ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ಎಂಜಿಎನ್‌ಆರ್‌ಇಜಿಎ) ಯೋಜನೆ ಅಡಿಯಲ್ಲಿ ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಕೆಲಸದ ಪ್ರಮಾಣ ಶೇ. 50 ರಷ್ಟು ಕಡಿತಗೊಳಿಸಲಾಗಿದೆ. ಅದೇ ರೀತಿ ಗರ್ಭಿಣಿಯರು ಮತ್ತು ಬಾಣಂತಿಯರಿಗೂ ರಿಯಾಯಿತಿ ನೀಡಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ಎಂಜಿಎನ್‌ಆರ್‌ಇಜಿಎ) ಅಡಿ ಕೆಲಸದಲ್ಲಿ ಮಹಿಳೆಯರ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಈ ಬಗ್ಗೆ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಲಾಗಿದೆ.
ಇದನ್ನು ಓದಿ: ನರೇಗಾ ಯೋಜನೆಯಲ್ಲಿ ಅವೈಜ್ಞಾನಿಕ ಹೊಸ ನೀತಿ ವಿರೋಧಿಸಿ ಕೂಲಿಕಾರರ ಪ್ರತಿಭಟನೆ
ನರೇಗಾ ಯೋಜನೆಯಡಿ ಕೈಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದನ್ನು ಗಮನಿಸಿ ಅವರ ದೈಹಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವುದು ಅತ್ಯವಶ್ಯಕವೆಂದು ಪರಿಗಣಿಸಲಾಗಿದೆ.
ನರೇಗಾ ಯೋಜನೆಯಡಿ ಮಹಿಳೆಯರು ಭಾಗವಹಿಸುವಿಕೆ ಪ್ರಮಾಣ ಶೇ. 51ರಷ್ಟಿದ್ದು, ಇದನ್ನು ಶೇ. 60 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಹೆಚ್ಚಿನ ಪ್ರಮಾಣದ ಮಹಿಳೆಯರನ್ನು ಹೊಂದಿರುವ ಕಾಮಗಾರಿಗಳಲ್ಲಿ ಮಹಿಳೆಯರು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗಿದೆ.
ನರೇಗಾದಲ್ಲಿ ಕೆಲಸ ನಿರ್ವಹಿಸುವ 6 ತಿಂಗಳು ತುಂಬಿದ ಗರ್ಭಿಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನ ದಿನಾಂಕದಿಂದ 6 ತಿಂಗಳವರೆಗೆ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಲಾದ ಕೆಲಸದ ಪ್ರಮಾಣದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ನೀಡುವ ತಾಯಿ ಕಾರ್ಡ್ ಆಧಾರವಾಗಿ ಪರಿಗಣಿಸಲು ಸೂಚನೆ ನೀಡಲಾಗಿದೆ.
ಇದನ್ನು ಓದಿ: ನರೇಗಾ ಕಾನೂನು ತಿದ್ದುಪಡಿ: ಜಾತಿ ಆಧಾರದಲ್ಲಿ ಕೆಲಸ-ಕೂಲಿ ವಿಂಗಡನೆಯನ್ನು ಖಂಡಿಸಿ ಕೃಷಿಕೂಲಿಕಾರರ ಪ್ರತಿಭಟನೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಂಕಿಅಂಶಗಳ ಪ್ರಕಾರ, ನರೇಗಾ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 1.8 ಕೋಟಿ ಜನರು ನೋಂದಾವಣೆ ಮಾಡಿಕೊಂಡಿದ್ದಾರೆ. ಇದರಲ್ಲಿ 90 ಲಕ್ಷ (ಶೇ.51.42)ಮಹಿಳಾ ಉದ್ಯೋಗಿಗಳಿದ್ದಾರೆಂದು ತಿಳಿದುಬಂದಿದೆ. ಕಳೆದ 5 ವರ್ಷಗಳಲ್ಲಿ ಮಹಿಳೆಯರ ಭಾಗವಹಿಸುವ ಕ್ರಮ ನಿರಂತರವಾಗಿ ಹೆಚ್ಚಾಗುತ್ತಿರುವುದು ಇದರಿಂದ ತಿಳಿದುಬಂದಿದೆ.
ಇಲಾಖೆಯು ಕಳೆದ ವರ್ಷದಿಂದ ನರೇಗಾ ಜಾಬ್ ಕಾರ್ಡ್ ಹೊಂದಿಲ್ಲದ ಮಹಿಳೆಯರನ್ನು ಗುರುತಿಸಲು ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿತ್ತು. ಇಲಾಖೆಯು ಉದ್ಯೋಗಗಳನ್ನು ಒದಗಿಸುವಲ್ಲಿ ಮಹಿಳೆಯರು ಮತ್ತು ಮಹಿಳೆಯರ ನೇತೃತ್ವದ ಕುಟುಂಬಗಳಿಗೆ ಆದ್ಯತೆ ನೀಡುತ್ತಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಶಿಲ್ಬಾ ನಾಗ್ ಮಾತನಾಡಿ, ಮಾರ್ಚ್ 2023 ರ ವೇಳೆಗೆ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡಾ 60 ರಷ್ಟು ಮಹಿಳೆಯರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.