ನರೇಗಾ ಯೋಜನೆಯಲ್ಲಿ ಅವೈಜ್ಞಾನಿಕ ಹೊಸ ನೀತಿ ವಿರೋಧಿಸಿ ಕೂಲಿಕಾರರ ಪ್ರತಿಭಟನೆ

ಯಾದಗಿರಿ: ನರೇಗಾ ಯೋಜನೆಯಡಿ ದಿನಕ್ಕೆ ಎರಡು ಬಾರಿ ಕೆಲಸಗಾರರ ಹಾಜರಾತಿ ಮತ್ತು ಛಾಯಾಚಿತ್ರವನ್ನು ಅಸಂಬದ್ಧವಾಗಿ ಮತ್ತು ಅನಗತ್ಯವಾಗಿ ಆನ್‌ಲೈನ್‌ ಮೂಲಕ ಪಡೆಯುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು) ಯಾದಗಿರಿ ಜಿಲ್ಲಾ ಸಮಿತಿಯು ಧರಣಿಯನ್ನು ಹಮ್ಮಿಕೊಂಡಿದೆ.

ಇಂದು ಮತ್ತು ನಾಳೆ(ಏಪ್ರಿಲ್‌ 7-8ರಂದು) ಎರಡು ದಿನಗಳು ಧರಣಿ ಸತ್ಯಾಗ್ರಹದ ಮೊದಲ ದಿನವಾದ ಇಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಐಎಡಬ್ಲ್ಯೂಯು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಮಾತನಾಡಿ, ಹೊಸದಾದ ನೀತಿಯಲ್ಲಿ ನರೇಗಾ ಯೋಜನೆಯಡಿ ಕೆಲಸಗಾರರ ಹಾಜರಾತಿಯನ್ನು ಮತ್ತು ಛಾಯಾಚಿತ್ರವನ್ನು ದಿನಕ್ಕೆ ಎರಡು ಬಾರಿ ಸರೆಹಿಡಿದು ಅಪ್‌ಲೋಡ್‌ ಮಾಡಬೇಕೆಂಬ ಕೇಂದ್ರ ಸರ್ಕಾರದ ಆದೇಶ ಅಸಂಬದ್ಧವು ಅನಗತ್ಯವೂ ಆಗಿದ್ದು ನಾವು ಅದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.

ಇದನ್ನು ಓದಿ: ಮಾ.21 ರಿಂದ ರೈತ-ಕಾರ್ಮಿಕ-ದಲಿತ-ಮಹಿಳೆಯರಿಂದ ಬೆಂಗಳೂರು ಚಲೋ-ಜನ ಪರ್ಯಾಯ ಬಜೆಟ್ ಅಧಿವೇಶನ

ಕೂಲಿಕಾರರ ಮುಖ ಸ್ಪಷ್ಟವಾಗಿ ಕಾಣಬೇಕಾದರೆ ಒಳ್ಳೆಯ ಗುಣಮಟ್ಟದ ಸ್ಮಾರ್ಟ್‌ ಫೋನ್‌ ಬೇಕಾಗುತ್ತದೆ. ನಮ್ಮ ಮೇಟ್‌ಗಳ ಹತ್ತಿರವಾಗಲಿ, ಕೂಲಿಕಾರರ ಹತ್ತಿರವಾಗಲಿ ಅಂತಹ ಸ್ಮಾರ್ಟ್‌ ಫೋನ್‌ ಇರುವುದಿಲ್ಲ. ಕೂಲಿಕಾರರು ದಿನದ ನಿಗದಿತ ಕೆಲಸ ಮುಗಿದ ನಂತರ ಸಂಜೆ 5 ಗಂಟೆವರೆಗೆ ಕೆಲಸದ ಸ್ಥಳದಲ್ಲೇ ಇರಬೇಕೆಂಬ ನಿರ್ದೇಶನವೂ ಸಹ ಕೂಲಿಕಾರರಿಗೆ ಕಿರುಕುಳ ಕೊಟ್ಟು ಕೆಲಸಕ್ಕೆ ಬಾರದಂತೆ ಮಾಡುವ ದುರುದ್ದೇಶವಾಗಿದೆ ಎಂದು ಆರೋಪಿಸಿದರು.

ಕೆಲಸದಲ್ಲಿ ಪಾರದರ್ಶಕತೆ, ಸರ್ಕಾರದ ಹಣ ಪೋಲಾಗುವುದನ್ನು ತಡೆಯುವುದು ಭ್ರಷ್ಟಾಚಾರ ಮುಕ್ತ ಕೆಲಸದ ನಿರ್ವಹಣೆಗೆ ನಾವು ಸಂಪೂರ್ಣ ಬೆಂಬಲ ಕೊಡಲು ಸಿದ್ಧ. ಆದರೆ, ಕೆಲವು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮಾಡುವ ಕರ್ತವ್ಯ ಲೋಪಕ್ಕೆ ಕೂಲಿಕಾರರನ್ನು ಬಲಿಪಶು ಮಾಡಬಾರದು. ಆದ್ದರಿಂದ ನಾವು ಮೊದಲಿನಂತೆಯೇ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಮ್ಮೊಂದಿಗೆ ಚರ್ಚೆ ಮಾಡದೆ ತಂದಿರುವ ಹೊಸ ಸೂಚನೆಗಳನ್ನು ನಾವು ತಿರಸ್ಕರಿಸುತ್ತೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ನರೇಗಾ ಕೂಲಿಯನ್ನು ಇತ್ತೀಚಿಗೆ ಪರಿಷ್ಕರಿಸಿದ್ದು, ದಿನಗೂಲಿ ಕೇವಲ ರೂ. 4 ರಿಂದ ರೂ. 21ರಷ್ಟು ಮಾತ್ರ ಏರಿಕೆಯಾಗಿದೆ. ಹೊಸ ಕೂಲಿಯೂ ಏನೇನು ಸಾಕಾಗುವುದಿಲ್ಲ. ಅದರಿಂದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವಾಗ ಸರ್ಕಾರ ಹೆಚ್ಚಿಸಿರುವ ಕೂಲಿ ದರ ಅಮಾನವೀಯಯವಾಗಿದೆ. ಕೇಂದ್ರ ಸರ್ಕಾರಕ್ಕೆ ಗ್ರಾಮೀಣ ಜನರ ಪರಿಸ್ಥಿತಿ ಕಣ್ಣಿಗೆ ಕಾಣುತ್ತಿಲ್ಲ. ಸರ್ಕಾರದ ಈ ಧೋರಣೆಯನ್ನು ಖಂಡಿಸುತ್ತೇವೆ ಹಾಗೂ ಕೂಲಿಕಾರರಿಗೆ ದಿನಕ್ಕೆ ರೂ. 600 ರ ದರದಲ್ಲಿ ವೇತನ ನೀಡಬೇಕೆಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.

ಇದನ್ನು ಓದಿ: ರೈತ-ಕೂಲಿಕಾರ-ಕಾರ್ಮಿಕರ ಸಮಸ್ಯೆ ಇತ್ಯರ್ಥ್ಯಕ್ಕಾಗಿ ಜಂಟಿ ಆಂದೋಲನ

ನರೇಗಾ ಯೋಜನೆಗಾಗಿ ನೀಡುವ ಅನುದಾವನ್ನು ಸರ್ಕಾರ ಕಡಿತ ಮಾಡಿದೆ. ಹಿಂದಿನ ವರ್ಷದ ಬಜೆಟ್‌ನಲ್ಲಿ ರೂ. 98,000 ಕೋಟಿ ಅನುದಾನ ನೀಡಲಾಗಿತ್ತು. ಈ ವರ್ಷದ ಬಜೆಟ್‌ನಲ್ಲಿ ಕೇವಲ ರೂ. 73,000 ಕೋಟಿ  ಒದಗಿಸಲಾಗಿದೆ. ಗ್ರಾಮೀಣ ಮಟ್ಟದ ಇಂತಹ ದೊಡ್ಡ ಯೋಜನೆಗೆ ಈ ಹಣ ಏನೇನು ಸಾಲದು, ಯೋಜನೆಯ ಅಡಿ ಕೆಲಸಕ್ಕೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚೆಚ್ಚು ಕುಟುಂಬಗಳಿಗೆ ಕೆಲಸ ಒದಗಿಸಲು ಸರ್ಕಾರ ಹೆಚ್ಚೆಚ್ಚು ಅನುದಾನ ನೀಡಬೇಕು. ಪ್ರತಿಯೊಂದು ಕುಟುಂಬಕ್ಕೇ ಕನಿಷ್ಠ ವರ್ಷದಲ್ಲಿ 200 ದಿನ ಕೆಲಸ ಕೊಡಬೇಕು.

ಕೆಲಸಗಾರರಿಗೆ ಅನೇಕ ಕಡೆಗಳಲ್ಲಿ ವೇತನ ಪಾವತಿ ಬಾಕಿ ಇದೆ. ಕೊರೊನಾ ಸಮಯದಲ್ಲಿ ಯಾವುದೇ ಪರಿಹಾರ ಸಿಕ್ಕಿಲ್ಲ. ಕೂಲಿಕಾರರಿಗೆ ಬಾಕಿ ಇರುವ ವೇತನ, ಕೊರೊನಾ ಪರಿಹಾರ ಹಾಗೂ ಮೇಟ್ಸ್‌ಗಳಿಗೆ ಇರುವ ಬಾಕಿ ಇರುವ ಪ್ರೊತ್ಸಾಹಧನವನ್ನು ಕೂಡಲೇ ಪಾವತಿ ಮಾಡಬೇಕು.

ಇದನ್ನು ಓದಿ: ನರೇಗಾ ಕಾನೂನು ತಿದ್ದುಪಡಿ: ಜಾತಿ ಆಧಾರದಲ್ಲಿ ಕೆಲಸ-ಕೂಲಿ ವಿಂಗಡನೆಯನ್ನು ಖಂಡಿಸಿ ಕೃಷಿಕೂಲಿಕಾರರ ಪ್ರತಿಭಟನೆ

ಮೇಟಿಗಳು ಕಡ್ಡಾಯವಾಗಿ 8ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ಪಾಸ್‌ ಆಗಿರಬೇಕೆಂಬ ಅಸಂಬದ್ಧ ಷರತ್ತನ್ನು ಕೈಬಿಡಬೇಕು. ಓದಲು ಬರೆಯಲು ಬರುವವರಿಗೂ ಮೇಟಿಗಳಾಗಿ ನೇಮಿಸಿಕೊಳ್ಳಲು ಅವಕಾಶ ನೀಡಬೇಕು ಹಾಗೂ ಈ ಬೇಸಿಗೆಯೂ ಹೆಚ್ಚಾಗಿ ಹರಡುತ್ತಿದ್ದು ಬೇಸಿಗೆ ದಿನಗಳಲ್ಲಿ ಕೆಲಸದ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.

ಪ್ರತಿಭಟನೆಯ ನೇತೃತ್ವವನ್ನು ಎಐಎಡಬ್ಲ್ಯೂಯು ಯಾದಗಿರಿ ಜಿಲ್ಲಾ ಅಧ್ಯಕ್ಷ ದಾವಲಸಾಬ್‌ ನದಾಫ್‌, ಶಹಾಪುರ ತಾಲ್ಲೂಕು ಅಧ್ಯಕ್ಷೆ ರಂಗಮ್ಮ ಕಟ್ಟಿಮನಿ, ವಡಿಗೇರಾ ತಾಲ್ಲೂಕು ಅಧ್ಯಕ್ಷ ಚಂದ್ರರಡ್ಡಿ ಕಾಡಂಗೇರ, ಸುರಪುರ ತಾಲ್ಲೂಕು ಅಧ್ಯಕ್ಷ ಶರಣಪ್ಪ ಜಂಬಲದಿನ್ನಿ, ಹುಣಸಿಗಿ ತಾಲ್ಲೂಕು ಅಧ್ಯಕ್ಷ ಅಯ್ಯಪ್ಪ ಅನಸೂರ, ಯಾದಗಿರಿ ತಾಲ್ಲೂಕು ಅಧ್ಯಕ್ಷ ಜುಬೇರ ಪಾಷ ವಹಿಸಿಕೊಂಡಿದ್ದಾರೆ.

ಯಾದಗಿರಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತಿಕ್‌ ಹಾಗೂ ಆಯುಕ್ತರಾದ ಶ್ರೀಮತಿ ಶಿಲ್ಪನಾಗ್‌ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ವರದಿ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *