ಲಖನೌ: ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮ ಕಳೆದ 24 ಗಂಟೆಗಳಲ್ಲಿ 36 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 12 ಜನರು ಸಿಡಿಲಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಕುಸಿತದ ನಂತರ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಆಯುಕ್ತ ರಣವೀರ್ ಪ್ರಸಾದ್ ಹೇಳಿದ್ದು, ಕಳೆದ ಐದು ದಿನಗಳಲ್ಲಿ ಸಿಡಿಲು ಬಡಿದು 39 ಜನರು ಸಾವನ್ನಪ್ಪಿದ್ದಾರೆ. ಗುಡುಗು ಸಹಿತ ಮಳೆ ಸಮಯದಲ್ಲಿ ಜನರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದಕ್ಕೆ ಹೊಸ ಮಾರ್ಗಸೂಚಿಗಳನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜೂನ್ ನಿಂದ ಪ್ರಾರಂಭವಾಗುವ ವರ್ಷದ ಮೊದಲ ಋತುವಿನ ಮಳೆ ಸಾಮಾನ್ಯವಾಗಿ ಮಿಂಚು- ಗುಡುಗು ಒಳಗೊಂಡಿರುತ್ತದೆ. ಅರಣ್ಯನಾಶ, ಜಲಮೂಲಗಳ ಸವಕಳಿ ಮತ್ತು ಮಾಲಿನ್ಯದ ಕಾರಣಗಳಿದಂದ ಸಂಭವಿಸುವ ಹವಾಮಾನ ಬದಲಾವಣೆಯಿಂದಾಗಿ ಪರಿಸರದಲ್ಲಿ ವ್ಯತ್ಯಾಸಗಳಾಗಿವೆ. ಇದರಿಂದ ಹೆಚ್ಚಿನ ಮಿಂಚು ಉಂಟಾಗಲು ಕಾರಣವಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕರ್ನಲ್ ಸಂಜಯ್ ಶ್ರೀವಾಸ್ತವ ಹೇಳಿದರು.
ಜಾಗತಿಕ ತಾಪಮಾನವು ಮಿಂಚಿನ ಆವರ್ತನವನ್ನು ಹೆಚ್ಚಿಸಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ ಮಹಾನಿರ್ದೇಶಕಿ ಸುನಿತಾ ನರೇನ್ ಹೇಳಿದ್ದಾರೆ. 2016 ರಲ್ಲಿ ಮಿಂಚಿನಿಂದಾಗಿ ದೇಶದಲ್ಲಿ 1,489 ಸಾವುಗಳು ದಾಖಲಾಗಿವೆ ಮತ್ತು 2021 ರಲ್ಲಿ ಈ ಸಂಖ್ಯೆ 2,869 ಕ್ಕೆ ಏರಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.