ಭಾರತ ಸಂಕಟದ ದಿನಗಳತ್ತ ಸಾಗುತ್ತಿರುವಾಗಲೇ ಯುವ ಮನಸ್ಸುಗಳು ಘಾಸಿಗೊಳಗಾಗುತ್ತಿವೆ
ಉತ್ತರದಾಯಿತ್ವದ ಕಲ್ಪನೆಯೇ ಇಲ್ಲದ ಸಮಾಜ ಶೀಘ್ರಗತಿಯಲ್ಲಿ ಅವನತಿಯತ್ತ ಸಾಗುತ್ತದೆ. ಏಕೆಂದರೆ ಘಟಿಸುವ ದುರಂತ-ಅನಾಹುತಗಳೆಲ್ಲವೂ ಕಾರ್ಯಕಾರಣ ಸಂಬಂಧಗಳ ನಿರ್ವಚನೆಯಿಂದ ಹೊರತಾಗಿ, ಸ್ವಾಭಾವಿಕವಾಗಿಬಿಡುತ್ತವೆ. ಇಂತಹ ಸಮಾಜವು ಆಯ್ಕೆ ಮಾಡುವ ಸರ್ಕಾರಗಳು ಸಹಜವಾಗಿ ‘ಉತ್ತರದಾಯಿತ್ವ’ ಎಂಬ ಔದಾತ್ಯವನ್ನು ರಾಜಕೀಯ ನಿಘಂಟಿನಿಂದಲೇ ಅಳಿಸಿಹಾಕಿಬಿಡುತ್ತವೆ. ಆದ್ದರಿಂದಲೇ ಒಂದು ಬದಿಯಲ್ಲಿ ಚುನಾಯಿತ ಸರ್ಕಾರ ‘ಉದ್ಯೋಗ ನೀಡುವುದು ನಮ್ಮ ಕೆಲಸ ಅಲ್ಲ’ ಎಂದು ಹೇಳುತ್ತಿದ್ದರೆ ಮತ್ತೊಂದು ಬದಿಯಲ್ಲಿ ನಿರುದ್ಯೋಗಿಗಳನ್ನು ಪರೋಪಜೀವಿಗಳಾಗಿ ದಾಳಿ ಮಾಡುವ ‘ಜಿರಳೆಗಳ’ ರೂಪದಲ್ಲಿ ಗುರುತಿಸಲಾಗುತ್ತದೆ. ಈ ದ್ವಂದ್ವಗಳ (Dichotomies) ನಡುವೆಯೇ ದೇಶದ ಲಕ್ಷಾಂತರ ಸಂಖ್ಯೆಯ ಯುವ ಸಮೂಹ, ನಾಳೆಗಳ ಕನಸು ಭಗ್ನವಾಗುವುದನ್ನು ಮೌನವಾಗಿ ಸಹಿಸಿಕೊಳ್ಳಬೇಕಾಗುತ್ತದೆ. ಸಂತೆಮಾಳ
– ನಾ ದಿವಾಕರ
21ನೆ ಶತಮಾನದ ಭಾರತದ ನಡಿಗೆಯಲ್ಲಿ ಕೇಂದ್ರ ಅಥವಾ ರಾಜ್ಯಗಳ ಸಚಿವರೊಬ್ಬರು ತಮ್ಮ ಖಾತೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಂಭವಿಸಿದ ದುರಂತ-ಅನಾಹುತ-ದುರ್ಘಟನೆಗೆ ‘ನೈತಿಕ ಜವಾಬ್ದಾರಿ’ ಹೊತ್ತು ರಾಜೀನಾಮೆ ನೀಡಿರುವುದು ಒಂದೇ ಸಲ. 2008ರ ಮುಂಬೈ ಭಯೋತ್ಪಾದಕ ದಾಳಿ ನಡೆದಾಗ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಕೂಡಲೇ ರಾಜೀನಾಮೆ ಸಲ್ಲಿಸಿದ್ದರು. ಈ 26 ವರ್ಷಗಳಲ್ಲಿ ನಡೆದಿರುವ ರೈಲು ಅಪಘಾತ-ಅವಘಡಗಳ ಭಯೋತ್ಪಾದಕ ದಾಳಿಗಳಲ್ಲಿ, ನೈಸರ್ಗಿಕ ಅನಾಹುತಗಳಲ್ಲಿ ಮಡಿದವರ, ನಿರ್ಗತಿಕರಾದವರ, ಅನಾಥರಾದವರ ಸಂಖ್ಯೆ ಲಕ್ಷಗಳಲ್ಲಿ ಗುಣಿಸಬಹುದು. ರೈತರ ಆತ್ಮಹತ್ಯೆ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಆತ್ಮಹತ್ಯೆ ಕೇವಲ ಕಾನೂನಾತ್ಮಕ ದೃಷ್ಟಿಯಲ್ಲಿ ನೋಡಲಾಗುತ್ತದೆ. ಆದರೆ ಯಾವ ಸಂದರ್ಭದಲ್ಲೂ ‘ನೈತಿಕ ಹೊಣೆಗಾರಿಕೆ’ ಯ ಪ್ರಶ್ನೆ ಉದ್ಭವಿಸಿಯೇ ಇಲ್ಲ. ತೊಳೆಯುವ ಯಂತ್ರಗಳನ್ನು (Washing machines) ಬಳಸಿ ಭ್ರಷ್ಟ ಜನಪ್ರತಿನಿಧಿಗಳನ್ನು ‘ಸ್ವಚ್ಛಗೊಳಿಸುವ’ ವ್ಯವಸ್ಥೆಯಲ್ಲಿ ಇದನ್ನು ನಿರೀಕ್ಷಿಸುವುದೂ ತಪ್ಪಾದೀತು. ಸಂತೆಮಾಳ
NEET ಎಂಬ ವಾಣಿಜ್ಯ ಪ್ರಪಂಚ
ಈ ನಡುವೆಯೇ ಮೇ 3 ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳಿಂದಾಗಿ NEET UG 2026 ವಿವಾದವು ಗಂಭೀರ ಸ್ವರೂಪ ಪಡೆದಿದೆ.. ಒಂದೇ ರೀತಿಯ ಪ್ರಶ್ನೆಗಳೊಂದಿಗೆ ಸೋರಿಕೆಯಾದ “ಊಹೆ ಪತ್ರಿಕೆಗಳು” (Guess papers) NTA ಪರೀಕ್ಷೆಯನ್ನು ರದ್ದುಗೊಳಿಸಲು ಕಾರಣವಾಗಿದ್ದು ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ರಾಜಕೀಯ ಪ್ರತಿರೋಧಕ್ಕೆ ಎಡೆಮಾಡಿಕೊಟ್ಟಿದೆ. ಈ ಹಗರಣದ ಹಿನ್ನೆಲೆಯಲ್ಲೇ ಕೆಲವು ವಿದ್ಯಾರ್ಥಿಗಳು ಜುಗುಪ್ಸೆಯಿಂದ, ಮನನೊಂದು ಆತ್ಮಹತ್ಯೆಗೆ ಬಲಿಯಾಗಿರುವುದು ಇಡೀ ವ್ಯವಸ್ಥೆಯೊಳಗಿನ ಕ್ರೌರ್ಯ ಮತ್ತು ಅದು ಸೃಷ್ಟಿಸುವ ಅಸಹಾಯಕತೆಗಳಿಗೆ ಸಾಕ್ಷಿಯಾಗಿದೆ. ಈ ಸಾವುಗಳಿಗೆ ಯಾರೂ ಜವಾಬ್ದಾರರಾಗುವುದಿಲ್ಲ. ಏನೇ ತನಿಖೆಯಾದರೂ ಅದು ಪ್ರಶ್ನೆ ಪತ್ರಿಕೆಯ ಸೋರಿಕೆ ಮತ್ತು ಅದರ ಸುತ್ತಲಿನ ಮಾರುಕಟ್ಟೆಗೇ ಸೀಮಿತವಾಗುತ್ತದೆ. ಸಂತೆಮಾಳ
ಇದನ್ನೂ ಓದಿ: NEET ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಶಿವಪ್ಪ ಎನ್. ಅಂಬ್ಲಿಕಲ್
ವಿದ್ಯಾರ್ಜನೆಯ ದೆಸೆಯಲ್ಲಿ ಯುವಕ/ಯುವತಿಯರು ಏಕೆ ಜೀವ ಕಳೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ʼ ಆತ್ಮಹತ್ಯೆ ಮಾಡಿಕೊಂಡರುʼ ಎಂದು ಹೇಳುತ್ತೇವೆ. ಖ್ಯಾತ ಮನಶ್ಶಾಸ್ತ್ರಜ್ಞರಾದ ಡಾ. ನಂದಿನಿ ಮುರಳಿ ಅವರ ಅಭಿಪ್ರಾಯದಲ್ಲಿ “ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳುವುದೇ ಆತ್ಮಹತ್ಯೆಯನ್ನು ಒಂದು ಅಪರಾಧದ ಚೌಕಟ್ಟಿನಲ್ಲಿ ಬಿಂಬಿಸಿ ಅದರ ಸುತ್ತಲೂ ಆವರಿಸಿರುವ ಕಳಂಕವನ್ನು ಶಾಶ್ವತಗೊಳಿಸದಂತಾಗುತ್ತದೆ ”. (ಆತ್ಮಹತ್ಯೆ ಪ್ರಕರಣಗಳು- ಬೇಜವಾಬ್ದಾರಿಯುತ ವರದಿಯ ಅಡ್ಡ ಪರಿಣಾಮಗಳು- ವೈಟ್ ಸ್ವಾನ್ ಫೌಂಡೇಷನ್ ) . ನಮ್ಮ ಸಮಾಜ ಇನ್ನೂ ಈ ಮಟ್ಟದ ಸೂಕ್ಷ್ಮತೆಯನ್ನು ಪಡೆದುಕೊಳ್ಳದಿರುವುದು ವಿಷಾದಕರ. ಇದಕ್ಕಿಂತಲೂ ಹೆಚ್ಚು ವಿಷಾದ ಮೂಡಿಸುವ ಸಂಗತಿ ಎಂದರೆ ದೇಶದಲ್ಲಿ ಸಂಭವಿಸುತ್ತಿರುವ ವಿದ್ಯಾರ್ಥಿ ಸಮೂಹದ ಆತ್ಮಹತ್ಯೆಗಳು. ಸಂತೆಮಾಳ
ಅಸಹಜ – ಅಕಾಲಿಕ ಸಾವುಗಳ ನಡುವೆ
ಎನ್ಸಿಆರ್ಬಿ (NCRB) 2023ರ ವರದಿಯ ಅನುಸಾರ ಪ್ರತಿವರ್ಷ ಭಾರತದಲ್ಲಿ 13 ರಿಂದ 14 ಸಾವಿರ ಶಿಕ್ಷಣಾರ್ಥಿಗಳು ಆತ್ಮಹತ್ಯೆಗೆ ಬಲಿಯಾಗುತ್ತಾರೆ. 2023ರಲ್ಲಿ 13,892 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಹುಡುಗರು 7,330 ಮತ್ತು ಹುಡುಗಿಯರ ಸಂಖ್ಯೆ 6,559 ಇತ್ತು. ಈ ರೀತಿ ಅಕಾಲಿಕ ಸಾವಿಗೀಡಾದವರ ಸರಾಸರಿ ವಿದ್ಯಾರ್ಜನೆಯ ಮಟ್ಟ 10ನೆ ತರಗತಿಯವರೆಗೆ ಶೇಕಡಾ 24.6 ಮತ್ತು 8ನೆ ತರಗತಿಯವರೆಗೆ ಶೇಕಡಾ 18.6 ದಾಖಲಾಗಿತ್ತು. ಅಂದರೆ ಪ್ರತಿ 40 ನಿಮಿಷಕ್ಕೆ ಒಬ್ಬ ಶಿಕ್ಷಣಾರ್ಥಿಯ ಸಾವುಂಟಾಗುತ್ತದೆ. ಅಧಿಕೃತ ವರದಿಗಳ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳು ಶೇಕಡಾ 65ರಷ್ಟು ಹೆಚ್ಚಾಗಿದೆ.
ಒಟ್ಟು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇಕಡಾ 77ರಷ್ಟು NEET ಪರೀಕ್ಷೆಗಳಿಗೆ ಸಂಬಂಧಿಸಿರುತ್ತದೆ. ಇದರಲ್ಲಿ ಹುಡುಗರು ಶೇಕಡಾ 77ರಷ್ಟಿದ್ದರೆ ಹುಡುಗಿಯರು ಶೇಕಡಾ 21.5ರಷ್ಟಿರುತ್ತಾರೆ. ರಾಜಸ್ಥಾನ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿದ್ದು, ಅನಂತರದ ಸ್ಥಾನದಲ್ಲಿ ತಮಿಳುನಾಡು, ಬಿಹಾರ, ಉತ್ತರಪ್ರದೇಶ ರಾಜ್ಯಗಳಿವೆ. ಈ ಪ್ರಮಾಣದಲ್ಲಿ ದೇಶದ ಹೊಸ ಪೀಳಿಗೆಯು ಸದ್ದಿಲ್ಲದೆ ನಿರ್ಗಮಿಸುತ್ತಿದ್ದರೂ, ಈ ವಿಚಾರದಲ್ಲಿ ಒಂದು ರಾಷ್ಟ್ರೀಯ ಸಂಕಥನವನ್ನಾಗಲೀ, ಗಂಭೀರ ಚರ್ಚೆಯನ್ನಾಗಲೀ ಕಾಣಲಾಗುವುದಿಲ್ಲ. ಪ್ರತಿಭಟನೆಗಳು ಹೇರಳವಾಗಿ ನಡೆದಿವೆ ಆದರೆ ಈ ಆತ್ಮಹತ್ಯೆಗಳ ಹಿಂದಿನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕಾರಣಗಳನ್ನು ಭೇದಿಸಿ ನೋಡುವಂತಹ ಸಾರ್ವಜನಿಕ ಚರ್ಚೆಗಳು ಕಾಣುವುದಿಲ್ಲ. ಸಂತೆಮಾಳ

ನವ ಉದಾರವಾದದ ಆರ್ಥಿಕಾಭಿವೃದ್ಧಿ ಮಾದರಿಗೂ, ಶಿಕ್ಷಣದ ಕಾರ್ಪೋರೇಟೀಕರಣ ಮತ್ತು ಮಾರುಕಟ್ಟೆಕರಣ (Corporatisation and Marketisation) ಪ್ರಕ್ರಿಯೆಗೂ, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ತನ್ನ ಹೆಗಲ ಮೇಲಿಂದ ಕೊಡವಿ ಮಾರುಕಟ್ಟೆಯ ಅಂಗಳದಲ್ಲಿ ನಿಲ್ಲಿಸಿರುವ ಸರ್ಕಾರಗಳ ನೀತಿಗಳಿಗೂ ಪರಸ್ಪರ ಸಂಬಂಧ ಇರುವುದನ್ನು ಇಲ್ಲಿ ಗಮನಿಸಬೇಕಿದೆ. ಇತರ ಇತ್ತೀಚಿನ ನಿದರ್ಶನ NEET ಹಗರಣ ಮತ್ತು ಲಕ್ಷಾಂತರ ಆಕಾಂಕ್ಷಿಗಳ ಬವಣೆ. NEET ಪತ್ರಿಕೆಯ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದ್ದು ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಪುಣೆಯ ಜೀವಶಾಸ್ತ್ರ ಪ್ರಾಧ್ಯಾಪಕಿ ಮನಿಶಾ ಗುರುನಾಥ್ ಮಂಧಾರೆ ಅವರನ್ನು ಸಿಬಿಐ ಬಂಧಿಸಿದ್ದು, ಆಕೆಯನ್ನು ಇತ್ತೀಚೆಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA)ಗೆ ನೇಮಿಸಲಾಗಿತ್ತು. ಜೀವಶಾಸ್ತ್ರ ಪತ್ರಿಕೆಯ ಸೋರಿಕೆಯಲ್ಲಿ ಈಕೆ ಭಾಗಿಯಾಗಿರುವುದಾಗಿ ಸಿಬಿಐ ಶಂಕಿಸಿದೆ. ಸಂತೆಮಾಳ
ಪರಿಕ್ಷೆ- ಅಕ್ರಮಗಳ ಅವಿನಾಭಾವ ಸಂಬಂಧ
ಇಡೀ ಹಗರಣದ ಕೇಂದ್ರ ವ್ಯಕ್ತಿ (Kingpin) ಮಾಂಗಿಲಾಲ್ನ ಪುತ್ರ ವಿಕಾಸ್ ಬಿವಾಲ್ ಸವಾಯ್ ಮುಧೋಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸೋರಿಕೆಯಾದ ದಾಖಲೆಗಳನ್ನು ಬಿಕರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವುದಾಗಿ ಹೇಳಲಾಗಿದೆ. ಈ ವ್ಯವಹಾರದಲ್ಲಿ 65 ಲಕ್ಷ ರೂಗಳನ್ನು ಪಾವತಿಸಿರುವುದನ್ನು ಸಿಬಿಐ ದಾಖಲಿಸಿದೆ. ಮಹಾರಾಷ್ಟ್ರ ಮೂಲದ ಜಾಲವೊಂದು ಇಡೀ ಹಗರಣದ ರೂವಾರಿ ಎಂದೂ ಹೇಳಲಾಗಿದೆ.
ಬಂಧಿಸಲಾಗಿರುವ ಆರೋಪಿಗಳೆಲ್ಲರೂ ಸಿರಿವಂತ-ಮಧ್ಯಮವರ್ಗದ ಕುಟುಂಬದಿಂದ ಬಂದವರಾಗಿದ್ದು, ವೈದ್ಯಕೀಯ ಪದವಿಯ ಆಕಾಂಕ್ಷಿಗಳೇ ಆಗಿರುವುದು ಗಮನಿಸಬೇಕಾದ ಸಂಗತಿ. ಈ ಹಗರಣದ ಕೇಂದ್ರವಾಗಿರುವ ರಾಜಸ್ಥಾನದ ಒಂದು ಕುಟುಂಬ ಪತ್ರಿಕೆಯ ಸೋರಿಕೆಯ ರೂವಾರಿಯಾಗಿರುವುದೇ ಅಲ್ಲದೆ, ವೈದ್ಯಕೀಯ ಪ್ರವೇಶ ಪರೀಕ್ಷೆಯ ಪತ್ರಿಕೆಗಳನ್ನು ಕಳೆದ ವರ್ಷವೂ ಇದೇ ರೀತಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಸಂತೆಮಾಳ

ಈ ಆರೋಪಿಗಳ ಹಿನ್ನೆಲೆ, ರಾಜಕೀಯ ಸಂಪರ್ಕ, ಮಾರುಕಟ್ಟೆ ಸಂಬಂಧ ಮತ್ತು ಅಪರಾಧಿಕ ಹಿನ್ನೆಲೆ ಏನೇ ಇರಲಿ, ಭಾರತದ ನಾಗರಿಕರನ್ನು ಕಾಡಬೇಕಿರುವುದು ಈ ಹಗರಣದಿಂದ ಬಾಧಿತರಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗಿರುವ, 23 ಲಕ್ಷ ಅಸಹಾಯಕ ಆಕಾಂಕ್ಷಿಗಳು. ಜೀವನಾಕಾಂಕ್ಷಿಗಳನ್ನು ಮಸಣಾವಸ್ಥೆಗೆ ದೂಡುವ ಒಂದು ವ್ಯವಸ್ಥಿತ ಮಾರುಕಟ್ಟೆ ಜಾಲ ಕಳೆದ ಹತ್ತು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಸಂತೆಮಾಳ
ಪ್ರತಿ ವರ್ಷವೂ ತನಿಖೆಗಳು ನಡೆಯುತ್ತಿವೆ, ಹಗರಣದ ರೂವಾರಿಗಳನ್ನು ಬಂಧಿಸಲಾಗುತ್ತಿದೆ, ಶಿಕ್ಷೆಯಾಗುತ್ತಿದೆಯೋ ಇಲ್ಲವೋ ತಿಳಿಯುತ್ತಿಲ್ಲ ಆದರೆ ಈ ಅಕ್ರಮ ಮಾರುಕಟ್ಟೆಯಂತೂ ಬಂದ್ ಆಗಿಲ್ಲ. ವರ್ಷದಿಂದ ವರ್ಷಕ್ಕೆ ಬಾಧಿತ ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ. ಹಗರಣದ ಮಾರುಕಟ್ಟೆ ಮೌಲ್ಯವೂ ಹೆಚ್ಚಾಗುತ್ತಲೇ ಇದೆ. ಒಂದು ಜವಾಬ್ದಾರಿಯುತ ಆಳ್ವಿಕೆಯಲ್ಲಿ ಇದನ್ನು ನಿರೀಕ್ಷಿಸಲು ಸಾಧ್ಯವೇ ? ಸಂತೆಮಾಳ
ಹತ್ತು ವರ್ಷಗಳ ಹಗರಣ ಮಾಲೆ
(ಆಧಾರ ಡೆಕ್ಕನ್ ಹೆರಾಲ್ಡ್ ವರದಿ 24-10-2024 List of major paper leaks in India in the last 10 years)
2014ರಲ್ಲಿ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಸಂಯೋಜಿತ ವೈದ್ಯಕೀಯ ಪೂರ್ವ ಪರೀಕ್ಷೆ (CPMT) ಪತ್ರಿಕೆಯ ಸೋರಿಕೆಯಾಗಿ ಮುಂದೂಡಲ್ಪಟ್ಟಿತ್ತು. 2015ರಲ್ಲಿ ಸಿಬಿಎಸ್ಇ ಆಯೋಜಿಸಿದ್ದ ಅಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆ (AIPMT) ಸುಪ್ರೀಂಕೋರ್ಟ್ ಆದೇಶದನ್ವಯ ಮುಂದೂಡಲ್ಪಟ್ಟಿತ್ತು. ಈ ಹಗರಣದಲ್ಲಿ 90ಕ್ಕೂ ಹೆಚ್ಚು ಪ್ರಶ್ನೆಗಳ ಉತ್ತರಗಳನ್ನು 15 ರಿಂದ 20 ಲಕ್ಷ ರೂಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ಏಳು ಜನರನ್ನು ಬಂಧಿಸಲಾಗಿತ್ತು. 6.3 ಲಕ್ಷ ಆಕಾಂಕ್ಷಿಗಳು ಪರೀಕ್ಷೆಯಿಂದ ವಂಚಿತರಾಗಿದ್ದರು. 2016ರಲ್ಲಿ ಉತ್ತರ ಪ್ರದೇಶದ ಲೋಕಸೇವಾ ಆಯೋಗ ನಡೆಸುವ ಪರಿಶೀಲನಾ ಅಧಿಕಾರಿ ಮತ್ತು ಸಹಾಯಕ ಪರಿಶೀಲನಾ ಅಧಿಕಾರಿ (RO & ARO) ಪ್ರವೇಶ ಪರೀಕ್ಷೆಗಳು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ರದ್ದಾಗಿದ್ದವು. ಇದೇ ರಾಜ್ಯದಲ್ಲಿ 2016ರ NEET ಪರೀಕ್ಷೆಯಲ್ಲೂ ಎಂಟು ಜನರನ್ನು ಪತ್ರಿಕೆಯ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿತ್ತು. ಸಂತೆಮಾಳ
2017ರಲ್ಲಿ ಹಿಮಾಚಲ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆಯ ಸೋರಿಕೆಯಿಂದ ಹೈಯ್ಯರ್ ಸೆಕಂಡರಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಮಹಾರಾಷ್ಟ್ರದ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆಗಳಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. 2018ರಲ್ಲಿ ದೆಹಲಿ ಪೊಲೀಸರು ಸಿಬಿಎಸ್ಇ ನಡೆಸುವ 10 ಮತ್ತು 12ನೆ ತರಗತಿಯ ಗಣಿತ ಹಾಗೂ ಅರ್ಥಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದರು. ಗುಜರಾತ್ನ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗಳಲ್ಲೂ ಪತ್ರಿಕೆಯ ಸೋರಿಕೆ ಉಂಟಾಗಿದ್ದು ಇಬ್ಬರು ಬಿಜೆಪಿ ಸದಸ್ಯರು ಮತ್ತು ಒಬ್ಬ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿತ್ತು. 2019ರಲ್ಲಿ ರೈಲ್ವೆ ನೇಮಕಾತಿ ಮಂಡಲಿ ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಲ್ಲೂ ಸಹ ಸ್ಕ್ರೀನ್ ಷಾಟ್ಗಳನ್ನು ಹಂಚುವ ಮೂಲಕ ಅಕ್ರಮ ಎಸಗಲಾಗಿತ್ತು.

2020ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ ಪರೀಕ್ಷೆಗಳಲ್ಲಿ, ನ್ಯಾಷನಲ್ ಲಾ ಸ್ಕೂಲ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಸಾಮರ್ಥ್ಯ ಪರೀಕ್ಷೆಯಲ್ಲಿ, ಉತ್ತರ ಪ್ರದೇಶದ 12ನೆಯ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. 2021ರಲ್ಲಿ ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ (UPTET), ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೇಮಕಾತಿ ಪರೀಕ್ಷೆಗಳು, ಗುಜರಾತ್ ಅಧೀನ ಸೇವೆಗಳ ಆಯ್ಕೆ ಮಂಡಳಿ (GSSSB) ಪರೀಕ್ಷೆಗಳು ಈ ಅಕ್ರಮಗಳಿಗೆ ಬಲಿಯಾಗಿದ್ದವು. ಸಂತೆಮಾಳ
2022ರಲ್ಲಿ ಉತ್ತರ ಪ್ರದೇಶದ ಲೇಕಪಾಲ್ ನೇಮಕಾತಿ ಪರೀಕ್ಷೆಗಲು, ಬಿಹಾರದ ಲೋಕಸೇವಾ ಆಯೋಗದ ಪರೀಕ್ಷೆ, ಉತ್ತರ ಖಂಡದ ಅಧೀನ ಸೇವಾ ಆಯ್ಕೆ ಆಯೋಗದ ಪರೀಕ್ಷೆ, ಅರುಣಾಚಲ ಪ್ರದೇಶದ ಲೋಕಸೇವಾ ಆಯೋಗ ನಡೆಸುವ ಸಹಾಯಕ ಇಂಜಿನಿಯರ್ ಪರೀಕ್ಷೆ, ಪಶ್ಚಿಮ ಬಂಗಾಲದ ಪ್ರಾಥಮಿಕ ಶಿಕ್ಷಣ ಡಿಪ್ಲೊಮಾ (DEIED) ಪರೀಕ್ಷೆ, ಒಡಿಷಾದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಪರೀಕ್ಷೆ ಇವೆಲ್ಲವೂ ಸಹ ಪ್ರಶ್ನೆ ಪತ್ರಿಕೆಯ ಸೋರಿಕೆಯಿಂದ ರದ್ದಾಗಿದ್ದವು ಅಥವಾ ಮುಂದೂಡಲ್ಪಟ್ಟಿದ್ದವು. 2023ರಲ್ಲೂ ಸಹ ತೆಲಂಗಾಣ, ಅಸ್ಸಾಂ ಮತ್ತು ಮಹಾರಾಷ್ಟ್ರದ ಹಲವು ಪ್ರವೇಶ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಅಕ್ರಮ ನಡೆದಿತ್ತು. ಸಂತೆಮಾಳ
ಮಾರುಕಟ್ಟೆ ಆರ್ಥಿಕತೆ-ಶಿಕ್ಷಣದ ವ್ಯಾಪಾರ
ಈ ಬೆಳವಣಿಗೆಗಳು ಏನನ್ನು ಸೂಚಿಸುತ್ತವೆ ? ಉನ್ನತ ಶಿಕ್ಷಣವನ್ನು ವಾಣಿಜ್ಯೀಕರಣಕ್ಕೊಳಪಡಿಸಿ, ಶಿಕ್ಷಣ ಸಂಸ್ಥೆಗಳನ್ನು ಅಕ್ಷರಶಃ ಬಿಕರಿ-ಖರೀದಿ ಪ್ರಕ್ರಿಯೆಯ ಹರಾಜು ಮಾರುಕಟ್ಟೆಗಳಂತೆ ಮಾಡಿರುವ ನವ ಉದಾರವಾದದ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ, ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ಈ ದಲ್ಲಾಳಿಗಳನ್ನು, ಮಧ್ಯವರ್ತಿಗಳನ್ನು, ಲಾಭಕೋರವನ್ನು, ಲೂಟಿಕೋರರನ್ನು ಹುಟ್ಟುಹಾಕಿದೆ. ಈ ಅಪರಾಧಿಕ ಜಗತ್ತಿನಲ್ಲಿ ಯಾರಿದ್ದಾರೆ, ಎಷ್ಟು ಜನ ಇದ್ದಾರೆ, ಯಾವ ಸಮುದಾಯದವರಿದ್ದಾರೆ ಎನ್ನುವುದು ಅಪ್ರಸ್ತುತ. ಇಲ್ಲಿ ಗಮನಿಸಬೇಕಿರುವುದು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಉನ್ನತ ಶಿಕ್ಷಣವನ್ನು ಬೆನ್ನಟ್ಟಿಹೋಗುವ ದೇಶದ ಯುವ ಜನಾಂಗದ ಸಂಕಟಗಳನ್ನು. ಪ್ರಶ್ನೆ ಪತ್ರಿಕೆಗಳನ್ನು ಲಕ್ಷಾಂತರ ರೂಗಳ ಹರಾಜು ಮಾರುಕಟ್ಟೆಯಲ್ಲಿ ವಿತರಿಸುತ್ತಿರುವುದು, ಶಿಕ್ಷಣ-ಉದ್ಯೋಗ ಮತ್ತು ಮಾರುಕಟ್ಟೆಯ ನಡುವಿನ ಸಂಬಂಧಗಳನ್ನು ಸ್ಪಷ್ಟವಾಗಿ ತೆರೆದಿಡುತ್ತದೆ. ಸಂತೆಮಾಳ
ಸರ್ಕಾರಗಳು ಯಾವುದೇ ಇರಲಿ ಈ ಮಾರುಕಟ್ಟೆ ದಲ್ಲಾಳಿ ಶಕ್ತಿಗಳಿಗೆ ತಮ್ಮದೇ ಆದ ಜಾಲ ಇರುವುದನ್ನು ಬೆಂಗಳೂರಿನಿಂದ ಅಸ್ಸಾಂವರೆಗೂ ಗಮನಿಸಬಹುದಲ್ಲವೇ ? ಈ ಜಾಲವನ್ನು ನಿಯಂತ್ರಿಸುವ ಆಂತರಿಕ ಶಕ್ತಿಗಳ ಉಗಮ ಎಲ್ಲಿ ಗುರುತಿಸಬಹುದು ? ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗಿನ ಜನಪ್ರತಿನಿಧಿಗಳಿಗೆ, ರಾಜಕೀಯ ನಾಯಕರಿಗೆ ಮತ್ತು ಅವರ ಹಿಂಬಾಲಕ ಪಟಾಲಂಗಳಿಗೆ ಈ ಅಕ್ರಮ ಜಾಲದ ಅರಿವು ಇಲ್ಲದಿರುವುದನ್ನು ಊಹಿಸಲು ಸಾಧ್ಯವೇ ? ಇದು ಡಿಜಿಟಲ್ ಯುತ, ರಹಸ್ಯ ಕ್ಯಾಮರಾಗಳ ಜಗತ್ತು, ಹೋಟೆಲಿನಲ್ಲಿ ಕಾಫಿ ಕುಡಿಯುವುದನ್ನೂ ಡಿಜಿಟಲ್ ರೂಪದಲ್ಲಿ ಗುರುತುಹಿಡಿಯುವ ತಂತ್ರಜ್ಞಾನದ ಪ್ರಪಂಚ. ಈ ಯುಗದಲ್ಲಿ ಅಕ್ರಮಗಳು ಸರಾಗವಾಗಿ, ಸದ್ದಿಲ್ಲದೆ, ತೆರೆಮರೆಯಲ್ಲಿ ನಡೆಯುವುದು ಹೇಗೆ ಸಾಧ್ಯ ? ಸಂತೆಮಾಳ
ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಚೀನಾ ಮಾದರಿ ಭಾರತದಲ್ಲಿ ಸಾಧ್ಯವೇ? Janashakthi Media
ಈ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ. ಸರಕು ಮಾರುಕಟ್ಟೆಯಲ್ಲಿ ಒಂದು ಪಾರಂಪರಿಕ ಎಚ್ಚರಿಕೆಯ ಮಾತಿದೆ. “ಖರೀದಿದಾರರೇ ಎಚ್ಚರದಿಂದಿರಿ” (Buyer Beware) . ಅಂದರೆ ಯಾವುದೇ ವಸ್ತು, ಸರಕು, ಉತ್ಪನ್ನವನ್ನು ಖರೀದಿಸುವಾಗ ಅದರ ಗುಣಮಟ್ಟ ಇತ್ಯಾದಿಗಳ ಬಗ್ಗೆ ಎಚ್ಚರ ವಹಿಸಬೇಕಿರುವುದು ಕೊಳ್ಳುವವರೇ ಹೊರತು, ಉತ್ಪಾದಿಸುವವರಲ್ಲ. ಬಹುಶಃ ಈ ಮಾರುಕಟ್ಟೆ ಸೂತ್ರವನ್ನು ಭಾರತದ ಶಿಕ್ಷಣ ಕ್ಷೇತ್ರವೂ ಅಳವಡಿಸಿಕೊಂಡಿದೆ. ಪ್ರವೇಶ ಪರೀಕ್ಷೆಯಿಂದ ನೇಮಕಾತಿ ಸಂದರ್ಶನದವರೆಗೂ ಉದ್ಯೋಗಾಕಾಂಕ್ಷಿಗಳು, ಶಿಕ್ಷಣಾಕಾಂಕ್ಷಿಗಳು ಜಾಗ್ರತೆಯಿಂದಿರಬೇಕು ಎಂದು ಮಾರುಕಟ್ಟೆ ಸಾರಿ ಸಾರಿ ಹೇಳುತ್ತಿರುವುದು ಈ ಪ್ರಕರಣಗಳಲ್ಲಿ ಕಾಣುವ ಕಟು ಸತ್ಯ. ಆದರೆ ಎಚ್ಚರ ವಹಿಸಬೇಕಾದವರು ಶಿಕ್ಷಣದ ಮಾರುಕಟ್ಟೆಯ ಗ್ರಾಹಕರೋ, ಖರೀದಿದಾರರೋ ಅಥವಾ ಈ ವ್ಯವಸ್ಥೆಯನ್ನು ನಿಯಂತ್ರಿಸಿ, ನಿರ್ದೇಶಿಸಿ, ನಿರ್ವಹಿಸುವ ಸರ್ಕಾರಗಳೋ ?
ನೈತಿಕ ಜವಾಬ್ದಾರಿಯ ಕೊರತೆ
“ಬೇಲಿಯೇ ಎದ್ದು ಹೊಲ ಮೇಯ್ದಂತೆ ”ಎಂಬ ಗಾದೆ ಮಾತಿದೆ. ಬಹುಶಃ ವರ್ತಮಾನದ ಡಿಜಿಟಲ್ ಜಗತ್ತಿನಲ್ಲಿ ಇದನ್ನು ಮಾರ್ಪಾಟು ಮಾಡಿ “ ಬಿತ್ತ ಬೀಜವೇ ಎದ್ದು ಫಸಲನ್ನು ಮೇಯ್ದಂತೆ ” ಎಂದು ಹೇಳಬಹುದೇನೋ ! ಏಕೆಂದರೆ ದೇಶದ ಅಭಿವೃದ್ಧಿ ಪಥದ ಫಲಾನುಭವಿಗಳಾಗಿ ತಾವು ಸಂಗ್ರಹಿಸಿದ ಸಂಪತ್ತನ್ನು ಲಾಭದಾಯಕ ʼ ಶೈಕ್ಷಣಿಕ ಉದ್ದಿಮೆಗಳಲ್ಲಿ ʼ ಹೂಡಿಕೆ ಮಾಡುವ ಔದ್ಯಮಿಕ ಮಾರುಕಟ್ಟೆಯ ಪ್ರತಿನಿಧಿಗಳು, ತಮ್ಮ ಪ್ರಗತಿಗೆ ಕಾರಣವಾದ ಸಮಾಜವನ್ನೇ ಗುರಿಯಾಗಿಸಿ ಅಲ್ಲಿ ಚಿಗುರುವ ಮೊಳಕೆಗಳ ಭವಿಷ್ಯವನ್ನು ಎಳೆಯ ಹಂತದಲ್ಲೇ ಹೊಸಕಿ ಹಾಕುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದನ್ನು ಕಂಡೂ ಕಾಣದಂತಿರುವ ಅಥವಾ ತೆರೆಮರೆಯಲ್ಲಿ ಬೆಂಬಲಿಸುವ, ಮೌನವಾಗಿ ಸಮ್ಮತಿಸುವ ಒಂದು ರಾಜಕೀಯ ಪರಂಪರೆಯನ್ನೂ ನಾವು ಬೆಳೆಸಿಕೊಂಡು ಬಂದಿದ್ದೇವೆ.
ಹಾಗಾಗಿಯೇ ಮಧ್ಯಪ್ರದೇಶದ ವ್ಯಾಪಂ ಆಗಲಿ 2026ರ ನೀಟ್ ಆಗಲಿ ಯಾವ ಸರ್ಕಾರವೂ, ಯಾವ ಸಚಿವರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಪ್ರಸಂಗವೇ ಉದ್ಭವಿಸುವುದಿಲ್ಲ. ಭ್ರಷ್ಟ ವ್ಯವಸ್ಥೆಯನ್ನು ಬಿಂಬಿಸುವ ಕಾಮನಬಿಲ್ಲಿನ ವೈವಿಧ್ಯಮಯ ಬಣ್ಣಗಳ ಹಾಗೆ ಭಾರತದ ಶಿಕ್ಷಣ ಮಾರುಕಟ್ಟೆ ಸಂತೆಮಾಳದಲ್ಲಿ ಎಲ್ಲ ರಂಗಿನ ಆಟಗಾರರನ್ನೂ ಗುರುತಿಸಬಹುದು. ʼ ಭ್ರಷ್ಟಾಚಾರ ನಿರ್ಮೂಲನೆ ʼ ಎಂಬ ಎದೆ ಬಡಿದುಕೊಳ್ಳುವ (Chest Thumping) ಬೃಹನ್ನಾಟಕಕ್ಕೆ ಬಲಿಯಾಗುತ್ತಿರುವುದು ನಾಳೆ ಚಿಗುರಬೇಕಾದ ಎಳೆಯ, ಹರೆಯದ ಮಕ್ಕಳು. ಈ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟು, ಸಾಲಸೋಲ ಮಾಡಿ, ಲಕ್ಷಾಂತರ ರೂಗಳನ್ನು ಮಾರುಕಟ್ಟೆಯಲ್ಲಿ ಸುರಿಯುವ ಅಮಾಯಕ ಪೋಷಕರು. ರಾಜಸ್ಥಾನದ ಕೋಟಾ ಇಂತಹ ದುರಂತ ಕಥೆಗಳಿಗೆ ಸಾಕ್ಷಿಯಾಗಿ ನಮ್ಮ ನಡುವೆ ಇದೆ.
ಈ ಎಲ್ಲ ಹಗರಣಗಳ ಮೂಲ ಇರುವುದು ʼ ಕೋಚಿಂಗ್ ʼ ಎಂಬ ಮಾಯಾಜಾಲದಲ್ಲಿ. ತಮ್ಮ ಮಕ್ಕಳು ಇಂಜಿನಿಯರ್, ವೈದ್ಯರಾಗಬೇಕೆಂಬ ಪೋಷಕರ ಆಕಾಂಕ್ಷೆಗೆ ಮಕ್ಕಳು ಎಂಟನೆ ತರಗತಿಯಿಂದಲೇ ಈ ಕೋಚಿಂಗ್ ಎಂಬ ಬೌದ್ಧಿಕ ಸೆರೆಮನೆಯೊಳಗೆ ಸಿಲುಕುತ್ತಾರೆ. ಈ ಕೋಚಿಂಗ್ ಸೆಂಟರ್ಗಳ ಮಾಫಿಯಾ ದೇಶವ್ಯಾಪಿಯಾಗಿದೆ. ಇದನ್ನು ನಿಯಂತ್ರಿಸಲು ಮಾರುಕಟ್ಟೆ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳು ಅಡ್ಡ ಬರುತ್ತವೆ. ಈ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿಯೇ ರಾಜಕೀಯ ಪಕ್ಷಗಳು ತುದಿಗಾಲಲ್ಲಿ ನಿಂತಿರುತ್ತವೆ. ಏಕೆಂದರೆ ಪಕ್ಷಗಳಿಗೆ ದೇಣಿಗೆ ಇಲ್ಲಿಂದಲೇ ಹುಟ್ಟುತ್ತದೆ. ಈ ವಿಷವರ್ತುಲದಲ್ಲಿ ತಮ್ಮ ಭವಿಷ್ಯ ಭಗ್ನವಾಗುತ್ತಿರುವುದನ್ನು ನೋಡುತ್ತಾ ಸಂಕಟಪಡುವ ಮಕ್ಕಳ ಅಂತರಾಳವನ್ನು ಹೇಗೆ ಅರ್ಥಮಾಡಿಕೊಳ್ಳುವುದು ?
ಇದು ವೈದ್ಯಕೀಯ ಅಥವಾ ಮನಶ್ಶಾಸ್ತ್ರದ ಪ್ರಶ್ನೆಯಲ್ಲ. ಮಾನವೀಯ ಸಂವೇದನೆಯ ಪ್ರಶ್ನೆ. ಮಾರುಕಟ್ಟೆಯ ಅಂಗಳದಲ್ಲಿ ಉತ್ತರ ಸಿಗುವುದಿಲ್ಲ. ಚುನಾಯಿತ ಜನಪ್ರತಿನಿಧಿಗಳ ಬಯಲಿನಲ್ಲೂ ಕಾಣಲಾಗುವುದಿಲ್ಲ. ಉತ್ತರವೇನಾದರೂ ಇದ್ದರೆ ಅದು ನಮ್ಮ ಸಾಮಾಜಿಕ ಸಂರಚನೆಯಲ್ಲೇ ಇದೆ. ಇದನ್ನು ಗುರುತಿಸುವ ಜವಾಬ್ದಾರಿಯನ್ನು ಸಮಾಜವೇ ಹೊರಬೇಕಿದೆ. ಶಿಕ್ಷಣ, ಉದ್ಯೋಗ ಮತ್ತು ಬದುಕು ಈ ಮೂರರ ನಡುವಿನ ಸಂಬಂಧವನ್ನು ಭವಿಷ್ಯದ ದೃಷ್ಟಿಯಿಂದ, ಮಾನವೀಯ ಸಂವೇದನೆಯ ನೆಲೆಯಲ್ಲಿ ಮರು ವ್ಯಾಖ್ಯಾನಕ್ಕೊಳಪಡಿಸುವುದು ವರ್ತಮಾನದ ತುರ್ತು. ನೀಟ್ ಆಕಾಂಕ್ಷಿಗಳಿಗೆ ಈ ಪ್ರಯತ್ನಗಳ ಪ್ರಯೋಗಾಲಯದಲ್ಲಿ ಸಾಂತ್ವನ ಹೇಳಬಹುದು. ಅಲ್ಲವೇ?
ಈ ಲೇಖನದಲ್ಲಿ ಉಲ್ಲೇಖಿಸಿರುವ ಅಂಕಿಸಂಖ್ಯೆಗಳ, ದತ್ತಾಂಶಗಳ ಆಧಾರ :
