ನವದೆಹಲಿ: ಇತ್ತೀಚಿಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿರುವವರ ಮೇಲೆ ಕ್ರಮವಹಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಇಲ್ಲಿನ ಉತ್ತರಾಖಂಡ ಸದನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಉತ್ತರಾಖಂಡ ಸದನ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಂದಿನ ಸಮಾವೇಶದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಯತಿ ನರಸಿಂಹಾನಂದ್, ಪ್ರಬೋಧಾನಂದ್ ಮತ್ತು ಅನ್ನಪೂರ್ಣ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಎಐಎಸ್‌ಎ, ಎಸ್‌ಎಫ್‌ಐ, ಡಿವೈಎಫ್‌ಐ, ಎಐಎಲ್‌ಯು, ಯುಎಎಚ್, ಎನ್‌ಎಫ್‌ಐಡಬ್ಲ್ಯೂ, ಕೆವೈಎಸ್, ಎಐಡಿಡಬ್ಲ್ಯೂಎ, ದಿಶಾ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಮಾತನಾಡಿದರು.
ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಮಾತನಾಡಿ “ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿನ ಭಾಷಣಕಾರರು ಜರ್ಮನಿಯ ನಾಜಿ ಪಡೆಗಳಂತೆಯೇ ವರ್ತಿಸುತ್ತಿದ್ದಾರೆ. ಪ್ರಬಲವಾದ ಜನಾಂದೋಲನದೊಂದಿಗೆ ಆರ್‌ಎಸ್‌ಎಸ್ ಅನ್ನು ಸೋಲಿಸಬೇಕು” ಎಂದು ಕರೆ ನೀಡಿದರು.
ಉತ್ತರಾಖಂಡ ಸದನದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಾಜೀನಾಮೆ ನೀಡಬೇಕು ಮತ್ತು ಹರಿದ್ವಾರ ‘ಧರ್ಮ ಸಂಸದ್’ನಲ್ಲಿ ದ್ವೇಷಪೂರಿತ ಭಾಷಣಗಳಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅವರ ಮೇಲೆ ಕೇವಲ ಪ್ರಕರಣ ದಾಖಲಿಸಿದರೆ ಸಾಲದೂ ಅವರ ಮೇಲೆ ಯುಎಪಿಎ ಅಡಿಯಲ್ಲಿ ಸಂಬಂಧಪಟ್ಟ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ಆಗ ಮಾತ್ರ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಮಖ್ಯ ನ್ಯಾಯಮೂರ್ತಿಗೆ ವಕೀಲರಿಂದ ಪತ್ರ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಪತ್ರ ಬರೆದ ಎಪ್ಪತ್ತಾರು ವಕೀಲರು ದೆಹಲಿ ಮತ್ತು ಹರಿದ್ವಾರದಲ್ಲಿ ಆಯೋಜಿಸಲಾದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಮಾಡಿದ ದ್ವೇಷದ ಭಾಷಣಗಳನ್ನು ಸ್ವಯಂ ಪ್ರೇರಿತವಾಗಿ ಪ್ರಕರಣ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ ಮಾಡಿದ ಭಾಷಣಗಳು ಕೇವಲ ದ್ವೇಷದ ಭಾಷಣಗಳಲ್ಲ, ಇಡೀ ಸಮುದಾಯದ ಹತ್ಯೆಯ ಬಹಿರಂಗ ಕರೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ರೀತಿಯ ಭಾಷಣಗಳು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಗಂಭೀರ ಬೆದರಿಕೆಯನ್ನುಂಟುಮಾಡುತ್ತವೆ. ಅಲ್ಲದೆ, ಲಕ್ಷಾಂತರ ಮುಸ್ಲಿಂ ನಾಗರಿಕರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತವೆ. ಇತ್ತೀಚಿನ ಭಾಷಣಗಳು ನಾವು ಹಿಂದೆ ಕಂಡ ಇದೇ ರೀತಿಯ ಭಾಷಣಗಳ ಸರಣಿಯ ಒಂದು ಭಾಗವಾಗಿದೆ ಎಂದು ಸಹ ಸೂಚಿಸಲಾಗಿದೆ. ಹೀಗಾಗಿ, ಇಂತಹ ಘಟನೆಗಳನ್ನು ತಡೆಯಲು ತುರ್ತು ನ್ಯಾಯಾಂಗದ ಮಧ್ಯಪ್ರವೇಶದ ಅವಶ್ಯಕತೆ ಇದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪತ್ರಕ್ಕೆ ಹಿರಿಯ ವಕೀಲರಾದ ಸಲ್ಮಾನ್ ಖುರ್ಷಿದ್, ದುಷ್ಯಂತ್ ದವೆ ಮತ್ತು ಮೀನಾಕ್ಷಿ ಅರೋರಾ ಸೇರಿದಂತೆ ಮತ್ತಿತರರು ಸಹಿ ಹಾಕಿದ್ದಾರೆ.
ಡಿಸೆಂಬರ್ 16 ರಿಂದ 19 ರವರೆಗೆ ಮೂರು ದಿನಗಳ ಕಾಲ ಹರಿದ್ವಾರದ ವೇದ ನಿಕೇತನ ಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಕೆಟ್ಟದಾದ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ್ ಆಯೋಜಿಸಿದ್ದರು.