ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧರಾಗಿ: ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ

ಬೆಂಗಳೂರು : “ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು, ಜನರ ಕೈಗೆ ಅಧಿಕಾರ ಹೋಗಲಿದೆ. ಹೀಗಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಈ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು” ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸ್ಥಳೀಯ

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾದವರಿಗೆ ಸೂಕ್ತ ಚಿಕಿತ್ಸೆಗೆ ಸಿಎಂ ಆದೇಶ

“ಪಂಡಿತ್ ನೆಹರು, ರಾಜಗೋಪಾಲಾಚಾರಿ, ಕೆಂಗಲ್ ಹನುಮಂತಯ್ಯ, ಬಿ.ಡಿ.ಜತ್ತಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ರಾಷ್ಟ್ರಮಟ್ಟಕ್ಕೆ ಬೆಳೆದವರು. ಸಂಘಟನೆ ಬಲಗೊಳಿಸಬೇಕು. ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಹೊಸದಾಗಿ ರಚಿಸುವ ಸಮಯ ಬಂದಿದೆ. ಮೊದಲು ಪಕ್ಷದ ಕೆಲಸ ಮಾಡಬೇಕು. ಕೇವಲ ಗುರುತಿನ ಚೀಟಿಗೋಸ್ಕರ ಬರುವವರು ಮನೆಯಲ್ಲಿಯೇ ಇರಿ. ಖಾದಿ ಬಟ್ಟೆ ಹಾಕಿಕೊಂಡು, ಕಾರು ಇಟ್ಟುಕೊಂಡು ಎಂಎಲ್ ಸಿ ಮಾಡಿ, ಅಧ್ಯಕ್ಷನನ್ನಾಗಿ ಮಾಡಿ ಎಂದರೆ ಅದು ಇಲ್ಲಿ ನಡೆಯುವುದಿಲ್ಲ. ಕೆಲಸ ಮಾಡುವವರಿಗೆ ಆದ್ಯತೆ. ನಿಮ್ಮ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ತಂದು ನಾಯಕತ್ವಕ್ಕೆ ಬೇಡಿಕೆ ಇಡಬೇಕು. ನಿಮ್ಮ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರಲು ಆಗದಿದ್ದರೆ ನಾವು ಬೇರೆಯವರನ್ನು ತಯಾರು ಮಾಡುತ್ತೇವೆ.

ನಾನು ಎಷ್ಟು ದಿನ ಅಧ್ಯಕ್ಷನಾಗಿ ಇರುತ್ತೇನೆ ಎಂಬುದು ಮುಖ್ಯವಲ್ಲ. ನಾನು ಅಧಿಕಾರ ಬಿಟ್ಟು ಹೋಗುವ ಮುನ್ನ ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತೇನೆ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ. ನೀವೆಲ್ಲರೂ ಅದಕ್ಕೆ ಸಿದ್ಧರಾಗಬೇಕು.”

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ರಾಜೀವ್ ಗಾಂಧಿ:

ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ನಾಯಕ ರಾಜೀವ್ ಗಾಂಧಿ. ಸಾವಿರಾರು ಯುವ ನಾಯಕರನ್ನು ಸಮಾಜಕ್ಕೆ ಕೊಡುಗೆ ಕೊಟ್ಟ, ಯುವ, ವಿದ್ಯಾರ್ಥಿ ನಾಯಕತ್ವವನ್ನು ಬೆಳೆಸಿದವರು ಅವರು.

ರಾಜೀವ್ ಗಾಂಧಿ ಪ್ರಧಾನಿಗಳಾಗಿದ್ದಾಗ ಕೆ.ಎಚ್.ಪಾಟೀಲರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಈ ವೇಳೆ ಸುಮಾರು 70 ಕ್ಕೂ ಹೆಚ್ಚು ಯುವ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ರಾಜೀವ್ ಗಾಂಧಿ ನನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಬಂದಿದ್ದರು, ನಂತರವೂ ನನ್ನ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

ಚನ್ನಪಟ್ಟಣದಲ್ಲಿ ಹಿಂದೂ- ಮುಸ್ಲಿಂ ಗಲಾಟೆ ನಡೆದ ಸಂದರ್ಭದಲ್ಲಿ ನನ್ನನ್ನು ಬೇರೆ ಮಾರ್ಗದಲ್ಲಿ ಅವರ ಭೇಟಿಗೆ ಕರೆತರಲಾಯಿತು. ಅಂದು ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲರ ಆರೋಗ್ಯ ಹದಗೆಟ್ಟಿದ್ದ ಕಾರಣ ಅವರನ್ನು ಬದಲಾವಣೆ ಮಾಡುವ ಸಂದರ್ಭ ಬಂದಿತ್ತು. ಆಗ ಬಂಗಾರಪ್ಪರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಲಾಯಿತು.

“ಸಚಿವ ಸಂಪುಟದಲ್ಲಿ ಎಲ್ಲಾ ಸಮುದಾಯಗಳ ಯುವ ನಾಯಕರಿಗೆ ಸ್ಥಾನ ನೀಡಿ ಎರಡನೇ ಸಾಲಿನ ನಾಯಕತ್ವ ತಯಾರು ಮಾಡಬೇಕು” ಎಂದು ಬಂಗಾರಪ್ಪ ರಿಗೆ ರಾಜೀವ್ ಗಾಂಧಿ ಸೂಚನೆ ನೀಡಿದ್ದರು. ಆದ ಕಾರಣ ನಾನು ಮೊದಲ ಬಾರಿಗೆ ಮಂತ್ರಿಯಾದೆ.

ನಾನು,  ಸಲೀಂ ಮಹಮ್ಮದ್, ರತ್ನಪ್ರಭ ಸೇರಿದಂತೆ ಅನೇಕರನ್ನು ಸುಮಾರು 180 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಅಂತರರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಕಳುಹಿಸಿದ್ದರು. ಕಾಂಗ್ರೆಸ್ ಪಕ್ಷದ ಯುವಕರಲ್ಲಿ ನಾಯಕತ್ವ ಗುಣ ಬೆಳೆಯಬೇಕು ಎಂದು ಒತ್ತು ನೀಡುತ್ತಿದ್ದರು. ಒಂದು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ನನ್ನಲ್ಲಿ, ಆ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಮಂತ್ರಿಯಾಗಬಹುದು ಎನ್ನುವ ಭರವಸೆ ಮೂಡಿತ್ತು.

ಡಿಸಿಎಂ ಆದ ನಂತರ ಮೊದಲ ಸಹಿ ಹಾಕಿದ್ದು ರಾಜೀವ್ ಗಾಂಧಿ ಪ್ರತಿಮೆಗೆ

ರಾಜೀವ್ ಗಾಂಧಿ ಬಗ್ಗೆ ಇಡೀ ದಿನ ಮಾತನಾಡಬಹುದು. ನಾನು ಡಿಸಿಎಂ ಆದ ತಕ್ಷಣ ರಾಜೀವ್ ಗಾಂಧಿ ಅವರ ಹಳೆಯ ಪ್ರತಿಮೆ ಬದಲು ಮಾಡಿ ಹೊಸ ಪ್ರತಿಮೆ ಸ್ಥಾಪನೆಗೆ ಮೊದಲು ಸಹಿ ಮಾಡಿದೆ. ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಈ ಹಿಂದೆ ಸ್ಥಾಪನೆ ಮಾಡಲಾಗಿತ್ತು. ಪ್ರಸ್ಥುತ ಈ ಕೇಂದ್ರಗಳು ಕಾರಣಾಂತರಗಳಿಂದ ಸೊರಗಿವೆ. ಇವನ್ನು ಪುನರುಜ್ಜೀವನಗೊಳಿಸಲಾಗುವುದು.

ರಾಜೀವ್ ಗಾಂಧಿ ಬೆಂಗಳೂರಿಗೆ ಬಂದಾಗ ಯುವ ಕಾಂಗ್ರೆಸ್ ಅಧ್ಯಕ್ಷ ಜಾರ್ಜ್ ಅವರ ಜೀಪನ್ನು ಹತ್ತಿದರೇ ವಿನಃ ಎಫ್.ಎಂ. ಖಾನ್ ಅವರ ಕಾರನ್ನು ಹತ್ತಲಿಲ್ಲ. ಯುವಕರ ಬಗ್ಗೆ ಅವರಿಗಿದ್ದ ಪ್ರೀತಿಗೆ ಇದು ಸಾಕ್ಷಿ.

ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಜಯಪ್ರಕಾಶ್ ನಾರಾಯಣ್ ತರಬೇತಿ ಸಂಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳ ಸುಧಾರಣೆಗೆ 73, 74 ನೇ ತಿದ್ದುಪಡಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ ರಾಜೀವ್ ಗಾಂಧಿ ಅವರು “ಪಂಚಾಯಿತಿ ಮಟ್ಟದಿಂದ ಪಾರ್ಲಿಮೆಂಟ್ ವರೆಗೂ ನಾಯಕತ್ವ ಬೆಳೆಯಬೇಕು. We create leaders, not followers” ಎಂದು ತಿದ್ದುಪಡಿಯ ಪರವಾಗಿ ಮಾತನಾಡಿದರು.

ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಕನಕಪುರದ ಕಲ್ಲನ್ನು ಬಳಸಲಾಗಿದೆ. ಈ ಸೇವೆ ಮಾಡಲು ಸೋನಿಯಾ ಗಾಂಧಿ ನನಗೆ ಅವಕಾಶ ನೀಡಿದರು. ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧವೇ ನನಗೂ ಗಾಂಧಿ ಕುಟುಂಬಕ್ಕೂ ಇರುವುದು” ಎಂದು ಡಿಕೆಶಿ ಮಾರ್ಮಿಕವಾಗಿ ಹೇಳಿದರು.

ಕಾರ್ಯಕ್ರಮದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ದೇಶದಲ್ಲಿ ಸಮಸ್ಯೆ ಬಂದಾಗ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುತ್ತಾರೆ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಲಿದ್ದು, ಯೋಗಿ ಆದಿತ್ಯನಾಥ ಮತ್ತೊಮ್ಮೆ ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಪ್ರಧಾನ ಮಂತ್ರಿಯಾಗುವ ಅವಕಾಶವಿದ್ದರೂ ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದಾರೆ” ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, “ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಯವರಿಗೆ 7 ತಿಂಗಳು ಬೇಕಾಯಿತು. ಇದು ಬಿಜೆಪಿಯ ಅಸಮರ್ಥತೆಗೆ ಸಾಕ್ಷಿ. ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಶೂನ್ಯ” ಎಂದು ತಿರುಗೇಟು ನೀಡಿದರು.

ಇದನ್ನೂ ನೋಡಿ: ಪೆನ್‌ಡ್ರೈವ್‌ ಲೈಂಗಿಕ ಹಗರಣ : ಸಮಾಲೋಚನಾ ಗೋಷ್ಠಿ

Donate Janashakthi Media

Leave a Reply

Your email address will not be published. Required fields are marked *