ಚೆನ್ನೈ: ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಗೆ ವಿನಾಯಿತಿ ನೀಡಲು ಅನುವಾಗುವ ಮಸೂದೆಯನ್ನು ರಾಜ್ಯಪಾಲ ಆರ್.ಎನ್. ರವಿ ಅವರು ಮತ್ತೊಮ್ಮೆ ಅಂಗೀಕರಿಸಲು ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಹೊಂದಿರುವ ಪಕ್ಷಗಳ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಸೂದೆಗೆ ತಮಿಳುನಾಡು ವಿಧಾನಸಭೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಅನುಮೋದನೆ ನೀಡಿತ್ತು. ಮಸೂದೆಯನ್ನು ತಮಿಳುನಾಡು ರಾಜ್ಯಪಾಲ ಬಿ ಎನ್ ರವಿ ಅವರು ತಮ್ಮ ಬಳಿ 143 ದಿನಗಳ ಕಾಲ ಇರಿಸಿ ನಂತರ ಅದನ್ನು ಸ್ಪೀಕರ್ ಅವರಿಗೆ ವಾಪಸ್ಸು ಕಳುಹಿಸಿದ್ದಾರೆ ಎಂದು ತಿಳಿಸಿದರು.
ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ನಡೆಸಲಾಗುವ ರಾಷ್ಟ್ರ ಮಟ್ಟದ ಅರ್ಹತಾ ಪರೀಕ್ಷೆ(ನೀಟ್)ಯಿಂದ ತಮಿಳುನಾಡಿಗೆ ವಿನಾಯಿತಿ ನೀಡುವ ಮಸೂದೆಯನ್ನು ಅನುಮೋದಿಸುವ ಉದ್ದೇಶದಿಂದ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಲಾಗುವುದು ಎಂದು ತಮಿಳುನಾಡು ಸರಕಾರ ಘೋಷಿಸಿದೆ. ಮಸೂದೆಗೆ ಅನುಮೋದನೆ ಸಿಕ್ಕ ಕೂಡಲೇ ರಾಜಪಾಲರು ಅದನ್ನು ಅಂಗೀಕರಿಸಲು ಮತ್ತೆ ಕಳುಹಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ನೀಟ್ ರದ್ದತಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸದೆ ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದಾರೆ. ಸುಪ್ರೀಂ ಕೋರ್ಟ್ ನೀಟ್ ಅನ್ನು ಎತ್ತಿ ಹಿಡಿದಿದೆ ಎಂಬ ರಾಜ್ಯಪಾಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಅದು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ್ದು ಹಾಗೂ ಅದರು ರಾಜ್ಯ ಶಾಸಕಾಂಗದ ಶಾಸಕಾಂಗ ಅಧಿಕಾರಗಳಿಗಿಂತ ಭಿನ್ನವಾಗಿದೆ ಎಂದಿದ್ದಾರೆ.
ವಿಶೇಷ ಅಧಿವೇಶನ ನಡೆಯುವ ದಿನಾಂಕವನ್ನು ವಿಧಾನಸಭಾ ಸ್ಪೀಕರ್ ಎಂ ಅಪ್ಪವು ಅವರು ಘೋಷಿಸಲಿದ್ದಾರೆ ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ತಿಳಿಸಿದ್ದಾರೆ.
ರಾಜ್ಯಕ್ಕೆ ರಾಷ್ಟ್ರಮಟ್ಟದ ನೀಟ್‍ನಿಂದ ವಿನಾಯಿತಿ ನೀಡಿ 12ನೇ ತರಗತಿ ಪರೀಕ್ಷಾ ಫಲಿತಾಂಶಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ಈ ಮಸೂದೆ ಸಿದ್ಧಪಡಿಸಿದೆ.
ಈ ಮಸೂದೆ ವಿದ್ಯಾರ್ಥಿಗಳ, ಪ್ರಮುಖವಾಗಿ ಗ್ರಾಮೀಣ ಮತ್ತು ಬಡ ಕುಟುಂಬಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ರಾಜ್ಯಪಾಲರು ವಾಪಸ್ಸು ಕಳುಹಿಸಿದ್ದಾರೆ ಎನ್ನಲಾಗಿದೆ.
ಇಂದಿನ ಸರ್ವಪಕ್ಷದ ಸಭೆಯಲ್ಲಿ ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ ಭಾಗವಹಿಸದಿದ್ದರೂ ರಾಜ್ಯದಲ್ಲಿ ‘ನೀಟ್’ ರದ್ದುಗೊಳಿಸುವ ಸರ್ಕಾರದ ನಿರ್ಣಯಕ್ಕೆ ತನ್ನ ಬೆಂಬಲವನ್ನು ನೀಡಿತು. ಬಿಜೆಪಿ ಪಕ್ಷದ ಸದಸ್ಯರು ಸಭೆಯನ್ನು ಬಹಿಷ್ಕರಿಸಿದ್ದವು.