ಬೆಂಗಳೂರು/ಮೈಸೂರು: ಹಾಸನದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಶನಿವಾರ ಸಂಜೆ ವಿಶೇಷ ತನಿಖಾ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏಪ್ರಿಲ್ 27ರಿಂದ ನಾಪತ್ತೆಯಾಗಿದ್ದ ಸಂತ್ರಸ್ತೆಯನ್ನು ರಕ್ಷಣೆ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪದ್ಮನಾಭನಗರ ನಿವಾಸದಿಂದ ರೇವಣ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕಿಡ್ನಾಪ್ ಪ್ರಕರಣ ದಾಖಲಾಗಿದೆ.
ಶನಿವಾರ ಸಂಜೆ ಎಸ್ ಐಟಿ ಪೊಲೀಸರು ರೇವಣ್ಣ ಅವರನ್ನು ವಶಕ್ಕೆ ಪಡೆಯಲು ಎಚ್ ಡಿ ದೇವೇಗೌಡ ಅವರ ಮನೆಗೆ ತೆರಳಿದ್ದರು. ಆದರೆ ಬಹಳ ಸಮಯ ಮನೆಯ ಬಾಗಿಲು ತೆಗೆದಿರಲಿಲ್ಲ. ಬಳಿಕ ಪೊಲೀಸರು ರೇವಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.
ರೇವಣ್ಣ ಆಪ್ತನ ಮನೆಯಲ್ಲಿದ್ದ ಸಂತ್ರಸ್ತೆ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಕೆ ಆರ್ ನಗರದಲ್ಲಿ ಕಿಡ್ನಾಪ್ ಆಗಿದ್ದ ಸಂತ್ರಸ್ತೆಯನ್ನು ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಶನಿವಾರ ರಕ್ಷಣೆ ಮಾಡಲಾಗಿದೆ. ಮಾಜಿ ಸಚಿವ ಎಚ್ ಡಿ ರೇವಣ್ಣ ಆಪ್ತ ಸಹಾಯಕ ರಾಜಶೇಖರ್ ತೋಟದ ಮನೆಯಿಂದ ಸಂತ್ರಸ್ತೆಯನ್ನು ಎಸ್‌ಐಟಿ ಪೊಲೀಸರು ರಕ್ಷಣೆ ಮಾಡಿ ಕರೆದೊಯ್ದಿದ್ದಾರೆ.
ಸತೀಶ್ ಬಾಬುಗೆ 14 ದಿನಗಳ ನ್ಯಾಯಾಂಗ ಬಂಧನ
ಎಚ್ ಡಿ ರೇವಣ್ಣ ಅವರ ಸಹಚರರು ತಮ್ಮ ತಾಯಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ 20 ವರ್ಷದ ಯುವಕನೊಬ್ಬ ಪೊಲೀಸ್ ದೂರು ದಾಖಲಿಸಿದ್ದಾರೆ. ಮಹಿಳೆಯನ್ನು ಹುಣಸೂರಿನಲ್ಲಿ ಪತ್ತೆಹಚ್ಚಲಾಗಿದೆ ಮತ್ತು ಪ್ರಸ್ತುತ, ಅವರು ಮಹಿಳೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಪಹರಣ ಪ್ರಕರಣದ ಆರೋಪಿ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣನನ್ನು ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.