ಆನಂದ್. ಆರ್ ಮುಳಬಾಗಿಲು
ಯುವ ಬರಹಗಾರ
*ಮತದಾರರು ಮತ ಹಾಕುವ ಮುನ್ನ ಮತದ ಮಹತ್ವ ತಿಳಿಯಬೇಕು*
ನಮಗೆ ಸ್ವಾತಂತ್ರ ಬಂದು 75 ವರ್ಷಗಳು ಕಳೆದರು ಬಹುತೇಕ ಜನರಿಗೆ ಮತದ ಮಹತ್ವ ತಿಳಿಯದಾಗಿದೆ.
ನಾವು ನಮ್ಮ ಪ್ರತಿನಿದಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸಂಬಂಧ, ಜಾತಿ, ಧರ್ಮ ನೋಡಿ ಮತ ಹಾಕುತ್ತಿದ್ದೇವೆ ಹಾಗೂ ಅವರು ಕೊಡುವ ಹಣ, ಹೆಂಡ ಸೇರಿ ಕೆಲವು ಆಮಿಷಗಳಿಗೆ ಒಳಗಾಗಿ ಮತ ಮಾರಿಕೊಳ್ಳುತ್ತಿದ್ದೇವೆ. ಎಲ್ಲಿಯವರೆಗೆ ಮತದ ಮಹತ್ವವನ್ನ ಅರಿಯದೇ ಕೇವಲ ಈ ಮೇಲಿನವುಗಳಿಗೆ ಮತ ನೀಡುತ್ತೇವೋ ಅಲ್ಲಿಯತನಕ ನಮ್ಮ ಬದುಕು ಬದಲಾಗುವುದಿಲ್ಲ ಎಂಬುವುದನ್ನು ತಿಳಿಯಬೇಕಿದೆ.
ಮಾಲೀಕ ತಮ್ಮ ಮನೆಗೆ ಕಳ್ಳನನ್ನು ಕಾವಲುಗಾರನಾಗಿ ನೇಮಿಸಿದರೆ ಆ ಮನೆಯೊಡೆಯನ ಪರಿಸ್ಥಿತಿ ಏನಾಗಬಹುದು..? ಎಲ್ಲಗೆ ತಲುಪಬಹುದು ಎಂಬ ಊಹೆ ಮಾಡಿಕೊಳ್ಳಿ.. ಹಾಗೆಯೇ ನಮ್ಮ ನಮ್ಮ ಕ್ಷೇತ್ರಗಳ ಮನೆಗಳಿಗೆ ಕಳ್ಳರನ್ನು ಕಾವಲುಗಾರರನ್ನಾಗಿ ನೇಮಿಸುವುದು ಬೇಡ. ನಿಷ್ಠಾವಂತ, ಪ್ರಾಮಾಣಿಕ, ಜನರ ಕಷ್ಟಗಳಿಗೆ ಸ್ಪಂದಿಸುವ, ಮುಂದಿನ ಪೀಳಿಗೆ ಬಗ್ಗೆ ಯೋಚಿಸುಚ ವ್ಯಕ್ತಿಯನ್ನು ನಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದು .
ಕೇವಲ ಚುನಾವಣೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಿಂದಲೋ ಬಂದು ಕೋಟಿಗಟ್ಟಲೇ ಖರ್ಚು ಮಾಡಿ ಗೆದ್ದ ನಂತರ ಆ ಕ್ಷೇತ್ರದ ಜನರಿಗೆ ಮುಖ ಕೂಡ ತೋರಿಸೋದಿಲ್ಲ.. ಅವರ ಕಷ್ಟಗಳಿಗೆ ಸ್ಪಂದಿಸೋದಿಲ್ಲ.. ಯಾವ ಅಭಿವೃದ್ಧಿ ಕೆಲಸಗಳನ್ನೂ ಮಾಡದೆ ಜನರ ತೆರಿಗೆ ಹಣದಲ್ಲಿ ಲೂಟಿ ಹೊಡೆಯುತ್ತಾ ಕಾಲಹರಣ ಮಾಡುವ ನಾಯಕರು ನಮಗೆ ಬೇಕೆ? ಎಂಬುದನ್ನು ಪ್ರಜ್ಞಾವಂತ ಮತದಾರರು ಯೋಚಿಸಬೇಕಿದೆ. 500 ರೂಪಾಯಿ ನೋಟು ಕೊಟ್ಟು, ಓಟು ಹಾಕಿಸಿಕೊಳ್ಳುವ ರಾಜಕಾರಣಿಗಳಿಂದ ಜನರು ಅಭಿವೃದ್ಧಿ ಕೆಲಸಗಳನ್ನ ನೀರಿಕ್ಷಿಸಲು ಸಾಧ್ಯವೇ? ರಾಜಕೀಯವನ್ನು ಒಂದು ಉದ್ಯಮವಾಗಿ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ.
ಪ್ರಜಾಪ್ರಭುತ್ವದಲ್ಲಿ ಮತಕ್ಕೆ ಅಪಾರವಾದ ಮಹತ್ವವಿದೆ.. ಅದನ್ನು ಯೋಗ್ಯರಿಗಷ್ಟೇ, ನೀಡೋಣ.. ಪ್ರಜಾಪ್ರಭುತ್ವ ಬಲಪಡಿಸೋಣ. ಹಿಂದಿದ್ದ, ಉಳ್ಳವರಿಗಷ್ಟೇ ಅಧಿಕಾರ ಎಂಬ ಮಾತು ಇನ್ನೂ ಮುಂದುವರಿಯುತ್ತಿದೆ, ಇದು ಬದಲಾಗಬೇಕು ಜನ ಸಾಮನ್ಯರೊಬ್ಬರು ಹಣ ಇಲ್ಲದಿದ್ದರೂ ಅಧಿಕಾರದ ಗದ್ದುಗೆ ಹಿಡಿಯುವಂತಹ ವಾತಾವರಣ ನಿರ್ಮಾಣವಾಗಬೇಕು . ಇದು ಕೇವಲ ನಮ್ಮ ಮತದಿಂದ ಮಾತ್ರ ಸಾಧ್ಯ..
ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ಒಂದು ವಂಶದಲ್ಲಷ್ಟೇ ರಾಜ ಜನ್ಮತಾಳ್ತಿದ್ದ, ಅವನು ಅಯೋಗ್ಯನಾದರೂ, ಭ್ರಷ್ಟನಾದರೂ, ಕ್ರೂರಿಯಾದರು, ಲೂಟಿಕೋರನಾದರೂ ಅವನೇ ನಾಯಕ (ರಾಜ) ಆಗ್ತಿದ್ದ.. ಜೊತೆಗೆ ಅವನು ಏನೇ ಮಾಡಿದೂ ಅದೇ ಸರಿ ಅಂತ ಜನ ಒಪ್ಪಲೇಬೇಕಾಗಿತ್ತು. ಒಂದು ವೇಳೆ ಜನರು ಅದನ್ನ ಧಿಕ್ಕರಿಸಿದರೆ, ಪ್ರಶ್ನೆ ಮಾಡಿದರೆ, ಪ್ರತಿಭಟಿಸಿದರೆ ಅಂಥವರಿಗೆ ಉಳಿಗಾಲ ಇರುತ್ತಿರಲಿಲ್ಲ. ಆದರೆ, ಇಂದು ನಾವೆಲ್ಲಾ ಇರೋದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ.. ಇಲ್ಲಿ ನಾಯಕ ( ರಾಜ ) ಹುಟ್ಟೋದು ನೀವು ಹಾಕುವ ಮತ ಯಂತ್ರದಿಂದ.. ಅಂತಹದ್ದೊಂದು ಅದ್ಬುತ ಶಕ್ತಿ ಇರೋದು ಪ್ರಜೆಗಳಿಗಷ್ಟೇ.
ನಮ್ಮ ಮತದ ಶಕ್ತಿಯನ್ನ ಕೋಮುವಾದಿ, ರಕ್ತ ಪಿಫಾಸುಗಳಿಗೆ ಕೊಡುವುದು ಬೇಡ. ಒಂದು ವೇಳೆ ಕೊಟ್ಟರೆ ಅವರು ನಮ್ಮ ರಕ್ತ ಕುಡಿದು, ನಮ್ಮನ್ನು ನಿಶಕ್ತರಾನ್ನಗಿಸಿ, ನಮ್ಮ ಬದುಕಿಗೆ ಅಂತಿಮ ವಿಧಾಯ ಹೇಳಿ ಬಿಡ್ತಾರೆ. ದಕ್ಷಿಣ ಭಾರತ ರಾಜ್ಯಗಳ ಮತದಾರರು ಕೋಮುವಾದಿಗಳನ್ನ ದೂರ ಇಟ್ಟಿದ್ದಾರೆ. ಕರ್ನಾಟಕದಲ್ಲೂ ಈ ಬಾರಿ ನಡೆಯುವ ಚುನಾವಣೆಯಲ್ಲಿ ದೂರ ಇಡುತ್ತಾರೆ ಎಂಬ ವಿಶ್ವಾಸ ನನಗಿದೆ. ಯಾವುದೇ ಧರ್ಮದಲ್ಲಿರುವ ಕೋಮುವಾದಿಗಳಿಂದ ರಾಜ್ಯಕ್ಕೆ ನಯಾ ಪೈಸೆಯಷ್ಟೂ, ಉಪಯೋಗ ಇಲ್ಲ. ಅವರಿಂದ ಯಾವ ಅಭಿವೃದ್ಧಿ ಕೆಲಸಗಳನ್ನೂ ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಬಡವರ ಹೆಣಗಳನ್ನ ಮುಂದಿಟ್ಟುಕೊಂಡು ರಾಜಕೀಯ ಮಾಡ್ತಾರೆ. ಬಡವರ ಮಕ್ಕಳು ಬೀದಿಯಲ್ಲಿದ್ದರೆ, ಕೋಮುವಾದಿ ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿರೋದು ಯಾಕೆ ಅನ್ನೋದು ಜನತೆಗೆ ತಿಳಿಯಬೇಕಿದೆ..
ಭ್ರಷ್ಟರಿಗೆ ಅಧಿಕಾರ ಕೊಟ್ಟರೆ ಅದರ ಪರಿಣಾಮ ಜನರು ಅನುಭವಿಸಲೇಬೇಕು ಎನ್ನುವ ಮಾತು ಅಕ್ಷರತಃ ಸತ್ಯವಾಗಿದೆ. ಕೆಲವು ವರ್ಷಗಳಿಂದ ಜನ ಭ್ರಷ್ಟಾಚಾರದಿಂದ ಕಂಗೆಟ್ಟು ಹೋಗಿದ್ದಾರೆ.. ದುರಾಡಳಿತದಿಂದಾಗಿ ಬಡವರ ಜೀವನ ತುಂಬಾ ದುಸ್ಥಿತಿಗೆ ತಲುಪಿದೆ.. ರಾಜಕಾರಣಿಗಳಂತೂ ಜನರಿಗೆ ಸಿಕ್ಕಾಪಟ್ಟೆ ತೆರಿಗೆ ವಿಧಿಸಿ, ಹಗಲು ದರೋಡೆ ಮಾಡಿ ಮತದಾರರ ರಕ್ತ ಹೀರುತ್ತಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ದಿನನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಲವು ವರ್ಷಗಳಿಂದ ಕಟ್ಟಿಕೊಂಡು ಬಂದ ಸರ್ಕಾರಿ ಸಂಸ್ಥೆಗಳು ಒಂದೊಂದಾಗಿ ಖಾಸಗಿ ಸಂಸ್ಥೆಗಳಾಗಿ ಬದಲಾಗ್ತಿವೆ.. ಅಧಿಕಾರದ ಕಪಿಮುಷ್ಟಿಯಲ್ಲಿ ಸಿಕ್ಕು ಸಂಸ್ಥೆಗಳು ಒದ್ದಾಡ್ತಿವೆ.. ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿರುವ ಇಂತಹ ಸರ್ಕಾರಗಳನ್ನು ಮನೆಗೆ ಕಳುಹಿಸಬೇಕಾಗಿದೆ ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕಾಗಿದೆ..
ಮತ (ವೋಟು) ನಮ್ಮ ಮನೆಯ ಹೆಣ್ಣುಮಗಳಷ್ಟೇ ಶ್ರೇಷ್ಠ, ಅದನ್ನು ಯಾರೂ ಮಾರಿಕೊಳ್ಳಬೇಡಿ. ಎಂಬ ಡಾ. ಬಿ. ಆರ್ ಅಂಬೇಡ್ಕರ್ ರವರು ಹೇಳಿದ ಮಾತನ್ನು ನೆನಪಿಸಿಕೊಂಡು ನಾವು ಎಚ್ಚರಿಕೆಯಿಂದ ಮತ ಚಲಾಯಿಸೋಣ..
ನನ್ನ ಮತ ಅಭಿವೃದ್ಧಿಗೆ, ಸೌಹಾರ್ದತೆಗೆ, ನಮ್ಮ ಭವಿಷ್ಯಕ್ಕೆ, ಮುಂದಿನ ಪೀಳಿಗೆಗೆ. ನನ್ನ ಮತ ಮಾರಾಟಕ್ಕಿಲ್ಲ.