ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಮುಂಜಾಗ್ರತ ಕ್ರಮವಾಗಿ ಇಂದು ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ. ರಾಜ್ಯದಲ್ಲಿ ಇದೀಗ ಮುಂಗಾರು ಚುರುಕು ಪಡೆಯುತ್ತಿದೆ. ಉತ್ತರಕನ್ನಡ ಜಿಲ್ಲೆಯ ಅನೇಕ ಕಡೆ ಅಬ್ಬರದ ಮಳೆಯಾಗುತ್ತಿದ್ದು, ದಾರಕಾರ ಮಳೆಗೆ ಭಟ್ಕಳ ಕಾರವಾರ, ನಗರ ರಸ್ತೆಗಳು ಜಲಾವೃತಗೊಂಡಿವೆ. ಕಾರವಾರ ನಗರದ ರೈಲ್ವೆ ನಿಲ್ದಾಣಕ್ಕೆ ಸಾಗುವ ರಸ್ತೆ, ಹಬ್ಬುವಾಡ, ಕೆಎಚ್‌ಬಿ ಕಾಲೋನಿ, ಶಿರವಾಡ ರಸ್ತೆ, ಗುನಗಿ ವಾಡ ರಸ್ತೆಗಳು ಜಲಾವೃತವಾಗಿದ್ದು, ನಗರದ ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿದೆ.
ಭಟ್ಕಳದಲ್ಲಿ ಮಳೆಯಿಂದಾಗಿ ಸಂಚಾರಕ್ಕೆ ತೊಂದರೆ: ಭಟ್ಕಳ ತಾಲೂಕಿನಲ್ಲಂತೂ ರಾಷ್ಟ್ರೀಯ ಹೆದ್ದಾರಿ 66 ಸಂಶುದ್ಧೀನ್ ಸರ್ಕಲ್, ರಂಗಿನಕಟ್ಟೆ ಹಾಗೂ ಮಣ್ಕುಳಿ ಸೇರಿದಂತೆ ಮೂರು-ನಾಲ್ಕು ಕಡೆಗಳಲ್ಲಿ ನೀರು ನಿಂತು 2-3 ತಾಸುಗಳ ಕಾಲ ಸಂಚಾರ ತೊಂದರೆಯುಂಟಾಗಿತ್ತು. ವಾಹನ ಸವಾರರಂತೂ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳಲಾಗದೆ ಪರದಾಡುವಂತಾಗಿತ್ತು.ಅಲ್ಲದೇ, ಭಟ್ಕಳದಲ್ಲಿ ತಗ್ಗು ಪ್ರದೇಶಗಳಲ್ಲೂ ನೀರು ಹೊಕ್ಕಿದ್ದರಿಂದ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿತ್ತು. ಕಾರವಾರದ ಹಬ್ಬುವಾಡದಲ್ಲಿರುವ ಸರಕಾರಿ ಬಸ್ ನಿಲ್ದಾಣ ಡಿಪೋ ಕಚೇರಿಯೊಳಗೂ ಮಳೆ ನೀರು ನುಗ್ಗಿದ್ದು, ಡಿಪೋ ಕಚೇರಿಯ ಎಲೆಕ್ಟ್ರಾನಿಕ್ ವಸ್ತುಗಳು, ದಾಖಲೆಗಳು ನೀರು ಪಾಲಾಗಿವೆ.
ಇದನ್ನೂ ಓದಿ:ರಾಜ್ಯದಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆ ಸಾಧ್ಯತೆ
ಪಿಲಾರು ಮೋರಿಗೆ ಬಿದ್ದು ವ್ಯಕ್ತಿ ಸಾವು : ಮಂಗಳೂರಿನಲ್ಲಿ ಮೋರಿ ದಾಟುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಎಂಬಲ್ಲಿ ಮನೆ ಸಮೀಪದ ಮೋರಿ ದಾಟುವ ಸಂದರ್ಭ ವ್ಯಕ್ತಿಯೋರ್ವರು ಆಯತಪ್ಪಿ ಬಿದ್ದು ಮಳೆ ನೀರಿ ಕೊಚ್ಚಿ ಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ(52 ವರ್ಷ) ಮೃತ ವ್ಯಕ್ತಿಯಾಗಿದ್ದು, ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದರು ಎಂದು ತಿಳಿದುಬಂದಿದೆ. ಇಂದು ಕೆಲಸ ಮುಗಿಸಿ ಇಂದು ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮನೆ ಸಂಪರ್ಕದ ಮೋರಿ ದಾಟುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ. ಧಾರಾಕಾರ ಮಳೆ ಸುರಿಯುತ್ತಿದ್ದು ಮಳೆ ನೀರಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೋರಿಯಲ್ಲಿ ಬಿದ್ದಿದ್ದ ಸುರೇಶ್ ಅವರನ್ನ ಪಕ್ಕದ ಮನೆಯ ಮಾಜಿ ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯ ಪ್ರೇಮಾನಂದ ಮತ್ತು ಅವರ ಸಂಬಂಧಿ ಧನರಾಜ್ ಅವರು ಮೇಲಕ್ಕೆತ್ತಿ ಆಸ್ಪತ್ರೆ ಸಾಗಿಸುವಾಗಲೇ ಸುರೇಶ್ ಅವರು ಮೃತಪಟ್ಟಿದ್ದಾರೆ. ಮೃತ ಸುರೇಶ್ ಅವರ ಪತ್ನಿ ಬೀಡಿ ಕಟ್ಟುತ್ತಿದ್ದು, ಹಿರಿಯ ಮಗಳಿಗೆ ಇತ್ತೀಚೆಗಷ್ಟೆ ಮದುವೆ ಆಗಿತ್ತು. ಕಿರಿಯ ಮಗಳು ಅವಿವಾಹಿತಳಾಗಿದ್ದು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ತಂದೆಯೇ ಅಕಾಲಿಕ ಮರಣವನ್ನಪ್ಪಿದ್ದು ಬಡ ಅಶಕ್ತ ಕುಟುಂಬಕ್ಕೆ ದಿಕ್ಕೇ ಕಾಣದಂತಾಗಿದೆ.
ಇದನ್ನೂ ಓದಿ:ಬೆಂಗಳೂರು ಸೇರಿ ರಾಜ್ಯದಲ್ಲಿ ಇಂದಿನಿಂದ 4 ದಿನ ಭಾರಿ ಮಳೆ ಸಾಧ್ಯತೆ!
ಕುಂದಾಪುರದಲ್ಲಿ ಕೆರೆಗೆ ಬಿದ್ದು ವ್ಯಕ್ತಿಯೋರ್ವ ಸಾವು: ನಿನ್ನೆ(ಜು.4) ತಡರಾತ್ರಿ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಬಳಿ ಆಯತಪ್ಪಿ ಕೆರೆಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ. ದಿವಾಕರ್ ಶೆಟ್ಟಿ ಮೃತ ನಿನ್ನೆ ರಾತ್ರಿ ಹೋಟೆಲ್ ಕೆಲಸ ಮುಗಿಸಿ ದಿವಾಕರ್ ಅವರು ತೆಕ್ಕಟೆಯ ಮಲ್ಯಾಡಿ ಸಮೀಪ ಸ್ಕೂಟರ್ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅವರಿಗೆ ಕಾಲು ನೋವು ಇದ್ದ ಹಿನ್ನೆಲೆಯಲ್ಲಿ ಇಳಿಯಲಾಗದೇ ಬೈಕ್ ಜೊತೆಗೆ ಜಾರಿ ಕೆರೆಗೆ ಉರುಳಿ ಸಾವನ್ನಪ್ಪಿದ್ದರು. ಮುಳುಗುತಜ್ಞ ಈಶ್ವರಮಲ್ಪೆ ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಶವವನ್ನ ಮೇಲಕ್ಕೆ ತಗೆದಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ : ಭಾರತೀಯ ಹವಮಾನ ಇಲಾಖೆ ಮತ್ತು ಕರ್ನಾಟಜ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 5, 2023 ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪದವಿ ಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪ್ರತಿ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳಬೇಕು. ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಕಂಟ್ರೋಲ್ ರೂಂ ಸಂಖ್ಯೆ 1077 ಹಾಗೂ ದೂರವಾಣಿ ಸಂಖ್ಯೆ 0824-244259ನ್ನು ಸಂಪರ್ಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜುಲೈ 5 ರಂದು ಭಾರಿ ಮಳೆ ಬೀಳುವ ಸೂಚನೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಮಾಹಿತಿ ನೀಡಿದ್ದು, ಹೀಗಾಗಿ ಜಿಲ್ಲಾಡಳಿತವು ಮುಂಜಾಗ್ರತ ಕ್ರಮವಾಗಿ ಜುಲೈ 5, 2023ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹಿನ್ನಾವರ ಮತ್ತು ಭಟ್ಕಳ ಪ್ರದೇಶದ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.