ಐತಿಹಾಸಿಕ‌ ಕ್ಷಣಕ್ಕೆ ಸಾಕ್ಷಿಯಾಗಲಿದೆ‌ ‘ಗಂಧದಗುಡಿ’ ಪುನೀತ್ ಪರ್ವ ಕಾರ್ಯಕ್ರಮ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಗಂಧದಗುಡಿ’ ಚಿತ್ರದ ಬಿಡುಗಡೆಗೂ ಮುನ್ನ ವೀಕ್ಷಣೆಯೆ ಸಾಕ್ಷಿಯಾಗಲಿರುವ ʻಪುನೀತ ಪರ್ವʼ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅರಮನೆ ಮೈದಾನದತ್ತ ಪುನೀತ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಅಕ್ಟೋಬರ್​ 28ರಂದು ಗಂಧದ ಗುಡಿ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಇದಕ್ಕೂ ಮುನ್ನ ಇಂದು ವಿಶೇಷ ವೇದಿಕೆಯಲ್ಲಿ ಚಿತ್ರದ ಸಮಾರಂಭದ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ರಾಜ್ ಕುಟುಂಬ ಈ ಪುನೀತ್ ಪರ್ವ ಅದ್ದೂರಿ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿದ್ದಾರೆ.

ಅರಮನೆ‌‌‌ ಮೈದಾನದ ಕೃಷ್ಣ ವಿಹಾರದಲ್ಲಿ 50ಕ್ಕೂ ಹೆಚ್ಚು ಪುನೀತ್ ರಾಜ್‍ಕುಮಾರ್ ಕಟೌಟ್​ಗಳನ್ನ ಹಾಕಲಾಗಿದೆ. ಎಲ್ಲ ರಾಜ್ಯದಿಂದ‌ ಅಭಿಮಾನಿಗಳು ಅರಮನೆ ಮೈದಾನ ಹತ್ತಿರ ಸುಳಿಯುತ್ತಿದ್ದಾರೆ. ಸಂಜೆ 6.30‌ ರಿಂದ‌ 9 ಗಂಟೆಯವರೆಗೂ ಈ‌ ಪುನೀತ್ ಪರ್ವ ಕಾರ್ಯ ನಡೆಯಲಿದೆ.

ಅಪ್ಪು ನಮ್ಮೊಂದಿಗೆ ಇದ್ದಿದ್ದರೆ ಎಂದು ಬಾವುಕರಾದ ನಟ ರಾಘವೇಂದ್ರ ರಾಜ್‌ಕುಮಾರ್‌ ಅವರು ಚಿತ್ರ ಎಷ್ಟು ಚೆನ್ನಾಗಿ ಮಾಡುತ್ತಿದ್ದನೋ , ಅದಕ್ಕಿಂತಲೂ ಚೆನ್ನಾಗಿ ನಾವು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಇದೊಂದು ಅಪ್ಪು ಹಬ್ಬ ಎಂದೇ ಭಾವಿಸಲಾಗಿದ್ದು , ದಕ್ಷಿಣಭಾರತ ಸಿನಿಮಾರಂಗದ ಅನೇಕ ಕಲಾವಿದರು ಇದರಲ್ಲಿ ಭಾಗಿಯಾಗಲಿದ್ದಾರೆ . ಅಭಿಮಾನಿಗಳಿಗೂ ಕೂಡ ಉಚಿತವಾಗಿ ಪ್ರವೇಶ ಕಲ್ಪಿಸಲಾಗಿದ್ದು , ಎಷ್ಟೇ ಜನ ಬಂದರೂ ಎಲ್ಲರಿಗೂ ಕಾರ್ಯಕ್ರಮವನ್ನು ತೋರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ . ನಾನಾ ರೀತಿಯ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ತಮ್ಮ ನೆಚ್ಚಿನ ನಟನ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದು, ತಡರಾತ್ರಿವರೆಗೂ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ. ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಬರೋಬ್ಬರಿ ಐದು ಎಕರೆ ಜಾಗದಲ್ಲಿ ಪುನೀತ್‌ ಪರ್ವ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ವಿಐಪಿ ಹಾಗೂ ವಿವಿಐಪಿಗಳು ಸೇರಿದಂತೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳು ಸೇರಲಿದ್ದಾರೆ. ಈ ಹಿನ್ನೆಲೆ 80-60 ಅಳತೆಯ 10 ಅಡಿ ಎತ್ತರದಲ್ಲಿ‌ ವೇದಿಕೆ‌ ನಿರ್ಮಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸುತ್ತಲೂ ಎಲ್‌ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. ಅಭಿಮಾನಿಗಳಿಗಾಗಿ ಮೂರು ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆ ಎರಡು‌ ಲಕ್ಷಕ್ಕೂ ಹೆಚ್ಚು ಮಂದಿ ನಿಂತು ನೋಡುವ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕ್ರಮಕ್ಕೆ ರಾಜ್‌ ಕುಟುಂಬದೊಂದಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಜೊತೆಯಾಗಲಿದ್ದು, ಭಾರತೀಯ ಚಿತ್ರರಂಗದ ಖ್ಯಾತ ನಟರು ಆಗಮಿಸಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ತಮಿಳು ನಟ‌ ಕಮಲ್ ಹಾಸನ್, ನಟ ವಿಜಯ್, ಪ್ರಭುದೇವ, ಬಾಲಯ್ಯ, ರಾಣಾ ದಗ್ಗುಬಾಟಿ ಸೇರಿದಂತೆ ಇಡೀ ಕನ್ನಡ ಚಿತ್ರರಂಗದ ಎಲ್ಲ ನಟ – ನಟಿಯರು ಈ ಪುನೀತ್ ಪರ್ವ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.

ಕಿಚ್ಚ ಸುದೀಪ್ , ಯಶ್ , ರವಿಚಂದ್ರನ್ , ಜಗ್ಗೇಶ್ , ರಮೇಶ್ ಅರವಿಂದ್ , ಶ್ರೀಮುರಳಿ , ಗಣೇಶ್, ಉಪೇಂದ್ರ ಸೇರಿದಂತೆ ಬಹುತೇಕ ಕಲಾವಿದರು ಭಾಗವಹಿಸುವುದು ಪಕ್ಕ ಆಗಿದ್ದು ಎಲ್ಲ ಸಿದ್ದತೆ ನಡೆದಿದೆ.

ಗಾಯಕ ವಿಜಯ್ ಪ್ರಕಾಶ್, ಆರ್ಮನ್ ಮಲ್ಲಿಕ್, ಕುನಾಲ್ ಅವರಿಂದ​ ಪುನೀತ್ ರಾಜ್‍ಕುಮಾರ್ ನಟನೆಯ ಚಿತ್ರಗಳ ಹಾಡುಗಳನ್ನ ಹಾಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್, ರಮ್ಯಾ, ಪ್ರಭುದೇವ ಅವರು ಸಿನಿಮಾ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ. ಬಳಿಕ ಪುನೀತ್ ರಾಜ್‍ಕುಮಾರ್ ಜೊತೆ ಆತ್ಮೀಯ ಒಡನಾಟ ಹೊಂದಿದ್ದ ನಟರು, ರಾಜಕೀಯ ಗಣ್ಯರು ಅಪ್ಪು ಜೊತೆಗಿನ‌ ಒಡನಾಟವನ್ನು ಹಂಚಿಕೊಳ್ಳಲಿದ್ದಾರೆ‌.

ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗಾಗಿ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ದೂರದ ಊರಿನಿಂದ ಅಭಿಮಾನಿಗಳು ಬೆಳಗ್ಗೆಯೇ ಬಂದಿರುವುದರಿಂದ ಅವರಿಗಾಗಿ ಕೇಸರಿ ಬಾತ್ ಮತ್ತು ಉಪ್ಪಿಟ್ಟು ತಯಾರಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮತ್ತು ಕಾರ್ಯಕ್ರಮದ ಸಿಬ್ಬಂದಿಗೆ ಮೊಸರನ್ನ, ಬಿಸಿಬೇಳೆ ಬಾತ್ ಮತ್ತು ಬೊಂಡಾ ನೀಡಲಾಗುತ್ತಿದೆ. ಕುಡಿಯುವ ನೀರು, ತಿಂಡಿ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ. ವಾರದಿಂದಲೇ ಈ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಲಾಗಿದ್ದು, ಗಣ್ಯರಿಗೆ ಮತ್ತು ಅಭಿಮಾನಿಗಳಿಗೆ ಕೂರಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.

ವಾಹನ ಸಂಚಾರ ದಟ್ಟಣೆ ಉಂಟಾಗದಂತೆ ಮುಂಜಾಗೃತ ಕ್ರಮ

‘ಪುನೀತ ಪರ್ವ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿರುವುದರಿಂದ ಮಧ್ಯಾಹ್ನ 3.30ರ ಬಳಿಕ ಕೆಲ ಮಾರ್ಗಗಳನ್ನು ಬಳಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅರಮನೆ ಮೈದಾನದ ಸಮೀಪವಿರುವ ಮೇಖ್ರಿ ವೃತ್ತ, ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆಗಳನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಈ ಮಾರ್ಗಗಳಿಗೆ ಬದಲಾಗಿ ಪರ್ಯಾಯ ಮಾರ್ಗವನ್ನು ಬಳಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ಈ ಕುರಿತು ಸಂಚಾರ ವಿಭಾಗದ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿ. ‘ಅರಮನೆ ಸುತ್ತಮುತ್ತ ಯಾವುದೇ ಮಾರ್ಗ ಬದಲಾವಣೆ ಇಲ್ಲ. ನಗರದಲ್ಲಿ ಯಾವುದೇ ರಸ್ತೆಗಳನ್ನು ಬಂದ್ ಮಾಡುವುದಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಲಿದ್ದು, ಸಂಚಾರ ದಟ್ಟಣೆ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಮೈಸೂರು ರಸ್ತೆಯ ಕಡೆಯಿಂದ ಬರುವ ವಾಹನಗಳು ನಾಯಂಡನಹಳ್ಳಿ ಜಂಕ್ಷನ್, ಸುಮ್ಮುನಹಳ್ಳಿ ಸೇತುವೆ, ರಾಜಕುಮಾರ್ ಸಮಾಧಿ, ಗೊರಗುಂಟೆಪಾಳ್ಯ ಜಂಕ್ಷನ್, ಬಿಇಎಲ್ ಸೇತುವೆ, ಹೆಬ್ಬಾಳ ಮೇಲ್ಸೇತುವೆ ಮೆಕ್ರಿ ಸರ್ಕಲ್ ಮಾರ್ಗವಾಗಿ ಅರಮನೆ ಮೈದಾನ ತಲುಪಬೇಕೆಂದು ಸೂಚಿಸಲಾಗಿದೆ.

ತುಮಕೂರು ಕಡೆಯಿಂದ ಬರುವ ವಾಹನಗಳು ತುಮಕೂರು ರಸ್ತೆ, ಗೊರಗುಂಟೆಪಾಳ್ಯ ಜಂಕ್ಷನ್, ಬಿಇಎಲ್ ಸೇತುವೆ, ಹೆಬ್ಬಾಳ ಮೇಲ್ಸೇತುವೆ, ಮೆಕ್ರಿ ಸರ್ಕಲ್ ಮಾರ್ಗವಾಗಿ ಅರಮನೆ ಮೈದಾನ ತಲುಪಬೇಕು. ದೊಡ್ಡಬಳ್ಳಾಪುರ ಕಡೆಯಿಂದ ಬರುವ ವಾಹನಗಳು, ಮೇಜರ್ ಉನ್ನಿಕೃಷ್ಣನ್ ರಸ್ತೆ, ಯಲಹಂಕ ಪೊಲೀಸ್ ಠಾಣೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲ್ಸೇತುವೆ ಮೆಕ್ರಿ ಸರ್ಕಲ್ ಮಾರ್ಗವಾಗಿ ಅರಮನೆ ಮೈದಾನ ತಲುಪಬೇಕು. ಹೊಸೂರು ಕಡೆಯಿಂದ ಬರುವ ವಾಹನಗಳು ಹೊಸೂರು ರಸ್ತೆ, ಮಡಿವಾಳ ಚೆಕ್​ಪೋಸ್ಟ್, ಡೇರಿ ಸರ್ಕಲ್, ಲಾಲ್​ಬಾಗ್ ಮುಖ್ಯದ್ವಾರ, ಮಿನರ್ವ ಸರ್ಕಲ್, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಬಸವೇಶ್ವರ ವೃತ್ತ, ಮೌಂಟ್ ಕಾರ್ಮಲ್ ಕಾಲೇಜ್, ವಸಂತ ನಗರ ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ ತಲುಪಬೇಕು ಎಂದು ಪೊಲೀಸರು ಸಲಹೆ ಮಾಡಿದ್ದಾರೆ.

ಕೋಲಾರ ಹೊಸಕೋಟೆ ಕಡೆಯಿಂದ ಬರುವ ವಾಹನಗಳು ಕೆ‌.ಆರ್.ಪುರ, ಟಿನ್ ಫ್ಯಾಕ್ಟರಿ, ಹೆಣ್ಣೂರು ರಿಂಗ್ ರೋಡ್, ಹೆಬ್ಬಾಳ ಮೇಲ್ಸೇತುವೆ, ಮೆಕ್ರಿ ಸರ್ಕಲ್, ಅರಮನೆ ಮೈದಾನ ಮಾರ್ಗ ಬಳಸಬೇಕು ಎಂದು ಪೊಲೀಸರು ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ವಾಹಗಳಗೆ ಸರ್ಕಸ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಆರಂಭವಾಗುವ ಕ್ಷಣದಿಂದ ಕಾರ್ಯಕ್ರಮ‌ ಮುಗಿಯುವ ತನಕ ಸಂಚಾರ ದಟ್ಟಣೆ ಆಗದಂತೆ ಈ ಮಾರ್ಗದಲ್ಲಿ ಹೆಚ್ಚುವರಿಯಾಗಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *