ಹರಿಯಾಣ | ಮಸೀದಿಗೆ ಬೆಂಕಿ ಹಚ್ಚಿ, ಇಮಾಂ ಅನ್ನು ಗುಂಡಿಕ್ಕಿ ಕೊಂದ ಹಿಂದುತ್ವ ಗುಂಪು

ಸುಮಾರು 50 ರಿಂದ 100 ವ್ಯಕ್ತಿಗಳ ಗುಂಪು ಸುಮಾರು 12 ಗಂಟೆಗೆ ಮಸೀದಿಯ ಮೇಲೆ ದಾಳಿ ನಡೆಸಿದೆ  

ಹರಿಯಾಣ: ರಾಷ್ಟ್ರ ರಾಜಧಾನಿ ದೆಹಯಿಂದ 40 ಕಿಲೋ ಮೀಟರ್‌ ದೂರದ ಗುರುಗ್ರಾಮ್‌ನ ಸೆಕ್ಟರ್ 57ರಲ್ಲಿರುವ ಅಂಜುಮಾನ್ ಮಸೀದಿಗೆ ಹಿಂದುತ್ವ ದುಷ್ಕರ್ಮಿಗಳು ಸೋಮವಾರ ಬೆಂಕಿ ಹಚ್ಚಿದ್ದಾರೆ. ಮಸೀದಿಯ ಇಮಾಂ ಸೇರಿದಂತೆ ನಾಲ್ವರು ಮುಸ್ಲಿಮರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಆದರೆ ದಾಳಿಯಲ್ಲಿ ಗಾಯಗೊಂಡ ಮಸೀದಿಯ ಇಮಾಂ ಮೃತಪಟ್ಟಿದ್ದಾರೆ. ಪ್ರವೀಣ್ ಹಿಂದೂಸ್ತಾನಿ ಮತ್ತು ಅಮಿತ್ ಹಿಂದೂ ಎಂಬವರು ಇದರ ಹಿಂದೆ ಇದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ವೇಳೆ ಮಸೀದಿಯ ಇಮಾಂ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೌಲಾನಾ ಸಾದ್ ಮೇಲೆ ಗುಂಪು ಗುಂಡು ಹಾರಿಸಿದೆ. ದಾಳಿಯ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದ್ವೇಷಾಪರಾಧ: 3 ಮುಸ್ಲಿಮರಿಗೆ ಗುಂಡಿಕ್ಕಿ ‘ಭಾರತದಲ್ಲಿರಬೇಕಾದರೆ ಮೋದಿ ಯೋಗಿಗೆ ಮತಹಾಕಿ’ ಎಂದ ರೈಲ್ವೆ ಪೊಲೀಸ್ ಅಧಿಕಾರಿ!

ಘಟನೆಯಲ್ಲಿ ಗಾಯಗೊಂಡ ಇನ್ನೊಬ್ಬ ವ್ಯಕ್ತಿ ಖುರ್ಷಿದ್ ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿದೆ. ಉಳಿದ ಇಬ್ಬರನ್ನು ಶಹಾಬುದ್ದೀನ್ ಮತ್ತು ಮೆಹಮೂದ್ ಎಂದು ಗುರುತಿಸಲಾಗಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೌಲಾನಾ ಸಾದ್ (19) ಅವರು ಬಿಹಾರದ ಸಿತಾಮರ್ಹಿ ಜಿಲ್ಲಯ ಮಣಿಯಾಡಿಹ್ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ಅವರು ಗುರ್ಗಾಂವ್‌ನ ಸೆಕ್ಟರ್ 57 ರ ಅಂಜುಮನ್ ಮಸೀದಿಯಲ್ಲಿ ಇಮಾಮ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

“ಸುಮಾರು 50 ರಿಂದ 100 ವ್ಯಕ್ತಿಗಳ ಗುಂಪು ಸುಮಾರು 12 ಗಂಟೆಗೆ ಮಸೀದಿಯ ಮೇಲೆ ದಾಳಿ ನಡೆಸಿದೆ. ಈ ಘಟನೆಯ ಸಮಯದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಅವರು ಮಸೀದಿಯ ಮೇಲೆ ಗುಂಡು ಹಾರಿಸುತ್ತಿದ್ದರು. ಹಿಂದೂ ಘೋಷಣೆಗಳನ್ನು ಕೂಗುತ್ತಾ ಮಸೀದಿಗೆ ಬೆಂಕಿ ಹಚ್ಚಿದರು. ಈ ವೇಳೆ ಪೊಲೀಸ್ ಜೀಪ್‌ಗಳು ಘಟನಾ ಸ್ಥಳದಲ್ಲಿದ್ದವು” ಎಂದು ಸ್ಥಳೀಯರಾದ ಅಬ್ದುಲ್ ಹಸೀಬ್ ಹೇಳಿದ್ದಾರೆ ಎಂದು ದಿ ಅಬ್ಸರ್ವರ್ ಪೋಸ್ಟ್‌ ವರದಿ ಮಾಡಿದೆ.

“ಮೇವಾತ್‌ನಲ್ಲಿ ಕೋಮು ಘಟನೆಯಿಂದಾಗಿ ಪರಿಸ್ಥಿತಿ ಈಗಾಗಲೇ ಉದ್ವಿಗ್ನವಾಗಿತ್ತು. ಹಿಂಸಾಚಾರ ನಡೆಸಿದ ಗುಂಪು ನೆರೆಯ ಹಳ್ಳಿಯಿಂದ ಬಂದವರಾಗಿದ್ದು, ಅದರಲ್ಲಿ ಗುಜ್ಜರ್ ಸಮುದಾಯದ ವ್ಯಕ್ತಿಗಳು ಇದ್ದರು. ಉದ್ರಿಕ್ತ ಗುಂಪು ಹುಟ್ಟುಹಾಕಿದ ಭಯೋತ್ಪಾದನೆಯಿಂದಾಗಿ ಜನರು ತಮ್ಮ ಮನೆಗಳನ್ನು ಬಿಟ್ಟು ಮುಕ್ತವಾಗಿ ತಿರುಗಾಡಲು ಸಾಧ್ಯವಾಗಲಿಲ್ಲ” ಎಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ವೇಳೆ ಇತ್ತೀಚೆಗೆ ಘರ್ಷಣೆ ಪ್ರಾರಂಭವಾಗಿತ್ತು, ಅದು ಗುರುಗ್ರಾಮ್‌ನ ಸೆಕ್ಟರ್ 57 ವ್ಯಾಪಿಸಿದೆ. ನೂಹ್‌ ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆಯಲ್ಲಿ ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಪೊಲೀಸ್‌ ವಾಹನಗಳಿಗೂ ಹಾನಿಯಾಗಿದೆ. ಡಿಎಸ್‌ಪಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.

ವಿಡಿಯೊ ನೋಡಿ: ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ – ವಿಶ್ಲೇಷಣೆ : ಅರುಣ್ ಜೋಳದ ಕೂಡ್ಲಿಗಿ Janashakthi Media

Donate Janashakthi Media

Leave a Reply

Your email address will not be published. Required fields are marked *