ದ್ವೇಷದಾಟ 2023 : ಮಣಿಪುರ, ಹರ್ಯಾಣ ,ರೈಲಿನಲ್ಲಿ ಬುಲೆಟ್‍ಬಾಜಿ

ವೇದರಾಜ್‌ ಎನ್‌.ಕೆ

 

ಈ ಜುಲೈ 31 ಒಂದು ಘಟನಾಮಯ ದಿನ. ಮೇ 3ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಡಬಲ್‍ ಇಂಜಿನ್‍ ವಾಲಾಗಳನ್ನು ತರಾಟೆಗೆ ತಗೊಂಡಿತು. ಆದರೆ ಅದಕ್ಕೆ ಸ್ವಲ್ಪವೇ ಮೊದಲು ಜಯಪುರ-ಮುಂಬೈ ಸೆಂಟ್ರಲ್ ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಕರ ರಕ್ಷಣೆಗೆ ಕೊಟ್ಟಿದ್ದ ರೈಫಲಿನಿಂದಲೇ ರೈಲ್ವೆ ಸಂರಕ್ಷಣಾ ಪಡೆಯ ಕಾನ್ ಸ್ಟೇಬಲ್ ತನ್ನು ಮೇಲಧಿಕಾರಿ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದ ಭೀಕರ ಸುದ್ದಿ ಬಂದಿತ್ತು.ಅದೇ ದಿನ ಮಧ್ಯಾಹ್ನದ ವೇಳೆಗೆ ಇನ್ನೊಂದು ಡಬಲ್‍ ಇಂಜಿನ್‍ ರಾಜ್ಯ ಹರ್ಯಾಣದ ಎರಡು ಜಿಲ್ಲೆಗಳು ಹತ್ತಿ ಉರಿಯಲಾರಂಭಿಸಿದ ಸುದ್ದಿ. ಮೂರೂ ಒಂದಕ್ಕೊಂದು ಹೆಣೆದುಕೊಂಡಂತಿದ್ದ ಆತಂಕಕಾರಿ ಘಟನೆಗಳು. ಬಹುಶ: ಇದನ್ನು
ದೇಶದ ವ್ಯಂಗ್ಯಚಿತ್ರಕಾರರ ಕಣ್ಣಿಂದಲೇ ನೋಡಬೇಕು. 

ಮಣಿಪುರದ ಮೇ4ರ ಭೀಕರ ಘಟನೆ ಒಂದು ವೀಡಿಯೋ ಮೂಲಕ ಜುಲೈ 18ರಂದು ಬಯಲಿಗೆ ಬರುವ ವರೆಗೆ ಪ್ರಧಾನಿಗಳು ಮತ್ತು ಅವರ ‘ಮಡಿಲ ಮಾಧ್ಯಮ’ಗಳು ಮಣಿಪುರದಲ್ಲಿ ಮೇ 3 ರಿಂದ ನಡೆಯುತ್ತಿದ್ದ ವ್ಯಾಪಕ ಹಿಂಸಾಚಾರಗಳ ಬಗ್ಗೆ ತುಟಿ ಪಿಟಕ್ಕೆಂದಿರಲಿಲ್ಲ

ಮಣಿಪುರ-ಮೌನಪುರ

(ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್ )

ವೀಡಿಯೋ ಬಯಲಿಗೆ ಬಂದಾಗ ಸುಪ್ರಿಂ ಕೋರ್ಟ್ ಜುಲೈ 20ರಂದು, ಸರಕಾರ ತಾನಾಗಿಯೇ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ತಾನೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜುಲೈ 28ರ ವರೆಗೆ ಸಮಯಾವಕಾಶ ನೀಡಿತು.

(ಪಂಜು ಗಂಗೊಳ್ಳಿ,ದಿ ಸ್ಟೇಟ್)

ಅಂದೇ, ಕೊನೆಗೂ ಮೌನ ಮುರಿದ ಪ್ರಧಾನಿಗಳೂ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ದಿನ ಸಂಸತ್ತಿನ ಹೊರಗೆ ಮಾತಾಡುತ್ತ, ಈ ಘಟನೆ 140 ಕೋಟಿ ಭಾರತೀಯರು ನಾಚಿಕೆಪಡುವಂತೆ ಮಾಡಿದ್ದು, ಇದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನೋಡಿದ್ರಾ, 140 ಕೋಟಿ ಜನಗಳನ್ನು ನಾಚಿಕೆಯಲ್ಲಿ ಮುಳುಗಿಸಿದೆ, ಮತ್ತು ನಾನು ಒದ್ದೆಯಾಗದೆ ಹೊರಬಂದೆ

(ರಾಜೇಂದ್ರ ಧೋಡಪ್ ಕರ್, ಫೇಸ್‍ಬುಕ್)

79 ದಿನಗಳ ನಂತರ 45 ಸೆಕೆಂಡುಗಳ ಕಾಲ ಮಾತಾಡಲು ಬಾಯಿ ತೆರೆದರು. ಆಮೇಲೆ ಮಣಿಪುರ ಹಿಂಸಾಚಾರಗಳ ಬಗ್ಗೆ ಒಂದೊಂದಾಗಿ ಬಹಳಷ್ಟು ಸಂಗತಿಗಳು ಬೆಳಕಿಗೆ ಬರಲಾರಂಭಿಸಿದವು. ಮಣಿಪುರ ಸಹಜಸ್ಥಿತಿಗೆ ಬರಬೇಕಾದರೆ ಪ್ರಸಕ್ತ ಮುಖ್ಯಮಂತ್ರಿ ಹೋಗಬೇಕು ಎಂಬ ಆಗ್ರಹಗಳು ಎಲ್ಲೆಡೆಯಿಂದ ಕೇಳಬರುತ್ತಿದ್ದರೂ, ಆ 45 ಸೆಕಂಡುಗಳ ನಂತರ ಪ್ರಧಾನಿಗಳ ಮೌನ ಮತ್ತೆ ಮುಂದುವರೆದಿದೆ. ಅದಕ್ಕೆ ಕಾರಣ 2023ರ ಮಣಿಪುರಕ್ಕೂ 2002ರ ಗುಜರಾತಿಗೂ ಇರುವ ಹೋಲಿಕೆ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

(ಪಿ.ಮಹಮ್ಮದ್, ಫೇಸ್‍ಬುಕ್)

ಆದರೆ ಗೃಹಮಂತ್ರಿಗಳ ಸಮಜಾಯಿಷಿ ಬೇರೆಯೇ…..

ಪ್ರಧಾನಿಗಳು ಮಣಿಪುರವನ್ನು ವೀಕ್ಷಿಸುತ್ತಿದ್ದಾರೆ -ಅಮಿತ್‍ ಷಾ

(ಸತೀಶ ಆಚಾರ್ಯ, ಫೇಸ್‍ಬುಕ್)

ಜುಲೈ 31ರಂದು ವಿಚಾರಣೆ ವೇಳೆಯಲ್ಲಿ ಕೇಂದ್ರ ಮತ್ತು ಮಣಿಪುರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತ ಅಲ್ಲಿ ಕಾನೂನು ಮತ್ತು ಸಾಂವಿಧಾನಿಕ ವ್ಯವಸ್ಥೆ ಮುರಿದು ಬಿದ್ದಿದೆ ಎಂದಿತು.

ಎಲ್ಲೆಲ್ಲೂ ಕಲಮು 356 ರ ಛಾಯೆ ಕಾಣಿಸುತ್ತಿದ

“ನ್ಯಾಯಮೂರ್ತಿಗಳು ಸಾಕಷ್ಟು ಗಟ್ಟಿದನಿಯಲ್ಲಿಯೇ
ಯೋಚಿಸುತ್ತಿದ್ದಾರೆ, ಕೇಳಲು ನೀನು ಸಿದ್ಧನಿದ್ದರೆ!”
(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

***

ಮಣಿಪುರ ಹಿಂಸಾಚಾರಗಳಲ್ಲಿ “ದಾವೇದಾರರಿಲ್ಲದ ಹೆಚ್ಚಿನ ಹೆಣಗಳು ನುಸುಳುಕೋರರದ್ದು” ಎಂದು ಕೇಂದ್ರ ಸರಕಾರದ ಸಾಲಿಸಿಟರ್‍ ಜನರಲ್‍ ವಿಚಾರಣೆಯ ವೇಳೆಗೆ ಸುಪ್ರಿಂ ಕೋರ್ಟಿಗೆ ತಿಳಿಸಿದರು.

ಆದರೆ ವಾಸ್ತವವಾಗಿ ಇದು ದಾವೇದಾರರಿಲ್ಲದೆ ಅಲ್ಲ, ದಾವೇದಾರರು ಬರಲಾರದ ಸ್ಥಿತಿ ಇರುವುದರಿಂದಾಗಿ ಎಂದು ಇದಕ್ಕೆ ಬಲವಾದ ಆಕ್ಷೇಪ ಬಂದಿದೆ. ಸಾಲಿಸಿಟರ್‍ ಜನರಲ್‍ ರಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವವರ ಬಾಯಿಂದ ಇಂತಹ ಹಗುರ ಮಾತುಗಳು ಶೋಭೆ ತರುವಂತದ್ದಲ್ಲ, ಇದನ್ನು ಹಿಂತೆಗೆದುಕೊಳ್ಳಬೇಕು ಎಂಬ ಆಗ್ರಹವೂ ಬಂದಿದೆ.

ಇದನ್ನೂಓದಿ: ಪ್ರಜಾಪ್ರಭುತ್ವದ ಭವನದಲ್ಲಿ ‘ರಾಜದಂಡ’!

ಸಾಲಿಸಿಟರ್‍ ಜನರಲ್‍ ಕೇಂದ್ರ ಸರಕಾರದ ಪರವಾಗಿ ದೇಶದ ಸರ್ವೋಚ್ಚ ನ್ಯಾಯಾಲಯದ ಎದುರು ಈ ಮಾತನ್ನು ಹೇಳುತ್ತಿರುವಾಗಲೇ, ಅಂದರೆ , ಅದೇ ಜುಲೈ31ರಂದು, ಹರ್ಯಾಣಾದ ನೂಹ್‍ನಲ್ಲಿ, ಗುರುಗ್ರಾಮದಲ್ಲಿ ‘ಕೋಮು ಸೌಹಾರ್ದ’ ಮಾರಣಾಂತಿಕ ಏಟು ತಿಂದು ಬಿದ್ದಿತ್ತು ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರರು.

“ಅರೇ, ಇವ ನಮ್ಮವನೇ!”(ಇರ್ಫಾನ್, ನ್ಯೂಸ್‍ಕ್ಲಿಕ್)

ಅಂದು ಮಧ್ಯಾಹ್ನ ನೂಹ್‍ನಲ್ಲಿ ಆರಂಭವಾದ ಗಲಭೆಗಳು ಇದ್ದಕ್ಕಿದ್ದಂತೆ ನಡೆದದ್ದಲ್ಲ ಎಂದು ಹರ‍್ಯಾಣಾದ ಮುಖ್ಯಮಂತ್ರಿ, ಗೃಹಮಂತ್ರಿ, ಉಪಮುಖ್ಯಮಂತ್ರಿ, ಗುರುಗ್ರಾಮ್‌ನ ಬಿಜೆಪಿ ಸಂಸದ ಮತ್ತು ನೂಹ್‌ನ ಕಾಂಗ್ರೆಸ್ ಶಾಸಕ ಸೇರಿದಂತೆ ಎಲ್ಲರೂ ಹೇಳುತ್ತಾರೆ, ಪೂರ್ವ- ತಯಾರಿಯೊಂದಿಗೆ ನಡೆದಿದೆ ಎನ್ನುತ್ತಾರೆ. ಆದರೆ ಈ ಪೂರ್ವತಯಾರಿ ಯಾರದ್ದು ಎಂಬುದೇ ಪ್ರಶ್ನೆ.

“ಸ್ವಯಂಚಾಲಿತ ಕಾರ್‍ ಗಳೇನು….
ನಾವಿಲ್ಲಿ ಸ್ವಯಂಚಾಲಿತ ‘ಬೇಕಾರ್’*ಗಳನ್ನು ತಯಾರಿಸುತ್ತಿದ್ದೇವೆ”

*ಬೇಕಾರ್ ಅಂದರೆನಿರುದ್ಯೋಗಿಗಳು

(ಸಂದೀಪಅಧ್ವರ್ಯು.ಟೈಂಸ್‍ಆಫ್‍ ಇಂಡಿಯ)

ದೇಶದ ರಾಜಧಾನಿಯ ಸಮೀಪ ಇರುವ 21ನೇ ಶತಮಾನದ ನಗರ ಎನಿಸಿಕೊಂಡ ಗುರುಗ್ರಾಮದಿಂದ ಹೊರಟ ‘ಬ್ರಜ್‍ಮಂಡಲ್‍ ಜಲಾಭಿಷೇಕ್ ಯಾತ್ರಾ’, ಗುರುಗ್ರಾಮ್‍ನ ಸಂಸದರೇ(ಇವರು ಕೇಂದ್ರ ಮಂತ್ರಿಗಳೂ ಕೂಡ) ಹೇಳಿದಂತೆ ದೊಣ್ಣೆ, ಕತ್ತಿ, ತಲ್ವಾರು ಹಿಡಿದ 3000-4000 ’ಯಾತ್ರಾರ್ಥಿ’ ಗಳು ಮೇವಾತ್‍ ಪ್ರದೇಶದ ನೂಹ್‍ ತಲುಪಿದಾಗ ಆರಂಭವಾದ, ನಂತರ ಗುರುಗ್ರಾಮವನ್ನೂ ತಲುಪಿದ ಗಲಭೆಗಳು ಇದುವರೆಗೆ ಇಬ್ಬರು ಹೋಮ್ ಗಾರ್ಡ್ ಗಳು ಮತ್ತು ಗುರುಗ್ರಾಂನ ಮಸೀದಿಯ ಇಮಾಂ ಸೇರಿದಂತೆ 7 ಜೀವಗಳನ್ನು ಬಲಿ
ತೆಗೆದುಕೊಂಡಿದೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

“ಪ್ರತಿಯೊಬ್ಬನಿಗೂ ಭದ್ರತೆಯನ್ನು ಕೊಡಲು ಸಾಧ್ಯವಿಲ್ಲ” ಎಂದಿದ್ದಾರೆ ಮುಖ್ಯಮಂತ್ರಿಗಳು

“…ಸ್ವಲ್ಪ ಸ್ಪಷ್ಟಗೊಳಿಸಿ ಹೇಳಿಯೇ ಬಿಡಿಯಲ್ಲಾ- ಈ ಸಂದೇಶ ಸಂತ್ರಸ್ತರಿಗೆ ಮಾತ್ರವಲ್ಲ, ದಂಗೆಕೋರರಿಗೂ ಎಂದು ಭಾವಿಸಬೇಕು ಎಂದು. ಇಲ್ಲವಾದರೆ ಎಲ್ಲಾದರೂ ಯಾರಾದರೂ ಆಸೆ ಇಟ್ಟುಕೊಂಡು ಕೂತಿರಬಹುದು!” (ಶೇಖರ್ ಗುರೇರ, ಫೇಸ್‍ಬುಕ್)

ಈ ಗಲಭೆಗಳಿಗೆ ಪ್ರಚೋದನೆ ‘ಎರಡೂ ಕಡೆಯವರಿಂದ’ ಇದೆ ಎಂದು ಸ್ವತ: ಉಪಮುಖ್ಯಮಂತ್ರಿಗಳು ಮತ್ತು ಬಿಜೆಪಿ ಸಂಸದರೇ ಹೇಳಿದ್ದಾರೆ.ತಲೆಮರೆಸಿಕೊಂಡಿರುವ ಸ್ವಯಂಘೋಷಿತ ಗೋರಕ್ಷಕರು ಮೆರವಣಿಗೆಯ ಮೊದಲು ಪ್ರಚೋದನಕಾರಿ ವೀಡಿಯೋಗಳನ್ನು ಅಪ್‍ಲೋಡ್‍ ಮಾಡಿದ್ದರು ಎನ್ನಲಾಗಿದೆ. ಆದರೆ ಈಗ ‘ನಯಾಭಾರತ್‍’ನಲ್ಲಿ ಪರಿಚಯಿಸಿರುವ ‘ಬುಲ್‍ಡೋಜರ್‍ ನ್ಯಾಯ’ ಒಂದು ನಿರ್ದಿಷ್ಟ ಕೋಮಿನವರ ವಿರುದ್ಧ ಮಾತ್ರ ಇರುವಂತೆ ಕಾಣುತ್ತಿದೆಯೇಕೆ ಎಂದು ಇದಕ್ಕೆ ತಡೆಯಾಜ್ಞೆ ನೀಡಿರುವ ಪಂಜಾಬ್ ಮತ್ತು ಹರ್ಯಾಣ
ಹೈಕೋರ್ಟ್‍ ಟಿಪ್ಪಣಿ ಮಾಡಿದೆ.

***

ಈ ನಡುವೆ, ಅದೇ ಜುಲೈ 31 ರ ಬೆಳಿಗ್ಯೆ ಜಯಪುರ-ಮುಂಬೈ ಸೆಂಟ್ರಲ್ ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಕರ ಭದ್ರತೆಯ ಡ್ಯೂಟಿಯ ಮೇಲಿದ್ದ ರೈಲ್ವೆ ರಕ್ಷಣಾ ಪಡೆ(ಆರ್‌ಪಿಎಫ್)ಯ ಒಬ್ಬ ಜವಾನನೇ ತನ್ನ ಮೇಲಧಿಕಾರಿಯನ್ನು ಮತ್ತು ಮೂರು ಮುಸ್ಲಿಂ ಪ್ರಯಾಣಿಕರನ್ನು ಗುಂಡಿಟ್ಟು ಕೊಂದ ಭೀಕರ ಘಟನೆಯ ಸುದ್ದಿಯೂ ಬಂದಿತ್ತು.

ಮೂರನೇ ಪ್ರಯಾಣಿಕನನ್ನು ಕೊಂದ ನಂತರ ರೈಫಲನ್ನು ಬದಿಗಿಟ್ಟು ಆತ ಈ ಕೃತ್ಯವನ್ನು ಸ್ತಂಭೀಭೂತರಾಗಿ ನೋಡುತ್ತಿದ್ದ ಇತರ ಪ್ರಯಾಣಿಕರನ್ನು ಉದ್ದೇಶಿಸಿ “ಪಾಕಿಸ್ತಾನದಿಂದ ಅಪರೇಟ್ ಆಗ್ತಿದ್ದಾರೆ, ಇದನ್ನೇ ಮೀಡಿಯಾ ಕವರೇಜ್ ತೋರಿಸುತ್ತಿದೆ, ಅವರಿಗೆ ಎಲ್ಲವೂ ಗೊತ್ತಾಗುತ್ತಿದೆ, ಇವರ ಯಜಮಾನರುಗಳು ಅಲ್ಲಿದ್ದಾರೆ.. ವೋಟು ಕೊಡಬೇಕೆಂದಿದ್ದರೆ, ಹಿಂದುಸ್ತಾನದಲ್ಲಿ ಇರಬೇಕೆಂದಿದ್ದರೆ, ನಾನು ಹೇಳುತ್ತೇನೆ, ಮೋದಿ ಮತ್ತು ಯೋಗಿ ಇವರಿಬ್ಬರಿದ್ದಾರೆ, ಮತ್ತು ಮತ್ತು ನಿಮ್ಮ ಥಾಕ್ರೆ” ಎನ್ನುವ ವೀಡಿಯೋ ಪ್ರಕಟಗೊಂಡಿದೆ.

(ಸತೀಶ ಆಚಾರ್ಯ, ಫೇಸ್‍ಬುಕ್)

ಆತನನ್ನು ಆರ್‌ಪಿಎಫ್ ಸಿಬ್ಬಂದಿ ಬಂಧಿಸಿ ಎಫ್‌ಐಆರ್ ಹಾಕಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಆತನ ಮಾತುಗಳಲ್ಲಿ ದ್ವೇಷ ತುಂಬಿ ತುಳುಕುತ್ತಿದ್ದರೂ, ಎಫ್‌ಐಆರ್‌ನಲ್ಲಿ ಆತನ ‘ಆಶುಭಾಷಣ’ದ ಬಗ್ಗೆ ಪ್ರಸ್ತಾಪವಿಲ್ಲ, ಬದಲಾಗಿ ಆತನ ಮನಸ್ಥಿತಿ ಅಸ್ಥಿರವಾಗಿತ್ತು ಎಂಬುದಕ್ಕೇ ಒತ್ತು ಕೊಡಲಾಗಿದೆ ಎಂದು ವರದಿಯಾಗಿತ್ತು.

“ಆತ ಮತ್ತು ನಮ್ಮ ನಡುವೆ ಒಂದು ವ್ಯತ್ಯಾಸ ಇದೆ. ನಾವು ಮೂರ್ಖರಷ್ಟೇ, ಆತ ಹುಚ್ಚ….”

“ಇಲ್ಲ, ವಾಟ್ಸ್ ಆಪ್‍ ಅಂಕಲ್, ಇದು ನಿಮ್ಮ ತಪ್ಪು ಕಲ್ಪನೆ”
(ರಾಜೇಂದ್ರ ಧೋಡಪ್‍ಕರ್, ಫೇಸ್‍ಬುಕ್)

ನಂತರ ಆಗಸ್ಟ್ 2ರಂದು ನೀಡಿದ ರೈಲ್ವೆಯ ಹೇಳಿಕೆಯಲ್ಲಿ, ಆತನ ಇತ್ತೀಚಿನ ನಿಯಮಿತ ವೈದ್ಯಕೀಯ ಪರೀಕ್ಷೆಯಲ್ಲಿ ಮಾನಸಿಕ ಕಾಯಿಲೆ ಪತ್ತೆಯಾಗಿರಲಿಲ್ಲ ಎಂದು ಹೇಳಲಾಯಿತು. ಆದರೆ ಒಂದು ಗಂಟೆಯೊಳಗೇ ಆ ಹೇಳಿಕೆಯನ್ನು ಹಿಂತೆಗೆದು ಕೊಂಡಿರುವುದಾಗಿ ಹೇಳಿಕೆ ನೀಡಿತು.

ಈಗ ಎಫ್‍ಐಆರ್‍ ನಲ್ಲಿ ಕೋಮು ಸಾಮರಸ್ಯ ಕೆಡಿಸುವ ಆರೋಪವನ್ನು ಕೂಡ ಹೊರಿಸಲಾಗಿದೆಯಂತೆ.

***

ಒಂದೇ ದಿನದಲ್ಲಿ ನಡೆದಿರುವ ಈ ಮೂರು ಘಟನೆಗಳಲ್ಲಿ ಸಮಾನ ಅಂಶವಂತೂ ಕಾಣುತ್ತಿದೆ.
ದ್ವೇಷದ ಯಾತ್ರೆಗೆ ಹಸಿರು ನಿಶಾನೆ ತೋರಿಸಲಾಗಿದೆಯೇ ಎಂಬ ಸಂದೇಹ ಬಲವಾಗಿ ಮೂಡಿದೆ.

(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

“ಸಮವಸ್ತ್ರ ಧರಿಸಿದ್ದ ಒಬ್ಬ ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್ ತನ್ನ ಮೇಲಧಿಕಾರಿಯನ್ನು ಗುಂಡಿಕ್ಕಿ ಕೊಂದು ನಂತರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮುಸ್ಲಿಂ ಪುರುಷರನ್ನು ಕೊಂದಿರುವ, ಸ್ಪಷ್ಟವಾಗಿಯೂ ಒಂದು ದ್ವೇಷ ಅಪರಾಧದ ಬಗ್ಗೆ ಈ ಮಹಾನ್ ರಾಷ್ಟ್ರದ ಪ್ರಧಾನಮಂತ್ರಿಯಾಗಿ, ನಾನು ಇಂದು ಭಾರತೀಯ ಜನರಿಗೆ ನನ್ನ ಅಪರಿಮಿತ ವೇದನೆ ಮತ್ತು ಆಕ್ರೋಶವನ್ನು ತಿಳಿಸ ಬಯಸುತ್ತೇನೆ. ಈ ಕಾನ್‌ಸ್ಟೆಬಲ್‌ ಕೊಂದಿರುವ ಎಲ್ಲಾ ನಾಲ್ವರ ಕುಟುಂಬಗಳಿಗೆ ನನ್ನ ಹೃದಯಾಂತರಾಳದ ಸಹಾನುಭೂತಿ ಇದೆ. ಈ ದುಃಖದ
ಸಮಯದಲ್ಲಿ ಇಡೀ ರಾಷ್ಟ್ರವು ಅವರೊಂದಿಗೆ ನಿಂತಿದೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ. ಕಾನ್ಸ್‌ಟೇಬಲ್ ನನಗೆ ರಾಜಕೀಯ ನಿಷ್ಠೆಯನ್ನು ಹೇಳಿಕೊಳ್ಳುವುದನ್ನು ವಿಡಿಯೋದಲ್ಲಿ ದಾಖಲಿಸಿದ್ದಾರೆ. ನಾನು ಇದನ್ನು ಖಡಾಖಂಡಿತವಾಗಿ ತಿರಸ್ಕರಿಸುತ್ತೇನೆ. ದ್ವೇಷ ಮತ್ತು ವಿಭಜನೆಯ ಎಲ್ಲಾ ರಾಜಕೀಯವನ್ನು ನಾನು ದೃಢವಾಗಿ ವಿರೋಧಿಸುತ್ತೇನೆ ಎಂದು ನಾನು ಒತ್ತಿಹೇಳುತ್ತೇನೆ.

ಇದನ್ನೂಓದಿ:ಏನಿದು ‘ಬಹು-ಆಯಾಮೀಯ ಬಡತನ’ ಸೂಚ್ಯಂಕ?

ದೇಶದ ಸಂವಿಧಾನವನ್ನು ಎತ್ತಿಹಿಡಿಯುವುದು ಮತ್ತು ರಕ್ಷಿಸುವುದು ನನ್ನ ಪ್ರಾಥಮಿಕ ಕರ್ತವ್ಯ ಮತ್ತು ಅಧಿಕಾರದ ಪ್ರಮಾಣವಚನ, ಆದ್ದರಿಂದ ದ್ವೇಷದ ರಾಜಕೀಯದ ಏರಿಕೆಯನ್ನು ತಡೆಯಲು ನಾವು ಎಲ್ಲವನ್ನೂ ಮಾಡಬೇಕಾಗಿದೆ. ತಮ್ಮ ಧಾರ್ಮಿಕ, ಜಾತಿ ಅಥವಾ ಇನ್ನಾವುದೇ ಅಸ್ಮಿತೆಗಾಗಿ ಜನರನ್ನು ಗುರಿಮಾಡುವ ದ್ವೇಷ ಹಿಂಸಾಚಾರಕ್ಕೆ ಈ ದೇಶದಲ್ಲಿ ಸ್ಥಾನವಿಲ್ಲ. ವಸಾಹತುಶಾಹಿ ಆಡಳಿತಗಾರರು ನಿರ್ಗಮಿಸಿದ ನಂತರ ನಮ್ಮ ಸಂಸ್ಥಾಪಕ ತಾಯಿ-ತಂದೆಯರು ನಿರ್ಮಿಸುವುದಾಗಿ ಪ್ರತಿಜ್ಞೆ ಮಾಡಿದ ಸಮಾನ ಪೌರತ್ವದ ದೇಶವನ್ನು ನಿರ್ಮಿಸಲು ಮತ್ತು ಸುರಕ್ಷಿತಗೊಳಿಸಲು ಮತ್ತು ರಕ್ಷಿಸಲು ಭಾರತದ ಪ್ರತಿ ಧರ್ಮ, ಜಾತಿ, ಭಾಷೆ ಮತ್ತು ಲಿಂಗದ ಜನರು ಕೈಜೋಡಿಸಬೇಕು ಮತ್ತು . ನಮ್ಮ ಸಂವಿಧಾನದ ಗಂಭೀರ ಪ್ರತಿಜ್ಞೆಗಳನ್ನು ಎತ್ತಿಹಿಡಿಯಬೇಕು ಎಂದು ನಾನು ಕರೆ ನೀಡುತ್ತೇನೆ” -ಇದು ನಮ್ಮ ಪ್ರಧಾನಿಗಳಿಂದ ಬರಬೇಕಾಗಿದ್ದ , ಆದರೆ ಬಾರದ ಸಂದೇಶ ಎನ್ನುತ್ತಾರೆ ಮಾಜಿ ಐಎಎಸ್‍ ಆಡಳಿತಗಾರ, ಮಾನವ ಹಕ್ಕುಗಳ ಹೋರಾಟಗಾರ ಹರ್ಷ ಮಂದರ್( ದಿ ವೈರ್,, ಆಗಸ್ಟ್ 2 )

ಎಂತಾ ಬೆಂಕಿಗಳು?

(ಪೆನ್‍ ಪೆನ್ಸಿಲ್‍ ಡ್ರಾ, ಫೇಸ್‍ಬುಕ್)

ಇಂತಹ ಒಂದು ಕರೆ ಜುಲೈ 31 ಅಥವ ಆಗಸ್ಟ್ 1ರಂದು ಬಂದಿದ್ದರೆ ಬಹುಶಃ ಮೇಲೆ ಹೇಳಿದ ಸಂದೇಹ ನಿವಾರಣೆಯಾಗುತ್ತಿತ್ತು ಆದರೆ ಆ ಲಕ್ಷಣಗಳು ಕಾಣುತ್ತಿಲ್ಲ, ಬದಲಿಗೆ ದೇಶದ ಯುವಪೀಳಿಗೆಯ ಭವಿಷ್ಯದ ಬಗ್ಗೆ ಭೀತಿ ಹೆಚ್ಚಾಗುತ್ತಿದೆಯೇ?

“ನಾವು ನಿಮಗೆ ಮತನೀಡಿದ್ದೇವೆ.ಬೇರೇನು ನಿಮಗೆ ಬೇಕು ನಿಮಗೆ, ಸಾರ್?”

“ನಿಮ್ಮ ಮಗ!”
(ಸತೀಶ ಆಚಾರ್ಯ,ಫೇಸ್‍ ಬುಕ್)

***

Donate Janashakthi Media

Leave a Reply

Your email address will not be published. Required fields are marked *