ಬೆಂಗಳೂರು: ಹಾಸನದ ಲೈಂಗಿಕ ದೌರ್ಜನ್ಯ-ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಬಗ್ಗೆ ಈ ಹಿಂದೆ ಸಲ್ಲಿಸಿದ ಪತ್ರದ ಕುರಿತು ಕೈಗೊಂಡ ಕ್ರಮಗಳು ಮತ್ತು ತುರ್ತು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ “ನಾವೆದ್ದು ನಿಲ್ಲದಿದ್ದರೆ ಒಕ್ಕೂಟ”ದ ವತಿಯಿಂದ ರಾಜ್ಯಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿಗೆ ಮನವಿ ಸಲ್ಲಿಸಲಾಯಿತು. ಹಾಸನ
ಹಾಸನದ ಪ್ರಕರಣದಲ್ಲಿ ಈಗಾಗಲೇ ದೂರು ಸಲ್ಲಿಸಿದವರು ಭಯಗ್ರಸ್ಥರಾಗಿದ್ದಾರೆ. ಕುಟುಂಬಗಳ ಕಡೆಯಿಂದ, ಸಮಾಜದ ಕಡೆಯಿಂದ ಒತ್ತಡ, ಅವಮಾನಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಕಾನೂನು ವ್ಯವಸ್ಥೆಯ ಕುರಿತೂ ಭರವಸೆಗಳು ಕಡಿಮೆಯಾಗಿದೆ. ದೂರು ದಾಖಲಿಸಿದವರು ಮತ್ತು ಇನ್ನೂ ದೂರು ದಾಖಲಿಸದವರು ಹಿಂಜರಿಯುವ ಸ್ಥಿತಿ ಎದುರಾಗಿದೆ. ಈ ಕಾರಣದಿಂಧ ರಾಜ್ಯ ಮಹಿಳೆಯರ ಸುಸ್ಥಿತಿ ಮತ್ತು ಘನತೆಯ ಬದುಕಿಗೆ ಧ್ವನಿಯಾಗಲೆಂದೇ ಇರುವ ರಾಜ್ಯ ಮಹಿಳಾ ಆಯೋಗ ಜನರ ಕಣ್ಣಿಗೆ ಕಾಣುವ ಹಾಗೆ ನಿರ್ದಿಷ್ಟ ಕ್ರಮಗಳಿಗೆ ಮುಂದಾಗಬೇಕೆಂದು ಈ ಕೆಳಗಿನ ಒತ್ತಾಯಗಳನ್ನು ತಮ್ಮ ಮುಂದಿಡುತ್ತಿದ್ದೇವೆ ಮತ್ತು ತಕ್ಷಣ ಕಾರ್ಯೋನ್ಮುಖರಾಗಬೇಕೆಂದು ಒಕ್ಕೂಟ ಮನವಿಯಲ್ಲಿ ಆಗ್ರಹಿಸಿದೆ.
ಇದನ್ನೂ ಓದಿ : ಹಾಸನದ ಫಲಿತಾಂಶ ಖುಷಿ ತಂದಿಲ್ಲ
ಬಾದಿತರಿಗೆ ಹಾಸನದಲ್ಲಿಯೇ ಒಂದು ಕೌನ್ಸೆಲಿಂಗ್ ಕೇಂದ್ರ ಹಾಗೂ ಗೌಪ್ಯತೆ ಕಾಪಾಡುವ ಭರವಸೆ ನೀಡುವ ಸಹಾಯವಾಣಿ ಪ್ರಾರಂಭಿಸಬೇಕು. ಮಹಿಳಾ ಆಯೋಗದ ಜಿಲ್ಲಾ ಮಟ್ಟದ ವ್ಯವಸ್ಥೆಯ ಮೂಲಕ ಅದು ಮಹಿಳೆಯರಿಗೆ ತಲುಪುವುಂತೆ ವ್ಯವಸ್ಥೆ ಮಾಡಬೇಕು. ಬಾದಿತರ ಜೊತೆ ರಾಜ್ಯ ಮಹಿಳಾ ಆಯೋಗ ನಿಲ್ಲುತ್ತದೆ ಎಂಬ ಭರವಸೆ ತುಂಬಬೇಕು. ಇದರಿಂದ ಅವರು ದೂರು ನೀಡಲು ಮುಂದೆ ಬರಲು ಸಾಧ್ಯವಾಗಬಹುದು .ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಮಾನಸಿಕ, ಆರ್ಥಿಕ, ಹಾಗೂ ವೈದ್ಯಕೀಯ ಬೆಂಬಲ ನೀಡುವ ವ್ಯವ್ಸಸ್ಥೆ ಕಲ್ಪಿಸಲು ಮಹಿಳಾ ಆಯೋಗ ಮುಂದಾಗಬೇಕು. ರಾಷ್ಟ್ರೀಯ ಕಾನೂನು ಸೇವಾ ಆಯೋಗದ ಪರಿಹಾರ ಯೋಜನೆಯ ಭಾಗವಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ನೀಡುವ ಪರಿಹಾರ 2018 ರ ಪ್ರಕಾರ ಬಾದಿತರು, ದೂರುಕೊಟ್ಟವರಿಗೆ ಪರಿಹಾರ ಮತ್ತು ಪುನರ್ವಸತಿಯ ಅವಕಾಶ ಕಲ್ಪಿಸುವ ಕುರಿತು ಭರವಸೆ ನೀಡಿ ಈಗಾಗಲೇ ದೂರು ನೀಡಿದವರಿಗೆ ಕೌನ್ಸಲಿಂಗ್ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದೆ.
ಈ ವೇಳೆ ನಿಯೋಗದಲ್ಲಿ ವಿಮಲಾ.ಕೆ.ಎಸ್, ಮಧು ಭೂಷಣ್, ಗೀತಾ ಮೆನನ್, ಮಮತಾ ಯಜಮಾನ್, ಮಲ್ಲಿಗೆ, ಗೌರಿ, ವಿನಯ್ ಶ್ರೀನಿವಾಸ್ ಇದ್ದರು. ಪತ್ರ ಸ್ವೀಕರಿಸಿದ ಮಹಿಳಾ ಆಯೋಗದ ಅಧ್ಯಕ್ಷರು ಭರವಸೆಯ ಮಾತುಗಳನ್ನಾಡಿ ರಾಜ್ಯವ್ಯಾಪೀ ಮಹಿಳೆಯರಿಗೆ ಭರವಸೆ ನೀಡುವ ಕೆಲಸವನ್ನು ಮಹಿಳಾ ಆಯೋಗ ಮಾಡುತ್ತದೆ. ಹಾಸನಕ್ಕೆ ಸಂಬಂಧಿಸಿದಂತೆಯೂ ಸಾಧ್ಯ ಇರುವ ಎಲ್ಲ ಕ್ರಮವನ್ನೂ ಕೈಗೊಳ್ಳುವುದಾಗಿ ತಿಳಿಸಿದರು.