ಚಂಡೀಗಢ: ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಮತ್ತೆ 21 ದಿನಗಳ ಫರ್ಲೋ ಮಂಜೂರು ಮಾಡಿದೆ. ಮಂಗಳವಾರ ಬೆಳಗ್ಗೆ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಹೊರಬಂದಿರುವ ಅವರು, ಈ ಬಾರಿ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಕೇಂದ್ರ ಕಚೇರಿಯಲ್ಲಿ ಉಳಿಯಲಿದ್ದಾರೆ. 2017ರಲ್ಲಿ ಶಿಕ್ಷೆಗೊಳಗಾದ ಬಳಿಕ ಜೈಲಿನಿಂದ ತಾತ್ಕಾಲಿಕವಾಗಿ ಹೊರಬರುತ್ತಿರುವುದು ಇದು 17ನೇ ಬಾರಿ.
ಗುರ್ಮಿತ್ ರಾಮ್ 2017ರ ಆಗಸ್ಟ್‌ನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಸುನಾರಿಯಾ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಎರಡು ಪ್ರಕರಣಗಳಿಗೆ ತಲಾ 10 ವರ್ಷಗಳಂತೆ ಒಟ್ಟು 20 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣದಲ್ಲಿಯೂ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
17 ಬಾರಿ ಯಾವಾಗೆಲ್ಲ ಬಿಡುಗಡೆ?
2017ರ ಶಿಕ್ಷೆಯ ಬಳಿಕ 2020ರಿಂದ ಗುರ್ಮಿತ್ ರಾಮ್ ಅವರಿಗೆ ಪೆರೋಲ್ ಅಥವಾ ಫರ್ಲೋ ರೂಪದಲ್ಲಿ ಪದೇಪದೇ ತಾತ್ಕಾಲಿಕ ಬಿಡುಗಡೆ ನೀಡಲಾಗಿದೆ. ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಈ ಪಟ್ಟಿ ಹೀಗಿದೆ:
- ಅಕ್ಟೋಬರ್ 2020 – ಒಂದು ದಿನದ ಪೆರೋಲ್
- ಮೇ 2021 – ಒಂದು ದಿನದ ಪೆರೋಲ್
- ಫೆಬ್ರವರಿ 2022 – 21 ದಿನಗಳ ಫರ್ಲೋ
- ಜೂನ್ 2022 – 30 ದಿನಗಳ ಪೆರೋಲ್
- ಅಕ್ಟೋಬರ್ 2022 – 40 ದಿನಗಳ ಪೆರೋಲ್
- ಜನವರಿ 2023 – 40 ದಿನಗಳ ಪೆರೋಲ್
- ಜುಲೈ 2023 – 30 ದಿನಗಳ ಪೆರೋಲ್
- ನವೆಂಬರ್ 2023 – 21 ದಿನಗಳ ಫರ್ಲೋ
- ಜನವರಿ 2024 – 50 ದಿನಗಳ ಪೆರೋಲ್
- ಆಗಸ್ಟ್ 2024 – 21 ದಿನಗಳ ಫರ್ಲೋ
- ಅಕ್ಟೋಬರ್ 2024 – 20 ದಿನಗಳ ಪೆರೋಲ್
- ಜನವರಿ 2025 – 30 ದಿನಗಳ ಪೆರೋಲ್
- ಏಪ್ರಿಲ್ 2025 – 21 ದಿನಗಳ ಫರ್ಲೋ
- ಆಗಸ್ಟ್ 2025 – 40 ದಿನಗಳ ಪೆರೋಲ್
- ಜನವರಿ 2026 – 40 ದಿನಗಳ ಪೆರೋಲ್
- ಮೇ 2026 – 30 ದಿನಗಳ ಪೆರೋಲ್
- ಆಗಸ್ಟ್ 2026 – 21 ದಿನಗಳ ಫರ್ಲೋ.
ಈ ಮೂಲಕ 2026ರಲ್ಲೇ ಗುರ್ಮಿತ್ ರಾಮ್‌ಗೆ ಇದು ಮೂರನೇ ತಾತ್ಕಾಲಿಕ ಬಿಡುಗಡೆ. ಜನವರಿ 5ರಂದು 40 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ಅವರು, ಮೇ 26ರಂದು ಮತ್ತೆ 30 ದಿನಗಳ ಪೆರೋಲ್ ಪಡೆದಿದ್ದರು. ಇದೀಗ ಆಗಸ್ಟ್‌ನಲ್ಲಿ 21 ದಿನಗಳ ಫರ್ಲೋ ದೊರೆತಿದೆ. ಮೇ ತಿಂಗಳ ಬಿಡುಗಡೆ ಬಳಿಕ ಜೂನ್ 24ರಂದು ಅವರು ಜೈಲಿಗೆ ಮರಳಿದ್ದರು.
ಇದನ್ನೂ ಓದಿ : 2029ರಲ್ಲೇ ‘ಒಂದು ದೇಶ, ಒಂದು ಚುನಾವಣೆ’ ಸಾಧ್ಯ: ಬಿಜೆಪಿ ತರಾತುರಿಗೆ ವಿಪಕ್ಷಗಳ ವಿರೋಧ
ಚುನಾವಣೆಗಳ ಸಂದರ್ಭದಲ್ಲೂ ಪೆರೋಲ್ ಕುರಿತು ಪ್ರಶ್ನೆಗಳು
ಗುರ್ಮಿತ್ ರಾಮ್‌ಗೆ ಪದೇಪದೇ ಪೆರೋಲ್ ಮತ್ತು ಫರ್ಲೋ ನೀಡುತ್ತಿರುವುದು ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೆಲವು ಬಿಡುಗಡೆಗಳು ಚುನಾವಣೆಗಳ ಸಮಯಕ್ಕೆ ಸಮೀಪವಾಗಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಉದಾಹರಣೆಗೆ, 2022ರ ಫೆಬ್ರವರಿಯಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಗೂ ಕೆಲವೇ ದಿನಗಳ ಮೊದಲು ಅವರಿಗೆ ಮೂರು ವಾರಗಳ ಫರ್ಲೋ ನೀಡಲಾಗಿತ್ತು. 2024ರ ಅಕ್ಟೋಬರ್‌ನಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು 20 ದಿನಗಳ ಪೆರೋಲ್ ನೀಡಲಾಗಿತ್ತು. 2025ರ ಜನವರಿಯಲ್ಲೂ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ 30 ದಿನಗಳ ಪೆರೋಲ್ ದೊರೆತಿತ್ತು.
ಗುರ್ಮಿತ್ ರಾಮ್ ಅವರ ಪುನರಾವರ್ತಿತ ತಾತ್ಕಾಲಿಕ ಬಿಡುಗಡೆಗೆ ಸಿಖ್ ಸಂಘಟನೆಗಳು ಸೇರಿದಂತೆ ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿವೆ. ಇಂತಹ ಬಿಡುಗಡೆಗಳು ಸಾಮಾನ್ಯ ಕೈದಿಗಳಿಗೆ ಅನ್ವಯಿಸುವ ನಿಯಮಗಳಂತೆಯೇ ನಡೆಯುತ್ತಿವೆಯೇ ಅಥವಾ ಅವರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಅವು ಎತ್ತಿವೆ.
ಹರಿಯಾಣದ ಜೈಲು ನಿಯಮಗಳ ಅಡಿಯಲ್ಲಿ ಅರ್ಹ ಕೈದಿಗಳಿಗೆ ನಿಗದಿತ ಮಿತಿಯೊಳಗೆ ಪೆರೋಲ್ ಮತ್ತು ಫರ್ಲೋ ಪಡೆಯುವ ಅವಕಾಶವಿದೆ. ಆದರೆ ಇಂತಹ ತಾತ್ಕಾಲಿಕ ಬಿಡುಗಡೆಯನ್ನು ನೀಡುವುದು ಹಲವು ಆಡಳಿತಾತ್ಮಕ ಅನುಮತಿಗಳಿಗೆ ಒಳಪಟ್ಟಿರುತ್ತದೆ. ಗುರ್ಮಿತ್ ರಾಮ್ ಅವರ ಪ್ರಕರಣದಲ್ಲಿ ಮಾತ್ರ ಇಷ್ಟು ಕಡಿಮೆ ಅವಧಿಯಲ್ಲಿ ಪದೇಪದೇ ಬಿಡುಗಡೆ ದೊರೆಯುತ್ತಿರುವುದು ಸಾರ್ವಜನಿಕ ಹಾಗೂ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಇದೀಗ 21 ದಿನಗಳ ಫರ್ಲೋ ಮುಗಿದ ಬಳಿಕ ಗುರ್ಮಿತ್ ರಾಮ್ ಮತ್ತೆ ಸುನಾರಿಯಾ ಜೈಲಿಗೆ ಮರಳಬೇಕಾಗಿದೆ. ಆದರೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯೊಬ್ಬರು 2017ರ ಶಿಕ್ಷೆಯ ಬಳಿಕ 17 ಬಾರಿ ಜೈಲಿನಿಂದ ಹೊರಬಂದಿರುವುದು, ಪೆರೋಲ್ ಮತ್ತು ಫರ್ಲೋ ವ್ಯವಸ್ಥೆಯ ಅನುಷ್ಠಾನ ಹಾಗೂ ಅದರಲ್ಲಿನ ಸಮಾನತೆಯ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ನೋಡಿ : ಅಪರಾಧ ಮತ್ತು ಶಿಕ್ಷೆ… ಯಾವುದು ಅಪರಾಧ… | ಕೆ.ಎಸ್.ವಿಮಲಾ Janashakthi Media
