ಬೆಂಗಳೂರು: ಕರ್ನಾಟಕದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಅಂಗನವಾಡಿ ಮತ್ತು ಶಾಲಾ ಶಿಕ್ಷಣದಿಂದ ಹೊರಗುಳಿಸಿದ್ದಾರೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ಗೆ ಸಲ್ಲಿಸಿದ ಸಮೀಕ್ಷೆ ವರದಿಯಿಂದ ಬಹಿರಂಗಗೊಂಡಿದೆ. 14 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ಹೊರಗುಳಿದಿರುವ ಬಗ್ಗೆ ಹೈಕೋರ್ಟ್ದಾಖಲಿಸಿಕೊಂಡಿರುವ ಸುಮೊಟೊ ಸಾರ್ವಜನಿಕ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ವಿಭಾಗೀಯ ಪೀಠವು ನಡೆಸಿತು.
ಈ ಸಂದರ್ಭದಲ್ಲಿ ಪ್ರಕರಣದ ಅಮೆಕಸ್ ಕ್ಯೂರಿಯಾದ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಸಮೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಸಮೀಕ್ಷೆಯ ವರದಿಯಂತೆ, ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು, ಶಾಲಾ ಕಲಿಕೆ ಮತ್ತು ವಿಶೇಷವಾಗಿ ಅಂಗನವಾಡಿಯಿಂದ ಹೊರಗುಳಿದಿರುವ 3ರಿಂದ 6 ವರ್ಷದೊಳಗಿನ ಮಕ್ಕಳನ್ನು ವಾಪಸ್ಸು ಕಲಿಕೆಗೆ ಕರೆತರಲು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಇದೇ 16ರಂದು ಸಭೆ ನಡೆಸಿ ಸಲಹೆ ನೀಡಬೇಕೆಂದು ಹೈಕೋರ್ಟ್ ರಚಿಸಿರುವ ಉನ್ನತಾಧಿಕಾರ ಸಮಿತಿಗೆ ನಿರ್ದೇಶನ ನೀಡಿ ಅರ್ಜಿ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದಕ್ಕೆ ಸಂಬಂಧಿಸಿದಂತೆ 2013ರಲ್ಲಿ ಹೈಕೋರ್ಟ್ ದಾಖಲಿಸಿಕೊಂಡ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಿಂದ ಬೆಳಕಿಗೆ ಬಂದ ಅಂಶವೆಂದರೆ, ‘ರಾಜ್ಯದಲ್ಲಿ 14 ವರ್ಷದ ಒಳಗಿನ 10.12 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ಮತ್ತು ಅಂಗನವಾಡಿಗಳಿಂದ ಹೊರಗುಳಿದಿದ್ದಾರೆ’ ಎಂದು ಸಮೀಕ್ಷಾ ವರದಿಯು ತಿಳಿಸಿದೆ.
ಶಾಲೆಯಿಂದ ಹೊರಗುಳಿದರುವ 18 ವರ್ಷದೊಳಗಿನ ಮಕ್ಕಳ ಪತ್ತೆಗೆ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಗ್ರಾಮೀಣಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಪ್ರಾಧಿಕಾರಗಳು ನಡೆಸಿರುವ ಮನೆ-ಮನೆ ಸಮೀಕ್ಷೆಯ ವರದಿ ಇದಾಗಿದೆ. 2021ರ ಅಕ್ಟೋಬರ್ ಒಳಗೆ ಗ್ರಾಮೀಣ ಭಾಗ ಹಾಗೂ ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲಾ 319 ನಗರ ಸ್ಥಳೀಯ ಸಂಸ್ಥೆಗಳಲ್ಲಿ 2022ರ ಮಾರ್ಚ್ ತಿಂಗಳವರೆಗೆ ಶಾಲೆಗಳಿಂದ ಹೊರಗುಳಿದಿರುವ ಮಕ್ಕಳ ಬಗ್ಗೆ ಸಮೀಕ್ಷೆಗೆ ಒಳಪಡಿಸಲಾಗಿತ್ತು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 6ರಿಂದ 14 ವರ್ಷದೊಳಗಿನ 15,388 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 10 ಸಾವಿರ ಮಕ್ಕಳು ಶಾಲೆಯಲ್ಲಿ ಪ್ರವೇಶಾತಿಯನ್ನೇ ಪಡೆದಿಲ್ಲ. 3 ವರ್ಷದ 4.54 ಲಕ್ಷ ಮಕ್ಕಳು, 4ರಿಂದ 6 ವರ್ಷದೊಳಗಿನ 5.33 ಲಕ್ಷ ಮಕ್ಕಳು ಅಂಗನವಾಡಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 33.42 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.
ಮಕ್ಕಳ ಸಮೀಕ್ಷೆಯ ವಿವರ – ನಗರ ಪ್ರದೇಶ
ಕುಟುಂಬಗಳ ಸಮೀಕ್ಷೆ: 33.42 ಲಕ್ಷ – ಸಮೀಕ್ಷೆ ಶೇಕಡವಾರು 98.06 – ಗುರುತಿಸಲಾದ 18 ವರ್ಷದೊಳಗಿನ ಮಕ್ಕಳು: 13.73 ಲಕ್ಷ – ಅಂಗನವಾಡಿಯಲ್ಲಿ ನೋಂದಾಯಿಸಿಕೊಳ್ಳದ 3 ವರ್ಷದೊಳಗಿನ ಮಕ್ಕಳು: 87,921 – ಅಂಗನವಾಡಿಗಳಲ್ಲಿ ನೊಂದಾಯಿಸಿಕೊಳ್ಳದ 4ರಿಂದ 6 ವರ್ಷದ ಮಕ್ಕಳು: 1.23 ಲಕ್ಷ – ಶಾಲೆಗೆ ದಾಖಲಾದ 6ರಿಂದ 18 ವರ್ಷದ ಒಟ್ಟು ಮಕ್ಕಳು: 10.62 ಲಕ್ಷ – ಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷದ ಮಕ್ಕಳು: 2,798 – ದಾಖಲಾಗದ 6 ರಿಂದ 14 ವರ್ಷದ ಮಕ್ಕಳು: 3,225.
ಮಕ್ಕಳ ಸಮೀಕ್ಷೆಯ ವಿವರ – ಗ್ರಾಮೀಣ ಪ್ರದೇಶ
ಕುಟುಂಬಗಳ ಸಮೀಕ್ಷೆ: 84.02 ಲಕ್ಷ – ಸಮೀಕ್ಷೆ ಶೇಕಡವಾರು: 100 – ಗುರುತಿಸಲಾದ 18 ವರ್ಷದೊಳಗಿನ ಮಕ್ಕಳು: 35.24 ಲಕ್ಷ -ಅಂಗನವಾಡಿಗಳಲ್ಲಿ ನೋಂದಾಯಿಸಿಕೊಳ್ಳದ 3 ವರ್ಷದೊಳಗಿನ ಮಕ್ಕಳು: 93 ಸಾವಿರ – ಅಂಗನವಾಡಿಗಳಲ್ಲಿ ನೋಂದಾಯಿಸಿಕೊಳ್ಳದ 4ರಿಂದ 6 ವರ್ಷದ ಮಕ್ಕಳು: 1.07 ಲಕ್ಷ – ಶಾಲೆಗೆ ದಾಖಲಾತಿ ಪಡೆದ 6ರಿಂದ 18 ವರ್ಷದ ಒಟ್ಟು ಮಕ್ಕಳು: 27.11 ಲಕ್ಷ – ಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷದ ಮಕ್ಕಳು: 10,378 – ದಾಖಲಾಗದ 6 ರಿಂದ 14 ವರ್ಷದ ಮಕ್ಕಳು: 5,248.
ಮಕ್ಕಳ ಸಮೀಕ್ಷೆಯ ವಿವರ – ಬಿಬಿಎಂಪಿ
ಕುಟುಂಬಗಳ ಸಮೀಕ್ಷೆ: 26.57 ಲಕ್ಷ – ಸಮೀಕ್ಷೆ ಶೇಕಡವಾರು: 106 – ಗುರುತಿಸಲಾದ 18 ವರ್ಷದೊಳಗಿನ ಮಕ್ಕಳ ಸಂಖ್ಯೆ: 17.70 ಲಕ್ಷ – ಅಂಗನವಾಡಿಗಳಲ್ಲಿ ನೋಂದಾಯಿಸಿಕೊಳ್ಳದ 3 ವರ್ಷದೊಳಗಿನ ಮಕ್ಕಳು: 2.73 ಲಕ್ಷ – ಅಂಗನವಾಡಿಗಳಲ್ಲಿ ನೋಂದಾಯಿಸಿಕೊಳ್ಳದ 4ರಿಂದ 6 ವರ್ಷದ ಮಕ್ಕಳು: 3.02 ಲಕ್ಷ – ಶಾಲೆಗೆ ದಾಖಲಾತಿ ಪಡೆದ 6ರಿಂದ 18 ವರ್ಷದ ಒಟ್ಟು ಮಕ್ಕಳು: 11.83 ಲಕ್ಷ – ಶಾಲೆಯಿಂದ ಹೊರಗುಳಿದ 6ರಿಂದ 14 ವರ್ಷದ ಮಕ್ಕಳು: 2,162 – ದಾಖಲಾಗದ 6 ರಿಂದ 14 ವರ್ಷದ ಮಕ್ಕಳು: 1,545.