ಹಾವೇರಿ : ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆ, ಫಸಲು ಕೂಡ ಚೆನ್ನಾಗಿ ಬಂದಿತ್ತು. ಇನ್ನೇನು ರೈತರ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿತು ಅನ್ನೋ ವಷ್ಟರಲ್ಲಿ ಗದ್ದೆಗೆ ಬೆಂಕಿ ತಗುಲಿ ಕಟಾವಿಗೆ ಬಂದಿದ್ದ ಕಬ್ಬು ಮೇಕೆ ಜೋಳ ಬೆಂಕಿ ಬೆಂದು ಸುಟ್ಟು ಕರಕಲಾಗಿವೆ. ರೈತರು ಈ ಘಟನೆಗೆ ಬೆಂದು ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾನೆ.
ಹೌದು ಈ ದೃಶ್ಯಗಳು ಕಂಡು ಬಂದಿದ್ದು ಸಿಎಂ ತವರು ಜಿಲ್ಲೆಯಲ್ಲಿ. ಹಾವೇರಿ ಜಿಲ್ಲೆಯ ಶಿಗ್ಗಾವಿ, ಹಾವೇರಿ, ಬ್ಯಾಡಗಿ ಸೇರಿದಂತೆ ಹಿರೆಕೇರೂರು ತಾಲ್ಲೂಕಿನಲ್ಲಿ 106 ಕಡೆ ರೈತರ ಹೊಲಗಳಲ್ಲಿ ವಿದ್ಯುತ್ ತಂತಿಗಳಿಂದ ಕಿಡಿ ಬಿದ್ದು ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬೆಳೆ ನಾಶವಾದ ಘಟನೆಗಳು ನಡೆಯುತ್ತಲೇ ಇವೆ. ಸಾಲ ಸೂಲ ಮಾಡಿ ಬೆಳೆ ಬೆಳೆದು ಪರಿಶ್ರಮದ ಫಲ ಎದುರು ನೋಡ್ತಿದ್ದ ರೈತನಿಗೆ ನೆಲವೇ ಕುಸಿದಂತಾಗಿದೆ.
ಇದನ್ನೂ ಓದಿ : 205 ಕೆಜಿ ಈರುಳ್ಳಿಗೆ ರೈತ ಪಡೆದದ್ದು 8.36 ರೂಪಾಯಿ!
ಒಟ್ಟು ಬೆಂಕಿ ಅವಘಡದಲ್ಲಿ 1 ಕೋಟಿ 72 ಲಕ್ಷ ಮೌಲ್ಯದ ಬೆಳೆಗಳು ಸುಟ್ಟು ಕರಕಲು ಆದ ಬಗ್ಗೆ ವರದಿಯಾಗಿದೆ. 5 ಕೋಟಿ 40 ಲಕ್ಷ ಮೌಲ್ಯದ ಕಬ್ಬು ಹಾಗೂ ಮೆಕ್ಕೆಜೋಳ ತೆನೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಇದರಲ್ಲಿ 1 ಕೋಟಿ 72 ಲಕ್ಷ ಮೌಲ್ಯದ ಬೆಳೆಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಉಳಿದದನ್ನು ನಂದಿಸುವ ಪ್ರಯತ್ನ ಮಾಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿಯನ್ನು ನೀಡಿದೆ.
ಇನ್ನು ಇದ್ಕೆಲ್ಲಾ ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಹಾಕಿರುವ ವಿದ್ಯುತ್ ಕಂಬಗಳೆ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಷ್ಟಪಟ್ಟು ಬೆಳೆದ ಕಬ್ಬು ಹಾಗೂ ಮೆಕ್ಕೆಜೋಳ ಫಸಲುಗಳು ಬೆಂಕಿಗಾಹುತಿಯಾಗುತ್ತಿದ್ದು, ಸಾವಿರಾರು ಕ್ವಿಂಟಾಲ್ ಕಬ್ಬು ಹಾಗೂ ನೂರಾರು ಕ್ವಿಂಟಾಲ್ ಮೆಕ್ಕೆಜೋಳ ತೆನೆ ನಾಶವಾಗಿವೆ. ಈ ಹಿನ್ನೆಲೆ ನಮ್ಮ ಬೆಳೆ ಹಾಗೂ ಫಸಲು ಕಾಪಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ರೈತರು ಆಗ್ರಹಿಸಿದ್ದಾರೆ. ಬಾಕಿ ಇರುವ ಪರಿಹಾರ ಹಣ ಕೊಡುವಂತೆ ಒತ್ತಾಯಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ, ಮಳೆ ಪ್ರವಾಹದಿಂದ ಜಮೀನು ಸಮೇತ ಬೆಳೆ ಕೊಚ್ಚಿಕೊಂಡು ಹೋಗಿದ್ದವು. ಅದ್ರಲ್ಲಿ, ಅಳಿದುಳಿದ ಬೆಳೆಗಳು ಕೂಡಾ ಇದೀಗ ಬೆಂಕಿಗೆ ಆಹುತಿಯಾಗ್ತಿದ್ದು ರೈತರ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಕೂಡಲೇ ಸರಕಾರ ಹಾಗೂ ಜಿಲ್ಲಾಡಳಿತ ರೈತರಿಗೆ ಪರಿಹಾರ ನೀಡಿ, ಅವೈಜ್ಞಾನಿಕ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ರೈತರ ಬದುಕನ್ನು ಕಾಪಾಡಬೇಕಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ