ದೇಶದಲ್ಲಿ ಶೀಘ್ರದಲ್ಲೇ ಹೊಸ ಸಹಕಾರ ನೀತಿ ಜಾರಿ: ಅಮಿತ್‌ ಶಾ

ನವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ನೂತನ ಸಹಕಾರಿ ನೀತಿಯನ್ನು ಹೊರತರಲಿದೆ. ದೇಶದಲ್ಲಿ ಶೀಘ್ರದಲ್ಲಿಯೇ ಹೊಸ ಸಹಕಾರ ನೀತಿ ಜಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ರಾಷ್ಟ್ರೀಯ ಸಹಕಾರಿ ಸಮಾವೇಶ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ʻʻಈ ವರ್ಷದ ಜುಲೈ ತಿಂಗಳಿನಲ್ಲಿ ಸಹಕಾರ ಸಚಿವಾಲಯವನ್ನು ರಚಿಸಲಾಯಿತು. ಸಹಕಾರಿ ವಲಯ ರಾಜ್ಯದ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರ ಏಕೆ ಈ ಹೊಸ ಸಚಿವಾಲಯವನ್ನು ರಚಿಸಿತು ಎಂದು ಕೆಲವರು ಆಶ್ಚರ್ಯಪಡುತ್ತಾರೆ. ಆದರೆ ಅದಕ್ಕೆ ಕಾನೂನಾತ್ಮಕ ಪ್ರತಿಕ್ರಿಯೆ ನೀಡುತ್ತೇವೆ. ಈ ಬಗ್ಗೆ ನಾನು ಹೆಚ್ಚು ವಾದ ಮಾಡಲು ಬಯಸುವುದಿಲ್ಲʼʼ ಎಂದರು.

ಇದನ್ನು ಓದಿ: ಕೇಂದ್ರ ಸಹಕಾರಿ ಸಚಿವಾಲಯವೊಂದು ಬೇಕಿತ್ತೇ?

ಈ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಸಹಕರಿಸುತ್ತದೆ ಮತ್ತು ಯಾವುದೇ ಘರ್ಷಣೆ ಇರುವುದಿಲ್ಲ ಮತ್ತು ಸಹಕಾರಿ ಚಳುವಳಿಯನ್ನು ಬಲಪಡಿಸಲು ರಾಜ್ಯಗಳ ಜೊತೆ ಕೆಲಸ ಮಾಡಲಿದೆ ಎಂದು ಸಚಿವ ಅಮಿತ್ ಶಾ ಹೇಳಿದ್ದಾರೆ.

ದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೌತಿಕವಾಗಿ ವಿವಿಧ ಸಹಕಾರಿ ಸಂಘಗಳ 2,100 ಪ್ರತಿನಿಧಿಗಳು ಮತ್ತು ಸುಮಾರು 6 ಕೋಟಿ ಜನ ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಸಹಕಾರ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.

ಮುಂದಿನ ಐದು ವರ್ಷಗಳಲ್ಲಿ ಪ್ರಾಥಮಿಕ ಕೃಷಿ ಪರಿಷತ್ತಿನ ಸಹಕಾರ ಸಂಘ(ಪಿಎಸಿ)ಗಳ ಪ್ರಸ್ತುತ, ಸುಮಾರು 65,000 ಇರುವ ಸಂಖ್ಯೆಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗುವುದು.  ಇದೇ ವೇಳೆ ಅವರು ಸರ್ಕಾರದ ನೂತನ ನಿರ್ಧಾರಗಳ ಬಗ್ಗೆ ತಿಳಿಸಿದರು.

ಇದನ್ನು ಓದಿ: ಸಹಕಾರ ಸಂಘಗಳ ನಿರ್ವಹಣೆ: ಸಂವಿಧಾನದ 97ನೇ ತಿದ್ದುಪಡಿಯ ಬಹುತೇಕ ಅಂಶಗಳು ರದ್ದು

ಈವರೆಗೆ ಸಹಕಾರ ಇಲಾಖೆಯು ಕೃಷಿ ಇಲಾಖೆಯ ಅಧೀನದಲ್ಲಿಯೇ ಇದ್ದ ಸಹಕಾರ ಇಲಾಖೆ ಪ್ರತ್ಯೇಕವಾಗಿ ಏಕೆ ಅವಶ್ಯಕವಿದೆ ಎಂದು ಅಮಿತ್ ತಿಳಿಸಿದ್ದಾರೆ. ಜೊತೆಗೆ ರಾಜ್ಯಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗುವುದು. ಈ ಮೂಲಕ ಇಡೀ ದೇಶದ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ತರಲಾಗುವುದು ಎಂದು ಹೇಳಿದ್ದಾರೆ.

ಗ್ರಾಮೀಣ ಸಹಕಾರಿ ಬ್ಯಾಂಕುಗಳ ಸಮಸ್ಯೆ, ತೆರಿಗೆ ಸಮಸ್ಯೆ ಇವುಗಳು ನನಗೆ ತಿಳಿದಿದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ಸಮಸ್ಯೆಗಳ ಕುರಿತಂತೆ ಪತ್ರ ಬರೆದು ನಮಗೆ ಕಳುಹಿಸಿ. ನಾನೇ ಬಂದು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಭಾರತೀಯ ಸಹಕಾರ ಕ್ಷೇತ್ರವು ಒಳ್ಳೆಯ ಬೆಳವಣಿಗೆಗೆ ವೇದಿಕೆಯಾಗಲಿದೆ. ಜಾಗತಿಕ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡುವ ಸಂಸ್ಥೆಯನ್ನು ನೀವೂ ಪ್ರಾರಂಭಿಸಬಹುದು ಎಂದರು.

ಸಣ್ಣ ಮೀನುಗಾರರಿಗೆ ತಾಂತ್ರಿಕ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಸಹಕಾರಿ ಸಂಘಗಳ ಮೂಲಕ ಸಹಾಯ ಮಾಡಲಾಗುವುದು. ಸಹಕಾರಿ ಸಂಘಗಳ ಚುನಾವಣೆಯಲ್ಲಿ ಪಾರದರ್ಶಕತೆ ತರಬೇಕು. ಈ ಕುರಿತು ಮೋದಿ ಉತ್ಸುಕರಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಪ್ರಸ್ತಾಪಿಸಿದರು.

 

Donate Janashakthi Media

Leave a Reply

Your email address will not be published. Required fields are marked *