ಬಳ್ಳಾರಿ: ಹಳೆ ದ್ವೇಷಕ್ಕಾಗಿ ಉತ್ತಮ ಇಳುವರಿ ಹೊತ್ತಿನಲ್ಲಿದ್ದ ಬೆಳೆಯನ್ನು ದುಷ್ಕರ್ಮಿಗಳು ನೆಲಸಮ ಮಾಡಿದ್ದಾರೆ.
ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಕರಡಿ ಗುಡ್ಡಂ ಶ್ರೀನಿವಾಸುಲು ಎಂಬುವವರು ಗುತ್ತಿಗೆ ಆಧಾರದಲ್ಲಿಎರಡು ಎಕರೆ ಜಮೀನು ಪಡೆದು ಮೆಣಸಿನಕಾಯಿ ಬೆಳೆದಿದ್ದರು. ಕಳೆದ ಮೂರು ವರ್ಷದಿಂದ ಗುತ್ತಿಗೆಗೆ ಪಡೆದು ಮೆಣಸಿನಕಾಯಿ ಬೆಳೆ ಬೆಳೆದಿದ್ದರೂ ಕೈ ಹತ್ತಿರಲಿಲ್ಲ. ಈ ಬಾರಿ ಉತ್ತಮ ಬೆಳೆ ಬಂದಿತ್ತು. ಮಾಡಿದ ಸಾಲ ತೀರುತ್ತದೆ ಎಂಬ ಆಶಾಭಾವನೆಯಿಂದ ಇದ್ದ ರೈತನಿಗೆ ದುಷ್ಕರ್ಮಿಗಳ ಕೃತ್ಯದಿಂದ ಆಘಾತಗೊಂಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ.
ಮಾರುಕಟ್ಟೆಯಲ್ಲಿ ಮೆಣಸಿನಕಾಯಿಗೆ ಕ್ವಿಂಟಾಲ್ ಗೆ 17 ಸಾವಿರ ರೂ. ದರವಿದೆ. ಅಂದಾಜು 40 ಕ್ವಿಂಟಾಲ್ ಬೆಳೆ ಕೈ ಗೆ ಬರ್ತಿತ್ತು. ಅಂದಾಜು 6 ಲಕ್ಷ ಮೌಲ್ಯದ ಬೆಳೆ ಹಾಳು ಮಾಡಲಾಗಿದೆ. ಬೆಳೆ ಬೆಳೆಯಲು ಸಾಲ ಮಾಡಿ 3 ಲಕ್ಷ ಖರ್ಚು ಮಾಡಲಾಗಿದೆ. ದುಷ್ಕರ್ಮಿಗಳ ಕೃತ್ಯದಿಂದ ಏನೂ ತೋಚದಂತಾಗಿದೆ ಎಂದು ಬೆಳೆಗಾರ ಶ್ರೀನಿವಾಸುಲು ಅಳಲು ತೋಡಿಕೊಂಡಿದ್ದಾರೆ.
ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.