ಬೆಂಗಳೂರು: ಮಹಿಳೆಯರ ಅಪಹರಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಶಾಸಕ ಮಾಜಿ ಸಚಿವ ರೇವಣ್ಣರಿಂದ ಕಿಡ್ನ್ಯಾಪ್ ಆಗಿದ್ದ ಸಂತ್ರಸ್ಥೆ ಎಸ್ಐಟಿ ರಕ್ಷಣೆ ಮಾಡಿದ ಕೆಲವೇ ಹೊತ್ತಿನಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ನಿರಾಕರಣೆಯಾಗಿದ್ದು, ರೇವಣ್ಣನಿಗೆ ಬಂಧನದ ಭೀತಿ ಎದುರಾಗಿದೆ.
ಅಪಹರಣಕ್ಕೆ ಒಳಗಾಗಿದ್ದ ಮಹಿಳೆ ಹಲ್ಲೆಗೊಳಗಾದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಹುಣಸೂರು ತಾಲ್ಲೂಕಿನ ಕಾಳೇನಹಳ್ಳಿ ತೋಟದ ಮನೆಯಲ್ಲಿ ಹಲ್ಲೆಗೊಳಗಾದ ಸ್ಥಿತಿಯಲ್ಲಿ ಮಹಿಳೆಯನ್ನು ಎಸ್‌ಐಟಿ ತಂಡ ರಕ್ಷಿಸಿದೆ. ಇನ್ನು ಕಾಳೇನಹಳ್ಳಿ ತೋಟ ರೇವಣ್ಣ ಅವರ ಆಪ್ತ ರಾಜಶೇಖರ ಅವರಿಗೆ ಸೇರಿದ್ದು ಎನ್ನಲಾಗಿದೆ.
ಎಚ್.ಡಿ.ರೇವಣ್ಣ ಅವರ ಸಂಬಂಧಿ ಸತೀಶ್ ಬಾಬು ಅವರು ಸಂತ್ರಸ್ತ ಮಹಿಳೆಯನ್ನು ಎ.29 ರಂದು ಕರೆದುಕೊಂಡು ಹೋಗಿದ್ದು, ಅಂದಿನಿಂದ ಮಹಿಳೆ ರಾಜಶೇಖರ್ ಅವರ ತೋಟದ ಮನೆಯಲ್ಲಿ ಇಡಲಾಗಿತ್ತು ಎಂದು ವರದಿಯಾಗಿದೆ. ಸಂತ್ರಸ್ತೆಯನ್ನು ಬೆಂಗಳೂರಿಗೆ ಎಸ್‌ಐಟಿ ಪೊಲೀಸರು ಕರೆದುಕೊಂಡು ಬರುತ್ತಿದ್ದು, ಇಡೀ ಪ್ರಕರಣದ ಪ್ರಮುಖ ಸಾಕ್ಷಿಯಾಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ : ಅಧಿಕಾರಿಗಳಿಂದ ರೇವಣ್ಣ ನಿವಾಸದಲ್ಲಿ ಮಹಜರು
ಸಂತ್ರಸ್ಥೆಯ ಪುತ್ರ ಈ ಸಂಬಂಧ ದಾಖಲಿಸಿದ್ದ ದೂರಿನಲ್ಲಿ, ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು. ಪೆನ್ ಡ್ರೈವ್ ವಿವಾದದಲ್ಲಿ ತನ್ನ ತಾಯಿಯ ಚಿತ್ರವೂ ಇದೆ. ವಿಡಿಯೋ ಬಹಿರಂಗ ಬಳಿಕ ಸತೀಶ್ ಬಾಬು ಹಾಗೂ ರೇವಣ್ಣ ತಾಯಿಯನ್ನು ಕರೆಯುತ್ತಿದ್ದರು. ಬಳಿಕ ತಾಯಿಯನ್ನು ಅವರು ಕರೆದೊಯ್ದರು. ಆಗಿನಿಂದ ನಾಪತ್ತೆಯಾಗಿದ್ದಾರೆ ಎಂದು ಸಂತ್ರಸ್ಥೆ ಪುತ್ರ ದೂರಿನಲ್ಲಿ ಉಲ್ಲೇಖಿಸಿದ್ದ. ಹೀಗಾಗಿ ನಿನ್ನೆಯಿಂದ ನಾಪತ್ತೆಯಾದ ಮಹಿಳೆಗಾಗಿ ತೀವ್ರ ಹುಟುಕಾಟ ನಡೆಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಪ್ರಕರಣದಲ್ಲಿ ಮಹಿಳೆಯನ್ನು ಹುಡುಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಸಂತ್ರಸ್ಥೆ ಪುತ್ರನ ದೂರಿನಡಿ ಕೆ.ಆರ್.ನಗರ ಠಾಣೆಯಲ್ಲಿ ಸೆಕ್ಷನ್ 364(A) ,365, ಹಾಗು 34 ಅಡಿ ಪ್ರಕರಣ ದಾಖಲಾಗಿದ್ದು, ರೇವಣ್ಣ A1 ಆರೋಪಿ ಮತ್ತು ಸತೀಶ್ ಬಾಬು ಪ್ರಕರಣದ A2 ಆರೋಪಿಯಾಗಿದ್ದಾರೆ. ಸಂತ್ರಸ್ಥೆ ಚೆನ್ನಾಂಬಿಕಾ ಥಿಯೇಟರ್ ಪಕ್ಕದಲ್ಲಿರುವ ರೇವಣ್ಣ ಮನೆಯಲ್ಲಿ ಸುಮಾರು 6 ವರ್ಷಗಳ ಕಾಲ ಕೆಲಸ ಮಾಡಿದ್ದರು. ಸುಮಾರು 03 ವರ್ಷಗಳ ಹಿಂದೆ ಹೆಚ್.ಡಿ, ರೇವಣ್ಣ ರವರ ಮನೆಯಿಂದ ಕೆಲಸವನ್ನು ಬಿಟ್ಟು ಕೆಆರ್ ನಗರದಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದರು.