ಹೈದರಾಬಾದ್: ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್ ಸರ್ಕಾರದ ಖಜಾನೆಯಿಂದ ತಮ್ಮ ವಯಕ್ತಿಕ ಕಾನೂನು ವಿಚಾರಗಳಿಗೆ ಸಂಬಂಧಿಸಿದಂತೆ 15 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದು, ಅದನ್ನು ಕೂಡಲೇ ಮರುಪಾವತಿಸುವಂತೆ ತೆಲಂಗಾಣ ಹೈಕೋರ್ಟ್ ಸೂಚಿಸಿದ್ದು, 90 ದಿನಗಳಲ್ಲಿ ಹಣವನ್ನು ಪಾವತಿ ಮಾಡಲು ಅಧಿಕಾರಿಗೆ ತಿಳಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಅಭಿನಂದ್ ಕುಮಾರ್ ಶಾವಲಿ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದು, ಒಂದು ವೇಳೆ ನಿಗದಿತ ವೇಳೆಯಲ್ಲಿ ಹಣ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಮುಂದಿನ 30 ದಿನಗಳಲ್ಲಿ ಹಣ ವಸೂಲಿ ಮಾಡುವಂತೆ ರಿಜಿಸ್ಟ್ರಾರ್ ಜನರಲ್ಗೆ ಸೂಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ
2015ರಲ್ಲಿ ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್ ಮತ್ತು ಅವರ ಪತಿ ಹೋಟೆಲೊಂದರಲ್ಲಿ ನಡೆದ ಫ್ಯಾಷನ್ ಶೋ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಆಧರಿಸಿ ನಿಯತಕಾಲಿಕೆಯೊಂದು ‘ನೋ ಬೋರಿಂಗ್ ಬಾಬು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಲೇಖನ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಮಿತಾ ಸಬರ್ವಾಲ್ ನಿಯತಕಾಲಿಕೆ ವಿರುದ್ಧ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು.
ಈ ಮೊಕದ್ದಮೆಗಾಗಿ ನ್ಯಾಯಾಲಯದ ಶುಲ್ಕವಾಗಿ 9.75 ಲಕ್ಷ ರೂಪಾಯಿಯನ್ನು ಪಾವತಿಸಲು ತೆಲಂಗಾಣ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆಗ ಸರ್ಕಾರ 9.75 ಲಕ್ಷ ರೂಪಾಯಿ ನ್ಯಾಯಾಲಯ ಶುಲ್ಕ ಸೇರಿದಂತೆ, ಇತರ ವೆಚ್ಚ ಸೇರಿದಂತೆ 15 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿತ್ತು.
ಸ್ಮಿತಾ ಸಬರ್ವಾಲ್ ತಮ್ಮ ವೈಯಕ್ತಿಕ ವಿಚಾರಕ್ಕೆ ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಿ.ವಿದ್ಯಾಸಾಗರ್ ಮತ್ತು ಕೆ.ಈಶ್ವರ ರಾವ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್ ದ್ವಿಸದಸ್ಯ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದು, ಸಂವಿಧಾನದ 282ನೇ ವಿಧಿಯ ಪ್ರಕಾರ ಸಾರ್ವಜನಿಕ ಒಳಿತಿಗಾಗಿ ಹಣವನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಆದರೆ, ಖಾಸಗಿ ವ್ಯಕ್ತಿ ಮತ್ತೊಂದು ಖಾಸಗಿ ಸಂಸ್ಥೆಯ ವಿರುದ್ಧ ಹೋಗುವುದು ಸಾರ್ವಜನಿಕ ಹಿತಾಸಕ್ತಿಯಲ್ಲ. ಸ್ಮಿತಾ ಸಬರ್ವಾಲ್ ಅವರ ಖಾಸಗಿ ಪ್ರಕರಣಕ್ಕೆ ಸರ್ಕಾರದ ಖಜಾನೆಯಿಂದ ಹಣ ಪಡೆದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದರ ಜೊತೆಗೆ ಖಾಸಗಿಯವರ ಲಾಭಕ್ಕಾಗಿ ಸಾರ್ವಜನಿಕ ಖಜಾನೆ ಮೇಲೆ ಆರ್ಥಿಕ ಹೊರೆ ಹಾಕುವುದು ಸೂಕ್ತವಲ್ಲ. ಹಣ ಮಂಜೂರು ಮಾಡಿದ ತೆಲಂಗಾಣ ಸರ್ಕಾರದ ನಿರ್ಧಾರ ಅಸಮಂಜಸವಾಗಿದೆ. ಸ್ಮಿತಾ ಸಬರ್ವಾಲ್ ಪಡೆದುಕೊಂಡಿರುವ ಹಣವನ್ನೆಲ್ಲಾ ವಾಪಸ್ ಸರ್ಕಾರಕ್ಕೆ ಮರುಪಾವತಿ ಮಾಡಬೇಕೆಂದು ತೀರ್ಪು ನೀಡಿದೆ.