88 ವಿದ್ವಾಂಸರಿಂದ 12,000 ವರ್ಷಗಳ ಭಾರತೀಯ ನಾಗರಿಕತೆ ಮತ್ತು ಇತಿಹಾಸ ಕುರಿತ ವರದಿ

ಕಳೆದ 12,000 ವರ್ಷಗಳಲ್ಲಿ ಭಾರತದ ನಾಗರಿಕತೆ ಮತ್ತು ಇತಿಹಾಸದ ಕುರಿತು ವರದಿಯನ್ನು ಹೊರತರಲು 88 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ವಾಂಸರು ಒಟ್ಟುಗೂಡಿದ್ದಾರೆ. ಇದನ್ನು ಅಕ್ಟೋಬರ್ 9ರಂದು ದಿಲ್ಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ಪ್ರಕಟಿಸಲಾಯಿತು. ಪ್ರಸಿದ್ಧ ಪ್ರಾಧ್ಯಾಪಕರು, ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಸಾಹಿತ್ಯ ವಿಮರ್ಶಕರಾಗಿರುವ ಗಣೇಶ್ ಎನ್ ದೇವಿ ನೇತೃತ್ವದ ಗುಂಪು ಈ ಕೆಲಸವನ್ನು ಕೈಗೆತ್ತಿಕೊಂಡಿದೆ.

ತಳಿಶಾಸ್ತ್ರ, ಪುರಾತತ್ತ್ವ ಶಾಸ್ತ್ರ, ಮಾನವಶಾಸ್ತ್ರ, ಭಾಷಾಶಾಸ್ತ್ರ ಮತ್ತು ತತ್ತ್ವಶಾಸ್ತ್ರ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು 100 ವಿಭಾಗಗಳೊಂದಿಗೆ ಈ ವರದಿ ಬರಲಿದೆ. ಕೇಂದ್ರ ಸರಕಾರ 2020 ರಲ್ಲಿ ಪ್ರಾರಂಭಿಸಿದ ಇತಿಹಾಸ ಪುನರ್ಲೇಖನದ ಯೋಜನೆಗೆ ತದ್ವಿರುದ್ಧವಾಗಿ ಈ ವರದಿ ಇತಿಹಾಸದ ವೈಜ್ಞಾನಿಕ ದೃಷ್ಟಿಕೋನವನ್ನು ಪ್ರಸ್ತುತಪಡಿಸುವ ಗುರಿಯನ್ನು ಹೊಂದಿದೆ ಎಂದು ಸಂಘಟಕರು ಹೇಳಿದ್ದಾರೆ.

ಕೇಂದ್ರ ಸರ್ಕಾರವು “ಸುಮಾರು 12,000 ವರ್ಷಗಳ ಹಿಂದಿನ ಭಾರತೀಯ ಸಂಸ್ಕೃತಿಯ ಮೂಲ ಮತ್ತು ವಿಕಾಸವನ್ನು” ಅಧ್ಯಯನ ಮಾಡಲೆಂದು ಒಂದು ಸಮಿತಿಯನ್ನು ರಚಿಸಿತ್ತು. ಅದರಲ್ಲಿ ದಕ್ಷಿಣ ಭಾರತ ಮತ್ತು ಈಶಾನ್ಯ ಭಾರತದವರು, ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರು ಯಾರೂ ಇಲ್ಲ ಎಂದು ಸರ್ಕಾರದ ಆ ಸಮಿತಿಯು ಆಗ ತೀವ್ರ ಟೀಕೆಗೆ ಒಳಗಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಭಾರತದ ಇತಿಹಾಸದ ಪುನರ್ಲೇಖನದ ಪ್ರಯತ್ನಗಳು ಹೆಚ್ಚುತ್ತಿವೆ. ಸರಕಾರ ದಲಿತರಿಗೆ, ಕ್ರೈಸ್ತರಿಗೆ, ಮುಸ್ಲಿಮರಿಗೆ ಮತ್ತು ಮಹಿಳೆಯರಿಗೆ ಸ್ಥಾನವೇ ಇಲ್ಲದ ರೀತಿಯಲ್ಲಿ ಇತಿಹಾಸವನ್ನು ಮರು ನಿರೂಪಿಸಲು ಒಂದು ಸಮಿತಿಯನ್ನು ನೇಮಿಸಿರುವಾಗ ಮುಂದಿನ ಭಾರತೀಯ ತಲೆಮಾರು ಭಿನ್ನವಾಗಿ ಯೋಚಿಸುತ್ತ ಬೆಳೆಯುತ್ತದೆ ಎಂದು ಖೇದ ವ್ಯಕ್ತಪಡಿಸಿದ ದೇವಿಯವರು ಈಗ ತಮ್ಮ  ಸಾಮೂಹಿಕ ವರದಿ ಮೂಡಿ ಬರಲು ಕಾರಣ ಇತಿಹಾಸದ ವೈಜ್ಞಾನಿಕ ನೋಟ ಮತ್ತು ಇತ್ತೀಚಿನ ವರ್ಷಗಳಲ್ಲಿ ನಮ್ಮ ಮುಂದೆ ತೆರೆದುಕೊಳ್ಳುತ್ತಿರುವ ದಕ್ಷಿಣ ಏಷ್ಯಾದ ಇತಿಹಾಸವನ್ನು ವಿಕೃತಗೊಳಿಸಲು, ತಿರುಚಲು ಮಾಡುತ್ತಿರುವ ಸೈದ್ಧಾಂತಿಕ ಆವೇಶದ ಪ್ರಯತ್ನಗಳ ನಡುವಿನ ವಿವಾದ ಎಂದು ಮುಂದುವರೆದು ಹೇಳಿದರು.

ಜನಸಮೂಹಗಳ ವಲಸೆಗಳು, ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳ ಉದಯ, ಹೊರಹೊಮ್ಮುವಿಕೆ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯ ಬೆಳವಣಿಗೆ, ಭಾಷೆಗಳು ಮತ್ತು ಅಭಿವ್ಯಕ್ತಿಯ ವೈವಿಧ್ಯತೆ, ಪ್ರಮುಖ ಸಾಮಾಜಿಕ ಚಳುವಳಿಗಳು, ಭಾರತೀಯ ವಿಚಾರಗಳು ಮತ್ತು ಸಂಸ್ಕೃತಿಯ ಮೇಲೆ ವಸಾಹತುಶಾಹಿಯ ಪ್ರಭಾವ, ದೀರ್ಘ ಸ್ವಾತಂತ್ರ‍್ಯ ಹೋರಾಟ ಮತ್ತು ಸ್ವಾತಂತ್ರ್ಯದ ನಂತರ ಭಾರತದ ನಿರ್ಮಾಣದ ಒಂದು ಸಮಗ್ರ ಚಿತ್ರಣವನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಜಿ.ಎನ್.ದೇವಿ ಹೇಳಿದರು.

“ಭಾರತದ 12,000 ವರ್ಷಗಳು: ಹೊಲೊಸಿನ್‌ನಿಂದೀಚೆಗೆ ಭಾರತದ ನಾಗರಿಕತೆ ಮತ್ತು ಇತಿಹಾಸದ ಮೇಲಿನ ವರದಿ” ಎಂಬ ಈ ವರದಿಯು ಭೂಮಿಯ ವಾತಾವರಣ ಮಾನವ ಜೀವಿಸಲು ಅನುಕೂಲಗೊಳ್ಳಲಾರಂಭಿಸಿದ ಹೊಲೊಸಿನ್ ಎಂದು ಭೂವೈಜ್ಞಾನಿಕರು ಹೆಸರಿಸಿರುವ ಭೂಶಕೆಯಿಂದ ಪ್ರಾರಂಭವಾಗಿ 2000 ದಲ್ಲಿ ಮೂರನೇ ಸಹಸ್ರಮಾನದ ಪ್ರಾರಂಭದ ವರೆಗಿನ ಸುಮಾರು 12 ಸಾವಿರ ವರ್ಷಗಳ ಒಂದು ಬಹು ದೀರ್ಘ ಅವಧಿಯನ್ನು ಆವರಿಸಿದೆ.

ಇದನ್ನು ಇಂಗ್ಲಿಷಿನಲ್ಲಿ ಮಾತ್ರವಲ್ಲ, ಕನ್ನಡ, ತಮಿಳು, ಹಿಂದಿ, ಮರಾಠಿ ಮತ್ತು ಬಂಗಾಲಿ ಭಾಷೆಗಳಲ್ಲೂ ತರಲಾಗುವುದು.

ಕಾರ್ಯಕ್ರಮದಲ್ಲಿ ಕವಿ ಮತ್ತು ಸಾಂಸ್ಕೃತಿಕ ವಿಮರ್ಶಕ ಅಶೋಕ್ ವಾಜಪೇಯಿ, ಇತಿಹಾಸಕಾರರಾದ ನಾರಾಯಣಿ ಗುಪ್ತಾ, ರಾಜಕೀಯ ವಿಜ್ಞಾನಿ ಝೋಯಾ ಹಸನ್, ಸಾಮಾಜಿಕ ಸಿದ್ಧಾಂತಿ ಮತ್ತು ವಿಮರ್ಶಕ ಆಶಿಸ್ ನಂದಿ, ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸರಕಾರ ಇತಿಹಾಸದ ಪುನರ್ಲೇಖನಕ್ಕೆ ರಚಿಸಿದ ಸಮಿತಿಯ ಬಗ್ಗೆ ಟಿಪ್ಪಣಿ ಮಾಡುತ್ತ ಅಶೋಕ ವಾಜಪೇಯಿ, ಅದು ಭಾರತದ ವೈವಿಧ್ಯಮಯ ಭಾಷೆಗಳು, ಸಂಸ್ಕೃತಿಗಳು ಮತ್ತು ಜನಗಳ ಮೇಲೆ ನಡೆಸಿರುವ ದಾಳಿ, ಭಾರತದ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನಡೆಸಿರುವ ದಾಳಿ ಎಂದು ವರ್ಣಿಸುತ್ತ “ಸಮಸ್ಯೆಯೆಂದರೆ ಇದನ್ನು ರಾಷ್ಟ್ರವಾದದ ಹೆಸರಿನಲ್ಲಿ, ಭಾರತ್ ಮಾತಾಕೀ ಜೈ ಎಂದು ಜೈಕಾರ ಹಾಕದ್ದಕ್ಕಾಗಿ ಕೊಂದು ಹಾಕುವ ತೆರನ ರಾಷ್ಟ್ರೀಯವಾದದ ಹೆಸರಿನಲ್ಲಿ ಮಾಡಲಾಗುತ್ತಿದೆ” ಎಂದು ಹೇಳಿದರು.

ಝೋಯಾ ಹಸನ್ ರವರು, ಭಾರತದಂತಹ ಒಂದು ಅದ್ಭುತವಾದ ವೈವಿಧ್ಯಮಯ ಸಮಾಜದಲ್ಲಿ ಇಂತಹ ಬಹುಸಂಖ್ಯಾತವಾದೀ ಪ್ರಾಜೆಕ್ಟ್ ಸಮಸ್ಯಾತ್ಮಕವಾಗುತ್ತದೆ ಎಂದರು.

“ನಾವು ವಿಭಿನ್ನರು, ನಾವು ವಿವಿಧ ಇತಿಹಾಸಗಳು, ವಿವಿಧ ನಾಗರಿಕತೆಗಳ ಒಂದು ಸಂಯೋಜನೆ ಎಂಬ ವಾಸ್ತವವನ್ನು ಒಟ್ಟಿಗೆ ತರುವ ಈ ಕೆಲಸವು ಅಪಾರ ಮಹತ್ವವನ್ನು ಹೊಂದಿದೆ. ಭಾರತ, ನಾನು ಯಾವಾಗಲೂ ಕಂಡಂತೆ, ನಾಗರಿಕತೆಯ ಮುನ್ನಡೆಯ ಜೀವಂತ ಮೂಸೆ, ದೇಶಕ್ಕೆ ಬರುತ್ತಲೇ ಇದ್ದ, ಪರಸ್ಪರ ಪ್ರಭಾವ ಬೀರಿದ ಮತ್ತು ನಮ್ಮ ನಾಗರಿಕತೆಯನ್ನು ಮತ್ತಷ್ಟು ಬೆಳೆಸಿದವುಗಳ ಸಂಗಮ” ಎಂದು ಯೆಚೂರಿ ಹೇಳಿದರು.

ಒಂದು ಶತಮಾನದ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಹುಟ್ಟಿನಿಂದ ಪ್ರಾರಂಭವಾದ “ಭಾರತ ಕುರಿತ ಕಣ್ಣೋಟದ ಸಮರ” ಇನ್ನೂ ಮುಂದುವರೆದಿದೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಮೂರು ದೃಷ್ಟಿಕೋನಗಳು ಬೆಳೆದು ಬಂದವು. ಇದೀಗ ನಡೆಯುತ್ತಿರುವುದೆಂದರೆ ಈ ಕಣ್ಣೋಟಗಳ ಸಮರದ ಮುಂದುವರಿಕೆ. ಮುಖ್ಯವಾಹಿನಿಯ ಕಾಂಗ್ರೆಸ್ ಕಣ್ಣೋಟವೆಂದರೆ, ಭಾರತವು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಲ್ಲದೆ ಬೇರೇನೂ ಆಗಲಾರದು ಎಂಬುದು. ದೇಶವು ಆರ್ಥಿಕ ಸ್ವಾತಂತ್ರ‍್ಯದತ್ತ ಸಾಗಬೇಕು ಮತ್ತು ಸಮಾಜವಾದದತ್ತ ಚಲಿಸಬೇಕು ಎಂಬುದು ಎಡಪಕ್ಷಗಳ ತರ್ಕ. ಮತ್ತು ಮೂರನೆಯದ್ದು ಈ ಕಣ್ಣೋಟಗಳಿಗೆ ಸಂಪೂರ್ಣವಾಗಿ ವಿರುದ್ಧವಾದ, ಭಾರತದ ಚಾರಿತ್ರ್ಯವನ್ನು ಅದರ ಜನಗಳ ಮತೀಯ ಸಂಯೋಜನೆಯ ಆಧಾರದ ಮೇಲೆ ನಿರೂಪಿಸಬೇಕು ಎಂದು ಹೇಳುವಂತದ್ದು. ಹಿಂದೂ ರಾಷ್ಟ್ರ ಮತ್ತು ಇಸ್ಲಾಮಿಕ್ ಪ್ರಭುತ್ವ ಎಂಬ ಕಲ್ಪನೆಯು ಮೂಡಿ ಬಂದ ರೀತಿಯಿದು. ಇದು ಎರಡು ರಾಷ್ಟ್ರದ ಸಿದ್ಧಾಂತದತ್ತ ಒಯ್ಯಿತು ಎಂದು ಅವರು ವಿವರಿಸಿದರು.

“ಹೀಗೆ ಈ ಕಣ್ಣೋಟಗಳ ಸಮರವೆಂದರೆ, ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಉನ್ಮತ್ತ ಫ್ಯಾಸಿಸ್ಟ್ ತೆರನ ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವುದಾಗಿದೆ. ನಾವೀಗ ತೊಡಗಿಸಿಕೊಂಡಿರುವ ಸಮರವು ವಾಸ್ತವವಾಗಿ ಈ ಸಮರದ ಮುಂದುವರಿಕೆಯಾಗಿದೆ” ಎಂದು ಯೆಚೂರಿ ಸೇರಿಸಿದರು.

ಭಾಷಾ ಸಂಶೋಧನೆ ಮತ್ತು ಪ್ರಕಾಶನ ಕೇಂದ್ರದ ಮುತುವರ್ಜಿಯಿಂದ ಆರಂಭವಾಗಿರುವ ಈ ವರದಿಯು ಮಾರ್ಚ್ 2023 ರಲ್ಲಿ ಹೊರಬರುವ ನಿರೀಕ್ಷೆಯಿದೆ.

Donate Janashakthi Media

Leave a Reply

Your email address will not be published. Required fields are marked *