯ ಹೇರಲು ಶಿಕ್ಷಣದ ವ್ಯಾಪಾರಿಕರಣವನ್ನು ಹೆಚ್ಚಿಸಿ ತಳ ಸಮುದಾಯಗಳನ್ನು ಶಿಕ್ಷಣದಿಂದ ದೂರವಿರಿಸುವ ಕುತಂತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ, ಎಸ್ಎಫ್ಐ ನ ಮಾಜಿ ಮುಖಂಡರಾದ ಟಿ.ಎಲ್. ಕೃಷ್ಣೇಗೌಡ, ಎಸ್ಎಫ್ಐನ ರಾಜ್ಯಾಧ್ಯಕ್ಷ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ರಾಜ್ಯ ಮುಖಂಡರಾದ ಗಣೇಶ್ ರಾಥೋಡ್, ಶಿವಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.