ಬೇಲೂರು : ಕರಾವಳಿಯಲ್ಲಿ ಆರಂಭವಾದ ವರ್ತಕರ ನಿರ್ಬಂಧದ ವಿವಾದ ಸದ್ಯ ಹಾಸನ ಜಿಲ್ಲೆಗೂ ಹಬ್ಬಿದೆ. ಐತಿಹಾಸಿಕ ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವ ನಡೆಯಲಿದ್ದು, ಎರಡು ವರ್ಷಗಳ ಬಳಿಕ ಸಂಭ್ರಮದಿಂದ ಜಾತ್ರಾ ಮಹೋತ್ಸವ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.
ಇದರ ಬೆನ್ನಲ್ಲೇ ರಥೋತ್ಸವದಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮನವಿ ಸಲ್ಲಸಿದ್ದು, ಚನ್ನಕೇಶವಸ್ವಾಮಿ ರಥೋತ್ಸವದ ಜೊತೆಗೆ ತಾಲೂಕಿನ ಎಲ್ಲಾ ಧಾರ್ಮಿಕ ದತ್ತಿ ಇಲಾಖೆ ದೇಗುಲದ ಜಾತ್ರೆ ವೇಳೆ 2002 ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳಂತೆ ಇದೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.