ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ
ಮಾದರಿ ನೀತಿ ಸಂಹಿತೆಗೆ ಪ್ರಸ್ತಾವಿತ ತಿದ್ದುಪಡಿ ಅನಗತ್ಯವೂ ಆಗಿದೆ, ಅನಪೇಕ್ಷಣೀಯವೂ ಆಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಚುನಾವಣಾ ಆಶ್ವಾಸನೆಗಳ ವಿವರಗಳು ಮತ್ತು ಅವುಗಳ ಹಣಕಾಸು ಪರಿಣಾಮಗಳ ವಿವರಗಳನ್ನು ಬಹಿರಂಗಪಡಿಸಲು ಮಾದರಿ ನೀತಿ ಸಂಹಿತೆಯ ಪ್ರಸ್ತಾವಿತ ತಿದ್ದುಪಡಿ ಮತ್ತು ಪ್ರಪತ್ರವನ್ನು ಕಳಿಸಿರುವ ಭಾರತದ ಚುನಾವಣಾ ಆಯೋಗದ ಪತ್ರಕ್ಕೆ ಉತ್ತರವಾಗಿ ಅವರು ಅಕ್ಟೋಬರ್14 ರಂದು ಬರೆದಿರುವ ಪತ್ರದಲ್ಲಿ ಇದಕ್ಕೆ ನಾಲ್ಕು ಕಾರಣಗಳನ್ನು ಕೊಡುತ್ತ ಪ್ರಸ್ತಾವಿತ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.
ಸಿಪಿಐ(ಎಂ)ನ ಈ ಆಗ್ರಹಕ್ಕೆ ನೀಡಿರುವ ನಾಲ್ಕು ಕಾರಣಗಳು: ಇದು ಆಯೋಗವು ತನ್ನ ವ್ಯಾಪ್ತಿಗೆ ಬರದ ರಾಜಕೀಯ ಮತ್ತು ನೀತಿ ವಿಷಯಗಳಲ್ಲಿ ತೊಡಗುವಂತೆ ಮಾಡುತ್ತದೆ; ಇವು ರಾಜಕೀಯ ಮತ್ತು ನೀತಿಯ ಪ್ರಶ್ನೆಗಳು; ಇದು ಆಯೋಗವು ತೆಗೆದುಕೊಂಡ ಒಂದು ಸರಿಯಾದ ಮತ್ತು ಮಾನ್ಯ ನಿಲುವಿನ ವಿಷಯದಲ್ಲಿ ಆಯೋಗವು ಮನಸ್ಸು ಬದಲಿಸಿದಂತೆ ತೋರುತ್ತಿರುವ, ರಾಜಕೀಯ ಪಕ್ಷಗಳು ಮತ್ತು ಜನರಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಹೆಚ್ಚು ಅತಿಕ್ರಮಿಸುವ ಪ್ರಸ್ತಾವ; ಮತ್ತು ಕೊನೆಯದಾಗಿ, ಈ ವಿಷಯವನ್ನು ಕುರಿತಂತೆ ಅರ್ಜಿಯ ವಿಚಾರಣೆಯನ್ನು ಮೂವರು ನ್ಯಾಯಾಧೀಶರ ಪೀಠಕ್ಕೆ ಒಪ್ಪಿಸಲು ದೇಶದ ಸುಪ್ರಿಂ ಕೋರ್ಟ್ ಈಗಾಗಲೇ ನಿರ್ಧರಿಸಿದೆ.
ಯೆಚುರಿಯವರ ಪತ್ರದ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:
ಆತ್ಮೀಯ ಶ್ರೀ ರಾಜೀವ್ ಕುಮಾರ್ ಜೀ,
ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡಿದ ಆಶ್ವಾಸನೆಗಳ ಮೇಲೆ ಮಾದರಿ ನೀತಿ ಸಂಹಿತೆಗೆ ತಿದ್ದುಪಡಿ ಮಾಡುವ ಕುರಿತು ಆಯೋಗದ ಅಕ್ಟೋಬರ್ 4, 2022 ರ ಪತ್ರವನ್ನು ಉಲ್ಲೇಖಿಸಿ ಈ ಪತ್ರ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಪ್ರಸ್ತಾವಿತ ತಿದ್ದುಪಡಿಯನ್ನು ಈ ಕೆಳಗಿನ ಕಾರಣಗಳಿಗಾಗಿ ಅನಗತ್ಯವಾಗಿದೆ ಮತ್ತು ಈ ವಿಷಯದಲ್ಲಿ ಮುಂದುವರಿಯಬಾರದು ಎಂಬ ಅಭಿಪ್ರಾಯ ಹೊಂದಿದೆ.
1) ಸಂವಿಧಾನದ 324 ನೇ ವಿಧಿಯು ಚುನಾವಣಾ ಆಯೋಗಕ್ಕೆ ಚುನಾವಣಾ ಉಸ್ತುವಾರಿ, ನಿರ್ದೇಶನ ಮತ್ತು ನಿಯಂತ್ರಣದ ಕೆಲಸವನ್ನು ವಿಧಿಸುತ್ತದೆ. ಅದು ಚುನಾವಣೆಯ ಸಮಯದಲ್ಲಿ ಜನರಿಗೆ ರಾಜಕೀಯ ಪಕ್ಷಗಳ ಕಲ್ಯಾಣ ಕ್ರಮಗಳ ನೀತಿ ಘೋಷಣೆಗಳು ಮತ್ತು ಆಶ್ವಾಸನೆಗಳನ್ನು ನಿಯಂತ್ರಿಸಲು ಅಥವಾ ಮೌಲ್ಯಮಾಪನ ಮಾಡಲು ಇದು ಚುನಾವಣಾ ಆಯೋಗಕ್ಕೆ ಅವಕಾಶ ಒದಗಿಸುವುದಿಲ್ಲ. ಮಾದರಿ ನೀತಿ ಸಂಹಿತೆಯ ಪ್ರಸ್ತಾವಿತ ತಿದ್ದುಪಡಿ ಮತ್ತು ಚುನಾವಣಾ ಆಶ್ವಾಸನೆಗಳ ವಿವರಗಳು ಮತ್ತು ಅವುಗಳ ಹಣಕಾಸು ಪರಿಣಾಮಗಳ ವಿವರಗಳನ್ನು ಬಹಿರಂಗಪಡಿಸಲು ಪ್ರಪತ್ರ ಆಯೋಗವು ತನ್ನ ವ್ಯಾಪ್ತಿಗೆ ಬರದ ರಾಜಕೀಯ ಮತ್ತು ನೀತಿ ವಿಷಯಗಳಲ್ಲಿ ತೊಡಗುವಂತೆ ಮಾಡುತ್ತದೆ.
2) ಆಶ್ವಾಸನೆಗಳ ಹಣಕಾಸು ಪರಿಣಾಮಗಳ ಪ್ರಮಾಣೀಕರಣ ಮತ್ತು ಆಶ್ವಾಸನೆಗಳನ್ನು ಪೂರೈಸಲು ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ಯೋಜನೆಯ ಹಣಕಾಸಿನ ಸಮರ್ಥನೀಯತೆಯಂತಹ ಕ್ಷೇತ್ರಗಳಿಗೆ ಪ್ರಪತ್ರ ಪ್ರವೇಶಿಸುತ್ತದೆ. ಇವು ರಾಜಕೀಯ ಮತ್ತು ನೀತಿಯ ಪ್ರಶ್ನೆಗಳು ಮತ್ತು “ಹಣಕಾಸಿನ ಸುಸ್ಥಿರತೆ” ಎಂಬುದರ ಕುರಿತು ವಿಭಿನ್ನ ದೃಷ್ಟಿಕೋನಗಳು ಇರಲು ಸಾಧ್ಯವಿದೆ. ಉದಾಹರಣೆಗೆ, ‘ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣಾ ಕಾಯಿದೆ’ಯಲ್ಲಿ ಜಿಡಿಪಿಯ ಶೇಕಡಾ 3 ಕ್ಕೆ ನಿಗದಿಪಡಿಸಲಾದ ವಿತ್ತೀಯ ಕೊರತೆಯ ಮಿತಿಯನ್ನು ನಮ್ಮ ಪಕ್ಷವು ವಿಮರ್ಶಿಸುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಹಣಕಾಸು ಸಂಪ್ರದಾಯಶರಣತೆಯ ವಿಚಾರಗಳಿಗೆ ಪರ್ಯಾಯಗಳಿವೆ.
3) ಸುಬ್ರಮಣ್ಯಂ ಬಾಲಾಜಿ ತೀರ್ಪಿನ ಮರುಪರಿಶೀಲನೆಗಾಗಿ ವಿಚಾರಣೆ ನಡೆಯುತ್ತಿರುವ ಪ್ರಕರಣದಲ್ಲಿ ಚುನಾವಣಾ ಆಯೋಗವು ಈ ವರ್ಷದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಆ ಅಫಿಡವಿಟ್‌ನಲ್ಲಿ ಆಯೋಗವು ಹೀಗೆ ಹೇಳಿತ್ತು: “ಚುನಾವಣೆಯ ಮೊದಲು ಅಥವಾ ನಂತರ ಯಾವುದೇ ಉಚಿತ ಕೊಡುಗೆಗಳನ್ನು ನೀಡುವುದು/ಹಂಚುವುದು ಸಂಬಂಧಪಟ್ಟ ಪಕ್ಷದ ನೀತಿ ನಿರ್ಧಾರವಾಗಿದೆ ಎಂದೂ ತಿಳಿಸಲಾಗಿದೆ. ಮತ್ತು ಅಂತಹ ನೀತಿಗಳು ಹಣಕಾಸಿನ ದೃಷ್ಟಿಯಿಂದ ಸಮಥ‍್ನೀಯವಾಗಿದೆಯೇ ಅಥವಾ ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯೇ ಎಂಬುದು ರಾಜ್ಯದ ಮತದಾರರು ಪರಿಗಣಿಸಬೇಕಾದ ಮತ್ತು ನಿರ್ಧರಿಸಬೇಕಾದ ಪ್ರಶ್ನೆಯಾಗಿದೆ.”
ಗೆದ್ದ ಪಕ್ಷವು ಸರ್ಕಾರ ರಚಿಸುವಾಗ ತೆಗೆದುಕೊಳ್ಳಬಹುದಾದ ರಾಜ್ಯ ನೀತಿಗಳು ಮತ್ತು ನಿರ್ಧಾರಗಳನ್ನು ತಾನು ನಿಯಂತ್ರಿಸಲು ಸಾಧ್ಯವಿಲ್ಲ ಎಂದೂ ಚುನಾವಣಾ ಆಯೋಗವು ಸಲ್ಲಿಸಿದೆ. “ಕಾನೂನಿನಲ್ಲಿ ಇದಕ್ಕೆ ಅವಕಾಶ ಕೊಡುವ ನಿಬಂಧನೆಗಳಲ್ಲದೆ ಅಂತಹ ಒಂದು ಕ್ರಮವು ಅಧಿಕಾರಗಳ ಅತಿಕ್ರಮಣವಾಗಿದೆ” ಎಂದು ಅದು ಹೇಳಿದೆ.
ಇದು ಆಯೋಗವು ತೆಗೆದುಕೊಂಡ ಒಂದು ಸರಿಯಾದ ಮತ್ತು ಮಾನ್ಯ ನಿಲುವಾಗಿತ್ತು. ಆದ್ದರಿಂದ, ಆಯೋಗವು ಮನಸ್ಸು ಬದಲಿಸಿದಂತೆ ತೋರುತ್ತಿರುವುದು ಮತ್ತು ರಾಜಕೀಯ ಪಕ್ಷಗಳು ಮತ್ತು ಜನರಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಹೆಚ್ಚು ಅತಿಕ್ರಮಿಸುವ ಪ್ರಸ್ತಾವ ಇಡುತ್ತಿರುವುದು ಆಶ್ಚರ್ಯಕರವಾಗಿದೆ.
4) ಸುಬ್ರಮಣ್ಯಂ ಬಾಲಾಜಿ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿದ ಅರ್ಜಿಯ ವಿಚಾರಣೆ ನಡೆಸಿದ ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಈ ವಿಷಯವನ್ನು ಭಾರತದ ಹೊಸ ಮುಖ್ಯ ನ್ಯಾಯಾಧೀಶರು ನಿರ್ಧರಿಸುವ ಮೂವರು ಸದಸ್ಯರ ಪೀಠವು ವಿಚಾರಣೆ ನಡೆಸಲಿ ಎಂದು ಆಗಸ್ಟ್ 26, 2022 ರಂದು ನಿರ್ಧರಿಸಿತು. ಹಾಗಾಗಿ, ಚುನಾವಣಾ ಆಶ್ವಾಸನೆಗಳ ವಿಷಯ ಮತ್ತು `ಉಚಿತ ಕೊಡುಗೆ’ಗಳು ಇತ್ಯಾದಿ ವಿಷಯಗಳು ಇನ್ನೂ ಸುಪ್ರೀಂ ಕೋರ್ಟ್‌ನ ಸಮ್ಮುಖ ಬಾಕಿ ಉಳಿದಿವೆ.
ಇಂತಹ ಸನ್ನಿವೇಶದಲ್ಲಿ , ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ನೀತಿ ಮತ್ತು ಕಲ್ಯಾಣ ಕ್ರಮಗಳನ್ನು ಮುಂದಿಡುವ ರಾಜಕೀಯ ಪಕ್ಷಗಳ ಹಕ್ಕುಗಳನ್ನು ಉಲ್ಲಂಘಿಸುವ ಪ್ರಪತ್ರವನ್ನು ಪರಿಚಯಿಸುವ ಮೂಲಕ ಮಾದರಿ ನೀತಿ ಸಂಹಿತೆಗೆ ತಿದ್ದುಪಡಿ ಮಾಡುವ ಆಯೋಗದ ಉಪಕ್ರಮವು ಅನಪೇಕ್ಷಿತವಾಗಿದೆ.
ಆದ್ದರಿಂದ ಮಾದರಿ ನೀತಿ ಸಂಹಿತೆಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಆಯೋಗ ಹಿಂಪಡೆಯಬೇಕೆಂದು ಸಿಪಿಐ(ಎಂ) ಬಯಸುತ್ತದೆ.
ನಿಮ್ಮ ವಿಶ್ವಾಸಿ
(ಸೀತಾರಾಂ ಯೆಚೂರಿ)
ಪ್ರಧಾನ ಕಾರ್ಯದರ್ಶಿ, ಸಿಪಿಐ(ಎಂ)