ಗುಂಟೂರು: ಸಾಲದ ಆಯಪ್ ಆಪರೇಟರ್ಗಳ ಕಿರುಕುಳದ ತಾಳಲಾರದೆ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಚಿನ್ನಕಾಕನಿ ಗ್ರಾಮದ ನಿವಾಸಿ ಬಂಡಪಲ್ಲಿ ಪ್ರತ್ಯುಷಾ ಆತ್ಮಹತ್ಯೆಗೆ ಶರಣಾದವರು.
ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಚಿನ್ನಕಾಕನಿ ಗ್ರಾಮದ ನಿವಾಸಿ ಬಂಡಪಲ್ಲಿ ಪ್ರತ್ಯುಷಾ ಎಂಬುವರು ಇಂಡಿಯನ್ ಬುಲ್ಸ್ ಮತ್ತು ರುಪೆಕ್ಸ್ ಸಾಲದ ಆಯಪ್ನಲ್ಲಿ 20 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದರು. ಇದಕ್ಕೆ ಅತ್ಯಧಿಕ ಬಡ್ಡಿದರ ವಿಧಿಸಿದ್ದ ಆಪರೇಟರ್ಗಳು ಪ್ರತ್ಯುಷಾರಿಂದ 2 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದರು.
ಇಷ್ಟಾದರೂ ಸುಮ್ಮನಾಗದ ಆಯಪ್ ಏಜೆಂಟ್ಗಳು, ಪ್ರತ್ಯುಷಾ ಇನ್ನೂ ಸಾಲ ತೀರಿಸಿಲ್ಲ ಅಂತಾ ತಮ್ಮ ವಿಧಾನದಲ್ಲಿ ಸೈಬರ್ ಕ್ರಿಮಿನಲ್ ಚಟುವಟಿಕೆ ಮೂಲಕ ಆಕೆಯನ್ನು ಹೆದರಿಸಲು ಆರಂಭಿಸಿದರು. ಸಾಲ ಮರು ಪಾವತಿ ಮಾಡದಿದ್ದರೆ, ಸಂಬಂಧಿಕರಿಗೆ ಸಾಲದ ಮಾಹಿತಿ ನೀಡಲಾಗುವುದು ಎಂದು ಹೆದರಿಸಿದರು. ಅಲ್ಲದೆ, ವಾಟ್ಸ್ಪ್ ಮೂಲಕ ಅಶ್ಲೀಲ ಸಂದೇಶ ರವಾನಿಸಿದರು. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಸಿದ್ದರು.
ಇದನ್ನೂ ಓದಿ : ಮೈಕ್ರೋ ಫೈನಾನ್ಸ್ ಕಿರುಕುಳ : ದಂಪತಿ ಆತ್ಮಹತ್ಯೆಗೆ ಯತ್ನ – ಪತಿ ಸಾವು
ಆಯಪ್ ಏಜೆಂಟರ್ ನೀಡುತ್ತಿದ್ದ ನಿರಂತರ ಕಿರುಕುಳದಿಂದ ಬೇಸತ್ತು ಪ್ರತ್ಯುಷಾ ಸೋಮವಾರ (ಜು.11) ತಮ್ಮ ಮನೆಯ ಮೇಲಿರುವ ಫ್ಲೆಕ್ಸ್ ಹೋರ್ಡಿಂಗ್ ಫ್ರೇಮ್ಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಪ್ರತ್ಯಷಾ, ನಡೆದ ಎಲ್ಲ ಘಟನೆಯನ್ನು ವಿವರಿಸಿದ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ವಿಡಿಯೋ ಆಧರಿಸಿ ಅವರ ಕುಟುಂಬದ ಸದಸ್ಯರು ಮಂಗಳಗಿರಿ ಪೊಲೀಸ್ ಠಾಣೆಗೆ ತೆರಳಿ ಸಾಲದ ಆಯಪ್ ಮತ್ತು ಏಜೆಂಟ್ಗಳ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆ ಅಡಿಯಲ್ಲಿರುವ ಸೂಕ್ತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಲದ ಆಯಪ್ಗಳು ಮತ್ತು ಆನ್ಲೈನ್ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್ಲೈನ್ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಬಲಿಯಾಗುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಅಮಾಯಕ ಜೀವಗಳು ಬಲಿಯಾಗುತ್ತವೆ ಎಂಬುದನ್ನು ಸರಕಾರ ಅರಿಯಬೇಕಿದೆ.