ಹಾಲು ದರ ಏರಿಕೆ ಬಗ್ಗೆ ಪ್ರಸ್ತಾಪವಿಟ್ಟು, ಕೈಬಿಟ್ಟಿದ್ದೇಕೆ-ಸಿಪಿಐ(ಎಂ) ಪ್ರಶ್ನೆ

ಬೆಂಗಳೂರು: ಕರ್ನಾಟಕ ಸರಕಾರ, ಹಾಲಿನ ದರ ತಲಾ ಲೀಟರ್ ಗೆ ಮೂರು ರೂಪಾಯಿ ಇಂದಿನಿಂದ ಹೆಚ್ಚಳವಾಗಿ ಜಾರಿಗೆ ಬರಲಿದೆಯೆಂದು ಪ್ರಕಟಿಸಿ ಕೂಡಲೇ ವಾಪಾಸ್ಸು ಪಡೆದಿದೆ. ಈ ಕ್ರಮದ ಮೂಲಕ ರಾಜ್ಯದ ಜನತೆಯ ಮುಂದೆ ಸರಕಾರ ಬೆಲೆ ಏರಿಕೆಯ ಪ್ರಸ್ತಾಪವಿಟ್ಟಿದ್ದೇಕೆ? ಮತ್ತೆ ಕೈ ಬಿಟ್ಟಿದ್ದೇಕೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಶ್ನಿಸಿದೆ.

ಹೇಳಿಕೆಯನ್ನು ನೀಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು,ಈ ಬೆಲೆ ಏರಿಕೆಯ ಮೂಲಕ ಮೂರು ರೂ.ಗಳನ್ನು ಹಾಲು ಉತ್ಪಾದಕರಿಗೆ ನೀಡುವ ಉದ್ದೇಶ ಹೊಂದಿತ್ತೆಂದು ಪ್ರಕಟಿಸುವ ಮೂಲಕ ತಾನು ಹಾಲು ಉತ್ಪಾದಕರ ಪರವಾಗಿದ್ದೇನೆಂದು ತೋರಿಸಿಕೊಳ್ಳುವ ಹಾಗೂ ಅವರ ಬೆಂಬಲ ಪಡೆಯುವ ಮತ್ತು ಏರಿದ ಬೆಲೆಗಳಿಂದ ಜನಗಳಿಗೆ ತೊಂದರೆಯಾಗಲಿದೆ, ಆದ್ದರಿಂದ ಅದನ್ನು ವಾಪಾಸು ಪಡೆಯಲಾಗಿದೆಯೆಂಬ ಮತ್ತೊಂದು ಅಭಿಪ್ರಾಯವನ್ನು ತೂರಿ ಬಿಡುವ ಮೂಲಕ ಗ್ರಾಹಕರ ಬೆಂಬಲ ಪಡೆಯುವ ದುರುದ್ದೇಶದಿಂದ ಈ ಕ್ರಮವಹಿಸಲಾಗಿದೆ ಮತ್ತು ಆ ಮೂಲಕ ಉತ್ಪಾದಕರನ್ನು ಹಾಗೂ ಗ್ರಾಹಕರನ್ನು ಮುಖಾಮುಖಿಯಾಗಿಸುವ ಮತ್ತು ಅಸೆ ಮೂಲಕ ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರವಿದಾಗಿದೆ ಎಂದು ತಿಳಿಸಿದ್ದಾರೆ.

ಸರಕಾರದ ಈ ಕುತಂತ್ರವನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಪ್ರಕಟಿಸಿದೆ.

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಒಂದೂವರೆ ಕೋಟಿಯಷ್ಟು ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರ ಕುಟುಂಬಗಳಿದ್ದು ಇವುಗಳು ಯಾವುದೇ ಬೆಲೆ ಏರಿಕೆಯ ಹೊರೆಯನ್ನು ಭರಿಸುವಂತಹ ಪರಿಸ್ಥಿತಿ ಇಲ್ಲವೇ ಇಲ್ಲವಾಗಿದೆ. ಹೀಗಾಗಿ ಹಾಲಿನ ದರ ಏರಿಕೆಯನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ವಿರೋಧಿಸಿದೆ.

ಅದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಉತ್ಪಾದನೆಯಲ್ಲಿ ತೊಡಗಿರುವ ಮಿಲಿಯಾಂತರ ಹಾಲು ಉತ್ಪಾದಕರು ಹಾಲು ಉತ್ಪಾದನೆಯ ವೆಚ್ಚವನ್ನು ಅವರು ಪಡೆಯುವ ಹಾಲಿನ ದರದಿಂದ ಸರಿ ದೂಗಿಸಲಾಗದೇ ನಷ್ಠವನ್ನು ಅನುಭವಿಸುತ್ತಾ ಸಾಲಬಾಧಿತರಾಗುತ್ತಿದ್ದಾರೆ.

ಹಾಲು ಉತ್ಪಾದನೆಯಲ್ಲಿ ತೊಡಗಿಸುವ ಏರುಗತಿಯಲ್ಲಿರುವ ಪಶು ಆಹಾರದ ಬೆಲೆಗಳು ಮತ್ತು ಅಗತ್ಯ ವಸ್ತುಗಳ ಬೆಲೆಗಳು ಹಾಲು ಉತ್ಪಾದಕರನ್ನು ತೀವ್ರವಾಗಿ ಬಾಧಿಸುತ್ತಿವೆ. ಪರಿಣಾಮವಾಗಿ ಹಾಲು ಉತ್ಪಾದಕರ ನಷ್ಟವನ್ನು ಸರಿದೂಗಿಸಲು ರಾಜ್ಯ ಸರಕಾರ ಹಾಲು ದರ ಏರಿಕೆಯನ್ನು ಮಾಡಿ ಗ್ರಾಹಕರಿಗೆ ಬರೆ ಎಳೆಯುವ ಕ್ರಮ ಸರಿಯಾದುದಲ್ಲ. ಬದಲಿಗೆ ಹಾಲು ಉತ್ಪಾದಕರಿಗೆ ನೀಡುತ್ತಿರುವ ಸಹಾಯ ಧನವನ್ನು ತಲಾ ಲೀಟರ್ ಗೆ 15 ರೂ.ಗಳಿಗೆ ಹೆಚ್ಚಿಸಿ ಒದಗಿಸುವ ಮೂಲಕ ಅದನ್ನು ಸರಿದೂಗಿಸುವುದು ಮಾತ್ರವೇ ಸರಿಯಾದ ಕ್ರಮವಾಗಿದೆ. ಆದ್ದರಿಂದ ಹಾಲು ಉತ್ಪಾದಕರಿಗೆ ತಲಾ ಲೀಟರ್ ಗೆ ಸಹಾಯ ಧನವನ್ನು 15 ರೂ.ಗಳಿಗೆ ಹೆಚ್ಚಿಸಿ ಒದಗಿಸುವಂತೆ ಮತ್ತು ಈ ಕ್ರಮದ ಮೂಲಕ ಹಾಲು ಉತ್ಪಾದಕರು ಹಾಗೂ ಗ್ರಾಹಕರನ್ನು ಸಂರಕ್ಷಿಸುವಂತೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *