ಹಿಜಾಬ್‌ ವಿವಾದ-ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಎತ್ತಿ ಹಿಡಿದ ನ್ಯಾಯಪೀಠ: ಜನವಾದಿ ಮಹಿಳಾ ಸಂಘಟನೆ ಸ್ವಾಗತ

ಬೆಂಗಳೂರು: ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ಭಿನ್ನ ತೀರ್ಪು ಹೊರಬಿದ್ದಿದೆ ಮತ್ತು ಅದನ್ನು ವಿಸ್ತ್ರತ ಪೀಠಕ್ಕೆ ಕೊಡಲು ಮುಖ್ಯ‌ ನ್ಯಾಯಾಧೀಶರಿಗೆ ಪೀಠ ಕೋರಿದೆ. ಇದರಲ್ಲಿ ಮಹಿಳೆಯರ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿದ ನ್ಯಾಯಮೂರ್ತಿ ಸುಧಾಂಶು ಧುಲಿಯಾರವರ ಅಭಿಪ್ರಾಯವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ಸ್ವಾಗತಿಸಿದೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಜನವಾದಿ ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಅವರು, ಕರ್ನಾಟಕ‌ ಹೈಕೋರ್ಟ್ ನೀಡಿದ್ದ ತೀರ್ಪಿನ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠದ ನ್ಯಾಯಮೂರ್ತಿ ಸುಧಾಂಶು ದುಲಿಯಾರವರು ಹೆಣ್ಣು ಮಗುವಿಗೆ ಮನೆಯೊಳಗೆ ಅಥವಾ ಮನೆಯ ಹೊರಗೆ ಹಿಜಾಬ್ ಧರಿಸಲು ಅಧಿಕಾರ ಇದೆ. ಆ ಹಕ್ಕು ಶಾಲೆಯ ದ್ವಾರದ ಬಳಿ ಮೊಟಕುಗೊಳ್ಳುವುದಿಲ್ಲ ಎಂದು ಹೇಳಿರುವುದು ಜನವಾದಿ ಮಹಿಳಾ ಸಂಘಟನೆಯ ಅಭಿಪ್ರಾಯವನ್ನು ದೃಡೀಕರಿಸಿದಂತಾಗಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಶಿರವಸ್ತ್ರ ಮತ್ತು ಸಮವಸ್ತ್ರದ ಹೆಸರಿನಲ್ಲಿ ಎದ್ದ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಹತ್ತು ತಿಂಗಳ ಸತತ ವಾದ ಪ್ರತಿವಾದಗಳು ನಡೆದಿದ್ದು, ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಮತ್ತು ಮೂಲಭೂತ ಹಕ್ಕುನ್ನು ಹೊಂದಿರುತ್ತಾರೆ ಎಂಬ ತೀರ್ಪು ನೀಡುವ ಮೂಲಕ ಆಯ್ಕೆಯ ಹಕ್ಕಿನ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಂತಾಗಿದೆ. ಇದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸ್ವಾಗತಿಸಿದೆ.

ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪರೀಕ್ಷೆಗೆ ಕೂರಿಸದೆ ನಿರಾಕರಿಸಿರುವುದನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಶಾಲೆಯ ಗೇಟ್ ಪ್ರವೇಶಿಸುವ ಮುನ್ನ ಶಿರವಸ್ತ್ರ ತೆಗೆಯುವಂತೆ ಹೇಳುವುದು ಆಕೆಯ ಘನತೆಯ ಹಕ್ಕಿನ ಮೇಲಿನ ದಾಳಿ ಮಾತ್ರವಲ್ಲ ಜಾತ್ಯತೀತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಇದು ಸಂವಿಧಾನದ ಪರಿಚ್ಛೇದ 19(1)(ಎ) ರ ಅಭಿವ್ಯಕ್ತಿ ಸ್ವಾತಂತ್ರ್ಯ, ಪರಿಚ್ಛೇದ 21ರ ಜೀವಿಸುವ ಹಕ್ಕು ಮತ್ತು ಪರಿಚ್ಛೇದ 25(1) ರ ಧಾರ್ಮಿಕ ಆಚರಣೆ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆಯಂತಲೂ  ಸ್ಪಷ್ಟ ಪಡಿಸಿದ್ದಾರೆ.

ಸದ್ಯ ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ವಿಸ್ತ್ರತ ಪೀಠದ ತೀರ್ಪು ಮಳೆಯರ ಶಿಕ್ಷಣದ ಮೂಲಭೂತ ಹಕ್ಕು ಮತ್ತು ಆಯ್ಕೆಯ ಹಕ್ಕನ್ನು ರಕ್ಷಿಸುವ ನೆಲೆಯಲ್ಲಿ ಬರುತ್ತದೆ ಎಂಬ ಆಶಾದಾಯಕವಾದ ನಿರೀಕ್ಷೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹೊಂದಿದೆ.

Donate Janashakthi Media

Leave a Reply

Your email address will not be published. Required fields are marked *