ನಿನ್ನೆಯ ದಿಲ್ಲಿ ಘಟನೆಗಳ ಬಗ್ಗೆ ಟೆಲಿ ಮಾಧ್ಯಮಗಳ ಪ್ರಸಾರ ಮತ್ತು ಇಂದಿನ ದಿನಪತ್ರಿಕೆಗಳ ಸುದ್ದಿ ವೈಖರಿಯನ್ನು ಗಮನಿಸಿದ ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಕೆಲ ಪ್ರಶ್ನೆಗಳನ್ನು ಎತ್ತಿದ್ದಾರೆ. ಅವು ಈ ರೀತಿ ಇವೆ.
1. ಒಂದಿಷ್ಟು ಜನರ ಗದ್ದಲದ ಕಾರಣದಿಂದಾಗಿ ಸಾಗರದೋಪಾದಿಯಲ್ಲಿ ಟ್ರ್ಯಾಕ್ಟರ್ ಪರೇಡಿಗೆ ಸೇರಿದ್ದ ಲಕ್ಷಾಂತರ ಟ್ರ್ಯಾಕ್ಟರ್ಗಳು ಮತ್ತು ಜನರು ನಿಗದಿತವಾದ ಮಾರ್ಗಗಳಲ್ಲಿ ನಿಗದಿತ ಸಮಯಕ್ಕೆ ಉದ್ದೇಶಿಸಿದ ಅಭೂತಪೂರ್ವ ಪರೇಡ್ ನಡೆಸಿದರೆ? ಅದು ಹೇಗೆ ನಡೆಯಿತು? ಅಥವಾ ಅದು ಆರಂಭಗೊಳ್ಳುವ ಮೊದಲೇ ಸ್ಥಗಿತಗೊಂಡಿತೇ ಎಂಬ ಸುದ್ದಿ ಸಂಪೂರ್ಣವಾಗಿ ಅಡಗಿಹೋಯಿತು. ನನಗನ್ನಿಸುವಂತೆ, ಆ ಗದ್ದಲದ ಹಿಂದಿನ ಉದ್ದೇಶವೇ ಅದಾಗಿರಬಹುದು.
2. ದಿಲ್ಲಿ ರಾಜಧಾನಿಯ ರಕ್ಷಣಾ-ಪೊಲೀಸ್ ವ್ಯವಸ್ಥೆ ಇರುವುದು ಕೇಂದ್ರ ಗೃಹ ಇಲಾಖೆಯ ಬಳಿ. ಮಧ್ಯಾಹ್ನ 12ಕ್ಕೆ ಅಧಿಕೃತ ಗಣತಂತ್ರದಿನ ಸಮಾರಂಭ ಮುಗಿದ ಬಳಿಕ ಹೊರಡುವುದೆಂದು ನಿಗದಿಯಾಗಿದ್ದ ಟ್ರ್ಯಾಕ್ಟರ್ ಪರೇಡ್ ಬೆಳಗಿನ ಜಾವವೇ ಎದ್ದು ಹೊರಟಾಗ ಮತ್ತು ಹಾದಿಯಲ್ಲಿ ಅಡ್ಡಿ-ತಡೆಗಳನ್ನು ಧ್ವಂಸ ಮಾಡಿದಾಗ ರಾಜಧಾನಿಯ ಭದ್ರತಾ ವ್ಯವಸ್ಥೆ ಹೇಗಿರಬೇಕಿತ್ತು?
3. ಬೆಳಗಿನ ಜಾವ ಒಪ್ಪಂದ ಧಿಕ್ಕರಿಸಿ ಹೊರಟ ಪರೇಡ್ ಹೊರಟ ದಾರಿ ಯಾವುದೆಂದು ಗಮನಕ್ಕೆ ಬಂದಾಗ ಅದು ತಲುಪಬಹುದಾದ ಗಮ್ಯ ಯಾವುದು ಎಂಬುದು ಗೊತ್ತಿರಬೇಕಲ್ಲವೆ? ಅಂತಹ ಸಂಭಾವ್ಯ ಗಮ್ಯಗಳಲ್ಲಿ ಭದ್ರತಾ ವ್ಯವಸ್ಥೆ ಹೇಗಿರಬೇಕಿತ್ತು?
4. ಕೆಂಪುಕೋಟೆಯಲ್ಲಿ ಅನಿರೀಕ್ಷಿತ-ಅಹಿತಕರ ಘಟನೆಗಳು ನಡೆದವು. ಈ ಸಂಬಂಧ ಎಷ್ಟು ಜನರನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ? ಅವರು ಯಾರು-ಹಿನ್ನೆಲೆ ಏನು? ಉಗ್ರಗಾಮಿಗಳಾಗಿದ್ದರೆ ಅಲ್ಲಿ ಸುಲಭವಾಗಿ ಸೆರೆಸಿಕ್ಕುತ್ತಿದ್ದರಲ್ಲ? ಅವರ ವಿರುದ್ಧ ಏನೇನು ಕಾನೂನು ಕ್ರಮಗಳು ಜರುಗಿವೆ?
5. ಕೇಶ್, ಖಡಾ, ಕಂಗಾ, ಕಚ್ಛಾ, ಕಿರ್ಪಾಣ್ – ಇವು ಸಿಖ್ ಧರ್ಮದ ನಿಶಾನಿಗಳು. ಹಾಗಾಗಿ ಅವರು ಕತ್ತಿ ಹಿರಿದಿರುವುದು, ಝಳಪಿಸುವುದು ವಿಶೇಷವೇನಲ್ಲ. ಆದರೆ ಮಾಧ್ಯಮಗಳು ಆ ಕಿರ್ಪಾಣ್ಗಳು ಹಿಂಸೆಗಾಗಿಯೇ ತಂದವೆಂಬಂತೆ ಬಿಂಬಿಸಿವೆ. ಒಂದು ವೇಳೆ ಅವರು ಕಿರ್ಪಾಣ್ ದಾಳಿಗೆ ಬಳಸಿದ್ದರೆ, ದೊಡ್ಡ ಸಂಖ್ಯೆಯಲ್ಲಿ ಗಾಯಾಳುಗಳು ಇರಬೇಕಿತ್ತು. ಅಂತಹ ಸುದ್ದಿಗಳಿವೆಯೆ?
6. ವ್ಯವಸ್ಥೆ ಮತ್ತು ಮಾಧ್ಯಮಗಳು ಒಂದು ಕಡೆ ಒಟ್ಟಾಗಿ ನಿಂತಾಗ ಇಂತಹ ಸನ್ನಿವೇಶ ಎದುರಾಗುವುದು ಸಹಜ. ಆದರೆ, ಕೃಷಿ ನೀತಿಯ ವಿರುದ್ಧ ನಿಂತವರ ಸಮಸ್ಯೆಗಳಿಗೂ ಈ ಎಲ್ಲ ಬೆಳವಣಿಗೆಗಳಿಗೂ ಸಂಬಂಧವೇ ಇಲ್ಲದಿರುವುದರಿಂದ, ಅವರು ತಮ್ಮ ನಿಲುವಿನಿಂದ ಹಿಂಜರಿಯುವುದಾಗಲೀ ಈ ಹೋರಾಟ ಇಲ್ಲಿಗೆ ಮುಕ್ತಾಯವಾಗುವುದಾಗಲೀ ಕಾಣುತ್ತಿಲ್ಲ. ಬದಲಾಗಿ ಇನ್ನಷ್ಟು ಅಪನಂಬಿಕೆಗಳ ನಡುವೆ ಮಾತುಕತೆ, ಸಂಧಾನ ಮುಂದುವರಿಯಬೇಕಾಗುತ್ತದೆ. ಹಾದಿ ಇನ್ನಷ್ಟು ಜಟಿಲ ಆದಂತಾಗಿದೆ.
7. ಎಲ್ಲಕ್ಕಿಂತ ಕೊನೆಯದಾಗಿ, ಜನರಿಗೆ ಒಪ್ಪಿಗೆ ಇಲ್ಲದ (ದೇಶದಾದ್ಯಂತ ಈ ಕಾಯಿದೆಗಳಿಗೆ ವಿರೋಧ ಸೂಚಿಸಿ ಪ್ರತಿಭಟನೆಗಳು ನಡೆದಿವೆ), ಚರ್ಚೆಯಾಗದೇ ಜಾರಿಗೆ ಬಂದ ಕಾಯಿದೆಯನ್ನು ಉಳಿಸಿಕೊಳ್ಳುವ ಹಠ ಸರ್ಕಾರಕ್ಕೆ ಯಾಕೆ? ಈ ಎಲ್ಲ ಘಟನೆಗಳಿಗೆ ಮೂಲ ಕಾರಣ ಅದಲ್ಲವೇ? ಇವನ್ನೆಲ್ಲ ಸಾರ್ವಜನಿಕರಿಗೆ ತಿಳಿಸುವ ಜವಾಬ್ದಾರಿ ಮಾಧ್ಯಮಗಳಿಗಿಲ್ಲವೇ? ಎಂದು ರಾಜಾರಾಂ ತಲ್ಲೂರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ರೈತರಿಗೆ ಗುಂಡಿಕ್ಕಲು ಯೋಜಿಸಿದ್ದ ವ್ಯಕ್ತಿಯ ಬಂಧನ