ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿ 2023-24ನೇ ಸಾಲಿನ ಆಯವ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ, ಒಂದೆಡೆ ನಿರುದ್ಯೋಗ ಮತ್ತೊಂದೆಡೆ ಉದ್ಯೋಗ ಸೃಷ್ಟಿ ವಿಷಯದಲ್ಲಿ ಕೇಂದ್ರ ಬಜೆಟ್ ಗಮನ ಹರಿಸಿಲ್ಲ. ಗ್ರಾಮೀಣಾಭಿವೃದ್ದಿ ಮತ್ತು ದೇಶದಲ್ಲಿ ಕೃಷಿ ಬೆಳವಣಿಗೆಗೆ ಸಂಬಂಧಿಸಿದಂತೆ ಯಾವುದೇ ಆದ್ಯತೆಗಳನ್ನು ಪ್ರಕಟಿಸದ ಕೇಂದ್ರದ ಬಿಜೆಪಿ ಸರ್ಕಾರ ಮತ್ತೆ ಅದೇ ಹಳೆಯ ಯೋಜನೆಗಳಿಗೆ ಪಾಲಿಶ್ ಮಾಡಿ ಮಂಡಿದೆ. ದೂರದೃಷ್ಟಿ ಇಲ್ಲದ ನಿರಾಶದಾಯಕ ಬಜೆಟ್ ಇದಾಗಿದೆ ಎಂದುರ ಆರೋಪಿಸಿದರು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲಾ, “ನರೇಂದ್ರ ಮೋದಿ ಸರ್ಕಾರದ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರ ಸ್ವರೂಪದಲ್ಲಿದೆ. ಆದರೆ ಉದ್ಯೋಗ ಸೃಷ್ಟಿ ಮತ್ತು ಅದಕ್ಕೆ ಸಂಬಂಧಿಸಿ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವೇ ಆಗಿಲ್ಲ. ಖಾಸಗಿ ಬಂಡವಾಳ ಹೂಡಿಕೆ ಹಾಗೂ ಎಮ್ಎಸ್ಎಮ್ಇಗಳ ಸ್ಥಾಪನೆಗೆ ಅಗತ್ಯ ಕ್ರಮಗಳ ಬಗ್ಗೆಯೂ ತಿಳಿಸಿಲ್ಲ. ಸರ್ಕಾರಿ ಉದ್ಯೋಗದ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಮಾರ್ಗಸೂಚಿ ಇಲ್ಲʼʼ ಎಂದು ತಿಳಿಸಿದರು.
ರಫ್ತು ಹೆಚ್ಚು ಮಾಡುವ ಬಗ್ಗೆ ಮುಂಗಡ ಪತ್ರದಲ್ಲಿ ಸ್ಪಷ್ಟವಾಗಿ ಮಂಡಿಸಿಲ್ಲ. ದೇಶದ ಮೂಲಭೂತ ಸೌಕರ್ಯಗಳಿಗೆ ಯಾವುದೇ ಹೂಡಿಕೆಯ ಬಗ್ಗೆ ತಿಳಿಸಿಲ್ಲ. ಆರ್ಥಿಕ ಅಭಿವೃದ್ಧಿಯ ಬಗ್ಗೆ ಕಾರ್ಯಯೋಜನೆಗಳಿಲ್ಲ. ಮಧ್ಯಮ ಮತ್ತು ಬಡವರ್ಗ ಸೇರಿದಂತೆ ಯಾರಿಗೂ ಬಜೆಟ್ನಿಂದ ಅನುಕೂಲವಾಗಿಲ್ಲ. ಹೂಡಿಕೆದಾರರಿಗೆ ಕೊಡುಗೆಗಳು ಇಲ್ಲವಾಗಿದೆ. ಸುರ್ಜೇವಾಲಾ ಟೀಕಿಸಿದರು.
ಅಂತಾರಾಷ್ಟ್ರೀಯವಾಗಿ ಕಚ್ಚಾ ತೈಲದ ಬೆಲೆ ಶೇ 34ರಷ್ಟು ಹಾಗೂ ಸಿಲಿಂಡರ್ ದರ ಶೇ 40ರಷ್ಟು ಇಳಿಕೆ ಆಗಿದೆ. ಆದರೆ ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಇಳಿಸಿಲ್ಲ. ಕನಿಷ್ಟ ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ 20 ರೂ ಇಳಿಕೆ ಮಾಡಬಹುದಿತ್ತು. ಗ್ಯಾಸ್ ಸಿಲಿಂಡರ್ ದರವನ್ನು 500 ರೂ ವರೆಗೆ ಇಳಿಕೆ ಮಾಡಬೇಕಿತ್ತು” ಎಂದು ಹೇಳಿದರು.